ಬೆಂಗಳೂರು; ಕಾಂಗ್ರೆಸ್‌ನ ನಾಯಕರೊಬ್ಬರು ಬಹುದೊಡ್ಡ ಪ್ರಮಾಣದ ಹಣಕ್ಕೆ ಬೇಡಿಕೆ ಇರಿಸಿದ್ದರು ಎಂದು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಾಡಿದ್ದ ಗುರುತರ ಆರೋಪದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೆರಳಲು ಕಾರಣವಾದ ವಿವಾದಿತ ಈಗಲ್ಟನ್ ಗಾಲ್ಫ್ ರೆಸಾರ್ಟ್ ಪ್ರಕರಣದ ಕುರಿತು ಹಿಂದಿನ ಸರ್ಕಾರಗಳು ವಿಧಾನಸಭೆಯಲ್ಲಿ ನೀಡಿದ್ದ ಭರವಸೆಯನ್ನು ಯಾವುದೇ ಕ್ರಮವಿಲ್ಲದೆಯೇ ಎರಡು ವರ್ಷಗಳ ಹಿಂದೆಯೇ ಮುಕ್ತಾಯಗೊಳಿಸಿರುವುದು ಇದೀಗ ಬಹಿರಂಗವಾಗಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಶಾಸಕ ಕೆ ರಘುಪತಿ ಭಟ್ ಅವರು ಅಧ್ಯಕ್ಷರಾಗಿದ್ದ ಕರ್ನಾಟಕ ವಿಧಾನಸಭೆಯ ಭರವಸೆ ಸಮಿತಿಯು ಈ ಪ್ರಕರಣದ ಕುರಿತು (2019-20 ಮತ್ತು 2020-21ರಲ್ಲಿ ) ಚರ್ಚೆ ನಡೆಸಿತ್ತು. ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿರುವುದಿಲ್ಲ ಎಂದು ಅಧಿಕಾರಿಗಳು ನೀಡಿದ್ದ ಉತ್ತರವನ್ನಾಧರಿಸಿ ರಘುಪತಿ ಭಟ್ ಅಧ್ಯಕ್ಷತೆಯಲ್ಲಿದ್ದ ಭರವಸೆ ಸಮಿತಿಯು ಅಂತಿಮವಾಗಿ 2020ರ ಸೆ.4ರಂದು ಭರವಸೆಯನ್ನು ಮುಕ್ತಾಯಗೊಳಿಸಿರುವುದು ಗೊತ್ತಾಗಿದೆ. ಈ ವರದಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಮನಗರ ತಾಲೂಕು ಬಿಡದಿ ಹೋಬಳಿಯಲ್ಲಿ ಸರ್ಕಾರಕ್ಕೆ ಮೋಸ ಮಾಡಿ ಜಮೀನನ್ನು ವಶಪಡಿಸಿಕೊಂಡಿರುವ ಖಾಸಗಿ ಸಂಸ್ಥೆಗಳ ವಿರುದ್ಧ ಕೈಗೊಂಡ ಕ್ರಮಕ್ಕೆ ಜಗದೀಶ್ ಶೆಟ್ಟರ್ ಅವರು ಶಾಸಕರಾಗಿದ್ದ ವೇಳೆಯಲ್ಲಿ ಅಂದರೆ 2003ರ ಆಗಸ್ಟ್ 4ರಂದು ವಿಧಾನಸಭೆಯಲ್ಲಿ ಚುಕ್ಕೆ ರಹಿತ ಪ್ರಶ್ನೆ (ಸಂಖ್ಯೆ 5227) ಮತ್ತು ಎ ಟಿ ರಾಮಸ್ವಾಮಿ ಅವರು 2018ರ ಡಿಸೆಂಬರ್ 17ರಂದು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆ (1481)ನ್ನು ಸದನದಲ್ಲಿ ಮಂಡಿಸಿದ್ದರು.
