ಎಕ್ಸ್‌-ರೇ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ; ಚಂಡೀಗಡ್‌ ಕಂಪನಿಗೆ 5 ಕೋಟಿ ರು. ಹೆಚ್ಚುವರಿ ಲಾಭ!

Photo Credit; VijayaKarnataka

ಬೆಂಗಳೂರು; ಕೋವಿಡ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರಗಳಿಗೆ ಕಡಿವಾಣ ಹಾಕದ ಸರ್ಕಾರವು ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಹೆಚ್ಚುವರಿ ದರದಲ್ಲಿ ಎಕ್ಸ್‌-ರೇ ಉಪಕರಣಗಳನ್ನು ಖರೀದಿಸಲು ಆದೇಶ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ನಿಯಮಿತವು ಎಕ್ಸ್‌-ರೇ ಉಪಕರಣಗಳನ್ನು ಹೆಚ್ಚುವರಿ ದರದಲ್ಲಿ ಖರೀದಿಸಲು ಆದೇಶ ನೀಡುವ ಮೂಲಕ ಇದೊಂದೇ ಉಪಕರಣದಲ್ಲಿ 5 ಕೋಟಿ ರು.ಗಳನ್ನು ಚಂಡೀಗಡ್‌ ಮೂಲದ ಕಂಪನಿಗೆ ಅನುಕೂಲ ಮಾಡಿಕೊಟ್ಟಿದೆ. ಉಪಕರಣ ಸರಬರಾಜಿಗೆ 2022ರ ಮಾರ್ಚ್‌ 2ರಂದು ಅಧಿಸೂಚನೆ ಹೊರಡಿಸಿದೆ. ಸರಬರಾಜು ಆದೇಶದ ಪ್ರತಿ ಮತ್ತು ಇದೇ ಕಂಪನಿಯು ಬೇರೊಂದು ಖಾಸಗಿ ಆಸ್ಪತ್ರೆಗೆ ನೀಡಿದ್ದ ದರಪಟ್ಟಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಎಕ್ಸ್‌ ರೇ ಉಪಕರಣ ಸರಬರಾಜು ಆದೇಶ ಪ್ರತಿ

 

ಖಾಸಗಿ ಕಂಪನಿಗೆ 13.90 ಲಕ್ಷ ರು., ನಿಗಮಕ್ಕೆ 18.95 ಲಕ್ಷ ರು ನಮೂದು

 

ಬೆಂಗಳೂರು ಮೂಲದ ಡಯಾಗ್ನೋಸ್ಟಿಕ್ಸ್‌ ಕಂಪನಿಯೊಂದು ಇದೇ ಅಲೆಂಜರ್ಸ್‌ ಕಂಪನಿಯಿಂದ ಒಟ್ಟು 150 ಎಕ್ಸ್‌ ರೇ ಉಪಕರಣ ಖರೀದಿಸಲು 6 ತಿಂಗಳ ಹಿಂದೆಯೇ ದರ ಪಟ್ಟಿ ಪಡೆದಿತ್ತು. ಅದರಂತೆ ಅಲೆಂಜರ್ಸ್‌ ಕಂಪನಿಯು ತಲಾ ಉಪಕರಣಕ್ಕೆ 13.90 ಲಕ್ಷ ರು. ನಮೂದಿಸಿತ್ತು. ಇದರ ಪ್ರಕಾರ 150 ಉಪಕರಣಗಳಿಗೆ 20.85 ಕೋಟಿ ರು. ಗಳಾಗುತ್ತವೆ. ಆದರೆ ಕೆಎಸ್‌ಎಂಸಿಎಲ್‌ಗೆ ನೀಡಿದ್ದ ದರಕ್ಕೂ ಮತ್ತು ಖಾಸಗಿ ಕಂಪನಿಗೆ ನೀಡಿದ್ದ ದರದ ಮಧ್ಯೆ ತಲಾ ಉಪಕರಣಕ್ಕೆ 5 ಲಕ್ಷ ರು. ಹೆಚ್ಚಳವಿದೆ.

 

ಅಂದರೆ ಕೆಎಸ್‌ಎಂಸಿಎಲ್‌ಗೆ ನೀಡಿರುವ ದರಕ್ಕೂ ಡಯಾಗ್ನೋಸ್ಟಿಕ್ಸ್‌ ಕಂಪನಿಗೆ ನೀಡಿದ್ದ ದರದ ಮಧ್ಯೆ 5 ಲಕ್ಷ ರು ಹೆಚ್ಚಳ ದರದಂತೆ ಸದ್ಯ ನಿಗಮವು ಖರೀದಿಸಿರುವ ಒಟ್ಟು 100 ಉಪಕರಣಗಳಿಗೆ 5 ಕೋಟಿ ರು. ಹೆಚ್ಚಳವಾಗಿ ಪಾವತಿಸಿದೆ. 100 ಉಪಕರಣಗಳ ಖರೀದಿಗೆ ಸರಬರಾಜು ಮಾಡಲು ನೀಡಿರುವ ಅದೇಶದ ಪ್ರಕಾರ ಕಂಪನಿಗೆ 5 ಕೋಟಿ ಹೆಚ್ಚಳ ಲಾಭ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಪ್ರಕರಣದ ವಿವರ

 

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗಳಿಗೆ 100 MA -X-RAY Machine Make and Model MARS – 4.2 ನಿರ್ದಿಷ್ಟತೆಯುಳ್ಳ ಒಟ್ಟು ಒಟ್ಟು 165 ಎಕ್ಸ್‌-ರೇ ಉಪಕರಣ ಖರೀದಿಗೆ ಟೆಂಡರ್‌ ಕರೆದಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಚಂಡೀಗಡ್‌ ಮೂಲದ ಅಲೆಂಜರ್ಸ್‌ ಕಂಪನಿಯು ಉಪಕರಣವೊಂದಕ್ಕೆ 19.34 ಲಕ್ಷ ರು. ಗಳ ದರವನ್ನು ನಮೂದಿಸಿತ್ತು. .ಇದರ ಪ್ರಕಾರ 165 ಉಪಕರಣಗಳಿಗೆ 31.92 ಕೋಟಿ ರು. ಗಳಾಗುತ್ತವೆ.

 

ಆದರೆ ಅಂತಿಮವಾಗಿ ದರ ಸಂಧಾನ ನಡೆಸಿದ್ದರಿಂದಾಗಿ ಕಂಪನಿಯು ಉಪಕರಣವೊಂದಕ್ಕೆ 18.95 ಲಕ್ಷ ರು. ನಂತೆ ಸರಬರಾಜು ಮಾಡಲು ಒಪ್ಪಿತ್ತು. ಇದರ ಪ್ರಕಾರ 165 ಉಪಕರಣಗಳಿಗೆ 31.26 ಕೋಟಿ ರು.ಗಳಾಗುತ್ತವೆ. ಆದರೆ ಕಡೇ ಗಳಿಗೆಯಲ್ಲಿ ಈ ಕಂಪನಿಗೆ 165 ಉಪಕರಣಗಳ ಬದಲಿಗೆ 100 ಉಪಕರಣಗಳ ಸರಬರಾಜಿಗೆ ತಲಾ ಉಪಕರಣಕ್ಕೆ 18.95 ಲಕ್ಷ ರು. ನಂತೆ ಒಟ್ಟು 18.95 ಕೋಟಿ ರು.ಗೆ ಆದೇಶ ನೀಡಿರುವುದು ಸರಬರಾಜು ಆದೇಶದಿಂದ ಗೊತ್ತಾಗಿದೆ.

 

ಉಪಕರಣ ಖರೀದಿ ಅಗತ್ಯತೆ ಸಮಿತಿಯನ್ನು ಕತ್ತಲಲ್ಲಿಡಲಾಗಿತ್ತೇ?

