ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ವರ್ಷದಿಂದಲೂ ಬಾಕಿ;ಬಡಮಕ್ಕಳ ಶಿಷ್ಯ ವೇತನಕ್ಕೂ ಹಣವಿಲ್ಲವೇ?

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕಳೆದ ಒಂದು ವರ್ಷದಿಂದಲೂ ರಾಜ್ಯ ಸರ್ಕಾರವು ಬಾಕಿ ಉಳಿಸಿಕೊಂಡಿದೆ. ನೇರ ನಗದು ಪಾವತಿ ವ್ಯವಸ್ಥೆ ಜಾರಿಗೊಳಿಸಿದ್ದರೂ ವಿದ್ಯಾರ್ಥಿ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮಧ್ಯೆ ಸಮನ್ವಯತೆ ಇಲ್ಲದ ಕಾರಣ ಕಳೆದೊಂದು ವರ್ಷದಿಂದ ವಿದ್ಯಾರ್ಥಿ ವೇತನವು ಬಾಕಿ ಇದೆ ಎಂಬುದನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೇ ಬಹಿರಂಗಪಡಿಸಿದ್ದಾರೆ.

 

ವಿದ್ಯಾರ್ಥಿ ವೇತನ ಬಾಕಿ ಇರುವ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು 2022ರ ಜನವರಿ 18ರಂದು ನಡೆದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಕಳೆದ ಒಂದು ವರ್ಷದಿಂದಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಾಕಿ ಉಳಿಸಿಕೊಂಡಿರುವ ಕುರಿತು ಸಮಿತಿ ಅಧ್ಯಕ್ಷ ಕೃಷ್ಣಬೈರೇಗೌಡ ಮತ್ತು ಸದಸ್ಯ ಈಶ್ವರ್‌ ಬಿ ಖಂಡ್ರೆ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಭೆ ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅದೇ ರೀತಿ ಶುಲ್ಕ ಮರು ಪಾವತಿ ಯೋಜನೆ ಅರ್ಜಿ ಸಲ್ಲಿಸಿದ ಕೆಲವೊಂದು ವಿದ್ಯಾರ್ಥಿಗಳ ಫಲಾನುಭವಿಗಳ ದತ್ತಾಂಶಗಳು ವಿಶ್ವವಿದ್ಯಾಲಯಗಳಿಂದಲೇ ಸ್ವೀಕೃತವಾಗಿಲ್ಲ. ಕೌನ್ಸಲಿಂಗ್‌ ಮುಖಾಂತರ ಆಯ್ಕೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ಸಮಯದಲ್ಲಿ ಕೌನ್ಸಲಿಂಗ್‌ ಸಂಖ್ಯೆಯನ್ನು ನಮೂದಿಸಿಲ್ಲ. ಪ್ರವೇಶ ಪಡೆದ ಕೆಲವೊಂದು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಪ್ರವೇಶ ನೋಂದಣಿ ಸಂಖ್ಯೆಯನ್ನು ನೀಡದೇ ಇರುವುದು ಸಹ ಶುಲ್ಕ ಮರುಪಾವತಿ ಯೋಜನೆಯೂ ಹಿಂದೆ ಬಿದ್ದಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ ನಡುವೆ ಸಮನ್ವಯತೆ ಕೊರತೆ ಕಂಡು ಬಂದಿದ್ದರೂ  ಸಚಿವ ಶ್ರೀನಿವಾಸ ಕೋಟ  ಪೂಜಾರಿ ಮತ್ತು ಡಾ ಸಿ ಎನ್‌  ಅಶ್ವಥ್‌ನಾರಾಯಣ್‌ ಅವರು ಗಮನ ಹರಿಸಿಲ್ಲ ಎಂದು ತಿಳಿದು ಬಂದಿದೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಾಕಿ ಇರುವುದು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೇ ಮಾಹಿತಿ ಇಲ್ಲ ಎಂಬ ಸಂಗತಿ ಸಭೆ ನಡವಳಿಯಿಂದ ಗೊತ್ತಾಗಿದೆ. ಈ ಕುರಿತು ವಿಷಯವನ್ನು ಪ್ರಸ್ತಾಪಿಸಿದ್ದ ಈಶ್ವರ್‌ ಬಿ ಖಂಡ್ರೆ ಅವರು ‘ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ನಿಮಗೂ ಮಾಹಿತಿ ಇಲ್ಲವೆಂದರೆ ಹೇಗೆ,’ ಎಂದು ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನು ಪ್ರಶ್ನಿಸಿರುವುದು ನಡವಳಿಯಲ್ಲಿ ದಾಖಲಾಗಿದೆ.

 

ವಿದ್ಯಾರ್ಥಿ ವೇತನ ಪಾವತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೇರ ನಗದು (ಡಿಬಿಟಿ) ವ್ಯವಸ್ಥೆ ಜಾರಿಗೊಳಿಸಿದ್ದರೂ ಪಾವತಿಯಾಗಿಲ್ಲ. ‘ಡಿಬಿಟಿ ಮಾಡಿರುವ ಉದ್ದೇಶ ಪಾರದರ್ಶಕತೆ ಆಗಿರಬೇಕು ಎಂದು. ಇದನ್ನು ಒಬ್ಬರ ಕೈಯಲ್ಲಿ ಇಟ್ಟುಕೊಂಡರೆ ಹೇಗೆ, ನಿಮ್ಮ ಅಧಿಕಾರಿಗಳ ಹತ್ತಿರ ಮಾಹಿತಿ ಇಲ್ಲವೆಂದರೆ ಏನರ್ಥ,’ ಎಂದು ಈಶ್ವರ ಬಿ ಖಂಡ್ರೆ ಅವರು ತರಾಟೆಗೆ ತೆಗೆದುಕೊಂಡಿರುವುದು ಗೊತ್ತಾಗಿದೆ.

 

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ನಡವಳಿ ಪ್ರತಿ

 

ಅದೇ ರೀತಿ ಸಮಿತಿ ಅಧ್ಯಕ್ಷ ಕೃಷ್ಣಬೈರೇಗೌಡ ಅವರು ‘ ಇಷ್ಟಾದರೂ ಸರ್ಕಾರ ಸುಮ್ಮನೆ ಏಕೆ ಇದೆ ಎಂದು ನನಗೆ ಗೊತ್ತಾಗುತ್ತಿಲ್ಲ. ಎಸ್‌ಸಿ, ಎಸ್‌ಟಿ ಬಡ ಮಕ್ಕಳದು ಒಂದು ವರ್ಷದ್ದು ಸ್ಕಾಲರ್‌ ಶಿಪ್‌ ಇನ್ನು ಬಾಕಿ ಇದೆ,’ ಎಂದು ಅಸಮಾಧಾನ ವ್ಯಕ್ತಪಡಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಇದಕ್ಕೆ ಉತ್ತರಿಸಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ‘ನಾವು ಬರೀ ಏಜೆನ್ಸಿ ನೀವು ಇನ್‌ಫರ್ಮೇಷನ್‌ ಕೊಟ್ಟರೆ ಮಾಡುತ್ತೇವೆಂದು ಹೇಳುತ್ತಾರೆ. ನಮ್ಮ ಇನ್‌ಫರ್ಮೇಷನ್‌ ನಾವು ಕೊಟ್ಟಿರುತ್ತೇವೆ. ಹೈಯರ್‌ ಎಜುಕೇಷನ್‌ ಇನ್‌ಫರ್ಮೇಷನ್‌ ಇನ್ನು ಬಂದಿಲ್ಲ. ಅದಕ್ಕಾಗಿ ನಾವು ಕೊಟ್ಟಿಲ್ಲವೆಂದು ಹೇಳುತ್ತಾರೆ. ನಮಗೆ ಟ್ರಾನ್ಸ್‌ಫರ್‌ ಮಾಡಿದರೆ ನಾವು ಮಾಡುತ್ತೇವೆ,’ ಎಂದು ಉತ್ತರಿಸಿರುವುದು ಸಮಾಜ ಕಲ್ಯಾಣ ಮತ್ತು ಉನ್ನತ ಶಿಕ್ಷಣ ಇಲಾಖೆ ನಡುವೆ ಸಮನ್ವಯ ಕೊರತೆ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

‘ನೀವು ತೀರ್ಮಾನ ಮಾಡಿ. We are getting lost in the details and it is very easy to make us get lost in the details. ಸಮಸ್ಯೆ ಪರಿಹಾರವಾಗಬೇಕು. ಬಡಮಕ್ಕಳಿಗೆ ಶಿಷ್ಯ ವೇತನ ಸಿಗಬೇಕು,’ ಎಂದು ಕೃಷ್ಣಬೈರೇಗೌಡ ಅವರು ಸೂಚಿಸಿರುವುದಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ‘ It is not possible to intervene in each single case,’ ಎಂದು ಉತ್ತರಿಸಿರುವುದು ಗೊತ್ತಾಗಿದೆ.

 

ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಸಂಬಂಧದಲ್ಲಿಯೂ ಹಿನ್ನೆಡೆ ಸಾಧಿಸಿರುವುದನ್ನು ಸಮಿತಿ ಮತ್ತೊಬ್ಬ ಸದಸ್ಯ ಅರವಿಂದ್‌ ಬೆಲ್ಲದ್‌ ಅವರು ಗಮನ ಸೆಳೆದಿದ್ದಾರೆ. ‘ಮೆಟ್ರಿಕ್‌ ನಂತರದಲ್ಲಿಯೂ ತೊಂದರೆಗಳಿವೆ. ಮೆಟ್ರಿಕ್‌ ಪೂರ್ವ ತರಹ ಇಲ್ಲಿ ಪರಿಹಾರ ಕೊಡಿ,’ ಎಂದು ಹೇಳಿದಕ್ಕೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ‘ ಅಲ್ಲಿ ರಿಸಲ್ಟ್‌, ಫೀ ಒಂದೇ ಕಡೆ ಇರುವುದರಿಂದ ಪ್ರಿ-ಮೆಟ್ರಿಕ್‌ನಲ್ಲಿ ಪ್ರಾಬ್ಲಮ್‌ ಇಲ್ಲ. ಪೋಸ್ಟ್‌ ಮೆಟ್ರಿಕ್‌ನಲ್ಲಿ ಬೇರೆ ಬೇರೆ ಕಾಲೇಜು, ಬೇರೆ ಬೇರೆ ಕೋರ್ಸ್‌, ಬೇರೆ ಬೇರೆ ರೀತಿಯ ಫೀಸ್‌ ಇರುತ್ತದೆ. ಅವರು ಅಂಡರ್‌ಸ್ಟ್ಯಾಂಡಿಂಗ್‌ ಮಾಡಿಕೊಳ್ಳುತ್ತಿಲ್ಲ,’ ಎಂದು ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ.

 

ಇದಕ್ಕೆ ‘Techonology should help us. ನಡೆಯುತ್ತಿರುವ ಸಿಸ್ಟಮ್‌ನ್ನು ಟೆಕ್ನಾಲಜಿ breakdown ಮಾಡುತ್ತದೆಂದರೆ ಹೇಗೆ,’ ಎಂದು ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಇದಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ‘The key is with us to avoid manipulation. ಇಷ್ಟು ಮಕ್ಕಳಿಗೆ ಬಂದಿಲ್ಲ. ಬಂದಿಲ್ಲದಿರುವುದಕ್ಕೆ ಕಾರಣವೇನು ಎಂದ ಅವರು public domainನಲ್ಲಿ ಹಾಕಿದರೆ ಗೊತ್ತಾಗುತ್ತದೆ. ಸರಳವಾದದ್ದನ್ನು ಕಾಂಪ್ಲಿಕೇಟೆಡ್‌ ಮಾಡಿಕೊಂಡು ಕುಳಿತಿರುತ್ತೇವೆ. I am sorry sir,’ ಎಂದು ಉತ್ತರಿಸುವ ಮೂಲಕ ಅಸಹಾಯಕತೆ ಪ್ರದರ್ಶಿಸಿರುವುದು ನಡವಳಿಯಿಂದ ಗೊತ್ತಾಗಿದೆ.

 

ಅಧಿಕಾರಿಗಳು ತೋರಿಸಿರುವ ಅಸಹಾಯಕತೆಗೆ ಪ್ರತಿಕ್ರಿಯಿಸಿರುವ ಸಮಿತಿ ಅಧ್ಯಕ್ಷ ಕೃಷ್ಣಬೈರೇಗೌಡ ಅವರು ‘ತಾವು ಇಲಾಖೆಗೆ ತೆಗೆದುಕೊಳ್ಳುತ್ತೀರಾ, ತೆಗೆದುಕೊಂಡು transition period ಗೆ hybrid ಮಾಡಿ rigid ಮಾಡಬೇಡಿ stop cap arrangement ಮಾಡಿ ನಿಮ್ಮದು perfect ಆಗಿ ವರ್ಕ್‌ ಆಗುತ್ತದೆ. ಎಲ್ಲಾ ರೆಡಿ ಆದ ಮೇಲೆ ಸ್ಮೂತ್‌ ಆಗುತ್ತದೆ. ಅಲ್ಲಿಯವರೆಗೆ ಸಮಸ್ಯೆಗೆ ಪರಿಹಾರ ಹುಡುಕಬೇಕು. ಇಷ್ಟು ತಡವಾದರೆ ಮಕ್ಕಳ ಪರಿಸ್ಥಿತಿ ಕಷ್ಟ ಇದೆ. ತುಂಬಾ ಮಕ್ಕಳು ಇದರ ಮೇಲೆ ಡಿಪೆಂಡ್‌ ಆಗಿದ್ದಾರೆ. ಇವತ್ತು ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಬಡಮಕ್ಕಳಿಗೆ ಬಹಳ ಅವಶ್ಯಕತೆ ಇದೆ. ಇದಕ್ಕೆ ಪರಿಹಾರ ಮಾಡಿ,’ ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ತಿಳಿದು ಬಂದಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ 2020-21ನೇ ಸಾಲಿನಲ್ಲಿ 7,62,517 ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆಯಡಿ ಮಂಜೂರಾತಿ ಮಾಡಲಾಗಿರುತ್ತದೆ. 3,336 ಅರ್ಜಿಗಳು ತಿರಸ್ಕೃತವಾಗಿದ್ದರೆ 10,376 ಅರ್ಜಿಗಳು ಬಾಕಿ ಇದೆ.

 

‘2021-22ನೇ ಸಾಲಿಲ್ಲಿ ಕೋವಿಡ್‌ 19 ಕಾರಣದಿಂದ ಪದವಿ ಮತ್ತು ವೃತ್ತಿಪರ ಕಾಲೇಜುಗಳು ತಡವಾಗಿ ಆರಂಭವಾಗಿವೆ. ಆದ ಕಾರಣದಿಂದ ಶುಲ್ಕ ಮರುಪಾವತಿ ಕಾರ್ಯಕ್ರಮವನ್ನು ಸೇರಿದಂತೆ ಮೆಟ್ರಿಕ್‌ ನಂತರ ಮತ್ತು ವಿದ್ಯಾರ್ಥಿ ವೇತನ ಮತ್ತು ವಿದ್ಯಾಸಿರಿ ಯೋಜನೆಗಳಿಗೆ ಅರ್ಜಿಗಳನ್ನು 2021ರ ಸೆ.30ರಿಂದ ಅರ್ಜಿ ಆಹ್ವಾನಿಸಲಾಗಿದೆ,’ ಎಂದು ಸಚಿವ ಕೋಟಾ ಶ್ರೀನಿವಾಸಪೂಜಾರಿ ಅವರು 2022ರ ಫೆ.16ರಂದು ಈಶ್ವರ ಖಂಡ್ರೆ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

 

2020-21 ಮತ್ತು 2021-22ನೇ ಸಾಲಿನಲ್ಲಿಯೂ ಶುಲ್ಕ ಮರುಪಾವತಿ ಕಾರ್ಯಕ್ರಮವು ವಿಳಂಬವಾಗಿದೆ. ಶುಲ್ಕ ಮರು ಪಾವತಿ ಕಾರ್ಯಕ್ರಮಕ್ಕೆ 136 ಪದವಿ/ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆಯಾದರೂ ವಿವಿಧ ಕೋರ್ಸ್‌ಗಳ ಪ್ರವೇಶ ದಿನಾಂಕ ಬೇರೆ ಬೇರೆ ತಿಂಗಳು ಆಗಿರುವ ಕಾರಣ ವಿಳಂಬವಾಗಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಅವರು ಸಮರ್ಥನೆ ಒದಗಿಸಿದ್ದಾರೆ.

 

‘ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 50 ವಿಶ್ವವಿದ್ಯಾಲಯಗಳ ಕೋರ್ಸ್‌ ಗಳಿಗೆ fರವೇಶದ ದಿನಾಂಕವು ವಿಶ್ವವಿದ್ಯಾಲಯದಿಂದ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕ ಅವಧಿ ಬೇರೆಯಾಗಿರುತ್ತದೆ. ಪ್ರತಿ ವಿಶ್ವವಿದ್ಯಾಲಯಕ್ಕೆ ಪರೀಕ್ಷಾ ವೇಳೆ ಬೇರೆಯದಾಗಿರುತ್ತದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಶುಲ್ಕ ಮರುಪಾವತಿ ಮತ್ತು ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಆಯವ್ಯಯದಲ್ಲಿ ಮಿತಿ ಇರುವುದರಿಂದ ಹಂತಹಂತವಾಗಿ ಮಂಜೂರು ಮಾಡಲು ಸಾಧ್ಯವಾಗುವುದಿಲ್ಲ,’ ಎಂದು ಸದನಕ್ಕೆ ಪ್ರತಿಕ್ರಿಯಿಸಿದ್ದಾರೆ.

SUPPORT THE FILE

Latest News

Related Posts