ಮೊದಲ ಬಾರಿಗೆ ಪ್ರಶ್ನೆ ಕೇಳಿದ್ದ ಜಗದೀಶ್ ಶೆಟ್ಟರ್ ಅವರು ಆ ನಂತರ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು. ಅಲ್ಲದೆ ಈ ಮಧ್ಯೆ ಬಿಜೆಪಿ ಪಕ್ಷವು ಎರಡು ಬಾರಿ ರಾಜ್ಯದಲ್ಲಿ ಅಧಿಕಾರ ನಡೆಸಿತ್ತು. ಆದರೆ ಅಂದಿನಿಂದಲೂ ಈ ಪ್ರಕರಣವು ನ್ಯಾಯಾಲಯದಲ್ಲಿದೆ ಎಂಬ ನೆಪವೊಡ್ಡಿ ಪ್ರಕರಣವನ್ನು ಇತ್ಯರ್ಥಗೊಳಿಸಿರಲಿಲ್ಲ. ಬದಲಿಗೆ ಸರ್ಕಾರಿ ಭರವಸೆ ಸಮಿತಿಗಳ ಸಮಿತಿಯು ಈ ಭರವಸೆಯನ್ನು ಕಾಯ್ದಿರಿಸಿ ಕಡೆಗೆ 2020ರಲ್ಲಿ ಯಾವುದೇ ಕ್ರಮವಿಲ್ಲದೆಯೇ ಮುಕ್ತಾಯಗೊಳಿಸಿರುವುದು ವರದಿಯಿಂದ ಗೊತ್ತಾಗಿದೆ.
‘ಖಾಸಗಿ ಸಂಸ್ಥೆಯವರು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ನ್ಯಾಯಾಲಯವು 2002ರ ಸೆ.24ರಂದು ಯಥಾಸ್ಥಿತಿ ಕಾಪಾಡಲು ಆದೇಶ ನೀಡಿರುವುದರಿಂದ ಅಂತಿಮ ಆದೇಶದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು,’ ಎಂದು ಅಂದಿನ ಸಚಿವರು ಭರವಸೆ ನೀಡಿದ್ದರು. ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ನೀಡಿದ್ದ ಭರವಸೆ ಮೇರೆಗೆ ಸಮಿತಿಯು 2020ರ ಸೆ.4ರಂದು ಚರ್ಚೆಗೆ ಕೈಗೆತ್ತಿಕೊಂಡಿತ್ತು. ಚರ್ಚೆಗೆ ಕೈಗೆತ್ತಿಕೊಂಡಿದ್ದ ದಿನವೇ ಭರವಸೆಯನ್ನು ಮುಕ್ತಾಯಗೊಳಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಪ್ರಕರಣದ ವಿವರ
ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿ., (ಈಗಲ್ಟನ್ ಸಂಸ್ಥೆ) ಸರ್ಕಾರಿ ಜಮೀನನ್ನುಒತ್ತುವರಿ ಮಾಡಿರುವ ಸಂಬಂಧ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಾಗಿತ್ತು. ಈ ಸಂಬಂಧ ಸರ್ಕಾರವು ಈ ಸಂಸ್ಥೆಯಿಂದ 77.19 ಎಕರೆ ಸರ್ಕಾರಿ ಜಮೀನಿನ ಮಾರುಕಟ್ಟೆ ಮೌಲ್ಯ 980.04 ಕೋಟಿ ರು. ದರ ಪಾವತಿಸಿಕೊಂಡು ಕೆಲ ಷರತ್ತುಗೊಳಪಟ್ಟು ಜಮೀನನ್ನು ಹಸ್ತಾಂತರಿಸಲು ಸರ್ವೋಚ್ಛ ನ್ಯಾಯಾಲಯವು ತೀರ್ಪುನೀಡಿತ್ತು. ಅಲ್ಲದೆ ಈ ಸಂಸ್ಥೆಯು ಒತ್ತುವರಿ ಮಾಡಿಕೊಂಡಿರುವ ಒಟ್ಟು 28.33 ಎಕರೆ ಜುಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿತ್ತು ಎಂಬ ಅಂಶ ವರದಿಯಲ್ಲಿ ದಾಖಲಾಗಿದೆ.
