Monday | July 27, 2026 |

ಖಾಸಗಿ ಕಂಪನಿಗೆ 425 ಕೋಟಿ ಲಾಭ; ಸರ್ಕಾರದ ಸೂಚನೆ ಬದಿಗಿರಿಸಿ ಹಗರಣಕ್ಕೆ ನಾಂದಿ ಹಾಡಿದ ರಾಜ್ಯಪಾಲ?

ಬೆಂಗಳೂರು; ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ನೀಡುವ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಉಚಿತವಾಗಿ ಸಂಗ್ರಹಿಸುವ ಮತ್ತು ಉಚಿತವಾಗಿಯೇ ವಿದ್ಯಾರ್ಥಿಗಳಿಗೆ ನೀಡುವ ಸಲುವಾಗಿ ಡಿಜಿ ಲಾಕರ್‌-ನ್ಯಾಡ್‌ನಲ್ಲಿ ಸಂಗ್ರಹಿಸಲು ಕೇಂದ್ರ ಸರ್ಕಾರ ಆರಂಭಿಸಿದ್ದ ಯೋಜನೆಯನ್ನು ಬದಿಗೊತ್ತಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಇ ಡಿ ಜಿ ಎಸ್‌ ಯೋಜನೆ ಹೆಸರಿನಲ್ಲಿ ದೊಡ್ಡಮಟ್ಟದ ಹಗರಣಕ್ಕೆ ನಾಂದಿ ಹಾಡಿರುವುದು ಇದೀಗ ಬಹಿರಂಗವಾಗಿದೆ.

 

ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಕೇಂದ್ರ ಸರ್ಕಾರ ಆರಂಭಿಸಿರುವ ಉಚಿತ ಯೋಜನೆಯನ್ನು ಬದಿಗಿರಿಸಿರುವುದಲ್ಲದೆ ಈ ಸಂಬಂಧ ರಾಜ್ಯ ಸರ್ಕಾರದ ಸೂಚನೆಯನ್ನೂ ಕಸದ ಬುಟ್ಟಿಗೆ ಎಸೆದಿದ್ದಾರೆ. ಅಲ್ಲದೆ ಕಿಯೋನಿಕ್ಸ್‌ ಮೂಲಕ ಪ್ರವೇಶಿಸುವ ಹೊರಗುತ್ತಿಗೆ ಕಂಪನಿಯೊಂದಕ್ಕೆ ವರ್ಷಕ್ಕೆ 93 ಕೋಟಿಯಂತೆ 5 ವರ್ಷಕ್ಕೆ 465 ಕೋಟಿ ರು. ಪಾವತಿಗೆ ಕಾರಣರಾಗುವ ಪ್ರಕರಣವನ್ನು ‘ದಿ ಫೈಲ್‌’ ಹೊರಗೆಡವುತ್ತಿದೆ.

 

ಕಿಯೋನಿಕ್ಸ್‌ ಸಂಸ್ಥೆ ಮೂಲಕ ಜಾರಿಗೆ ತರಲು ಹೊರಟಿರುವ ಇ ಡಿ ಜಿ ಎಸ್‌ ಯೋಜನೆಯನ್ನು ಮುಂದಿನ ಸೂಚನೆವರೆಗೆ ತಡೆಹಿಡಿಯಬೇಕು ಎಂದು ರಾಜ್ಯ ಸರ್ಕಾರವು 2022ರ ಜನವರಿ 14ರಂದು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಸಚಿವರಿಗೆ ಪತ್ರ ಬರೆದಿತ್ತು. ಆದರೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಕಿಯೋನಿಕ್ಸ್‌ ಮೂಲಕವೇ ಇ ಡಿ ಜಿ ಎಸ್‌ ಯೋಜನೆಯನ್ನು ಜಾರಿಗೊಳಿಸಬೇಕು ಎಂದು 2022ರ ಜನವರಿ 31ರಂದು ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ನೇರವಾಗಿ ಪತ್ರ ಬರೆದಿದ್ದಾರೆ. ಹೀಗಾಗಿ ಯಾರ ಸೂಚನೆಯನ್ನು ಪಾಲಿಸಬೇಕು ಎಂದು  ಕುಲಪತಿ ಮತ್ತು ಕುಲಸಚಿವರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ರಾಜ್ಯಪಾಲರು ಬರೆದಿರುವ ಪತ್ರಗಳು ಮತ್ತು ಹಿಂದಿನ ಸರ್ಕಾರದ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸರ್ಕಾರ ಬರೆದ ಪತ್ರದಲ್ಲೇನಿದೆ?

 

ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ನೀಡುವ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಉಚಿತವಾಗಿ ಸಂಗ್ರಹಿಸುವ ಮತ್ತು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಡಿಜಿ ಲಾಕರ್‌-ನ್ಯಾಡ್‌ (DigiLocker-NAD) ನಲ್ಲಿ ಸಂಗ್ರಹಿಸಲು 2020-21ನೇ ಸಾಲಿನಿಂದ ಆರಂಭಿಸಿರುವುದರಿಂದ ಕಿಯೋನಿಕ್ಸ್‌ ಸಂಸ್ಥೆಯವರ ಇ ಡಿ ಜಿ ಎಸ್‌ (ಎಲೆಕ್ಟ್ರಾನಿಕ್‌ ಡಾಕ್ಯುಮೆಂಟ್‌ ಜನರೇಷನ್‌ ಸಿಸ್ಟಂ) ಯೋಜನೆಯನ್ನು ಮುಂದಿನ ಸೂಚನೆಯವರೆಗೆ ತಡೆಹಿಡಿಯುವಂತೆ ಹಾಗೂ ಡಿಜಿ ಲಾಕರ್‌-ನ್ಯಾಡ್‌ನಲ್ಲಿ ಸಂಗ್ರಹಿಸುವ ಯೋಜನೆಯನ್ನು ಮುಂದುವರೆಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕುಮಾರ್‌ ನಾಯಕ್‌ ಅವರು ವಿಶ್ವವಿದ್ಯಾಲಯಗಳ ಎಲ್ಲಾ ಕುಲಸಚಿವರಿಗೆ 2022ರ ಜನವರಿ 14ರಂದು ಪತ್ರ ಬರೆದಿದ್ದರು.

 

ಉನ್ನತ ಶಿಕ್ಷಣ ಇಲಾಖೆ ಕುಲಸಚಿವರಿಗೆ ಬರೆದಿರುವ ಪತ್ರದ ಪ್ರತಿ

 

ಸರ್ಕಾರದ ಪತ್ರವನ್ನು ರಾಜ್ಯಪಾಲರು ಬದಿಗೊತ್ತಿದ್ದೇಕೆ?

 

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಉಚಿತ ಯೋಜನೆಯನ್ನು ಮುಂದುವರೆಸಬೇಕು ಎಂದು ರಾಜ್ಯ ಸರ್ಕಾರವು ಪತ್ರ ಬರೆದ 15 ದಿನಗಳಲ್ಲೇ ರಾಜ್ಯಪಾಲರ ಹೆಸರಿನಲ್ಲಿ ಅವರ ವಿಶೇಷ ಕಾರ್ಯದರ್ಶಿಗಳು 2022ರ ಜನವರಿ 31ರಂದು ವಿಶ್ವವಿದ್ಯಾಲಯಗಳ ಎಲ್ಲಾ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಕಿಯೋನಿಕ್ಸ್‌ ಸಂಸ್ಥೆಯವರ ಇ ಡಿ ಜಿ ಎಸ್‌ (ಎಲೆಕ್ಟ್ರಾನಿಕ್‌ ಡಾಕ್ಯುಮೆಂಟ್‌ ಜನರೇಷನ್‌ ಸಿಸ್ಟಂ) ಯೋಜನೆಗೆ ಸಂಬಂಧಿಸಿದಂತೆ 2019ರ ಮೇ 31ರಂದು ಹೊರಡಿಸಿದ್ದ ಆದೇಶವನ್ನು ಪಾಲಿಸಬೇಕು ಎಂದು ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ. ಕೇಂದ್ರ ಸರ್ಕಾರವು ಉಚಿತವಾಗಿಯೇ ಜಾರಿಗೊಳಿಸಿರುವ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರೋತ್ಸಾಹಿಸಬೇಕಿದ್ದ ರಾಜ್ಯಪಾಲರು 5 ವರ್ಷಕ್ಕೆ ಅಂದಾಜು 465 ಕೋಟಿ ಹೊರೆಗೆ ಕಾರಣವಾಗುವ ಆದೇಶವನ್ನು ಪಾಲಿಸಿ ಎಂದು ಸೂಚಿಸಿರುವುದರ ಹಿಂದೆ ಅಕ್ರಮದ ವಾಸನೆ ಹರಡಿದೆ.

 

ಕುಲಪತಿಗಳಿಗೆ ರಾಜ್ಯಪಾಲರು ಬರೆದಿರುವ ಪತ್ರದ ಪ್ರತಿ

 

2019ರಂದು ಮೈತ್ರಿ ಸರ್ಕಾರ ಹೊರಡಿಸಿದ್ದ ಆದೇಶದಲ್ಲೇನಿತ್ತು?

 

ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳ ಹಾವಳಿ ತಪ್ಪಿಸಿ ಪರೀಕ್ಷಾ ಪದ್ಧತಿಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಆಧಾರ್‌ ಸಂಖ್ಯೆ ಆಧಾರಿತ ಡಿಜಿಟಲ್‌ (e-sign) ಅಂಕಪಟ್ಟಿ ಮತ್ತ ಪದವಿ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಮೂಲಕ ವಿತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಹಿಂದಿನ ರಾಜ್ಯಪಾಲ ವಜುಭಾಯ್‌ ವಾಲಾ ಅವರ ಸೂಚನೆ ಮೇರೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಸರ್ಕಾರವು 2019ರ ಮೇ 31ರಂದು ಆದೇಶ ಹೊರಡಿಸಿತ್ತು.

 

2019ರಲ್ಲಿ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶದ ಪ್ರತಿ

 

‘ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿಯಲ್ಲಿನ ತಾಂತ್ರಿಕ ಕಾಲೇಜುಗಳು, ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿರುವ ಎಲ್ಲಾ ಪಾಲಿಟೆಕ್ನಿಕ್‌ಗಳು, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಇಲಾಖೆಯ ಅಧೀನ ಇಲಾಖೆಗಳಲ್ಲಿ ಆಧಾರ್‌ ಸಂಖ್ಯೆ ಆಧರಿತ ಡಿಜಿಟಲ್‌ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳನ್ನು ಕಿಯೋನಿಕ್ಸ್‌ ಮೂಲಕ ಇಡಿಜಿಎಸ್‌ ತಂತ್ರಾಂಶ ಯೋಜನೆಯನ್ನು ಬಳಸಿಕೊಂಡು ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಆನ್‌ಲೈನ್‌/ಡಿಜಿಟಲ್‌ ಮಾದರಿಯಲ್ಲಿ ತಯಾರಿಸಿ ವಿತರಿಸಬೇಕು. ಹಾಗೂ ನ್ಯಾಡನಲ್‌ ಅಕಾಡೆಮಿಕ್‌ ಡಿಪಾಸಿಟರಿ (ನ್ಯಾಡ್‌) ಮಾದರಿಯಲ್ಲಿ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ(ಕೆಎಸ್‌ಡಿಸಿ)ಯಲ್ಲಿ ಶೇಖರಿಸಿ ಯೋಜನೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು,’ ಎಂದು ಆದೇಶಿಸಿತ್ತು.

 

 

ವಿದ್ಯಾರ್ಥಿಗಳ ಮೂಲ ಅಂಕಪಟ್ಟಿ, ತಿದ್ದುಪಡಿ ಅಂಕಪಟ್ಟಿ, ನಕಲು ಅಂಕಪಟ್ಟಿ, ಕ್ರೋಢೀಕೃತ ಅಂಕಪಟ್ಟಿ, ತಾತ್ಕಾಲಿಕ ಅಂಕಪಟ್ಟಿ, ಘಟಿಕೋತ್ಸವ ಮೂಲ ಮತ್ತು ತಿದ್ದುಪಡಿ ಪ್ರಮಾಣ ಪತ್ರ, ವಲಸೆ ಪ್ರಮಾಣಪತ್ರ, ವಿದ್ಯಾರ್ಥಿವೇತನ ಪ್ರಮಾಣಪತ್ರ, ವರ್ಗಾವಣೆ ಪ್ರಮಾಣಪತ್ರ, ನಡತೆ ಪ್ರಮಾಣ ಪತ್ರ, ಅರ್ಹತಾ ಪ್ರಮಾಣಪತ್ರ ಸೇರಿದಂತೆ ಒಟ್ಟಾರೆ 35 ಪ್ರಮಾಣಪತ್ರಗಳನ್ನು ಕಿಯೋನಿಕ್ಸ್‌ ಒದಗಿಸುವ ಇಡಿಜಿಎಸ್‌ ತಂತ್ರಾಂಶದ ಮೂಲಕ ಸಿದ್ಧಪಡಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿತ್ತು.

 

ದಾಖಲಾತಿಗಳ ಪಟ್ಟಿ

 

ಒಂದು ದಾಖಲಾತಿಗೆ 155 ರು.

 

ಕಿಯೋನಿಕ್ಸ್‌ ಒದಗಿಸುತ್ತಿರುವ ಇಡಿಜಿಎಸ್‌ ತಂತ್ರಾಂಶದ ಮೂಲಕ ವಿದ್ಯಾರ್ಥಿಗಳ ಒಂದು ದಾಖಲಾತಿಯನ್ನು ಡಿಜಿಟಲ್‌ ರೂಪದಲ್ಲಿ ತಯಾರಿಸಿ, ಸಂಗ್ರಹಿಸಿ ಮತ್ತು ವಿತರಿಸಲು ಜಿಎಸ್‌ಟಿ ಸೇರಿ ಒಟ್ಟು 155 ರು. (132.00 +ಶೇ.18 ಜಿಎಸ್‌ಟಿ) ಭರಿಸಬೇಕು. ಇದನ್ನು ವಿಶ್ವವಿದ್ಯಾಲಯಗಳು ಈಗಾಗಲೇ ಸಂಗ್ರಹಿಸುವ ಪರೀಕ್ಷಾ ಶುಲ್ಕದಡಿಯಲ್ಲಿಯೇ ಭರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಕಿಯೋನಿಕ್ಸ್‌ ಸಂಸ್ಥೆಯವರೊಂದಿಗಿನ ಈ ಒಪ್ಪಂದವು ಮುಂದಿನ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.

 

ದಾಖಲಾತಿಯೊಂದಕ್ಕೆ ನಿಗದಿಪಡಿಸಿರುವ ಶುಲ್ಕದ ವಿವರ

 

ವಿ ವಿ ಗಳಿಗೆ 465  ಕೋಟಿ ಹೊರೆ?

 

ರಾಜ್ಯದ ತಲಾ ವಿಶ್ವವಿದ್ಯಾಲಯದಲ್ಲಿ ಒಂದು ಸೆಮಿಸ್ಟರ್‌ಗೆ 15 ಲಕ್ಷದಂತೆ ವರ್ಷಕ್ಕೆ 2 ಸೆಮಿಸ್ಟರ್‌ನಂತೆ ಒಟ್ಟು 30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆ ಬರೆದ ಪ್ರತಿ ವಿದ್ಯಾರ್ಥಿಗೆ ಅಂಕಪಟ್ಟಿ ಕೊಡಲೇಬೇಕು. ಹೀಗಾಗಿ ವರ್ಷದಲ್ಲಿ ಅಂದಾಜು 5 ಲಕ್ಷ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನೂ ಸೇರಿದಂತೆ ಒಟ್ಟಾರೆ 35 ಲಕ್ಷ ಪ್ರಮಾಣಪತ್ರ (ಅಂಕಪಟ್ಟಿ-ಪದವಿ ಪ್ರಮಾಣ ಪತ್ರ ಸೇರಿ)ಗಳನ್ನು ಇಡಿಜಿಎಸ್‌ ತಂತ್ರಾಂಶದ ಮೂಲಕ ಸಂಗ್ರಹಿಸಲಾಗುತ್ತದೆ.

 

ಒಂದು ದಾಖಲಾತಿಗೆ 155 ರು. ಲೆಕ್ಕಾಚಾರದ ಪ್ರಕಾರ 35 ಲಕ್ಷ ದಾಖಲಾತಿಗಳಿಗೆ ಸುಮಾರು 55 ಕೋಟಿ ರು. ವೆಚ್ಚ ಮಾಡಬೇಕು. ಇದು 5 ವರ್ಷಕ್ಕೆ 275 ಕೋಟಿ ರು. ವೆಚ್ಚವಾಗಲಿದೆ. ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಹೊರತುಪಡಿಸಿದಂತೆ 2019ರಲ್ಲಿ ಹೊರಡಿಸಿರುವ ಆದೇಶದ ಪ್ರಕಾರ ಒಟ್ಟು ಒಬ್ಬ ವಿದ್ಯಾರ್ಥಿಯ 35 ದಾಖಲಾತಿಗಳೂ ಸೇರಿದರೆ ಒಟ್ಟಾರೆ 60 ಲಕ್ಷ ದಾಖಲಾತಿಗಳನ್ನು ಇಡಿಜಿಎಸ್‌ ತಂತ್ರಾಂಶದ ಮೂಲಕ ಸಂಗ್ರಹಿಸಬೇಕು. 155 ರು.ನಂತೆ 60 ಲಕ್ಷ ದಾಖಲಾತಿಗಳಿಗೆ ವರ್ಷಕ್ಕೆ 93 ಕೋಟಿ ರು. ವೆಚ್ಚ ಮಾಡಬೇಕು. 5 ವರ್ಷಕ್ಕೆ 465 ಕೋಟಿ ರು. ವೆಚ್ಚವಾಗಲಿದೆ.

 

ಉದಾಹರಣೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವೊಂದರಲ್ಲಿ 2 ಲಕ್ಷ ವಿದ್ಯಾರ್ಥಿಗಳ ಅಂಕಪಟ್ಟಿವೊಂದಕ್ಕೆ ವರ್ಷವೊಂದಕ್ಕೆ 3 ಕೋಟಿ ರು. ವೆಚ್ಚ ಮಾಡಬೇಕು. 5 ವರ್ಷಕ್ಕೆ ಸುಮಾರು 12.50 ಕೋಟಿ ರು. ವೆಚ್ಚ ಮಾಡಬೇಕು. ಈ ಹಣವನ್ನು ವಿದ್ಯಾರ್ಥಿಯ ಪರೀಕ್ಷಾ ಶುಲ್ಕದಿಂದಲೇ ಭರಿಸಬೇಕು ಎಂದು ಹೇಳಿರುವುರಿಂದ ಸಹಜವಾಗಿ ಪರೀಕ್ಷಾ ಶುಲ್ಕದಲ್ಲಿಯೂ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಲಿದೆ. ಇದು ಅಂತಿಮವಾಗಿ ವಿದ್ಯಾರ್ಥಿಗಳಿಗೆ ಹೊರೆ. ಒಬ್ಬ ವಿದ್ಯಾರ್ಥಿಯು ತನ್ನ ಪದವಿ ಪಡೆಯಲು ಈ ಸಂಬಂಧ ಕನಿಷ್ಟ 1,000 ರು. ಹೆಚ್ಚುವರಿಯಾಗಿ ನೀಡಬೇಕು.

 

ವಿ ವಿ ಗಳ ಮೇಲೆ ರಾಜ್ಯಪಾಲರ ಕಚೇರಿ ಒತ್ತಡ!

 

2019ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನೇ ಪಾಲಿಸಬೇಕು ಎಂದು ರಾಜ್ಯಪಾಲರ ಕಚೇರಿಯು ಎಲ್ಲಾ ವಿಶ್ವವಿದ್ಯಾಲಯಗಳ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ. ರಾಜ್ಯಪಾಲರ ಒತ್ತಡಕ್ಕೆ ವಿಶ್ವವಿದ್ಯಾಲಯಗಳು ಮಣಿದರೆ ವಿಶ್ವವಿದ್ಯಾಲಯಗಳು ವರ್ಷವೊಂದಕ್ಕೆ ಸುಮಾರು 55ರಿಂದ 60 ಕೋಟಿ ರು.ವೆಚ್ಚ ಮಾಡಬೇಕು.

 

ಹೊರಗುತ್ತಿಗೆ ಕಂಪನಿಗೆ 425 ಕೊಟಿ ಲಾಭ?

 

ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ಸಂಗ್ರಹಣೆ ಕೆಲಸದ ಸಂಪೂರ್ಣ ಜವಾಬ್ದಾರಿಯು ಮತ್ತು ಕೆಲಸದ ನಿರ್ವಹಣೆಯು ವಿಶ್ವವಿದ್ಯಾಲಯದ ಮೇಲಿದೆ. ಕಿಯೋನಿಕ್ಸ್‌ ಸಂಸ್ಥೆಯು ಈ ದಾಖಲೆಗಳನ್ನು ಅಂತರ್ಜಾಲದಲ್ಲಿ ಶೇಖರಿಸುತ್ತದಷ್ಟೆ. ಕಿಯೋನಿಕ್ಸ್‌ ಸಂಸ್ಥೆಗೆ ಸ್ವಲ್ಪವೂ ಕೆಲಸವಿಲ್ಲದೇ ವರ್ಷಕ್ಕೆ 100 ಕೋಟಿ ಯನ್ನು ಸಂಗ್ರಹಿಸಲು ಅಧಿಕಾರ ನೀಡಿದಂತಾಗಿದೆ. ಅಲ್ಲದೆ ಕಿಯೋನಿಕ್ಸ್‌ ಸಂಸ್ಥೆಯು ಈ ಕಾರ್ಯ ನಿರ್ವಹಿಸಲು ಖಾಸಗಿ ಕಂಪನಿಗೆ ಗುತ್ತಿಗೆ ನೀಡುತ್ತದೆ. ಕಿಯೋನಿಕ್ಸ್‌ ನೀಡುವ ಪ್ರತಿ ಹೊರಗುತ್ತಿಗೆಗೆ ಸೇವಾ ಶುಲ್ಕ ಹೆಸರಿನಲ್ಲಿ ಶೇ. 15ರಷ್ಟು ಪಡೆಯುತ್ತದೆ. ಇದರ ಪ್ರಕಾರ 5 ವರ್ಷಕ್ಕೆ 75 ಕೋಟಿ ರು. ಸೇವಾ ಶುಲ್ಕವನ್ನು ಕಿಯೋನಿಕ್ಸ್‌ ಸಂಗ್ರಹಿಸಿದರೆ, ಹೊರಗುತ್ತಿಗೆ ಕಂಪನಿಗೆ 5 ವರ್ಷಕ್ಕೆ 425 ಕೋಟಿ ರು.ಗಳು ಪಾವತಿ ಮಾಡಿದಂತಾಗುತ್ತದೆ.

 

‘ವಿಶ್ವವಿದ್ಯಾಲಯಗಳ ಅಧಿಕಾರಿ ನೌಕಕರೇ ವಿದ್ಯಾರ್ಥಿಗಳ ಎಲ್ಲಾ ದಾಖಲಾತಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡುತ್ತಾರೆ. ಹೀಗೆ ಅಪ್ಲೋಡ್‌ ಮಾಡಿದ ದಾಖಲೆಗಳನ್ನು ಹೊರಗುತ್ತಿಗೆ ಕಂಪನಿಯು ಸರ್ವರ್‌ನಲ್ಲಿ ಸಂಗ್ರಹಿಸುತ್ತದೆ. ಕೇವಲ ಸಂಗ್ರಹಿಸುವ ಕೆಲಸಕ್ಕೆ ಹೊರ ಗುತ್ತಿಗೆ ಕಂಪನಿಯು ಅನಾಯಸವಾಗಿ 5 ವರ್ಷಕ್ಕೆ 425 ಕೋಟಿ ರು.ಗಳನ್ನು ಪಡೆಯುತ್ತದೆ,’ ಎನ್ನುತ್ತಾರೆ ವಿಶ್ವವಿದ್ಯಾಲಯವೊಂದರ ಕುಲಸಚಿವರೊಬ್ಬರು.

Hot this week

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

ದೇಶದಲ್ಲಿ 5.64 ಕೋಟಿ, ರಾಜ್ಯದಲ್ಲಿ 23.21 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ; ನ್ಯಾಯಾಲಯಗಳಲ್ಲಿ ಕೆಲಸದ ಒತ್ತಡ, ನ್ಯಾಯದಾನವೂ ವಿಳಂಬ

ಬೆಂಗಳೂರು: ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 5.64 ಕೋಟಿಗೂ ಅಧಿಕ ಪ್ರಕರಣಗಳು...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...
Please Scan to make Your Contribution

Topics

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

Related Articles

Popular Categories

error: Content is protected !!