ಬಿಜೆಪಿ ಸರ್ಕಾರದಲ್ಲೂ ಅನ್ನಭಾಗ್ಯಕ್ಕೆ ಕನ್ನ ; 3 ವರ್ಷದಲ್ಲಿ 23.29 ಕೋಟಿ ಅಕ್ರಮ, 1,518 ಎಫ್‌ಐಆರ್‌ ದಾಖಲು

Photo Credit; TheNewsMiniute

ಬೆಂಗಳೂರು; ‘ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ ಕನ್ನ ಭಾಗ್ಯ ಯೋಜನೆಯಾಗಿದೆ. ಇಂತಹ ಕಾಂಗ್ರೆಸ್‌ ಸರ್ಕಾರವನ್ನು ತೊಲಗಿಸೋಣ. ಇದಕ್ಕೆಲ್ಲಾ ಒಂದೇ ಪರಿಹಾರ ಬಿಜೆಪಿ ಗೆಲ್ಲಿಸಿ,’ ಹೀಗೆಂದು ಹಿಂದಿನ ಕಾಂಗ್ರೆಸ್‌ ಸರ್ಕಾರದ ಹುಯಿಲೆಬ್ಬಿಸಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ 23.29 ಕೋಟಿ ರು. ಮೊತ್ತದ ಅಕ್ರಮ ನಡೆದಿದೆ.

 

ಕಳೆದ ಮೂರು ವರ್ಷಗಳಲ್ಲಿ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ವಿತರಣೆ ಮಾಡುವ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಲ್ಲಿ 1,060 ಪ್ರಕರಣಗಳು ದಾಖಲಾಗಿವೆ ಎಂದು ಪ್ರಿಯಾಂಕ್‌ ಎಂ ಖರ್ಗೆ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 2022ರ ಫೆ.24ರಂದು ವಿಧಾನಸಭೆಗೆ ಸಚಿವ ಉಮೇಶ್‌ ಕತ್ತಿ ಅವರು ಉತ್ತರಿಸಿದ್ದಾರೆ.
ಅಕ್ರಮವಾಗಿ ಪಡಿತರ ಆಹಾರ ಧಾನ್ಯಗಳನ್ನು ಸಾಗಾಣಿಕೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ 1,518 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಉಮೇಶ್‌ ಕತ್ತಿ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ವಿಧಾನಸಭೆಗೆ ಉಮೇಶ್‌ ಕತ್ತಿ ನೀಡಿರುವ ಉತ್ತರದ ಪ್ರತಿ

 

ಒಟ್ಟು 1,060 ಪ್ರಕರಣಗಳಲ್ಲಿ 1,05,857.74 ಕ್ವಿಂಟಾಲ್‌ ಅಕ್ಕಿ, 1,573.10 ಕ್ವಿಂಟಾಲ್‌ ಗೋಧಿ, 982.24 ಕ್ವಿಂಟಾಲ್‌ ರಾಗಿ, 9.30 ಕ್ವಿಂಟಾಲ್‌ ತೊಗರಿಬೇಳೆ, 1,519 ಲೀಟ್‌ ಪೆಟ್ರೋಲ್‌, 5,988.24 ಲೀ ಡೀಸೆಲ್‌ ಮತ್ತು 845 ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ 23,29,95,831ರು. ಆಗಿದೆ ಎಂದು ಸಚಿವ ಕತ್ತಿ ಅಂಕಿ ಅಂಶ ಒದಗಿಸಿದ್ದಾರೆ.

 

1,064 ಪ್ರಕರಣಗಳ ಪೈಕಿ ಅತಿ ಹೆಚ್ಚು ಎಂದರೆ 189 ಪ್ರಕರಣಗಳು ಬಳ್ಳಾರಿಯಲ್ಲಿ ದಾಖಲಾಗಿವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2019-20- 2020-21)ರಲ್ಲಿ ತವರು ಜಿಲ್ಲೆ ಶಿವಮೊಗ್ಗದಲ್ಲಿ 42 ಪ್ರಕರಣಗಳು ದಾಖಲಾಗಿದ್ದರೆ ಈ ಪೈಕಿ 32 ಎಫ್‌ಐಆರ್‌ ದಾಖಲಾಗಿವೆ.
ಇನ್ನುಳಿದಂತೆ ಬಾಗಲಕೋಟೆಯಲ್ಲಿ 68, ಬೆಂಗಳೂರು ಪೂರ್ವ ತಾಲೂಕಿನಲ್ಲಿ 17, ಬೆಳಗಾವಿಯಲ್ಲಿ 39, ಬೀದರ್‌ನಲ್ಲಿ 67, ಚಾಮರಾಜನಗರದಲ್ಲಿ 68, ಚಿತ್ರದುರ್ಗದಲ್ಲಿ 31, ದಾವಣಗೆರೆಯಲ್ಲಿ 59, ಗದಗ್‌ನಲ್ಲಿ 45, ಹಾವೇರಿಯಲ್ಲಿ 29, ಕಲ್ಬುರ್ಗಿಯ್ಲಿ 58, ಕೊಪ್ಪಳದಲ್ಲಿ 47, ಮಂಡ್ಯದಲ್ಲಿ 33, ಮೈಸೂರಿನಲ್ಲಿ 62, ರಾಯಚೂರಿನಲ್ಲಿ 40, ವಿಜಯಪುರದಲ್ಲಿ 40 ಪ್ರಕರಣಗಳು ದಾಖಲಾಗಿವೆ.

 

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆ ಅಲ್ಲ ಕನ್ನ ಭಾಗ್ಯ ವೆಂದು ಬಿಜೆಪಿ ಪಕ್ಷವು ದೊಡ್ಡ ಮಟ್ಟದಲ್ಲಿ ಹುಯಿಲೆಬ್ಬಿಸಿತ್ತಲ್ಲದೆ ಈ ಸಂಬಂಧ ಟಿ ವಿ ಮತ್ತು ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ನೀಡಿತ್ತು.

 

2018ರಲ್ಲಿ ಬಿಜೆಪಿ ಪ್ರಕಟಿಸಿದ್ದ ಜಾಹೀರಾತು

 

ಇದನ್ನು ಪ್ರತಿರೋಧಿಸಿದ್ದ ಕಾಂಗ್ರೆಸ್‌ ಪಕ್ಷವು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿತ್ತು. ಈ ದೂರಿನ ವಿಚಾರಣೆ ನಡೆಸಿದ್ದ ಚುನಾವಣೆ ಆಯೋಗದ ಅಧಿಕಾರಿ ಅನ್ನಭಾಗ್ಯ ಕನ್ನ ಭಾಗ್ಯ ವೆಂದು ನೀಡಿದ್ದ ಜಾಹೀರಾತಿಗೆ ದಾಖಲೆಗಳನ್ನು ಕೇಳಿದ್ದರು. ಆದರೆ ಜಾಹೀರಾತು ಬಿಡುಗಡೆ ಮಾಡಿದ್ದ ಬಿಜೆಪಿಯು ಅನ್ನ ಭಾಗ್ಯ ಕನ್ನ ಭಾಗ್ಯವೆಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರಲ್ಲದೆ ಆರೋಪಕ್ಕೆ ಸಂಬಂಧಿಸಿದಂತೆ ಕೆಲ ಪತ್ರಿಕಾ ತುಣುಕುಗಳನ್ನಷ್ಟೇ ನೀಡಿದ್ದರೇ ವಿನಃ ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ.

 

ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ 2,17,403 ಮೆಟ್ರಿಕ್‌ ಟನ್‌ ಅಕ್ಕಿಯನ್ನು 3 ರು. ಸಬ್ಸಿಡಿ ದರದಲ್ಲಿ ಹಂಚಿಕೆ ಮಾಡುತ್ತಿದೆ. ಇದರೊಂದಿಗೆ ರಾಜ್ಯ ಸರ್ಕಾರವು 15,500 ಮೆಟ್ರಿಕ್‌ ಟನ್‌ ಅಕ್ಕಿಯನ್ನು ಒಎಂಎಸ್‌ಎಸ್‌ ದರದಲ್ಲಿ ಖರೀದಿಸುತ್ತಿದೆ.

 

ಅಂತ್ಯೋದಯ ಪಡಿತರ ಚೀಟಿದಾರರ ಪ್ರತಿ ಪಡಿತರ ಚೀಟಿದಾರರಿಗೆ 35 ಕೆ ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆದ್ಯತಾ (ಬಿಪಿಎಲ್‌) 5 ಕೆ ಜಿ ಪ್ರತಿ ಸದಸ್ಯರಿಗೆ ಉಚಿತ ಅಕ್ಕಿ, ಆದ್ಯತೇತರ (ಎಪಿಎಲ್‌) 5 ಕೆ ಜಿ ಅಕ್ಕಿ ಏಕ ಸದಸ್ಯ ಪಡಿತರ ಚೀಟಿ ಮತ್ತು ಒಬ್ಬರಿಗಿಂತ ಹೆಚ್ಚಿನ ಸದಸ್ಯ ಪಡಿತರ ಚೀಟಿಗೆ 10 ಕೆ ಜಿ ಅಕ್ಕಿಯನ್ನು ಪ್ರತಿ ಕೆ ಜಿ ಗೆ 15 ರು.ನಂತೆ ವಿತರಿಸುತ್ತಿದೆ. ಅನ್ನ ಭಾಗ್ಯ ಯೋಜನೆಯ ಅಕ್ಕಿ ಖರೀದಿಗಾಗಿ ಪ್ರತಿ ತಿಂಗಳು ರಾಜ್ಯ ಸರ್ಕಾರವು 154.32 ಕೋಟಿ ರು. ಖರ್ಚು ಮಾಡುತ್ತದೆ.

the fil favicon

SUPPORT THE FILE

Latest News

Related Posts