ಬೆಂಗಳೂರು; ರಾಜ್ಯದಲ್ಲಿರುವ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳಲ್ಲಿನ ಒಟ್ಟಾರೆ 83,190 ಉದ್ಯೋಗ ನಷ್ಟದ ಪೈಕಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲೇ 46, 585 ಉದ್ಯೋಗ ನಷ್ಟವಾಗಿದೆ.
ಕೋವಿಡ್‌ನಿಂದ ಕೈಗಾರಿಕೆ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ ಎಂದು ಒಪ್ಪಿಕೊಂಡಿರುವ ಸರ್ಕಾರವು ನಷ್ಟದ ಪ್ರಮಾಣವನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಾಗಿರುವುದಿಲ್ಲವೆಂದು ನುಣುಚಿಕೊಂಡಿದೆ.
ದೇಶದ ಉದ್ಯೋಗ ಮಾರುಕಟ್ಟೆಯ ಮೇಲೆ ಕೊರೊನಾ ಸಾಂಕ್ರಾಮಿಕದ ಕರಿನೆರಳು ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ವರದಿ ಹೇಳಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಉದ್ಯೋಗ ನಷ್ಟವಾಗಿರುವ ಕುರಿತು ಒದಗಿಸಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ಪ್ರಿಯಾಂಕ್ ಎಂ ಖರ್ಗೆ ಅವರು 2022ರ ಫೆ.18ರಂದು ಕೇಳಿದ್ದ ಪ್ರಶ್ನೆಗೆ ‘ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 1258 ಕಾರ್ಖಾನೆಗಳು ಮುಚ್ಚಿವೆ. 2019ರಲ್ಲಿ 504, 2020ರಲ್ಲಿ 562 ಮತ್ತು 2021ರಲ್ಲಿ 192 ಕೈಗಾರಿಕೆಗಳು ಮುಚ್ಚಿವೆ,’ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಉತ್ತರಿಸಿದ್ದಾರೆ.
2019ರಲ್ಲಿ 504 ಸಣ್ಣ ಕೈಗಾರಿಕೆಗಳಲ್ಲಿ 20,665 ಪುರುಷರು, 15,940 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದರು. 2020ರಲ್ಲಿ 562 ಕೈಗಾರಿಕೆಗಳಲ್ಲಿ 19,896 ಪುರುಷರು, 11, 826 ಮಹಿಳೆಯರು, 2021ರಲ್ಲಿ, 192 ಕೈಗಾರಿಕೆಗಳಲ್ಲಿ 9,385 ಪುರುಷರು, 5,478 ಮಹಿಳೆಯರು ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.
‘ರಾಜ್ಯದ 1,258 ಕೈಗಾರಿಕೆಗಳಲ್ಲಿ ಮೂರು ವರ್ಷದಲ್ಲಿ ಒಟ್ಟು 49,946 ಪುರುಷರು, 33,244 ಮಹಿಳೆಯರು ಸೇರಿದಂತೆ ಒಟ್ಟಾರೆ 83,190 ಉದ್ಯೋಗ ನಷ್ಟವಾಗಿದೆ,’ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ಒದಗಿಸಿದ್ದಾರೆ.
ಅದೇ ರೀತಿ ವಿಧಾನ ಪರಿಷತ್ ಸದಸ್ಯ ಪಿ ಆರ್ ರಮೇಶ್ ಅವರ ಪ್ರಶ್ನೆಗೆ 2022ರ ಫೆ.15ರಂದು ಉತ್ತರಿಸಿರುವ ಸಣ್ಣಕೈಗಾರಿಕೆ ಸಚಿವ ಎಂ ಟಿ ಬಿ ನಾಗರಾಜ್ ಅವರು ‘ಮುಚ್ಚಿರುವ ಕೈಗಾರಿಕೆಗಳ ಬಗ್ಗೆ ಎಂಎಸ್‌ಎಂಇಡಿ ಕಾಯ್ದೆ 2006ರಲ್ಲಿ ಸ್ಪಷ್ಟ ವ್ಯಾಖ್ಯಾನ ಇಲ್ಲದೇ ಇರುವುದರಿಂದ ಈ ವ್ಯವಸ್ಥೆಯಲ್ಲಿ ಈ ಕೈಗಾರಿಕೆಗಳು ಮುಚ್ಚಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ಅವಕಾಶವಿರುವುದಿಲ್ಲ, ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್ ಮೊದಲ, ಎರಡನೇ ಮತ್ತು ಮೂರನೇ ಅಲೆಗಳಿಂದಾಗಿ ಉಕ್ಕು, ಕಬ್ಬಿಣದ ಬೆಲೆಯಲ್ಲಿ ಹೆಚ್ಚಳವಾಗಿದ್ದರಿಂದ ಮಾರುಕಟ್ಟೆಯಲ್ಲಿ ಪೈಪೋಟಿಯಿಂದ ಸಣ್ಣ ಪ್ರಮಾಣದ ಕೈಗಾರಿಕೆಗಳು ಉತ್ಪಾದನೆ ಮಾಡಲು ಕಷ್ಟಕರವಾಗಿದೆ ಎಂದು ಉತ್ತರಿಸಿದ್ದಾರೆ.
ಕಳೆದ ಡಿಸೆಂಬರ್ ಒಂದೇ ತಿಂಗಳಿನಲ್ಲಿ ದೇಶದಲ್ಲಿ 10.5 ದಶಲಕ್ಷ (1.05 ಕೋಟಿ) ವೇತನ ಪಡೆಯುವ ಉದ್ಯೋಗಿಗಳು ಮತ್ತು ಉದ್ಯಮಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ತಿಳಿಸಿತ್ತು.
ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ ಮೊದಲ ಬಾರಿ ಲಾಕ್‌ಡೌನ್ ಜಾರಿಗೊಳಿಸಿದ ಬಳಿಕ ಇಲ್ಲಿಯವರೆಗೆ ದೇಶದಲ್ಲಿ ತಿಂಗಳ ವೇತನದ ಉದ್ಯೋಗಗಳ ಸಂಖ್ಯೆಯು 95 ಲಕ್ಷದಷ್ಟು ಕಡಿಮೆಯಾಗಿದೆ. ಮೊದಲ ಲಾಕ್‌ಡೌನ್ ಘೋಷಿಸಿ ಒಂದೂವರೆ ವರ್ಷವಾದರೂ, ಎಲ್ಲಾ ಬಗೆಯ ಉದ್ಯೋಗಗಳ ಸಂಖ್ಯೆ ಕೊರೊನಾ ಪೂರ್ವಕ್ಕೆ ತಲುಪಿಲ್ಲ ಎಂದು ಸಿಎಂಐಇ ವರದಿ ಹೇಳಿದ್ದನ್ನು ಸ್ಮರಿಸಬಹುದು.
ಕಳೆದ ಡಿಸೆಂಬರ್‌ನಲ್ಲಿ ಕೃಷಿ ಕೆಲಸಗಾರರು ಮತ್ತು ದಿನಗೂಲಿ ಉದ್ಯೋಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2019 – 20ನೇ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಉದ್ಯೋಗಗಳಲ್ಲಿ ತಿಂಗಳ ವೇತನದ ಉದ್ಯೋಗಗಳ ಸಂಖ್ಯೆಯು ಶೇ. 21.2ರಷ್ಟಿತ್ತು. 2021ರ ಡಿಸೆಂಬರ್ ವೇಳೆಗೆ ಇದು ಶೇ. 19ಕ್ಕೆ ಇಳಿಕೆ ಕಂಡಿದೆ. ಮೊದಲ ಲಾಕ್‌ಡೌನ್ ಬಳಿಕ ತಯಾರಿಕಾ ವಲಯದಲ್ಲಿಯೇ ದೊಡ್ಡ ಮಟ್ಟದಲ್ಲಿ ಉದ್ಯೋಗ ನಷ್ಟ ಕಂಡುಬಂದಿದೆ ಎಂದು ಸಿಎಂಐಇ ವರದಿ ನೀಡಿತ್ತು.
1,200 ಕೋಟಿ ಜಿಎಸ್‌ಟಿ ಸಂದಾಯ
ಬೆಂಗಳೂರಿನ ಪೀಣ್ಯ ಕೈಗಾರಿಕೆ ಪ್ರದೇಶವೊಂದರಲ್ಲೇ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವು 301.5 ಎಕರೆಗಳಲ್ಲಿ 1,061ಕ್ಕೂ ಹೆಚ್ಚು ಶೆಡ್ ಮತ್ತು 268 ನಿವೇಶನಗಳಿವೆ. ಅಲ್ಲದೆ ಇದರ ಸುತ್ತಮುತ್ತಲಿನ ಖಾಸಗಿ ಕೈಗಾರಿಕೆ ಪ್ರದೇಶಗಳಲ್ಲಿ ಸುಆರು 10,000ಕ್ಕೂ ಹೆಚ್ಚು ಸೂಕ್ಷ್ಮ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳು, ಭಾರೀ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಈ ಕೈಗಾರಿಕೆಗಳಿಮದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸುಮಾರು 1,200 ಕೋಟಿ ವಾರ್ಷಿಕ ಜಿಎಸ್‌ಟಿ ತೆರಿಗೆ ಸಂದಾಯ ಮಾಡುತ್ತಿದೆ.
ನಷ್ಟದ ಪ್ರಮಾಣ ನಿಖರ ಅಂದಾಜಿಲ್ಲ
ಕೋವಿಡ್‌ನಿಂದ ಕೈಗಾರಿಕೆ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ಆದರೆ ಇದರ ಪ್ರಮಾಣವನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಾಗಿರುವುದಿಲ್ಲ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಅತೀ ಸಣ್ಣ, ಸಣ್ಣ ಮಧ್ಯಮ ಕೈಗಾರಿಕೆಗಳನ್ನು ಪುನಶ್ಚೇತಗೊಳಿಸಲು ಇಸಿಎಲ್‌ಜಿ ಯೋಜನೆ ಜಾರಿಗೆ ತರಲಾಗಿದೆ. ಇದರ ಅನ್ವಯ ಫೆಬ್ರುವರಿ 2020ರ ಅಂತ್ಯಕ್ಕೆ ಬ್ಯಾಂಕ್‌ಗಳಲ್ಲಿ ಬಾಕಿ ಇರುವ ಎಂಎಸ್ಎಂಇ ಘಟಕಗಳ ಸಾಲದ ಮೊತ್ತಕ್ಕೆ ಶೇ. 20ರಷ್ಟು ಹೆಚ್ಚುವರಿ ಸಾಲವನ್ನು ಯಾವುದೇ ಹೆಚ್ಚುವರಿ ಖಾತರಿ ಇಲ್ಲದೇ ನೀಡಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಸಿ ಎಂ ಇಬ್ರಾಹಿಂ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿಯಲ್ಲಿ 2018-19ರಲ್ಲಿ 3,366, 2019-20ರಲ್ಲಿ 3,560, 2020-21ರಲ್ಲಿ 4,384 ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗಿದೆ. ಇದಕ್ಕಾಗಿ ಈ ಮೂರು ವರ್ಷಗಳಲ್ಲಿ 321.31 ಕೋಟಿ ರು. ಸಾಲ ನೀಡಲಾಗಿದೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ 54.50 ಕೋಟಿ ರು. ಶೇ.6ರ ಬಡ್ಡಿ ಸಹಾಯಧನ ನೀಡಲಾಗಿದೆ. ಉದ್ಯಮ ಶೀಲತಾ ಜಾಗೃತಿ ಕಾರ್ಯಕ್ರಮಗಳ ಅಡಿಯಲ್ಲಿ (ಟೆಕ್ಸಾಕ್ ಸಂಸ್ಥೆಯಿಂದ) 2020-21 ಮತ್ತು 2021-22ರಲ್ಲಿ 1.65 ಕೋಟಿ ರು. ವೆಚ್ಚ ಮಾಡಲಾಗಿದೆ ಎಂಬುದು ಉತ್ತರದಿಂದ ತಿಳಿದು ಬಂದಿದೆ.
ಪರಿಶಿಷ್ಟ ಜಾತಿಯ ಉದ್ಯಮಶೀಲರಿಗೆ ಸಾಫ್ಟ್ ಸೀಡ್ ಕ್ಯಾಪಿಟಲ್ ಅಡಿಯಲ್ಲಿ 31.08ಕೋಟಿ ನೀಡಲಾಗಿದೆ. ಪರಿಶಿಷ್ಟ ಉದ್ಯಮಶೀಲರಿಗೆ ಸಾಫ್ಟ್ ಸೀಡ್ ಕ್ಯಾಪಿಟಲ್ ಅಡಿಯಲ್ಲಿ 8.35 ಕೋಟಿ , ಪರಿಶಿಷ್ಟ ಜಾತಿಯ ಉದ್ಯಮಶೀಲರಿಗೆ ನಿವೇಶನ ಸಹಾಯಧನ ರೂಪದಲ್ಲಿ 2018-19ರಿಂದ 2020-21ರ ಮೂರು ವರ್ಷಗಳಲ್ಲಿ ಒಟ್ಟು 295.82 ಕೋಟಿ ರು. ಸಹಾಯ ಧನ ನೀಡಲಾಗಿದೆ. ಪರಿಶಿಷ್ಟ ವರ್ಗದ ಉದ್ಯಮಶೀಲರಿಗೆ ನಿವೇಶನ ಸಹಾಯಧನ ರೂಪದಲ್ಲಿ 13.57 ಕೋಟಿ ರು. ನೀಡಲಾಗಿದೆ ಎಂಬುದು ಗೊತ್ತಾಗಿದೆ.