ಶುದ್ಧ ಕುಡಿಯುವ ನೀರು ಘಟಕಗಳ ನೀರೇ ಕಲುಷಿತ, ಲ್ಯಾಬ್‌ ವರದಿಯಿಲ್ಲ, ಐಎಸ್‌ಒ ಮಾನದಂಡವೂ ಇಲ್ಲ

ಬೆಂಗಳೂರು; ರಾಜ್ಯದ ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳ ಮೂಲಕ ಕಳೆದ 8 ವರ್ಷಗಳ ಅವಧಿಯಲ್ಲಿ ಪ್ರಯೋಗಾಲಯಗಳ ವರದಿಗಳನ್ನು ಪಡೆಯದೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.

 

ಈಗಾಗಲೇ ಕಾರ್ಯಾಚರಿಸುತ್ತಿರುವ ಘಟಕಗಳ ಪೈಕಿ ಬಹುತೇಕ ಘಟಕಗಳು ಕಲುಷಿತಗೊಂಡಿವೆ. ಐಎಸ್‌ಒ ಮತ್ತು ಬಿಐಎಸ್‌ ಮಾನದಂಡಗಳಿಲ್ಲದೆ ಸಾವಿರಾರು ಘಟಕಗಳನ್ನು ತೆರೆಯಲಾಗಿದೆ. 1,664 ಘಟಕಗಳು ಕಾರ್ಯನಿರ್ವಹಿಸದ ಕಾರಣ ಘಟಕಗಳ ವೆಚ್ಚವು ವ್ಯರ್ಥವಾಗಿರುವುದು ಇದೀಗ ಬಹಿರಂಗವಾಗಿದೆ.

 

ಈ  ಅಧ್ಯಯನ ವರದಿ ಕುರಿತು ಯೋಜನೆ, ಸಾಂಖ್ಯಿಕ ಇಲಾಖೆಯು ಪರಿಶೀಲನೆ ನಡೆಸಿದೆ. ವರದಿಯ ಪ್ರತಿ ‘ದಿ ಫೈಲ್‌’ಗೆ ಗೆ ಲಭ್ಯವಾಗಿದೆ.

 

ರಾಜ್ಯದ 17 ಜಿಲ್ಲೆಗಳಲ್ಲಿ ತೆರೆದಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಂಬಂಧಿಸಿದಂತೆ ಹಲವು ಲೋಪ-ದೋಷಗಳನ್ನು ಪತ್ತೆ ಹಚ್ಚಿರುವ ಆಧ್ಯಯನ ವರದಿಯೊಂದು ಘಟಕಗಳ ಕಾರ್ಯಕ್ಷಮತೆಯನ್ನೂ ಬಹಿರಂಗಪಡಿಸಿದೆ.

ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಕ್ಷಮತೆ ಕುರಿತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಈ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಘಟಕದ ಇಂಜಿನಿಯಿರಿಂಗ್‌ ವಿದ್ಯಾರ್ಥಿಗಳ ಮೂಲಕ 831 ಘಟಕಗಳ 17 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಾಗಿದೆ.

 

ರಾಜ್ಯದ ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌, ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕ್ರಿಡಿಲ್‌, ಕೆಎಸ್‌ಎಂಎಸ್‌ಸಿಎಲ್‌ ಸೇರಿದಂತೆ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆದಿತ್ತು. ಹಾಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆದಿದೆ.

 

2013-14ರಿಂದ 2020-21ರ ಅವಧಿಯಲ್ಲಿ ಒಟ್ಟು 17,439 ಘಟಕಗಳು ಅನುಷ್ಟಾನಗೊಂಡಿವೆ. ಈ ಪೈಕಿ 1,664 ಘಟಕಗಳು (ಶೇ.9.5) ಕಾರ್ಯನಿರ್ವಹಿಸುತ್ತಿಲ್ಲ. ಇನ್ನೂ 309 ಘಟಕಗಳ (ಶೇ. 1.8) ಕಾಮಗಾರಿ ಪ್ರಗತಿಯಲ್ಲಿವೆ. 1,664 ಘಟಕಗಳ ಪೈಕಿ ಕೆಡಬ್ಲ್ಯೂಡಿಎಸ್‌ಡಿ 738 (ಶೇ. 44.35), ಕೆಆರ್‌ಐಡಿಎಲ್‌ ನಿಂದ 592 (ಶೇ. 35.38), ಅಲ್ಪಸಂಖ್ಯಾತರ ಇಲಾಖೆಯ 30(ಶೇ.1.8), ಯೋಜನೆ ಇಲಾಖೆ 145 (ಶೇ. 8.71), ಸಮಾಜ ಕಲ್ಯಾಣ ಇಲಾಖೆ 48, (ಶೇ.2.88), ಕೆಎಸ್‌ಎಮ್‌ಎಲ್‌ಸಿಎಲ್‌ 7, (ಶೆ.0.42), ಗ್ರಾಮೀಣಾಭಿವೃದ್ದಿ ಇಲಾಖೆಯ 10 (ಶೇ.0.6) ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಧ್ಯಯನ ವರದಿಯಿಂದ ಅಧ್ಯಯನ ವರದಿಯಿಂದ ತಿಳಿದು ಬಂದಿದೆ.

