ಗುರುರಾಘವೇಂದ್ರ ಬ್ಯಾಂಕ್‌ ಹಗರಣ; 20 ವರ್ಷದಿಂದಲೂ ಅವ್ಯವಹಾರ, ಕಣ್ಮುಚ್ಚಿ ಕುಳಿತಿದ್ದ ಸರ್ಕಾರ

Photo Credit; BengaluruMirror

ಬೆಂಗಳೂರು; ಸಾವಿರಾರು ಕೋಟಿ ರು. ಮೊತ್ತದ ಅವ್ಯವಹಾರ ನಡೆಸಿರುವ ಗುರುತರ ಆರೋಪಕ್ಕೆ ಗುರಿಯಾಗಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯು ಕಳೆದ 20 ವರ್ಷಗಳಿಂದಲೂ ಅವ್ಯವಹಾರ, ಹಣ ದುರುಪಯೋಗದಲ್ಲಿ ತೊಡಗಿತ್ತು. ಹೀಗಾಗಿ ಬ್ಯಾಂಕ್‌ನ ಸಾಲದ ಖಾತೆಗಳು, ದಾಖಲೆಗಳು, ಪಡೆದಿರುವ ಹಣ, ನೀಡಿರುವ ಹಣದಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

 

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಹಗರಣ ಕುರಿತಂತೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರ ಅಧ್ಯಕ್ಷತೆಯಲ್ಲಿ 2022ರ ಫೆಬ್ರುವರಿ 9ರಂದು ನಡೆದ ಸಭೆಯಲ್ಲಿ ಬ್ಯಾಂಕ್‌ ನೀಡಿರುವ ಸಾಲ ವಸೂಲಾತಿಯಲ್ಲಿ ಎದುರಾಗಿರುವ ತೊಡಕುಗಳ ಬಗ್ಗೆ ಸಹಕಾರ ಸಂಘಗಳ ನಿಬಂಧಕರು ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ ಹಗರಣ ಮತ್ತು ಇತ್ತೀಚಿನ ಮಾಹಿತಿ ಕುರಿತಂತೆ ಸಹಕಾರ ಸಂಘಗಳ ನಿಬಂಧಕರು ಸಲ್ಲಿಸಿದ್ದ ವಿವರಣಾತ್ಮಾಕ ಟಿಪ್ಪಣಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಹಕಾರ ಸಂಘಗಳ ನಿಬಂಧಕರು ಸಲ್ಲಿಸಿರುವ ವಿವರಣಾತ್ಮಕ ಟಿಪ್ಪಣಿ ಪ್ರತಿ

 

‘ಎವರ್‌ ಗ್ರೀನ್‌ ಅಕೌಂಟ್ಸ್‌ ಎಂದು ಸೃಷ್ಟಿಸಿ ವಾಸ್ತವಿಕವಾಗಿ ಸಾಲಗಾರರಿಗೆ ಸಾಲ ನೀಡಲಾಗಿದೆ ಎಂದು ದಾಖಲೆಯನ್ನು ಸೃಷ್ಟಿಸಿ ಎವರ್‌ ಗ್ರೀನ್‌ ಅಕೌಂಟ್ಸ್‌ ಸೃಷ್ಟಿಸಿರುತ್ತಾರೆ. ಸಾಲ ನೀಡುವಿಕೆಯಲ್ಲಿ ದೊಡ್ಡ ಪ್ರಮಾಣದ ವಂಚನೆ ಕಂಡು ಬರುತ್ತಿದೆ. ಪ್ರತಿ ಖಾತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು, ಸಾಲ ಮಂಜೂರಾತಿ, ಸಾಲದ ಹಣ ವರ್ಗಾವಣೆ ಆಯಾ ಸಾಲಗಾರರಿಗೆ ಆಗದೇ ಬೇರೆ ಸಾಲಗಳಿಗೆ ವರ್ಗಾವಣೆ ಮಾಡಿ ಹೊಂದಾಣಿಕೆ ಮಾಡಿರುವುದು ಸಾಬೀತಾಗುತ್ತಿದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

ಠೇವಣಿ ಇಲ್ಲದಿದ್ದರೂ ಠೇವಣಿಯನ್ನು ಸೃಷ್ಟಿಸಿ ಕಾಲ್ಪನಿಕವಾಗಿ ಲೆಕ್ಕಗಳನ್ನು ಸೃಜಿಸಲಾಗಿದೆ. ಬ್ಯಾಂಕ್‌ ಗಣಕೀಕರಣ ಪ್ರಕಾರ ಲೆಕ್ಕ ಹೊಂದಾಣಿಕೆ ಇದ್ದು ವಾಸ್ತವಿಕವಾಗಿ ದಾಖಲೆಗಳ ಪ್ರಕಾರ ಹೊಂದಾಣಿಕೆ ಆಗುತ್ತಿಲ್ಲ ಎಂದೂ ಹೇಳಲಾಗಿದೆ.

 

ಸಾಲಗಾರರ ಮೂಲ ದಾಖಲೆಗಳನ್ನು ಪಡೆಯದೇ ಸಾಲ ನೀಡಿರುವುದು, ಸಾಲ ನೀಡುವಿಕೆ ಪ್ರಮಾಣವನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

 

1,544.43 ಕೋಟಿ ಸಾಲ ಪ್ರಕರಣಗಳಿಗೆ ಸಂಬಂಧಿಸಿದಂತೆ 1,576 ಸಾಲದ ಖಾತೆಗಳಿಗೆ ದಾಖಲೆಗಳೇ ಇಲ್ಲ. ಸಾಲ ಮಂಜೂರಾತಿ ಪ್ರಾಧಿಕಾರ ಸಾಲವನ್ನು ಮಂಜೂರು ಮಾಡದಿದ್ದರೂ ಸಾಲದ ಹಣವನ್ನು ಬಿಡುಗಡೆ ಮಾಡಲಾಗಿತ್ತು. 24 ಮುಖ್ಯ ಫಲಾನುಭವಿಗಳಿಗೆ (ಸಾಲಗಾರರಿಗೆ) 892.02 ಕೋಟಿ ಸಾಲ ಮಂಜೂರು ಮಾಡಿ ಹಣ ದುರುಪಯೋಗವಾಗಿತ್ತು. ಠೇವಣಾತಿ ಇಲ್ಲದಿದ್ದರೂ ಠೇವಣಾತಿ ಇದೆ ಎಂದು 409.11 ಕೋಟಿ ಸಾಲ ಮಂಜೂರು ಮಾಡಲಾಗಿತ್ತು. ಆದಾಯ ಗುರುತಿಸುವಿಕೆ, ಆಸ್ತಿವರ್ಗೀಕರಣ ನಿಯಮಗಳನ್ನು ಪಾಲಿಸದೇ ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ಮಾಡಿ ವಾಸ್ತವಾಂಶವನ್ನು ಮರೆಮಾಚಲಾಗಿದೆ ಎಂದು ಸಭೆಯಲ್ಲಿ ಮಂಡಿಸಿದ್ದ ಟಿಪ್ಪಣಿಯು ವಿವರಿಸಿದೆ.

 

2022ರ ಜನವರಿ 31ರ ಅಂತ್ಯಕ್ಕೆ 1.00 ಲಕ್ಷ ರು.ವರೆಗೆ ಠೇವಣಿ ಹೊಂದಿದವರಿಗೆ (222,626) 29.08 ಕೋಟಿ ರು., 1.00 ಲಕ್ಷ ರು. ಮೇಲ್ಪಟ್ಟು (19,181) 191.08ಕೋಟಿ ರು., ಒಟ್ಟಾರೆ 41,804 ಠೇವಣಿದಾರರಿಗೆ 220.16 ಕೋಟಿ ರು. ಪಾವತಿಸಲಾಗಿದೆ. ವೈದ್ಯಕೀಯ ಕ್ಲೈಂ ಅಡಿಯಲ್ಲಿ 793 ಮಂದಿಗೆ 13.33 ಕೋಟಿಯೂ ಸೇರಿದಂತೆ ಒಟ್ಟಾರೆ 45,597 ಮಂದಿಗೆ ಜನವರಿ ಅಂತ್ಯದವರೆಗೆ 233.49 ಕೋಟಿ ರು. ಪಾವತಿಸಲಾಗಿದೆ.

 

ಉಳಿದಂತೆ ಇನ್ನು 8,918 ಠೇವಣಿದಾರರಿಗೆ 1,624.81 ಕೋಟಿ ರು. ಮೊತ್ತವನ್ನು ಪಾವತಿಸಲು ಬಾಕಿ ಉಳಿಸಿಕೊಂಡಿದೆ. 20204 ಜನವರಿ 10ರಿಂದ ಇದುವರೆಗೂ 188.44 ಕೋಟಿ ಸಾಲ ವಸೂಲಾಗಿದೆ.
2020ರ ಮಾರ್ಚ್‌ ಅಂತ್ಯಕ್ಕೆ ಒಟ್ಟು 1,923 ಕೋಟಿ ರು. ನಷ್ಟ ಹೊಂದಿದೆ. ಅಲ್ಲದೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ 2014-15ರ ವರ್ಷವೊಂದರಲ್ಲೇ ಇದೇ ಬ್ಯಾಂಕ್‌ನಲ್ಲಿ 807 ಕೋಟಿ ರು. ದುರುಪಯೋಗವಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯು ಹೊರಗೆಡವಿತ್ತು. ಅಲ್ಲದೆ ಈ ಬ್ಯಾಂಕ್‌ 2021ರ ಜುಲೈ 9ರ ಅಂತ್ಯಕ್ಕೆ 38,848 ಗ್ರಾಹಕರಿಗೆ 2,073.91 ಕೋಟಿ ರು. ಹಾಗೂ 994 ಸಾಂಸ್ಥಿಕ ಗ್ರಾಹಕರಿಗೆ 375 ಕೋಟಿ ರು. ಠೇವಣಿ ಹಣವನ್ನು ಪಾವತಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

 

ಬ್ಯಾಂಕ್‌ ಹೊಂದಿರುವ 1,923 ಕೋಟಿ ರು. ನಷ್ಟದಲ್ಲಿ 1,480 ಕೋಟಿ ರು. ದುರುಪಯೋಗವಾಗಿದೆ ಎಂದು 2019-20ರ ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿದೆ. ಅಲ್ಲದೆ 2014-15ರಿಂದ 2018-19ರವರೆಗಿನ ಲೆಕ್ಕಪತ್ರಗಳನ್ನು ಮರು ಲೆಕ್ಕಪರಿಶೋಧನೆಯೂ ಪೂರ್ಣಗೊಂಡಿದೆ. ಈ ಪೈಕಿ 2014-15ನೇ ಸಾಲಿಗೆ 871 ಕೋಟಿ ರು. ನಷ್ಟ ಮತ್ತು 807 ಕೋಟಿ ರು. ಹಣ ದುರುಪಯೋಗವಾಗಿದೆ. ಒಂದೇ ವರ್ಷದಲ್ಲಿ 807 ಕೋಟಿ ರು ದುರುಪಯೋಗವಾಗಿದೆಯಾದರೂ ಇನ್ನು 2015-16, 2016-17, 2017-18 ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನೆ ಬಹಿರಂಗವಾದಲ್ಲಿ ದುರುಪಯೋಗವಾಗಿರುವ ಮೊತ್ತವು ನಾಲ್ಕೈದು ಪಟ್ಟು ಹೆಚ್ಚಲಿದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.

 

ಬ್ಯಾಂಕ್‌ ನೀಡಿರುವ ಸಾಲದಲ್ಲಿ ಶೇ.95ರಷ್ಟು ಅನುತ್ಪಾದಕ ಆಸ್ತಿಗಳಾಗಿದೆ. 1,594 ಕೋಟಿಗಳಷ್ಟು ಸಾಲವನ್ನು ಮೋಸ, ವಂಚನೆ ಎಂದು ಆರ್‌ಬಿಐ ತನ್ನ ಪರಿವೀಕ್ಷಣಾ ವರದಿಯಲ್ಲಿ ಪರಿಗಣಿಸಿದೆ. 2020ರ ಆಗಸ್ಟ್‌ 31ರ ಅಂತ್ಯಕ್ಕೆ 1,405 ಕೋಟಿ ರು. (ಬಡ್ಡಿ ಸೇರಿ) ವಸೂಲಾತಿಗೆ ಬಾಕಿ ಇದೆ. ಅಲ್ಲದೇ 2020ರ ಜನವರಿ 10ರ ಅಂತ್ಯಕ್ಕೆ ಒಟ್ಟು 1,567 ಕೋಟಿ ಸಾಲ ಮತ್ತು ಮುಂಗಡಗಳ ಬಾಕಿ ಇತ್ತು.

 

ಬ್ಯಾಂಕ್‌ನ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೂ 9 ತನಿಖಾ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ 923 ಕೋಟಿ ರು. ಹಣಕಾಸಿನ ಅವ್ಯವಹಾರವಾಗಿದೆ ಎಂದು ದೂರು ಸಲ್ಲಿಕೆಯಾಗಿದೆ. ಆರೋಪಿಗಳಿಂದ 17,88,110 ರು.ಗಳನ್ನು ಹಾಗೂ ಆರೋಪಿಗಳು ಮತ್ತು ಅವರ ಅವಲಂಬಿತ ಸದಸ್ಯರ ಹೆಸರಿನಲ್ಲಿ 9,548 ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 15 ಕೋಟಿ ಗೂ ಹೆಚ್ಚಿನ ಹಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

 

ಹಾಗೆಯೇ ಸುಮಾರು 1,115 ಕೋಟಿಗಿಂತ ಹೆಚ್ಚಿನ ಬೆಲೆಬಾಳುವ ಸ್ಥಿರಾಸ್ತಿಗಳನ್ನು ಗುರುತಿಸಿ ಹಣ ವರ್ಗಾವಣೆ ನಿಷೇಧ ಅಧಿನಿಯಮ 2002ರ ಅಡಿಯಲ್ಲಿ ಕ್ರಮಜರುಗಿಸಲು ಜಾರಿ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಅದರಂತೆ ಈ ನಿರ್ದೇಶನಾಲಯವು ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

 

ಅದೇ ರೀತಿ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲೂ 90 ಕೋಟಿಯಷ್ಟು ಅವ್ಯವಹಾರ ನಡೆದಿದೆ. ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತವು ತನ್ನ ಠೇವಣಿದಾರರ ಹಣದಲ್ಲಿ 90 ಕೋಟಿಗಳನ್ನು ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ತೊಡಗಿಸಿ ಜಮಾ ಮಾಡಿ ಅವ್ಯವಹಾರ ಎಸಗಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

ಅದೇ ರೀತಿ ಇದೇ ಸೌಹಾರ್ದ ಪತ್ತಿನ ಸಂಘವು ಕಾನೂನುಬಾಹಿರವಾಗಿ 163.43 ಕೋಟಿ ರು. ಸಾಲ ನೀಡಿದೆ. ಅಲ್ಲದೆ 228.71 ಕೋಟಿಗಳಷ್ಟು ಠೇವಣಿ ಸಂಗ್ರಹಿಸಿ ಅದನ್ನು ಸಕಾಲದಲ್ಲಿ ಸದಸ್ಯರಿಗೆ ಮರು ಪಾವತಿಸದೇ ನಂಬಿಕೆ ದ್ರೋಹ, ಮೋಸ ಮತ್ತು ವಂಚನೆ ಮಾಡಿದೆ. ಹಾಗೆಯೇ ಸೂಕ್ತ ಭದ್ರತೆ ಪಡೆಯದೆಯೇ 174 ಪ್ರಕರಣಗಳಲ್ಲಿ 149.33 ಕೋಟಿ ರು. ಬೇನಾಮಿ ಸಾಲ ನೀಡಿದೆಯಲ್ಲದೆ 4.48 ಕೋಟಿ ರು.ಗಳ ನಕಲಿ ಸಾಲಗಳನ್ನು ಸೃಷ್ಟಿಸಿದೆ ಎಂಬುದು ಟಿಪ್ಪಣಿಯಿಂದ ತಿಳಿದು ಬಂದಿದೆ.

 

2019-20ನೇ ಸಾಲಿನ ಲೆಕ್ಕಪರಿಶೋಧನೆ ವರದಿ ಪ್ರಕಾರ ಸೊಸೈಟಿಯಲ್ಲಿ 4.90 ಕೋಟಿ ಷೇರು ಬಂಡವಾಳ ಪಾವತಿಯಾಗಿತ್ತು. ಆಪದ್ಧನ ಮತ್ತು ಇತರೆ ನಿಧಿಗಳ ರೂಪದಲ್ಲಿ 0.16 ಕೋಟಿ ರು., 228.71 ಕೋಟಿ ಠೇವಣಿ , 233.78 ಕೋಟಿ ದುಡಿಯುವ ಬಂಡವಾಳ, 66.80 ಕೋಟಿ ಹೂಡಿಕೆಗಳಿದ್ದರೆ, ಸಾಲ ಮತ್ತುಮುಂಗಡಗಳ ರೂಪದಲ್ಲಿ 163.43 ಕೋಟಿ ರು ಇದೆ.

 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಈ ಸೊಸೈಟಿಯು ಕಾರ್ಯನಿರ್ವಹಿಸುತ್ತಿತ್ತು.

SUPPORT THE FILE

Latest News

Related Posts