 

165 ಉಪಕರಣಗಳಿಗೆ ಟೆಂಡರ್‌ ಕರೆದು ಕಡೇಗಳಿಗೆಯಲ್ಲಿ 65 ಉಪಕರಣಗಳನ್ನು ಕಡಿಮೆ ಮಾಡಿದ್ದಕ್ಕೆ ನಿಗಮವು ಯಾವುದೇ ಕಾರಣಗಳನ್ನು ನೀಡಿರಲಿಲ್ಲ. ಮೇಲಾಗಿ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಖರೀದಿ ಅಗತ್ಯತೆ ಕುರಿತು ಪರಿಶೀಲನೆ ನಡೆಸುವ ಸಮಿತಿ ಸಭೆಯ ಮುಂದಿಡಬೇಕು. ಆದರೆ ಎಕ್ಸ್‌ ರೇ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಈ ಸಮಿತಿ ಸಭೆಯೇ ನಡೆದಿಲ್ಲ ಎಂದು ತಿಳಿದು ಬಂದಿದೆ.
ಸಮಿತಿ ಸಭೆಯ ಮುಂದೆ ಚರ್ಚೆಯಾದ ನಂತರವಷ್ಟೇ ಉಪಕರಣಗಳ ಖರೀದಿಗೆ ಟೆಂಡರ್‌ ಕರೆಯಬೇಕಿತ್ತು.

 

ಆದರೆ ಈ ಯಾವ ಪ್ರಕ್ರಿಯೆಯನ್ನೂ ನಡೆಸಿಲ್ಲ. ಸಮಿತಿಯ ಗಮನಕ್ಕೂ ತರದೆಯೇ ಟೆಂಡರ್‌ ಕರೆದಿದ್ದಲ್ಲದೇ ಸಮಿತಿಯನ್ನು ಕತ್ತಲಲ್ಲಿಟ್ಟು 165 ಉಪಕರಣಗಳ ಬದಲಿಗೆ 100 ಉಪಕರಣಗಳ ಸರಬರಾಜಿಗೆ ಆದೇಶ ನೀಡಿದೆ ಎಂದು ಗೊತ್ತಾಗಿದೆ. ಅಲ್ಲದೆ ಉಪಕರಣಗಳ ಸಂಖ್ಯೆ ಹೆಚ್ಚಿರುವಾಗ ಸಗಟು ದರದ ಮೂಲಕವೇ ಖರೀದಿಸಿದ್ದರೆ ಸರ್ಕಾರದ ಬೊಕ್ಕಸಕ್ಕೆ ಹಣವೂ ಉಳಿಯುತ್ತಿತ್ತು. ಅಥವಾ ಹೆಚ್ಚಿನ ಹೊರೆಯನ್ನು ತಪ್ಪಿಸಲು ಅವಕಾಶವಿತ್ತು ಎನ್ನಲಾಗಿದೆ.

 

ಈ ಪ್ರಕರಣದ ಮತ್ತೊಂದು ವಿಶೇಷವೆಂದರೆ 2 ಬಾರಿ ಕರೆದಿದ್ದ ಟೆಂಡರ್‌ನಲ್ಲಿ ಅಲೆಂಜರ್ಸ್‌ ಬಿಟ್ಟರೇ ಬೇರಾವುದೇ ಕಂಪನಿಗಳು ಬಿಡ್‌ ಮಾಡಿರಲಿಲ್ಲ. ಹೀಗಾಗಿ ಇದು ಸಿಂಗಲ್‌ ಬಿಡ್‌ ಆಗಿತ್ತು. ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಕೆಎಸ್‌ಎಂಸಿಎಲ್‌ ಕರೆಯುವ ಬಹುತೇಕ ಟೆಂಡರ್‌ಗಳು ಸಿಂಗಲ್‌ ಬಿಡ್‌ನಲ್ಲಿ ಅಂತಿಮಗೊಳ್ಳುತ್ತಿರುವುದು ಮತ್ತು ನಿರ್ದಿಷ್ಟ ಕಂಪನಿಗೆ ಹೆಚ್ಚಿನ ಲಾಭ ಮಾಡಿಕೊಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಅಲ್ಲದೇ ಚಂಡೀಗಡ್ ಮೂಲದ ಕಂಪನಿಯು ನೀಡಿದ್ದ ದರ ಪಟ್ಟಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಪರೀಕ್ಷಿಸಿಲ್ಲ ಎಂದು ತಿಳಿದು ಬಂದಿದೆ. ಈ ಕಂಪನಿ ನೀಡಿದ್ದ ದರಪಟ್ಟಿಯನ್ನೇ ಒಪ್ಪಿಕೊಂಡು 100 ಎಕ್ಸ್‌ -ರೇ ಉಪಕರಣಗಳ ಖರೀದಿಗೆ ಸರಬರಾಜು ಆದೇಶ ನೀಡಿರುವುದರಿಂದ 5 ಕೋಟಿ ರು. ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆಯಾದಂತಿದೆ.

 

ಅಲ್ಲದೆ ಬೆಂಗಳೂರು ಮೂಲದ ಸರ್ಜಿಕಲ್ ಉಪಕರಣಗಳ ಸರಬರಾಜು ಮಾಡುವ ಮತ್ತೊಂದು ಏಜೆನ್ಸಿಯೊಂದು ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಇದೇ ಕಂಪನಿಯಿಂದಲೇ ದರಪಟ್ಟಿ ಪಡೆದಿತ್ತು. ನಿಗಮ ನಿಗದಿಪಡಿಸಿದ್ದ ನಿರ್ದಿಷ್ಟತೆಯುಳ್ಳ ಎಕ್ಸ್‌-ರೇ ಉಪಕರಣವನ್ನು ಖಾಸಗಿ ಆಸ್ಪತ್ರೆಗಾಗಿ ಖರೀದಿಸಲು ಬೆಂಗಳೂರು ಮೂಲದ ಕಂಪನಿಯೊಂದು ಇದೇ ಚಂಡೀಗಢ್‌ ಮೂಲದ ಅಲೆಂಜರ್ಸ್‌ ಮೆಡಿಕಲ್‌ ಸಿಸ್ಟಂ ಲಿಮಿಟೆಡ್‌ನಿಂದ ಡಿಸೆಂಬರ್‌ 9, 2021ರಲ್ಲಿ ದರ ಪಟ್ಟಿ ಪಡೆದುಕೊಂಡಿತ್ತು.

 

ಇದರ ಪ್ರಕಾರ ಒಂದು ಎಕ್ಸ್‌ -ರೇ ಯುನಿಟ್‌ಗೆ ಜಿಎಸ್‌ಟಿ ಒಳಗೊಂಡಂತೆ 18.52 ಲಕ್ಷ ರು. ಇದೆ. ಇದೇ ದರದಲ್ಲಿಯೇ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಖರೀದಿಸಿದ್ದರೆ 100 ಉಪಕರಣಗಳಿಗೆ 18.52 ಕೋಟಿ ರು.ಗಳಾಗುತ್ತಿತ್ತು. ಆದರೆ 18, 95, 947 ರು. ದರದಲ್ಲಿ 18.95 ಕೋಟಿ ವೆಚ್ಚದಲ್ಲಿ ಒಟ್ಟು 100 ಉಪಕರಣಗಳನ್ನು ಖರೀದಿಸಲು ಆದೇಶ ನೀಡಿದೆ.

 

ಖಾಸಗಿ ಏಜೆನ್ಸಿಗೆ ಚಂಡೀಗಡ್‌ ಕಂಪನಿ ನೀಡಿದ್ದ ದರಪಟ್ಟಿ

 

ಖಾಸಗಿ ಆಸ್ಪತ್ರೆಯೊಂದಕ್ಕೆ ನೀಡಿದ್ದ ದರಪಟ್ಟಿಯಲ್ಲಿ ನಮೂದಿಸಿದ್ದ ದರಕ್ಕೂ ಮತ್ತು ಕೆಎಸ್‌ಎಂಸಿಎಲ್‌ ಗೆ ನೀಡಿರುವ ದರದ ಮಧ್ಯೆ 45,000 ರು. ವ್ಯತ್ಯಾಸವಿದೆ. ಒಟ್ಟಾರೆ 100 ಉಪಕರಣಗಳಿಗೆ 45.00 ಲಕ್ಷ ರು. ವ್ಯತ್ಯಾಸವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಕೋವಿಡ್‌ ಅಲೆ ಸಂದರ್ಭದಲ್ಲೂ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಪ್ರಕರಣಗಳು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದವು. ಆದರೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ತಳ್ಳಿ ಹಾಕಿದ್ದರು.

the fil favicon

SUPPORT THE FILE

Latest News

Related Posts