ಬೆಂಗಳೂರು; ಕೋವಿಡ್‌ನ ಮೂರು ಅಲೆಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳು ಮುಚ್ಚಿ ಹೋಗಿರುವುದು ಕಣ್ಮುಂದೆ ಇದ್ದರೂ 2021ರಲ್ಲಿ ನಡೆದ 7ನೇ ಆರ್ಥಿಕ ಗಣತಿಯಲ್ಲಿ ಶೇ. 52ರಷ್ಟು ಉದ್ದಿಮೆಗಳು ಹೆಚ್ಚಾಗಿವೆ ಎಂಬ ಮಾಹಿತಿಯನ್ನು ರಾಜ್ಯದ ಯೋಜನಾ ಇಲಾಖೆಯು ಒದಗಿಸಿರುವುದು ಅಚ್ಚರಿ ಮೂಡಿಸಿದೆ.
ಯೋಜನಾ ಇಲಾಖೆಯು 2022-23ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಹಿಂದಿನ ವರ್ಷದ ಸಾಧನೆಗಳ ಕುರಿತು ಒದಗಿಸಿರುವ ಪಟ್ಟಿಯಲ್ಲಿ 7ನೇ ಆರ್ಥಿಕ ಗಣತಿ ಕುರಿತು ಮಾಹಿತಿ ಒದಗಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೋವಿಡ್ ಮೊದಲ, ಎರಡನೇ ಮತ್ತು ಮೂರನೇ ಅಲೆಗಳಿಂದಾಗಿ ವಿವಿಧ ಕಚ್ಛಾಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದರಿಂದ ಮಾರುಕಟ್ಟೆಯಲ್ಲಿ ಪೈಪೋಟಿಯಿಂದ ಸಣ್ಣ ಪ್ರಮಾಣದ ಕೈಗಾರಿಕೆಗಳು ಉತ್ಪಾದನೆ ಮಾಡಲು ಕಷ್ಟಕರವಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಅವರು ಉತ್ತರ ನೀಡಿರುವ ಬೆನ್ನಲ್ಲೇ ಶೇ.52ರಷ್ಟು ಉದ್ದಿಮೆಗಳು ಹೆಚ್ಚಾಗಿದೆ ಎಂಬ ಅಂಕಿ ಅಂಶಗಳನ್ನೊಳಗೊಂಡ 7ನೇ ಆರ್ಥಿಕ ಗಣತಿಯು ವಿವರಗಳೂ ಮುನ್ನೆಲೆಗೆ ಬಂದಿವೆ.
‘2021ರಲ್ಲಿ 7ನೇ ಆರ್ಥಿಕ ಗಣತಿಯು ಪೂರ್ಣಗೊಂಡಿದ್ದು, ಈ ಪೈಕಿ 43.78 ಲಕ್ಷ ಉದ್ದಿಮೆಗಳನ್ನು ಗುರುತಿಸಲಾಗಿದೆ (ತಾತ್ಕಾಲಿಕ). 2016ರ 6ನೇ ಆರ್ಥಿಕ ಗಣತಿಯಲ್ಲಿ ಗುರುತಿಸಲಾದ 28.80 ಲಕ್ಷ ಉದ್ದಿಮೆಗಳಿಗೆ ಹೋಲಿಸಿದಾಗ ಪ್ರಸ್ತುತ ಶೇ. 52ರಷ್ಟು ಉದ್ದಿಮೆಗಳು ಹೆಚ್ಚಾಗಿರುವುದು ಕಂಡು ಬಂದಿದೆ,’ ಎಂದು ಯೋಜನಾ ಇಲಾಖೆಯು ಮಾಹಿತಿ ಒದಗಿಸಿದೆ.
ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಮೂಲಕ ರಾಷ್ಟ್ರವ್ಯಾಪಿ ನಡೆಸುತ್ತಿರುವ 7ನೇ ಆರ್ಥಿಕ ಗಣತಿಯು 2020ರ ಮಾರ್ಚ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಆದರೆ 2021ರಲ್ಲಿ ಪೂರ್ಣಗೊಂಡಿದೆ. ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 7ನೇ ಆರ್ಥಿಕ ಗಣತಿಗಾಗಿ ಸಿಎಸ್ಸಿ ಇ-ಆಡಳಿತ ಸೇವೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಇದೇ ಮೊದಲ ಬಾರಿಗೆ ಗಣತಿಯನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಅಪ್ಲಿಕೇಷನ್ ಮೂಲಕ ನಡೆಸಲಾಗಿದೆ. ಇದು ಹೆಚ್ಚಿನ ನಿಖರತೆ ಮತ್ತು ಡೇಟಾ ಸುರಕ್ಷತೆಯನ್ನು ಖಚಿತಪಡಿಸಲಿದೆ ಎಂದು ಹೇಳಲಾಗಿತ್ತು. ಜನರ ವಹಿವಾಟಿನ ಆರ್ಥಿಕತೆಗೆ ಸಂಬಂಧಿಸಿದ ದತ್ತಾಂಶ ಸಂಗ್ರಹದ ಆರ್ಥಿಕ ಗಣತಿಯನ್ನು 1977ರಲ್ಲಿ ಆರಂಭಿಸಲಾಗಿತ್ತು.
ಇದುವರೆಗೂ ಕೇವಲ 6 ಆರ್ಥಿಕ ಗಣತಿಗಳನ್ನು ಮಾತ್ರ ನಡೆಸಲಾಗಿದೆ. ಇದೇ ಪ್ರಥಮ ಬಾರಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಸಿ ಗಣತಿ ಮಾಡುತ್ತಿರುವುದು ಸಮೀಕ್ಷೆಯ ಸಮಯ ಈ ಹಿಂದಿನ ಸಮಯಕ್ಕಿಂತ 6 ತಿಂಗಳಗಳು ತಗ್ಗಿಸಿದೆ ಎಂದು ಹೇಳಲಾಗಿದೆ.
ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳ ಪಟ್ಟಿ ಮಾಡುವುದು, ಉದ್ಯಮ ಕ್ಷೇತ್ರದಲ್ಲಿರುವ ಕಾರ್ಮಿಕರ ವಿವರ ಸಂಗ್ರಹಿಸುವುದು ಗಣತಿಯ ಮೂಲ ಉದ್ದೇಶವಾಗಿದೆ. ಮನೆ, ಕಟ್ಟಡ ಯಾವುದೇ ಘಟಕದಲ್ಲಿ ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ, ಅವುಗಳ ವಿತರಣೆ, ಮಾರಾಟ, ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಂತಹ ಉದ್ಯಮಗಳ ಪಟ್ಟಿ ಸಮೀಕ್ಷೆಯಲ್ಲಿದೆ.
ಉದ್ದಿಮೆ ಮಾಲೀಕರ ಲಿಂಗವಾರು, ಸಾಮಾಜಿಕ, ಗುಂಪುವಾರು ಮಾಹಿತಿ, ಗಂಡು, ಹೆಣ್ಣು ಕೆಲಸಗಾರರು, ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸಗಾರರು, ಉದ್ದಿಮೆಗಳ ಹಣಕಾಸಿನ ಮೂಲ ಸೇರಿದಂತೆ ಹಲವು ವ್ಯವಹಾರಿಕ ಮಾಹಿತಿಗಳನ್ನು ಗಣತಿಯಲ್ಲಿ ಸಂಗ್ರಹಿಸಲಾಗಿದೆ. ಆರ್ಥಿಕ ಗಣತಿಯಲ್ಲಿ ಲಭ್ಯವಾದ ಮಾಹಿತಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ಯೋಜನೆಗಳನ್ನು ಸಿದ್ಧಪಡಿಸಲು ಸರ್ಕಾರಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿದು ಬಂದಿದೆ.
6ನೇ ಆರ್ಥಿಕ ಗಣತಿಯಲ್ಲೇನಿದೆ?
2016ರ ಆರನೇ ಆರ್ಥಿಕ ಗಣತಿ ಪ್ರಕಾರ ಒಟ್ಟು 28,80,548 ಉದ್ದಿಮೆಗಳಿದ್ದವು. ಈ ಪೈಕಿ 17,14,059 (ಶೇ.59.50) ಉದ್ದಿಮೆಗಳು ಗ್ರಾಮೀಣ ಭಾಗದಲ್ಲಿದ್ದರೆ 11,66,489 (ಶೇ.40.50) ಉದ್ದಿಮೆಗಳು ನಗರ ಪ್ರದೇಶಕ್ಕೆ ಹೊಂದಿಕೊಂಡಿದ್ದವು. ಒಟಟು 28.80 ಲಕ್ಷ ಉದ್ದಿಮೆಗಳ ಪೈಕಿ 21,88,860 ಉದ್ದಿಮೆಗಳು (ಶೇ. 75.99) ಕೃಷಿಯೇತರ ಚಟುವಟಿಕೆಗಳಲ್ಲಿದ್ದವು. ಇನ್ನುಳಿದ 6,91,688 (ಶೇ. 22.01) ಉದ್ದಿಮೆಗಳು ಕೃಷಿ ಚಟುವಟಿಕೆಗಳಲ್ಲಿದ್ದವು.
5ನೇ ಆರ್ಥಿಕ ಗಣತಿಗೆ ಹೋಲಿಸಿದಾಗ 6ನೇ ಗಣತಿಯಲ್ಲಿ ರಾಜ್ಯದ ಉದ್ದಿಮೆಗಳು 25,04,659ಕ್ಕೆ ಏರಿಕೆಯಾಗಿದ್ದವು. ಉದ್ದಿಮೆಗಳ ಬೆಳವಣಿಗೆ ದರವು ಶೆ. 9.17ರಿಂದ ಶೆ. 24.81ಕ್ಕೇರಿತ್ತು. ಈ ಎರಡೂ ಆರ್ಥಿಕ ಗಣತಿ ಪ್ರಕಾರ ಕೃಷಿ ಉದ್ದಿಮೆಗಳು ಶೆ. 3.54ರಿಂದ ಶೆ. 77.08ಕ್ಕೇರಿತ್ತು. ಶೇ. 38.12ರಷ್ಟು ಉದ್ದಿಮೆಗಳು ಗೃಹ ಕೈಗಾರಿಕೆ ಆಧರಿಸಿದ್ದರೆ ಶೇ.12.88ರಷ್ಟು ಉದ್ದಿಮೆಗಳು ಗೃಹ ಕೈಗಾರಿಕೆಯೇತರ ಉದ್ದಿಮೆಗಳಾಗಿದ್ದವು.
ಉದ್ದಿಮೆಗಳ ಸ್ಥಾಪನೆ ಪೈಕಿ ರಾಜ್ಯದ ಬೆಂಗಳೂರು ನಗರದಲ್ಲಿ 3,95,455 (ಶೇ.14.17), ದಕ್ಷಿಣ ಕನ್ನಡ 2,09,442 (ಶೇ.7.61) ಬೆಳಗಾವಿಯಲ್ಲಿ 1,12,065 (ಶೇ.6) ಮಂಡ್ಯ 71,638 (ಶೇ 5.95), ತುಮಕೂರು 1,16,173 (ಶೇ. 5.72), ಹಾಸನ 68,045 (ಶೇ. 4.89), ಮೈಸೂರು 85,748 (ಶೇ.4.87) 7 ಜಿಲ್ಲೆಗಳಲ್ಲಿ ಉದ್ದಿಮೆಗಳಿದ್ದವು. ಕೊಡಗು ಜಿಲ್ಲೆಯಲ್ಲಿ ಕೇವಲ 11,586 (ಶೇ.0.40) ಉದ್ದಿಮೆಗಳಿದ್ದರೆ ಯಾದಗಿರಿ ಜಿಲ್ಲೆಯಲ್ಲಿ 34,84 (ಶೇ.1.18), ಕೊಪ್ಪಳದಲ್ಲಿ 36,666 (ಶೇ.1.27) ಗದಗ್‌ನಲ್ಲಿ 40,073 (ಶೇ.1.39) ಉದ್ದಿಮೆಗಳಿದ್ದವು.
28,80,548 ಉದ್ದಿಮೆಗಳಲ್ಲಿ 71,45,885 ಮಂದಿಗೆ ಉದ್ಯೋಗ ಲಭಿಸಿತ್ತು. ಈ ಪೈಕಿ 35, 44,626 (ಶೇ. 49.60) ಮಂದಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದಲ್ಲಿದ್ದರೆ ಇನ್ನುಳಿದ 36,01,259 (ಶೇ.50.40) ಮಂದಿ ನಗರ ಪ್ರದೇಶಗಳಿದ್ದವು.
2019-20ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕದ ಅಂಕಿಅಂಶಗಳ ಪ್ರಕಾರ 2020ರ ಮಾರ್ಚ್ 31ರ ಅಂತ್ಯಕ್ಕೆ ರಾಜ್ಯದ 3,201 ಸಿದ್ಧ ಉಡುಪು ಕೈಗಾರಿಕೆಗಳಲ್ಲಿ 4,54,759 ಉದ್ಯೋಗಿಗಳಿದ್ದರು. 717 ಬಟ್ಟೆ ಕೈಗಾರಿಕೆಗಳಲ್ಲಿ 29,338, ರಾಸಾಯನಿಕ ವಲಯದ 906 ಕೈಗಾರಿಕೆಗಳಲ್ಲಿ 92,470 ಉದ್ಯೋಗಿಗಳಿದ್ದರು.
ಅದೇ ರೀತಿ ಇಂಜಿನಿಯರಿಂಗ್ ವಲಯದ 4,221 ಕೈಗಾರಿಕೆಗಳಲ್ಲಿ 2,80,933 ಉದ್ಯೋಗಿಗಳು ಇತರೆ ವಲಯದ 12,117 ಕೈಗಾರಿಕೆಗಳಲ್ಲಿ 7,55,005 ಉದ್ಯೋಗಿಗಳಿದ್ದರು. ಒಟ್ಟು ಕೈಗಾರಿಕೆಗಳ ಪೈಕಿ 2019-20ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ 5,667 ಕೈಗಾರಿಕೆಗಳಲ್ಲಿ ಒಟ್ಟು 96,969 ಉದ್ಯೋಗಿಗಳಿದ್ದರು. ಇದೇ ಅವಧಿಯಲ್ಲಿ ಆಟೋಮೊಬೈಲ್ ವಲಯದ 20,220 ಉದ್ದಿಮೆಗಳಲ್ಲಿ 1,31,395 ಉದ್ಯೋಗಿಗಳಿದ್ದರು. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ವಲಯದ 23,544 ಕೈಗಾರಿಕೆಗಳಲ್ಲಿ 1,22,085 ಉದ್ಯೋಗಿಗಳಿದ್ದರು.