ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಆದೇಶ ಹೊರಡಿಸುವ ಆಸಕ್ತಿ, ಇತರೆ ಯೋಜನೆಗಳಿಗಿಲ್ಲವೇಕೆ?

ಬೆಂಗಳೂರು; ಉದ್ಯೋಗ ಸೃಷ್ಟಿಗೆ ಅವಕಾಶಗಳಿದ್ದ ಅರಿಶಿನ ಮಾರುಕಟ್ಟೆ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಪಠ್ಯದೊಡನೆ ವೃತ್ತಿ ತರಬೇತಿ, ನವಜಾತ ಶಿಶುಗಳಲ್ಲಿ ಅನುವಂಶೀಯ ಮೆಟಾಬಾಲಿಕ್‌ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಪ್ರಯೋಗಾಲಯ ತೆರೆಯುವುದು, ಕೋವಿಡ್‌ 19ರ ಅವಧಿಯಲ್ಲಿ ಆರಂಭಿಸಲಾದ ಟೆಲಿ ಐಸಿಯು ಸೌಲಭ್ಯಗಳನ್ನು ಬಲಪಡಿಸುವ ಸಂಬಂಧ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದ ರಾಜ್ಯ ಬಿಜೆಪಿ ಸರ್ಕಾರವು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ವರ್ಷ ಕಳೆದರೂ ಆದೇಶ ಹೊರಡಿಸಿಲ್ಲ.

 

ಆದರೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿಗಳಿಗೆ ಯಾತ್ರಿ ನಿವಾಸ ನಿರ್ಮಾಣ ಮಾಡಲು 10.00 ಕೋಟಿ ರು. ಒದಗಿಸುವ ಘೋಷಣೆಗೆ ಸಂಬಂಧಿಸಿದಂತೆ ತಾತ್ವಿಕ ಅನುಮೋದನೆ ನೀಡಿ ಸರ್ಕಾರಿ ಆದೇಶವನ್ನೂ ಹೊರಡಿಸುವ ಮೂಲಕ ಅತ್ಯಾಸಕ್ತಿ ವಹಿಸಿರುವುದು ಇದೀಗ ಬಹಿರಂಗವಾಗಿದೆ.
2021-22ರ ಅಯವ್ಯಯ ಭಾಷಣದ ಮೆಲೆ ತೆಗೆದುಕೊಂಡಿರುವ ಕ್ರಮದ ಕುರಿತು ವರದಿ ಮಂಡಿಸಿರುವ ರಾಜ್ಯ ಸರ್ಕಾರವು, ಮಹತ್ವಾಕಾಂಕ್ಷಿ ಮತ್ತು ಜನಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರಾಸಕ್ತಿ ವಹಿಸಿರುವುದು ಕಂಡು ಬಂದಿದೆ.

 

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರ ನೀಡಿರುವ 5 ಎಕರೆ ಜಮೀನಿನಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡುವ ಕಾಮಗಾರಿಗೆ 10 ಕೋಟಿ ರು. ಒದಗಿಸಲು ಆದೇಶ ಹೊರಡಿಸಿದೆ. ಯಾತ್ರಿ ನಿವಾಸ ನಿರ್ಮಾಣ ಮಾಡುವ ಘೋಷಣೆ ಮಾಡಿದ ಕೇವಲ ಆರೇ ಆರು ತಿಂಗಳಲ್ಲಿ ಅಂದರೆ 2021ರ ಸೆ.23ರಂದು ತಾತ್ವಿಕ ಅನುಮೋದನೆ ನೀಡಿ ಆದೇಶವನ್ನೂ ಹೊರಡಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಅದೇ ರೀತಿ ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಶ್ರೀಪಾದರ ಗೌರವಾರ್ಥ ಮತ್ತು ತುಮಕೂರಿನಲ್ಲಿ ಶಿವಕುಮಾರ ಸ್ವಾಮಿಗಳ ಹೆಸರಿನಲ್ಲಿ ಸ್ಮೃತಿ ವನವನ್ನು 2 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುವ ಘೋಷಣೆ ಸಂಬಂಧ ನಾಲ್ಕೇ ನಾಲ್ಕು ತಿಂಗಳಲ್ಲಿ ಅಂದರೆ 2021ರ ಜುಲೈ 1ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ.