 

ಮೌಲ್ಯಮಾಪನ ಪ್ರಾಧಿಕಾರದ ವರದಿ ಪ್ರತಿ

 

ವಿಶೇಷವೆಂದರೆ 17,439 ಘಟಕಗಳ ಪೈಕಿ 9,493 ಘಟಕಗಳಿಗಷ್ಟೇ (ಶೇ. 54.44) ಪ್ರಯೋಗಾಲಯ ವರದಿ ಲಭ್ಯವಿದೆ. ಇನ್ನುಳೀದ 7,946 ಘಟಕಗಳಿಗೆ (ಶೇ.45.56) ಘಟಕಗಳಿಗೆ ಪ್ರಯೋಗಾಲಯದ ವರದಿಯೇ ಲಭ್ಯವಿಲ್ಲ ಎಂಬ ಸಂಗತಿ ಅಧ್ಯಯನ ವರದಿಯಿಂದ ಗೊತ್ತಾಗಿದೆ.

 

ಅದೇ ರೀತಿ ಘಟಕಗಳಲ್ಲಿ ನೀರು ಕಲುಷಿತಗೊಂಡಿರುವ ಬಗ್ಗೆ 14,439 ಘಟಕಗಳ ಪೈಕಿ 9,329 ಘಟಕಗಳು ಮಾಹಿತಿ ನೀಡಿವೆ. ಅದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮೂಲಕ ತೆರೆದಿದ್ದ 8,624 ಘಟಕಗಳ ಪೈಕಿ 8,465 ಘಟಕಗಳು ಕಲುಷಿತಗೊಂಡಿವೆ. ಕ್ರಿಡಲ್‌ಗೆ ಸಂಬಂಧಪಟ್ಟ 5,775 ಘಟಕಗಳು ಕಲುಷಿತಗೊಂಡಿರುವ ಬಗ್ಗೆ ಅಧ್ಯಯನ ತಂಡಕ್ಕೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ.

 

17,439 ಘಟಕಗಳ ಪೈಕಿ 1,410 ಘಟಕಗಳನ್ನು ತೆರೆಯಲು ಯಾವುದೇ ಟೆಂಡರ್‌ಗಳನ್ನು ಕರೆದಿಲ್ಲ. 7,132 ಘಟಕಗಳಿಗೆ ಐಎಸ್‌ಒ ಮತ್ತು ಬಿಐಎಸ್‌ ಮಾನದಂಡಗಳನ್ನು ಖಚಿತಪಡಿಸಿಲ್ಲ. ಹಾಗೂ 1,984 ಘಟಕಗಳ ನಿರ್ವಹಣೆಗಾಗಿ ಯಾವುದೇ ಒಪ್ಪಂದ (ಎಂಒಯು)ವೂ ಇಲ್ಲ . ಅಲ್ಲದೆ ಐಎಸ್‌ಒ, ಬಿಐಎಸ್‌ ಮಾನದಂಡಗಳನ್ನು ಖಚಿತಪಡಿಸದೇ ಹಾಗೂ ಘಟಕಗಳ ನಿರ್ವಹಣೆಗಾಗಿ ಒಪ್ಪಂದವಿಲ್ಲದೆಯೇ ಇರುವ ಒಟ್ಟು 920 (ಶೇ.5.27) ಘಟಕಗಳನ್ನು ಸ್ಥಾಪಿಸಲಾಗಿದೆ. 875 ಘಟಕಗಳು ಸಾಮರ್ಥ್ಯದ ಮಾಹಿತಿಯನ್ನೇ ನೀಡಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ಈ 920 ಘಟಕಗಳ ಪೈಕಿ ಕ್ರಿಡಿಲ್‌ನ 57, ನಗರಾಭಿವೃದ್ಧಿ ಇಲಾಖೆಯ 52, ಸಮಾಜ ಕಲ್ಯಾಣ ಇಲಾಖೆಯ 164, ಯೋಜನಾ ಇಲಾಖೆಯ 185, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 63, ಕೆಎಸ್‌ಎಮ್‌ಸಿಎಲ್‌ನ 09, ಸಹಕಾರ ಇಲಾಖೆ, ಜಿ.ಪಂ., ಗ್ರಾ.ಪಂ, ಕೆಎಲ್‌ಎಲ್‌ಎಡಿಎಸ್‌, ಕಿಯೋನಿಕ್ಸ್‌ಗೆ ಸೇರಿದ ಒಟ್ಟು 390 (ಶೇ.42) ಘಟಕಗಳ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಲೋಪದೋಷಗಳಾಗಿದ್ದರೂ ಸಹ ಇದಕ್ಕೆ ಕಾರಣರಾದವರ ಮೇಲೆ ಯಾವುದೇ ಕ್ರಮ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದು ವರದಿಯು ಹೊರಗೆಡವಿದೆ.

 

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಉಸ್ತುವಾರಿಯಲ್ಲಿ ವಿವಿಧ ಅನುದಾನಗಳಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪಿತವಾಗಿವೆ.

 

ಒಟ್ಟು 1000 ಎಲ್‌ಪಿಎಚ್‌ ಸಾಮರ್ಥ್ಯದ ಘಟಕಕ್ಕೆ ಅಂದಾಜು 8.50 ಲಕ್ಷ ರು. ಗಳನ್ನು ನೀಡಲಾಗುತ್ತಿದೆ. ನಿರ್ವಹಣೆಗಾಗಿ ವಹಿಸಲಾದ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಪ್ರತಿ ತಿಂಗಳು ಪ್ರತಿ ಘಟಕಕ್ಕೆ ಇಲಾಖೆಯಿಂದ 3,000 ರು.ಗಳ ಅನುದಾನ ಒದಗಿಸಲಾಗುತ್ತಿದೆ. ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಇತರೆ ಅನುದಾನಗಳನ್ನು ಬಳಸಿ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಕಾಲಕಾಲಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಲಾಗುತ್ತಿದೆ.

 

ಶುದ್ಧ ಕುಡಿಯುವ ನೀರಿನ ಘಟಕಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಹಗರಣ ಆಗಿದೆ. ಮಾರುಕಟ್ಟೆಯಲ್ಲಿ 3-4 ಲಕ್ಷ ರೂ.ಗೆ ಒಂದು ಘಟಕ ಸಿಗುತ್ತಿದೆ. ಆದರೆ ಅಧಿಕಾರಿಗಳು 14ರಿಂದ 15 ಲಕ್ಷ ರೂ.ಗೆ ಖರೀದಿ ಮಾಡಿದ್ದಾರೆ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.

 

ರಾಜ್ಯದ ಹಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳ ಖರೀದಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತಾದರೂ ಆ ನಂತರ   ಜಂಟಿ ಸದನ ಸಮಿತಿಗೆ ಶಾಸಕ ಅಭಯ್‌ ಪಾಟೀಲ್‌ ಅವರನ್ನು ಅಧ್ಯಕ್ಷರನ್ನಾಗಿಸಿತ್ತು.  2022ರ ಜನವರಿ 14ರಂದು ಈ ಸಮಿತಿ ಸಭೆಯನ್ನೂ ನಡೆಸಿದೆ.

 

‘ನಾನು ಅನೇಕ ಕಡೆ ಭೇಟಿ ಕೊಟ್ಟಾಗ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ದೂರುಗಳು ಸಹ ಬಂದಿವೆ. ಕೆಲವರು ಸರ್ಕಾರಕ್ಕೆ ಟೋಪಿ ಹಾಕಿ ಹೋಗಿದ್ದಾರೆ. ಹೀಗಾಗಿ ಇದನ್ನು ಜಂಟಿ ಸದನ ಸಮಿತಿ ಮೂಲಕ ತನಿಖೆ ಮಾಡಿಸಲಾಗುವುದು. ಎರಡು ತಿಂಗಳೊಳಗೆ ಸಮಗ್ರ ತನಿಖೆ ನಡೆಸಿ ಸದನದಲ್ಲೇ ವರದಿಯನ್ನು ಮಂಡಿಸಲಾಗುವುದು. ಯಾರು ಅವ್ಯವಹಾರ ನಡೆಸಿ ಹಣವನ್ನು ಲೂಟಿ ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲೇಬೇಕು. ಯಾವುದೇ ಕಾರಣಕ್ಕೂ ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ,’ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದಲ್ಲಿ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts