ಹರ್ಷನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ; ವಿವೇಚನಾ ಅಧಿಕಾರ ದುರ್ಬಳಕೆ?

photo credit; opindia

ಬೆಂಗಳೂರು; ಕಡು ಬಡವರಿಗೆ, ಅನಾರೋಗ್ಯಪೀಡಿತ ಬಿಪಿಎಲ್‌ ಪಡಿತರ ಚೀಟಿದಾರರಿಗೆ, ವಿಕಲ ಚೇತನರಿಗೆ, ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುತ್ತಿದ್ದ ರಾಜ್ಯ ಸರ್ಕಾರವು ಶಿವಮೊಗ್ಗದಲ್ಲಿ ಇತ್ತೀಚೆಗಷ್ಟೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಬಜರಂಗದಳ ಕಾರ್ಯಕರ್ತ ಶಿವಮೊಗ್ಗದ ಹರ್ಷ ಎಂಬಾತನ ಕುಟುಂಬ ಸದಸ್ಯರಿಗೆ ನೀಡಿರುವ 25 ಲಕ್ಷ ರು. ಮೊತ್ತದ ಚೆಕ್‌ನ್ನು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಿರುವುದು ಇದೀಗ ಬಹಿರಂಗವಾಗಿದೆ.

 

ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿರುವ ಮೊತ್ತವನ್ನು ಬಾಧಿತರಿಗೆ ಮಂಜೂರು ಮಾಡುವ ಅಧಿಕಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದ್ದರೂ ಹಿಂದಿನ ಯಾವ ಮುಖ್ಯಮಂತ್ರಿಗಳೂ ಹತ್ಯೆಗೀಡಾಗಿರುವ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಿರಲಿಲ್ಲ. ಆದರೆ ರಾಜ್ಯ ಬಿಜೆಪಿ ಸರ್ಕಾರವು ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರ ಬಳಸಿಕೊಂಡು 25 ಲಕ್ಷ ರು. ಮೊತ್ತದ ಚೆಕ್‌ನ್ನು ನೀಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಹತ್ಯೆಗೀಡಾಗಿರುವ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬ ಸದಸ್ಯರಿಗೆ 25 ಲಕ್ಷ ರು.ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಕೆಲ ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಬಿಚ್ಚುಗತ್ತಿ ಮಾರಮ್ಮ ದೇಗುಲದಲ್ಲಿ ನೀಡಿದ್ದ ಪ್ರಸಾದ ಸೇವನೆಯಿಂದ ಸಾವೀಗೀಡಾಗಿದ್ದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರು., ಮತ್ತು ಮಂಡ್ಯ ಜಿಲ್ಲೆಯಲ್ಲಿನ ನಾಲೆಯೊಂದಕ್ಕೆ ಬಸ್‌ ಉರುಳಿದ್ದರಿಂದಾಗಿ ಮೃತಪಟ್ಟಿದ್ದವರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರು.ನಂತೆ ಪರಿಹಾರದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗಿತ್ತು. ಈ ಅವಧಿಯಲ್ಲಿ ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು.

 

ಸಾರ್ವಜನಿಕರು, ಸಂಘ ಸಂಸ್ಥೆಗಳು, ನಿಗಮ, ಮಂಡಳಿಗಳು, ಕಾರ್ಪೋರೇಷನ್‌ಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿವೆ. ಈ ಹಣವನ್ನು ಸನ್ನಿವೇಶ, ಕುಟುಂಬದ ತೀವ್ರತೆ, ದುಡಿಯುವ ವ್ಯಕ್ತಿ ಮೃತಪಟ್ಟಲ್ಲಿ, ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ ಭರಿಸಲಾಗುತ್ತಿದೆ. ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗೆ ಕನಿಷ್ಠ 10ರಿಂದ 25 ಲಕ್ಷ ರು.ವರೆಗೂ ಪರಿಹಾರವನ್ನು ಇದೇ ನಿಧಿಯಿಂದಲೇ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.

 

ಹರ್ಷನ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ಸರ್ಕಾರ ನೀಡಿದ 25 ಲಕ್ಷ ರು. ಮೊತ್ತದ ಚೆಕ್‌ ವಿತರಿಸಿರುವುದು

 

‘ಈ ಹಿಂದೆ ರಾಜ್ಯದಲ್ಲಿ ನಡೆದಿದ್ದ ಕೋಮು ಗಲಭೆಗಳಲ್ಲಿ ಮೃತಪಟ್ಟಿದ್ದರೂ ಅವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಮಂಜೂರು ಮಾಡಿಲ್ಲ. ಅಲ್ಲದೇ ಇತ್ತೀಚೆಗಷ್ಟೇ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರಿಂದ ಮುಸ್ಲಿಂ ಯುವಕನೊಬ್ಬ ಹತ್ಯೆಗೀಡಾಗಿದ್ದರೂ ಆತನ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರದ ಹಣವನ್ನು ಮಂಜೂರು ಮಾಡಿಲ್ಲ. ಮೇಲಾಗಿ ಹತ್ಯೆಗೀಡಾಗಿರುವ ಹರ್ಷ ಎಂಬಾತ ಹಲವು ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದ. ಅಲ್ಲದೆ ಆತನ ಕುಟುಂಬಕ್ಕೆ ಈಗಾಗಲೇ ಕೋಟಿಗಟ್ಟಲೇ ನೆರವಿನ ಮೊತ್ತವನ್ನು ನೀಡಲಾಗಿದೆ.

 

ಹೀಗಿದ್ದರೂ ಕರ್ನಾಟಕ ಸರ್ಕಾರವು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರು.ಗಳನ್ನು ಭರಿಸಿರುವುದು ಸರಿಯಾದ ಕ್ರಮವಲ್ಲ. ಈ ಪ್ರಕರಣವನ್ನೇ ಮಾದರಿಯಾಗಿಸಿಕೊಂಡು ಇನ್ನುಳಿದವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಡತಾಕಬಹುದು. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಂತಾಗಿದೆ,’ ಎನ್ನುತ್ತಾರೆ ಸಚಿವಾಲಯದ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ,’

 

ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಎಂಬಾತನ ರಾತ್ರಿ ಹತ್ಯೆ ಫೆ.20 ರಂದು ನಡೆದಿತ್ತು. ಹೋಟೆಲ್‌ಗೆ ಊಟಕ್ಕೆ ಹೋಗುವಾಗ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹರ್ಷನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಹರ್ಷ ಶವವನ್ನು ಆಸ್ಪತ್ರೆಯಿಂದ ಸೀಗೆಹಟ್ಟಿ ನಿವಾಸಕ್ಕೆ ತೆಗೆದುಕೊಂಡು ಹೋಗುವಾಗ, ಪಾರ್ಥಿವ ಶರೀರದ ಮೆರವಣಿಗೆ ವೇಳೆ ಗಲಭೆ ನಡೆದಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts