ಎರಡು ವರ್ಷದಲ್ಲಿ 3.40 ಲಕ್ಷ ಕ್ರಿಮಿನಲ್‌ ಪ್ರಕರಣ ದಾಖಲು; ಕಾನೂನು ಸುವ್ಯವಸ್ಥೆ ಕುಸಿತವಲ್ಲವೇ?

Photo Credit; dnaindia

ಬೆಂಗಳೂರು; ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ನಿರಂತರ ಬೀಟಿಂಗ್‌ ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಪೊಲೀಸ್‌ ಇಲಾಖೆ ಹೇಳುತ್ತಿದೆಯಾದರೂ ಕಳೆದ 5 ವರ್ಷದಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಒಟ್ಟು 8, 73,151 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಬಿಜೆಪಿ ಸರ್ಕಾರದ 2 ವರ್ಷದ ಅವಧಿಯ ಫೆಬ್ರುವರಿ 2022ರವರೆಗೆ ಒಟ್ಟು 3,40,562 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

 

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಉಪ ನಾಯಕ ಯು ಟಿ ಖಾದರ್‌ ಸೇರಿದಂತೆ ಪ್ರತಿಪಕ್ಷದ ಹಲವು ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಕಳೆದ 5 ವರ್ಷದ ಅವಧಿಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ಅಂಕಿ ಸಂಖ್ಯೆಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಪರಿಷತ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

 

ಕಳೆದ 3 ವರ್ಷಗಳಲ್ಲಿ ರಾಜ್ಯದಾದ್ಯಂತ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ಕುರಿತಂತೆ ಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅಂಕಿ ಅಂಶ ಸಮೇತ ಆರಗ ಜ್ಞಾನೇಂದ್ರ ಅವರು ಉತ್ತರಿಸಿದ್ದಾರೆ.

 

ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದ ಪ್ರತಿ

 

ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ಅವಧಿಯ 2 ವರ್ಷದಲ್ಲಿ (2020-2021) ಅಪರಾಧಗಳ ಕಡಿವಾಣಕ್ಕೆ ಬಿಗಿ ಕ್ರಮ ಕೈಗೊಳ್ಳಲು ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರಾದರೂ ಕ್ರಿಮಿನಲ್ ಅಪರಾಧ ಪ್ರಕರಣಗಳ ಸಂಖ್ಯೆಯೇನೂ ಇಳಿಕೆ ಕಂಡಿರಲಿಲ್ಲ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

ಹಾಗೆಯೇ ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯುವಂತೆ ಚಾಮುಂಡೇಶ್ವರಿ ಬಳಿ ಕೇಳಿಕೊಂಡಿದ್ದೇನೆ ಎಂದಿದ್ದರು. ‘ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನನಗೆ, ನಮ್ಮ ಪೊಲೀಸ್ ಇಲಾಖೆಗೆ ಶಕ್ತಿಕೊಡುವಂತೆ ದೇವಿ ಬಳಿ ಕೇಳಿಕೊಂಡಿದ್ದೇನೆ. ರಾಜ್ಯದ ಜನತೆಗೆ ಒಳ್ಳೆದು ಮಾಡಲಿ, ಒಳ್ಳೆ ಮನಸ್ಸು ಕೊಡಲಿ ಹಾಗೂ ಕಾನೂನು ಸುವ್ಯವಸ್ಥೆ ಹತೋಟಿಗೆ ಬರುವಂತೆ ಪ್ರಾರ್ಥಿಸಿದ್ದೇನೆ,’ ಎಂದು ತಿಳಿಸಿದ್ದನ್ನು ಸ್ಮರಿಸಬಹುದು.

 

ಅಪರಾಧಗಳ ನಿಯಂತ್ರಣ ಹಾಗೂ ಪರಿಣಾಮಕಾರಿ ಪೊಲೀಸಿಂಗ್‌ ವ್ಯವಸ್ಥೆ ಜಾರಿ ಮಾಡುವ ಸಂಬಂಧ ನಗರ ಪೊಲೀಸ್‌ ಕಮಿಷನರ್‌ 12 ಅಂಶಗಳ ಕಾರ್ಯಸೂಚಿಯನ್ನು ನೀಡಿದ್ದರೂ ಬೆಂಗಳೂರು ನಗರದಲ್ಲಿ ಕಳೆದ 2 ವರ್ಷದಲ್ಲಿ 77,120 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ.

 

ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಕೇಳಿದ್ದ ಪ್ರಶ್ನೆಗೆ ಅಂಕಿ ಸಂಖ್ಯೆಗಳನ್ನೊಂಡ ಮಾಹಿತಿಯನ್ನು ಮೇಲ್ಮನೆಗೆ ಒದಗಿಸಿರುವ ಗೃಹ ಸಚಿವರು, ರಾಜ್ಯದ ಪೊಲೀಸರ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚಿದ್ದಾರೆ.

 

2017ರಿಂದ 2022ರ ಫೆಬ್ರುವರಿವರೆಗೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡಿಲ್ಲ. 2020ರಲ್ಲಿದ್ದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ 2021ರಲ್ಲಿ 13,055 ಪ್ರಕರಣಗಳು ಹೆಚ್ಚಳವಾಗಿವೆ. ಅದೇ ರೀತಿ ನ್ಯಾಯಾಲಯಗಳಲ್ಲಿ ಆರೋಪಿಗಳನ್ನು ಅಪರಾಧಿ ಎಂದ ಘೋಷಿಸಿ ಶಿಕ್ಷೆ ವಿಧಿಸಿರುವ ಪೈಕಿ ಕೆಲ ಜಿಲ್ಲೆಗಳಲ್ಲಷ್ಟೇ ಪ್ರಗತಿಯಾಗಿದೆ.

 

2017ರಲ್ಲಿ 1,95,361, 2018ರಲ್ಲಿ 1,73,457, 2019ರಲ್ಲಿ 1,63,771, 2020ರಲ್ಲಿ 1,49,836, 2021ರಲ್ಲಿ 1,62, 891, 2022ರ ಫೆಬ್ರುವರಿವರೆಗೆ 27,835 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿರುವುದು ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ಬೆಂಗಳೂರು ನಗರದಲ್ಲಿ 2,13,586, ಮೈಸೂರು ನಗರದಲ್ಲಿ 11,26, ಹುಬ್ಬಳ್ಳಿ ಧಾರವಾಡ ನಗರದಲ್ಲಿ 12, 642, ಮಂಗಳೂರು ನಗರದಲ್ಲಿ 19,037, ಬೆಂಗಳೂರು ಜಿಲ್ಲೆಯಲ್ಲಿ 34,991, ತುಮಕೂರು ಜಿಲ್ಲೆಯಲ್ಲಿ 32,516, ರಾಮನಗರದಲ್ಲಿ 21,912, ಮೈಸೂರು ಜಿಲ್ಲೆಯಲ್ಲಿ 30, 192, ಹಾಸನದಲ್ಲಿ 30,280, ಶಿವಮೊಗ್ಗದಲ್ಲಿ  31,154, ದಕ್ಷಿಣ ಕನ್ನಡದಲ್ಲಿ 11,054, ಚಿಕ್ಕಮಗಳೂರಿನಲ್ಲಿ 17,503, ಉತ್ತರ ಕನ್ನಡದಲ್ಲಿ 16, 773, ಉಡುಪಿಯಲ್ಲಿ 15,079, ರಾಯಚೂರಿನಲ್ಲಿ 28,906, ಬಳ್ಳಾರಿಯಲ್ಲಿ 15,066, ಬೀದರ್‌ನಲ್ಲಿ 19,300, ದಾವಣಗೆರೆಯಲ್ಲಿ 19,198, ಚಿತ್ರದುರ್ಗದಲ್ಲಿ 27,388, ಬೆಳಗಾವಿ ಜಿಲ್ಲೆಯಲ್ಲಿ 34,949 ಪ್ರಕರಣಗಳು ದಾಖಲಾಗಿವೆ.

 

ಬೆಂಗಳೂರು ನಗರದಲ್ಲಿ 2020ರಿಂದ 2022ರ ಫೆಬ್ರುವರಿವರೆಗೆ 77, 120 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದರೆ ಮಂಗಳೂರು ನಗರದಲ್ಲಿ 5,956 ಪ್ರಕರಣಗಳು ದಾಖಲಾಗಿವೆ. 2020ರಲ್ಲಿ 2,380 ಪ್ರಕರಣಗಳಿದ್ದರೆ 2021ರಲ್ಲಿ 3,152 ಮತ್ತು 2022ರ ಫೆಬ್ರುವರಿ ಅಂತ್ಯಕ್ಕೆ 425 ಪ್ರಕರಣಗಳು ದಾಖಲಾಗಿವೆ.
ಶಿವಮೊಗ್ಗದಲ್ಲಿ 2020ರಲ್ಲಿ 5,280, 2021ರಲ್ಲಿ 5,709, 2022ರ ಫೆಬ್ರುವರಿವರೆಗೆ 1,039 ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡದಲ್ಲಿ 2020ರಲ್ಲಿ 1,832, 2021ರಲ್ಲಿ 2,009, 2022ರ ಫೆಬ್ರುವರಿ ಅಂತ್ಯಕ್ಕೆ 373 ಪ್ರಕರಣಗಳಿವೆ. ಉಡುಪಿಯಲ್ಲಿ 2020ರಲ್ಲಿ 2,635, 2021ರಲ್ಲಿ 2,705, 2022ರ ಫೆಬ್ರುವರಿವರೆಗೆ 461 ಸೇರಿ ಒಟ್ಟು 5,801 ಪ್ರಕರಣಗಳು ದಾಖಲಾಗಿವೆ.

 

2022ರ ಫೆಬ್ರುವರಿವರೆಗೆ ಬೆಂಗಳೂರು ನಗರ (6,654), ಬೆಂಗಳೂರು ಜಿಲ್ಲೆ ( 1,137), ಹಾಸನ (1,055), ಶಿವಮೊಗ್ಗ (1,039)ದಲ್ಲಿ ಪ್ರಕರಣಗಳು ದಾಖಲಾಗಿವೆ.

 

ನ್ಯಾಯಾಲಯಗಳಲ್ಲಿ ಆರೋಪಿಗಳನ್ನು ಅಪರಾಧಿ ಎಂದ ಘೋಷಿಸಿ ಶಿಕ್ಷೆ ವಿಧಿಸಿರುವ ಪೈಕಿ ಕೆಲ ಜಿಲ್ಲೆಗಳಲ್ಲಷ್ಟೇ ಪ್ರಗತಿಯಾಗಿದೆ. ಬೆಂಗಳೂರು ನಗರದಲ್ಲಿ 2017ರಲ್ಲಿ ಶೇ. 86ರಷ್ಟಿದ್ದ ಪ್ರಗತಿಯು 2018ರಲ್ಲಿ ಶೇ.74ಕ್ಕೆ ಇಳಿದಿತ್ತು. 2019ರಲ್ಲಿ ಶೇ. 84, 2020ರಲ್ಲಿ ಶೆ. 90, 2022ರ ಫೆಬ್ರುವರಿವರೆಗೆ ಶೇ. 99ರಷ್ಟು ಪ್ರಕರಣದಲ್ಲಿ ಆರೋಪಿಗಳನ್ನು ಅಪರಾಧಿ ಎಂದು ಶಿಕ್ಷೆ ವಿಧಿಸಲಾಗಿದೆ.

 

ಮಂಗಳೂರು ನಗರದಲ್ಲಿ 2017ರಲ್ಲಿ ಶೇ.53, 2018ರಲ್ಲಿ ಶೇ.51, 2019ರಲ್ಲಿ ಶೆ. 37, 2020ರಲ್ಲಿ ಶೇ.30, 2021ರಲ್ಲಿ ಶೇ. 28, 2022 ಫೆಬ್ರುವರಿಯವರೆಗೆ ಶೂನ್ಯ ಪ್ರಗತಿಯಾಗಿದೆ. ಮಂಗಳೂರು ನಗರದಲ್ಲಿ ದಾಖಲಾಗಿರುವ ಒಟ್ಟಾರೆ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಗಳಾಗಿರುವನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಲಾಗುತ್ತಿರುವ ಪ್ರಮಾಣದಲ್ಲಿ 2017ರಿಂದ 2022ರವರೆಗೆ ಇಳಿಕೆಯಾಗಿದೆ.

 

ಶಿವಮೊಗ್ಗ ನಗರದಲ್ಲಿಯೂ 2017ರಲ್ಲಿ ಶೇ.39, 2018ರಲ್ಲಿ ಶೇ.30, 2019ರಲ್ಲಿ ಶೇ. 23, 2020ರಲ್ಲಿ ಶೇ. 16, 2021ರಲ್ಲಿ ಶೇ. 6, 2022ರಲ್ಲಿ ಶೂನ್ಯ ಪ್ರಗತಿ ಸಾಧಿಸಿದೆ. ಈ ಜಿಲ್ಲೆಯಲ್ಲಿಯೂ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಗಳನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸುತ್ತಿರುವ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

 

ಅದೇ ರೀತಿ ಆರೋಪ ಮುಕ್ತಗೊಂಡ ಅಪರಾಧಿಗಳ ಸಂಖ್ಯೆಗೆ ಸಂಬಂಧಿಸಿದಂತೆ 2019ರಲ್ಲಿ ಬೆಂಗಳೂರು ನಗರದಲ್ಲಿ 619, 2020ರಲ್ಲಿ 521, 2021ರಲ್ಲಿ 399, 2022ರ ಫೆಬ್ರುವರಿಗೆ 206, ಆರೋಪಿಗಳು ಆರೋಪ ಮುಕ್ತರಾಗಿದ್ದಾರೆ. ಅದೇ ರೀತಿ ಕಲ್ಬುರ್ಗಿ ನಗರದಲ್ಲಿ 2019ರಲ್ಲಿ 968, 2020ರಲ್ಲಿ 475, 2021ರಲ್ಲಿ 654, 2022ರ ಫೆಬ್ರುವರಿವರೆಗೆ 55 ಆರೋಪಿಗಳು ದೋಷಮುಕ್ತರಾಗಿದ್ದಾರೆ. ತುಮಕೂರು ನಗರದಲ್ಲಿಯೇ ಅತಿ ಹೆಚ್ಚು ಎಂದರೆ 2019ರಲ್ಲಿ 3,394 ಮತ್ತು 2020ರಲ್ಲಿ 834, 2021ರಲ್ಲಿ 1,769, 2022ರ ಫೆಬ್ರುವರಿಗೆ 332 ಆರೋಪಿಗಳು ಆರೋಪದಿಂದ ಮುಕ್ತರಾಗಿರುವುದು ತಿಳಿದು ಬಂದಿದೆ.

 

‘ನ್ಯಾಯಾಲಯಗಳಲ್ಲಿ ಸೂಕ್ತ ಸಾಕ್ಷ್ಯಾಧಾರದ ಕೊರತೆ, ಆರೋಪಿತರು ಮತ್ತು ದೂರುದಾರರು ರಾಜಿ ಮೂಲಕ ಇತ್ಯರ್ಥಪಡಿಸಿಕೊಂಡಿರುವುದು ಮತ್ತು ಸಾಕ್ಷಿದಾರರು ಅಭಿಯೋಜನೆಗೆ ಪ್ರತಿಕೂಲ ಸಾಕ್ಷಿ ನುಡಿದಿರುವ ಕಾರಣ ಆರೋಪಿಗಳು ಆರೋಪ ಮುಕ್ತಗೊಂಡಿದ್ದಾರೆ,’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನ ಪರಿಷತ್‌ಗೆ ತಿಳಿಸಿದ್ದಾರೆ.

 

ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆ ಮತ್ತು ಮಾದಕ ವಸ್ತು ಜಾಲ ವ್ಯಾಪಕವಾಗಿ ಹರಡಿರುವುದರ ವಿರುದ್ಧ ಅಧಿಕಾರಿಗಳ ವಿರುದ್ಧ ಗರಂ ಆದರು. ಶಾಲಾ-ಕಾಲೇಜುಗಳ ಬಳಿಯೂ ಮಾದಕ ವಸ್ತು ಜಾಲ ವಿಸ್ತರಿಸಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿಜಾಲವನ್ನು ಮಟ್ಟಹಾಕಲು ಸಾಧ್ಯವಾಗಿಲ್ಲಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಇದೇ ಉದಾಸೀನ ಮುಂದುವರಿದರೆ ನಾನೇ ಫೀಲ್ಡಿಗೆ ಇಳಿಯಬೇಕಾ ? ಎಂದು ಗೃಹ ಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಐಪಿಎಸ್‌ ಅಧಿಕಾರಿಗಳ ಸಭೆಯಲ್ಲಿ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

 

ಎಸಿಪಿ ಮತ್ತು ಡಿಸಿಪಿಗಳು ಕಡ್ಡಾಯವಾಗಿ ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ಹಾಗೂ ತಪಾಸಣೆ ನಡೆಸಬೇಕು. ನಗರದಲ್ಲಿರುವ 35 ಸಾವಿರ ಚಾಳಿ ಬಿದ್ದ ಆರೋಪಿಗಳ ಸಮಗ್ರ ಮಾಹಿತಿಯನ್ನು ಅಪ್‌ಡೇಟ್‌ ಮಾಡಬೇಕು. ಕ್ರಿಯಾಶೀಲವಾಗಿರುವ 6500 ರೌಡಿಗಳ ಹಳೆ ಮಾಹಿತಿ ಬಿಟ್ಟು ಇತ್ತೀಚಿನ ಮಾಹಿತಿ, ಕಾರ್ಯಾಚರಣೆ ವಿಧಾನ, ಯಾವ ಗ್ಯಾಂಗ್‌ ಮತ್ತು ಸಿಂಡಿಕೇಟ್‌ಗಳ ಜತೆ ಗುರುತಿಸಿಕೊಂಡಿದ್ದಾರೆ ಎನ್ನುವ ಸಮಗ್ರ ಮಾಹಿತಿ ದಾಖಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚಿಸಿದ್ದರು.

 

ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಎಫ್‌ಐಆರ್‌ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಮಾತ್ರಕ್ಕೆ ಕೆಲಸ ಮುಗಿಯಿತು ಎಂದುಕೊಳ್ಳಬಾರದು. ಶಿಕ್ಷೆ ಆಗುವಂತೆ ಕೇಸಿನ ಫಾಲೋಆಪ್‌ ಮಾಡಿ ಸಾಕ್ಷಿಗಳನ್ನು ಗುರುತಿಸಿ ಶಿಕ್ಷೆ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ನಗರ ಪೊಲೀಸ್‌ ಕಮಿಷನರ್‌ ಸೂಚಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

SUPPORT THE FILE

Latest News

Related Posts