 

2021-22ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದ ಒಟ್ಟು 263 ಕಂಡಿಕೆಗಳ ಪೈಕಿ ಇನ್ನೂ 59 ಘೋಷಣೆಗಳಿಗೆ ಸರ್ಕಾರದ ಆದೇಶವನ್ನೇ ಹೊರಡಿಸಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 11 ಘೋಷಣೆಗಳ ಪೈಕಿ 10 ಘೋಷಣೆಗಳಿಗೆ ಇನ್ನೂ ಆದೇಶಗಳನ್ನು ಹೊರಡಿಸಿಲ್ಲ ಎಂಬುದು ತಿಳಿದು ಬಂದಿದೆ.

 

ಮಹತ್ವದ ಘೋಷಣೆಗಳಿಗೆ ಸಂಬಂಧಿಸಿದಂತೆ ಹಲವು ಇಲಾಖೆಗಳು ವರ್ಷ ಕಳೆದರೂ ಇನ್ನೂ ಕ್ರಿಯಾ ಯೋಜನೆ ಸಲ್ಲಿಸಿಲ್ಲ. ಬಹುತೇಕ ಇಲಾಖೆಗಳು ತಮ್ಮ ಹಂತದಲ್ಲಿಯೇ ಘೋಷಣೆಗಳನ್ನು ವರ್ಷದಿಂದಲೂ ಪರಿಶೀಲಿಸುತ್ತಲೇ ಇವೆಯೇ ವಿನಃ ಆದೇಶ ಹೊರಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

 

ಓಕುಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಜಮೀನಿನಲ್ಲಿ ಇಲಾಖೆಯ ಎಲ್ಲಾ ಕಚೇರಿಗಳು, ಸಂಬಂಧಿತ ಸಂಸ್ಥೆಗಳು ಹಾಗೂ ವಾಣಿಜ್ಯ ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ 150 ಕೋಟಿ ರು. ವೆಚ್ಚದಲ್ಲಿ ರೇಷ್ಮೆ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ವರ್ಷ ಕಳೆದರೂ ಸಚಿವ ಸಂಪುಟದ ಅನುಮೋದನೆ ಪಡೆದಿಲ್ಲ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಬೈಯಪ್ಪನಹಳ್ಳಿಇಯ 8 ಎಕರೆ ಜಮೀನಿನಲ್ಲಿ 50 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು 2021ರ ಮಾರ್ಚ್‌ ಆಯವ್ಯಯದಲ್ಲಿ ಘೋಷಿಸಲಾಗಿತ್ತು. ಇದಕ್ಕೆ ಯೋಜನಾ ಇಲಾಖೆ ಸಹಮತಿ ನೀಡಿದೆಯಾದರೂ ಈ ಯೋಜನೆಯನ್ನು ಬೈಯಪ್ಪನಹಳ್ಳಿ ಬದಲಿಗೆ ಹೆಬ್ಬಾಳದಲ್ಲಿರುವ ಪಶು ಸಂಗೋಪನಾ ಇಲಾಖೆಯ ಜಾಗದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಆದರೆ ವರ್ಷ ಕಳೆದರೂ ಇನ್ನು ಇಲಾಖೆಗಳ ಮಧ್ಯೆ ಚರ್ಚೆಯ ಹಂತದಲ್ಲೇ ಇದೆ.

 

ಸಿಂಗೇನ ಅಗ್ರಹಾರದ ಹಣ್ಣು ಮಾರುಕಟ್ಟೆಗೆ ಹೊಂದಿಕೊಂಡಿರುವ ಗೂಳಿಮಂಗಳ ಗ್ರಾಮದ 42 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣ ಸಂಬಂಧ ಪ್ರಸ್ತಾವನೆಯನ್ನು ವರ್ಷದಿಂದಲೂ ಪರಿಶೀಲಿಸುತ್ತಿರುವ ಸರ್ಕಾರವು, ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನೇ ಕೈ ಬಿಟ್ಟಿರುವುದು ವರದಿಯಿಂದ ತಿಳಿದು ಬಂದಿದೆ.

 

ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಆಲದಹಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಒಣ ಮೆಣಿಸಿನ ಕಾಯಿ ಮಾರುಕಟ್ಟೆಯನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಘೋಷಿಸಲಾಗಿತ್ತಾದರೂ ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರ ಕೋರಿಕೆ ಹಂತದಲ್ಲೇ ಇದೆ.

 

ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂಎಲ್‌ಡಿ ನೀರನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 500 ಕೋಟಿ ರು.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿ ಆಯವ್ಯಯದಲ್ಲಿ ಘೋಷಿಸಿತ್ತು. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿಸಿದೆಯಾದರೂ ಇನ್ನೂ ಕ್ರಮವಹಿಸುವ ಹಂತದಲ್ಲೇ ಇದೆ.

 

ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಂತದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒಂದೇ ಸೂರಿನಡಿಯಲ್ಲಿ ನೀಡುವ ಉದ್ದೇಶದಿಂದ ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ ಸ್ಥಾಪಿಸಿರುವ 276 ಕರ್ನಾಟಕ ಪಬ್ಲಿಕ್‌ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ 2020-21ನೇ ಸಾಲಿನಲ್ಲಿ ಆಯ್ದ 50 ಶಾಲೆಗಳಿಗೆ ತಲಾ 2 ಕೋಟಿ ರು. ಅನುದಾನ ನೀಡಲಾಗಿದೆ. 2021-22ನೇ ಸಾಲಿನಲ್ಲಿ ಹೆಚ್ಚುವರಿ 50 ಶಾಲೆಗಳನ್ನು ಅಭಿವೃದ್ಧಿಪಡಿಸಲು 100 ಕೋಟಿ ರು. ನಿಗದಿಪಡಿಸಿದೆಯಾದರೂ 2021ರ ಮೇ 21ರಂದು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದೆಯೇ ವಿನಃ ಇನ್ನೂ ಆದೇಶ ಹೊರಬಿದ್ದಿಲ್ಲ.

 

ರಾಜ್ಯದ ಆಯ್ದ 100 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯದೊಡನೆ ವೃತ್ತಿ ತರಬೇತಿಯನ್ನು ಕೌಶಲಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನೀಡುವ ಸಂಬಂಧ ಆರ್ಥಿಕ ಇಲಾಖೆ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಟಿಪ್ಪಣಿಯಂತೆ ಸದರಿ ಕಾರ್ಯಕ್ರಮವನ್ನೇ ರದ್ದುಗೊಳಿಸಿದೆ.

 

ಎನ್‌ಎಬಿಎಲ್‌ ಮಾನಕಗಳಿಗೆ ಅನುಸಾರವಾಗಿ ರಾಜ್ಯದಲ್ಲಿ 4 ಪ್ರಾದೇಶಿಕ ಆಹಾರ ಸುರಕ್ಷತಾ ಪ್ರಯೋಗಾಲಯಗಳನ್ನು 2 ಕೋಟಿ ರು. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಘೋಷಣೆ ಸಂಬಂಧದ ಪ್ರಸ್ತಾವನೆಯನ್ನು ಆಡಳಿತ ಇಲಾಖೆಯು ವರ್ಷದಿಂದಲೂ ಪರಿಶೀಲಿಸುತ್ತಲೇ ಇದೆ.

