ಶಾಸಕರ ವೇತನ ಹೆಚ್ಚಳಕ್ಕಿಲ್ಲದ ಆರ್ಥಿಕ ನಿರ್ಬಂಧ, ಗ್ರಂಥಾಲಯ ಮೇಲ್ವಿಚಾರಕರ ಗೌರವಧನ ಪಾವತಿಗೇಕೆ?

ಚಿತ್ರ; ಪ್ರಾತಿನಿಧಿಕ

ಬೆಂಗಳೂರು; ಮುಖ್ಯಮಂತ್ರಿ ಸೇರಿದಂತೆ ಶಾಸಕರ ವೇತನ ಪರಿಷ್ಕರಿಸಿಕೊಳ್ಳಲು ಯಾವುದೇ ತಕರಾರು, ಆಕ್ಷೇಪಣೆ ವ್ಯಕ್ತಪಡಿಸದೇ ಅನುಮತಿ ನೀಡುವ ಆರ್ಥಿಕ ಇಲಾಖೆಯು ಸಾರ್ವಜನಿಕ ಗ್ರಂಥಾಲಯಗಳ ವ್ಯಾಪ್ತಿಯಲ್ಲಿರುವ ಗ್ರಂಥಾಲಯ ಮೇಲ್ವಿಚಾರಕರಿಗೆ ಪರಿಷ್ಕೃತ ಗೌರವ ಧನ ಪಾವತಿಸುವ ಪ್ರಸ್ತಾವನೆಯನ್ನೇ ತಳ್ಳಿ ಹಾಕಿರುವುದು ಇದೀಗ ಬಹಿರಂಗವಾಗಿದೆ.

 

ಗ್ರಂಥಾಲಯ ಮೇಲ್ವಿಚಾರಕರಿಗೆ ಪರಿಷ್ಕೃತ ಗೌರವ ಧನ ಪಾವತಿಸುವ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿರುವ ಇಲಾಖೆಯು ಆರ್ಥಿಕ ನಿರ್ಬಂಧಗಳು ಜಾರಿಯಲ್ಲಿರುವ ಕಾರಣ ಗೌರವ ಧನ ಪಾವತಿಸುವ ಪ್ರಸ್ತಾವನೆ ಪರಿಗಣಿಸಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಆಡಳಿತ ಇಲಾಖೆಯ ಪ್ರಸ್ತಾವನೆಯ್ನು ಪರಿಶೀಲಿಸಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರಿಗೆ ಪರಿಷ್ಕೃತ ಗೌರವ ಧನ ಪಾವತಿಸಲು ಉದ್ದೇಶಿಸಿರುವ ಪ್ರಸ್ತಾವನೆಯನ್ನು ಪ್ರಸ್ತುತ ಇರುವ ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಪರಿಗಣಿಸಲು ಸಾಧ್ಯವಿರುವುದಿಲ್ಲ, ‘ಎಂದು 2022ರ ಜನವರಿ 24ರಂದು ಆರ್ಥಿಕ ಇಲಾಖೆಯು ಶಿಕ್ಷಣ ಇಲಾಖೆಗೆ ತಿಳಿಸಿದೆ.

 

ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿ ಅಂದಾಜು 1,000 ಗ್ರಂಥಾಲಯಗಳಲ್ಲಿ ಕನಿಷ್ಠ 250 ಮಂದಿ ಗ್ರಂಥಾಲಯ ಮೇಲ್ವಿಚಾರಕರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಗೌರವಧನವು ಹಲವು ವರ್ಷಗಳಿಂದ ಪರಿಷ್ಕರಣೆಯಾಗಿರಲಿಲ್ಲ. ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಗೌರವ ಧನವನ್ನು ಪರಿಷ್ಕರಿಸಿ ಅಂದಾಜು 3 ಕೋಟಿ ರು. ಒದಗಿಸಬೇಕು ಎಂಬ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು ಎಂದು ತಿಳಿದು ಬಂದಿದೆ.

 

ಆದರೆ ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ತಳ್ಳಿ ಹಾಕುವ ಮೂಲಕ ಹಲವು ವರ್ಷಗಳಿಂದ ಕಡಿಮೆ ಗೌರವ ಧನಕ್ಕೆ ಕೆಲಸ ಮಾಡುತ್ತಿರುವ ಮೇಲ್ವಿಚಾರಕರ ಹೊಟ್ಟೆ ಮೇಲೆ ಹೊಡೆದಂತಾಗಿದೆ.

 

ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯ ಆರು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಕೆಲಸ ಮಾಡುತ್ತಿದ್ದಾರೆ. ಇವರು ಸಹ ಕನಿಷ್ಠ ವೇತನಕ್ಕಾಗಿ 32 ವರ್ಷಗಳಿಂದ ಬಕಪಕ್ಷಿಯಂತೆ ಕಾಯುತ್ತಿದ್ದಾರೆ.

 

1988ರಲ್ಲಿ ಗ್ರಂಥಾಲಯ ಆರಂಭವಾದಾಗ ಇದ್ದ ಗೌರವಧನ ₹ 300. ಮೇಲ್ವಿಚಾರಕರು 10 ವರ್ಷ ಅದೇ ಗೌರವಧನದಲ್ಲಿ ಜೀವನ ಸಾಗಿಸಿದ್ದರು. ಗೌರವ ಧನವು ಅತ್ಯಲ್ಪ ಮಟ್ಟದಲ್ಲಿ ಹೆಚ್ಚಳವಾಗಿ ಇದೀಗ ₹ 7 ಸಾವಿರಕ್ಕೆ ಬಂದು ನಿಂತಿದೆ.

 

ಕನಿಷ್ಠ ಸಂಬಳ ₹ 13 ಸಾವಿರ ನೀಡಿ ಎಂಬ ಕಾರ್ಮಿಕ ಇಲಾಖೆಯ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹಿಂದೆಗೆದುಕೊಂಡಿದ್ದು, ಮೇಲ್ವಿಚಾರಕರ ಕೆಲಸದ ಅವಧಿಯನ್ನು ಇದೀಗ ನಾಲ್ಕು ಗಂಟೆಗೆ ಇಳಿಸಿ, ₹ 7 ಸಾವಿರ ಗೌರವಧನವನ್ನೇ ಮುಂದುವರಿಸುವ ಜಾಣತನ ತೋರಿಸಿದೆ. ನಾಲ್ಕು ಗಂಟೆಯಾದರೂ ನಾವು ದಿನವಿಡೀ ಸಮಯ ವ್ಯರ್ಥ ಮಾಡಬೇಕಾಗಿದೆ. ನಮ್ಮ ಜೀವನಕ್ಕೆ ಭದ್ರತೆ ಇಲ್ಲವಾಗಿದೆ’ ಎನ್ನುತ್ತಾರೆ ಮೇಲ್ವಿಚಾರಕರೊಬ್ಬರು.

 

ಗೌರವ ಧನ ಹೆಚ್ಚಳ ಮಾಡದ ಕಾರಣ ಗ್ರಂಥಾಲಯ ಮೇಲ್ವಿಚಾರಕರಾಗಿದ್ದ ಆರ್‌ ರೇವಣ್ಣ ಎಂಬುವರು ವಿಧಾನಸೌಧದ ಮೂರನೇ ಮಹಡಿಯಲ್ಲಿ 2019ರ ಜೂನ್‌ 24ರಂದು ಆತ್ಮಹತ್ಯೆಗೆ ಯತ್ನಿಸಿದ್ದನ್ನು ಸ್ಮರಿಸಬಹುದು.

 

ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರಿಗೆ ಸಮಯ ಬದಲಾವಣೆ, ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಕಲ್ಪಿಸಿ, ಗೌರವಧನ 7000 ದಿಂದ 12000 ಕ್ಕೆ ಹೆಚ್ಚಿಸಿ 2021ರ ಮೇ 26ರಂದು ಕರ್ನಾಟಕ ಸರಕಾರ ಆದೇಶ ಹೊರಡಿಸಿತ್ತು. ಆದರೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಪರಿಷ್ಕೃತ ಗೌರವ ಧನ ಪಾವತಿಸುವ ಸಂಬಂಧದ ಪ್ರಸ್ತಾವನೆಯನ್ನು ತಳ್ಳಿ ಹಾಕುವ ಮೂಲಕ ಅವರನ್ನು ಬೀದಿಗೆ ತಂದು ನಿಲ್ಲಿಸಿದಂತಾಗಿದೆ.

SUPPORT THE FILE

Latest News

Related Posts