ಸರ್ಕಾರದ ಆದೇಶ ಮತ್ತು ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಒಟ್ಟು 77.19 ಎಕರೆ ಸರ್ಕಾರಿ ಜಮೀನಿಗೆ ಒಟ್ಟು 980.04 ಕೋಟಿ ರು.ಗಳನ್ನು ನಾಲ್ಕು ತಿಂಗಳೊಳಗಾಗಿ ಸರ್ಕಾರಕ್ಕೆ ಪಾವತಿಸಬೇಕು ಎಂದು 2016ರ ಸೆ.24ರಂದು ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆಯು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಉಚ್ಛ ನ್ಯಾಯಾಲಯವು ತಕ್ಷಣವೇ 12.35 ಕೋಟಿ ರು.ಗಳನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು 2017ರ ಫೆ.6ರಂದು ಆದೇಶಿಸಿತ್ತು. ಅದರಂತೆ ಈ ಸಂಸ್ಥೆಯು 2017ರ ಫೆ.14ರಂದು ಸರ್ಕಾರಕ್ಕೆ 12.35 ಕೋಟಿ ರು.ಗಳನ್ನು ಪಾವತಿಸಿ 2017ರ ಫೆ.20ರಂದು ಸರ್ಕಾರದ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿತ್ತು.
ನ್ಯಾಯಾಲಯ ನಿರ್ದೇಶನದಂತೆ ಕ್ರಮ ಕೈಗೊಳ್ಳುವ ಸಂಬಂಧ ಸಚಿವ ಸಂಪುಟ ಉಪ ಸಮಿತಿಯು ಈ ಬಗ್ಗೆ ಖುದ್ದು ವಿಚಾರಣೆ ನಡೆಸಿತ್ತು. ಅಂತಿಮವಾಗಿ 71.19 ಎಕರೆ ಸರ್ಕಾರಿ ಜಮೀನಿಗೆ 982, 07, 77, 480 ರು.ಗಳನ್ನು ಮಾರುಕಟ್ಟೆ ಬೆಲೆ ನಿಗದಿಪಡಿಸಿತ್ತಲ್ಲದೆ ಒಂದು ತಿಂಗಳೊಳಗೆ ಈ ಹಣವನ್ನು ಸರ್ಕಾರಕ್ಕೆ ಪಾವತಿಸಿಕೊಂಡು ಸಕ್ರಮಗೊಳಿಸಬೇಕು ಎಂದು ಸೂಚಿಸಿತ್ತು. ಹಾಗೆಯೇ ಒಂದೊಮ್ಮೆ ಈ ಹಣವನ್ನು ಸರ್ಕಾರಕ್ಕೆ ಪಾವತಿಸುವಲ್ಲಿ ವಿಫಲವಾದಲ್ಲಿ 77.19 ಎಕರೆ ಸರ್ಕಾರಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ಆದೇಶಿಸಿತ್ತು.
ಆದರೆ ಈ ಸಂಸ್ಥೆಯು ನಿಗದಿತ ಸಮಯದೊಳಗೆ ಹಣ ಪಾವತಿಸದಿದ್ದ ಕಾಋಣ 2017ರ ಆಗಸ್ಟ್ 7ರಂದು ಸಂಸ್ಥೆಗೆ ಹಿಂಬರಹ ನೀಡಲಾಗಿತ್ತು. ಇದನ್ನೂ ಪ್ರಶ್ನಿಸಿದ್ದ ಸಂಸ್ಥೆಯು ಪುನಃ ಹೈಕೋರ್ಟ್ ಕದ ತಟ್ಟಿತ್ತು. ನ್ಯಾಯಾಲಯವು ಈ ಪ್ರಕರಣದಲ್ಲಿ ನೀಡಿದ್ದ ನಿರ್ದೇಶನ/ತೀರ್ಪಿನಂತೆ ಕ್ರಮ ಕೈಗೊಳ್ಳಲು ರಾಮನಗರ ಉಪ ವಿಭಾಗಾಧಿಕಾರಿಯನ್ನು ವ್ಯಾಜ್ಯ ನಿರ್ವಹಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ 2019ರ ಜನವರಿ 7ರಂದು ಪಡೆದಿದ್ದ ಆಕ್ಷೇಪಣೆ ಹೇಳಿಕೆಯನ್ನು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ ಈ ಪ್ರಕರಣವು ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿಲ್ಲ. ಆದಷ್ಟು ಬೇಗ ಪ್ರಕರಣವನ್ನು ನ್ಯಾಯಾಲಯದ ಮುಂದೆ ತರಲು ಸರ್ಕಾರದ ಅಡ್ವೋಕೇಟ್ ಜನರಲ್ ಅವರನ್ನು ಕೋರಿತ್ತು. ಅಡ್ವೋಕೇಟ್ ಜನರಲ್ ಕಚೇರಿಯ ನಿರ್ದೇಶನದಂತೆ ರಾಮನಗರ ಉಪವಿಭಾಗಾಧಿಕಾರಿ ಮತ್ತ ಅಡ್ವೋಕೇಟ್ ಜನರಲ್ ಕಚೇರಿಯ ಶಾಖಾಧಿಕಾರಿ ಹಾಗೂ ಸರ್ಕಾರಿ ವಕೀಲರನ್ನು ಭೇಟಿ ಮಾಡಿ ಪ್ರಕರಣವನ್ನು ಶೀಘ್ರವಾಗಿ ನ್ಯಾಯಾಲಯದ ಮುಂದೆ ವಿಚಾರಣೆಗೆ ತರಲು ಅಗತ್ಯಕ್ರಮ ವಹಿಸಬೇಕು ಎಂದು ಕೋರಿತ್ತು.
‘ಅದರಂತೆ ಈ ಪ್ರಕರಣವನ್ನು ನ್ಯಾಯಾಲಯದ ಮುಂದೆ ವಿಚಾರಣೆಗೆ ತರಲು ಅಗತ್ಯ ಕ್ರಮ ವಹಿಸಲಾಗಿದ್ದರೂ ಈವರೆಗೆ ಪ್ರಕರಣವು ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿರುವುದಿಲ್ಲ,’ಎಂದು ಅಧಿಕಾರಿಗಳು ನೀಡಿದ್ದ ಉತ್ತರವನ್ನು ಆಧರಿಸಿ ಭರವಸೆ ಸಮಿತಿಯು ಇದರ ವಿಚಾರಣೆಯನ್ನು ಯಾವುದೇ ಕ್ರಮವಿಲ್ಲದೆಯೇ ಮುಕ್ತಾಯಗೊಳಿಸಿದೆ.
2022-23ನೇ ಸಾಲಿನ ಬಜೆಟ್ ಮೇಲೆ ಮಾತನಾಡಿದ ಪ್ರತಿಪಕ್ಷ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ದಾಖಲೆ ಸಮೇತ ಈಗಲ್ಟನ್ ರೆಸಾರ್ಟ್ ಬಗ್ಗೆ ತಮ್ಮ ಚರ್ಚೆಯ ಎರಡನೇ ದಿನವೂ ವಿಸ್ತೃತ ವಿವರ ನೀಡಿದರು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಈಗಲ್ಟನ್ ರೆಸಾರ್ಟ್ ಜಮೀನು ವಹಿವಾಟು, ದರ ನಿಗದಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶ, ಸರಕಾರಿ ಆದೇಶಗಳನ್ನು ಸದನದ ಮುಂದಿಟ್ಟಿದ್ದನ್ನು ಸ್ಮರಿಸಬಹುದು.