 

ನವಜಾತ ಶಿಶುಗಳಲ್ಲಿ ಅನುವಂಶೀಯ ಮೆಟಾಬಾಲಿಕ್‌ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಪ್ರಯೋಗಾಲಯಗಳನ್ನು ಒಟ್ಟು 10 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲು ಘೋಷಿಸಿಲಾಗಿತ್ತಾದರೂ ವರ್ಷ ಕಳೆದರೂ ಆಡಳಿತ ಇಲಾಖೆಯು ಪ್ರಸ್ತಾವನೆ ಸಲ್ಲಿಸಿಲ್ಲ.

 

ಕೋವಿಡ್‌ 19ರ ಅವಧಿಯಲ್ಲಿ ಆರಂಭಿಸಲಾದ ಟೆಲಿ ಐಸಿಯು ಸೌಲಭ್ಯಗಳನ್ನು ಬಲಪಡಿಸಿ ವಿಶೇಷ ತಜ್ಞರ ಕೊರತೆ ನೀಗಿಸಲು 2 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಆದರೆ ಈ ಸಂಬಂಧದ ಪ್ರಸ್ತಾವನೆಯನ್ನು ಆಡಳಿತ ಇಲಾಖೆಯಲ್ಲಿ ಪರಿಶೀಲಿಸುತ್ತಿರುವುದು ವರದಿಯಿಂದ ಗೊತ್ತಾಗಿದೆ.

 

ಅಪೌಷ್ಠಿಕತೆಯಿಂದ ತಾಯಿ ಹಾಗೂ ಮಗುವನ್ನು ರಕ್ಷಿಸಲು ಭಾರತೀಯ ವೈದ್ಯ ಪದ್ಧತಿಗನುಸಾರವಾಗಿ ಪೋಷಣೆ ಮತ್ತು ಜೀವನೋಪಾಯ ಕಾರ್ಯಕ್ರಮವನ್ನು 5 ಕೋಟಿ ರು. ವೆಚ್ಚದಲ್ಲಿ ಆಯುಷ್‌ ಇಲಾಖೆಯ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಸುವ ಪ್ರಸ್ತಾವನೆಯನ್ನು ಇಲಾಖೆಯ ನಿರ್ದೇಶಕರು ಇನ್ನು ಪ್ರಸ್ತಾವನೆ ಸಲ್ಲಿಸಿಲ್ಲ.

 

2021-22ನೇ ಸಾಲಿನಲ್ಲಿ ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 5 ಕೋಟಿ ರು.ಗಲ ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗಗಳನ್ನು ಪ್ರಾರಂಭಿಸುವ ಪ್ರಸ್ತಾವನೆಯು ಇನ್ನೂ ಪರಿಶೀಲನೆ ಹಂತದಲ್ಲಿದೆ.

 

ಬೆಂಗಳೂರು ನಗರ ವಾಸಿಗಳಿಗೆ ಪ್ರಾಥಮಿಕ ಚಿಕಿತ್ಸೆಯು ಸುಲಭವಾಗಿ ದೊರೆಯುವಂತೆ ಮಾಡಲು ಬಿಬಿಎಂಪಿಯಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ 57 ವಾರ್ಡ್‌ಗಳಲ್ಲಿ 10 ಕೋಟಿ ರು. ವೆಚ್ಚದಲ್ಲಿ ಜನಾರೋಗ್ಯ ಕೇಂದ್ರಗಳನ್ನು ಆರೋಗ್ಯ ಇಲಾಖೆ ಮೂಲಕ ಸ್ಥಾಪಿಸಿ ತಪಾಸಣೆ ಸೌಲಭ್ಯಗಳ ಜೊತೆಗೆ ಹೊರರೋಗಿಗಳ ಸೇವೆ ಒದಗಿಸುವ ಪ್ರಸ್ತಾವನೆಯೂ ಆಡಳಿತ ಇಲಾಖೆಯಲ್ಲಿ ಪರಿಶೀಲನೆಯಲ್ಲೇ ಇದೆ.

 

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಸ್ವರ ಭಾಸ್ಕರ ಭಾರತರತ್ನ ಪಂಡಿತ್‌ ಭೀಮ್‌ಸೇನ್‌ ಜೋಷಿ ಅವರ 100ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸಂಗೀತೋತ್ಸವ ಮತ್ತು ವಿಚಾರ ಸಂಕಿರಣ ಏರ್ಪಡಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಮೂಲ ಗೇಣಿದಾರರು, ಕುಕಮ್ಕಿ ಜಮೀನು, ಖಾನೇ ಬಾನೇ, ಡೀಮ್ಡ್‌ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರತ್ಯೇಕ ಸಮಿತಿ ರಚಿಸುವ ಪ್ರಸ್ತಾವನೆಯೂ ವರ್ಷದಿಂದಲೂ ಪರಿಶೀಲನೆಯಲ್ಲಿದೆ.

 

ಬೀದರ್‌ನಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೃಷಿ ಉಪಕರಣಗಳ ತಯಾರಿಕೆ ಕ್ಲಸ್ಟರ್‌ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್‌ಗೆ ಸಚಿವ ಸಂಪುಟದ ಉಪ ಸಮಿತಿ ಮುಂದೆ ವರ್ಷ ಕಳೆದರೂ ಪ್ರಸ್ತಾವನೆಯನ್ನೇ ಮಂಡಿಸಿಲ್ಲ. ಕೈಮಗ್ಗ ನೇಕಾರರಿಗೆ ಹೊಸ ವಿನ್ಯಾಸದ ತಿಳಿವಳಿಕೆ, ಉತ್ಪನ್ನಗಳ ಬೇಡಿಕೆ, ಆದಾಯ ಹೆಚ್ಚಿಸಲು ಉತ್ತರ ಕರ್ನಾಟಕದ ಭಾಗದಲ್ಲಿ ಸ್ಮಾರ್ಟ್‌ ಹ್ಯಾಂಡ್‌ಲೂಮ್‌ ಡಿಸೈನ್‌ ಸ್ಟುಸಿಯೋ ಸ್ಥಾಪನೆ ಸಂಬಂಧದ ಪ್ರಸ್ತಾವನೆಯೂ ವರ್ಷದಿಂದಲೂ ತೆವಳುತ್ತಿದೆ.

 

ಬೆಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 5 ಕೋಟಿ ರು. ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗಗಳನ್ನು ಪ್ರಾರಂಭಿಸುವ ಉದ್ದೇಶ ಮತ್ತು ದಾವಣಗೆರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪ ಕೇಂದ್ರವನ್ನು 20 ಕೋಟಿ ರು. ವೆಚ್ಚದಲ್ಲಿ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ವರ್ಷದಿಂದಲೂ ಪ್ರಸ್ತಾವನೆಯು ವೈದ್ಯಕೀಯ ಶಿಕ್ಷಣ ಇಲಾಖೆಯು ಪರಿಶೀಲಿಸುತ್ತಲೇ ಇದೆ.

 

ಹಾಸನ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 100 ಸ್ನಾತಕೋತ್ತರ ಸೀಟುಗಳಿಗೆಗ ಹೆಚ್ಚಿಸುವುದು, ಧಾರವಾಡದ ಡಿಮ್ಹಾನ್ಸ್‌ನಲ್ಲಿ 75 ಕೋಟಿ ರು. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಭಾಗವಾಗಿ ಪ್ರಸಕ್ತ ಸಾಲಿನಲ್ಲಿಯೇ 10 ಕೋಟಿ ರು. ಅನುದಾನ ಒದಗಿಸುವ ಸಂಬಂಧದ ಪ್ರಸ್ತಾವನೆಯು ವರ್ಷದಿಂದಲೂ ವೈದ್ಯಕೀಯ ಶಿಕ್ಷಣ ಇಲಾಖೆಯ ಪರಿಶೀಲನಾ ಹಂತದಲ್ಲೇ ಇರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts