ಬೆಂಗಳೂರು; ಬ್ರಾಹ್ಮಣರಲ್ಲಿ ಪುರೋಹಿತರ್ಯಾರು, ಅಡುಗೆ ಭಟ್ಟರ್ಯಾರು, ಅರ್ಚಕರ್ಯಾರು ಎಂಬ ಬಗ್ಗೆ ಸಮೀಕ್ಷೆ ನಡೆಸದೆಯೇ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಮೈತ್ರೇಯಿ ಹೆಸರಿನಲ್ಲಿ ಯೋಜನೆಯನ್ನು ಪ್ರಸ್ತಾಪಿಸಿತ್ತು. ಅಲ್ಲದೆ ಇಂತಹ ಬ್ರಾಹ್ಮಣರನ್ನು ಗುರುತಿಸಲು ಯಾವುದೇ ಮಾನದಂಡಗಳನ್ನು ರೂಪಿಸದೆಯೇ ಮತ್ತು ತಹಶೀಲ್ದಾರ್‌ರ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲು ಸರ್ಕಾರದ ಹಂತದಲ್ಲಿ ಯಾವುದೇ ಪ್ರಕ್ರಿಯೆ ನಡೆಯದಿದ್ದರೂ ಮೈತ್ರೇಯಿ ಯೋಜನೆಯನ್ನು ಘೋಷಿಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.
ಹಾಗೆಯೇ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಹೆಸರಿನಲ್ಲಿರದ ಜಾಗದಲ್ಲಿ ಮತ್ತು ಖಾಸಗಿ ಸೊಸೈಟಿಗಳ ಕಟ್ಟಡ ನಿರ್ಮಾಣಗಳಿಗೆ ಅನುದಾನ ಮತ್ತು ಸಾಂದೀಪಿನಿ ಶಿಷ್ಯ ವೇತನ ಯೋಜನೆಯಡಿ ಅಧ್ಯಕ್ಷರ ವಿವೇಚನಾ ಕೋಟಾದಡಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರು ಮಾಡಲು ಕೋರಿ ಸಲ್ಲಿಸಿದ್ದ ಪ್ರಸ್ತಾವನೆ ಕುರಿತು ಆರ್ಥಿಕ ಇಲಾಖೆ ತಕರಾರು ಎತ್ತಿದೆ.
ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ಹೇಳಲಾಗಿರುವ ಅಡುಗೆ ಭಟ್ಟರು, ಅರ್ಚಕರನ್ನು ಮದುವೆಯಾಗಲು ಬ್ರಾಹ್ಮಣ ಕನ್ಯೆಯರು ವರಿಸಲು ಮುಂದೆ ಬರುತ್ತಿಲ್ಲ ಎಂಬ ಕಾರಣವನ್ನು ಮುಂದಿರಿಸಿದ್ದ ಮಂಡಳಿಯು ಮೈತ್ರೇಯಿ ಹೆಸರಿನಲ್ಲಿ ಯೋಜನೆಯನ್ನು ಪ್ರಸ್ತಾಪಿಸಿತ್ತು. ಇದನ್ನು ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೂ ಘೋಷಿಸಿದ್ದರು.
ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ, ದಾಖಲೆ ಮತ್ತು ಯಾವುದೇ ಮಾನದಂಡಗಳನ್ನು ರೂಪಿಸದಿದ್ದರೂ ಮಂಡಳಿಯು ಈ ಯೋಜನೆಯನ್ನು ಪ್ರಸ್ತಾಪಿಸಿತ್ತು ಎಂಬುದು ಅರ್ಥಿಕ ಇಲಾಖೆಯ ಪತ್ರವ್ಯವಹಾರಗಳು ಹೊರಗೆಡವಿದೆ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು (ಕಡತ ಸಂಖ್ಯೆ; FD/450/EXP/7/2021-EXP7-FINANCE DEPT SEC (Computer NO 521583) ‘ದಿ ಫೈಲ್’ ಗೆ ಲಭ್ಯವಾಗಿವೆ.
ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸಪ್ತಪದಿ ಯೋಜನೆ ಚಾಲ್ತಿಯಲ್ಲಿದ್ದರೂ ಇದರ ಪ್ರಯೋಜನ ಪಡೆಯದೇ ಅರುಂಧತಿ ಹೆಸರಿನಲ್ಲಿ ಯೋಜನೆಯನ್ನು ಮಂಡಳಿಯು ಜಾರಿಗೊಳಿಸಿತ್ತು ಎಂಬುದು ಆರ್ಥಿಕ ಇಲಾಖೆಯ ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಪ್ರಸ್ತಾಪಿಸಿದ್ದ ವಿವಿಧ ಯೋಜನೆಗಳ ಸಂಬಂಧ ಆರ್ಥಿಕ ಇಲಾಖೆಯು ಸಕಾರಣಗಳ ಸಮೇತ ಕೆಲ ಸ್ಪಷ್ಟನೆಗಳನ್ನು ಮಂಡಳಿಯಿಂದ ಕೋರಿತ್ತು. ಆದರೆ ಮಂಡಳಿಯು ಈ ಸಂಬಂಧ ನೀಡಿದ್ದ ಅಭಿಪ್ರಾಯಗಳು ಸಮಂಜಸವಾಗಿರಲಿಲ್ಲ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿತ್ತು ಎಂಬುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.
ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಅರ್ಚಕರು, ಅಡುಗೆಭಟ್ಟರನ್ನು ವರಿಸಲು ಯಾವುದೇ ಬ್ರಾಹ್ಮಣ ಭಟ್ಟರಿಗೆ ನಿರ್ದಿಷ್ಟ ಆರ್ಥಿಕ ಭದ್ರತೆ ಇಲ್ಲದಿರುವುದೇ ಆಗಿದೆ. ಇದರಿಮದಾಗಿ ಇವರಿಗೆ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗೆಯೇ ಮುಂದುವರೆದರೆ ಒಟ್ಟಾರೆ ಸಾಮಾಜಿಕ ವ್ಯವಸ್ಥೆಯ ಮೇಲೆ ಹಾಗೂ ಬ್ರಾಹ್ಮಣ ಪರಂಪರೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾಗಿದೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದಲ್ಲಿರುವ ಅರ್ಚಕರು ಹಾಗೂ ಅಡುಗೆ ಭಟ್ಟರನ್ನು ವರಿಸಲು ಬ್ರಾಹ್ಮಣ ಕನ್ಯೆಯರು ಬರುವಂತೆ ಮನಸ್ಥಿತಿಯನ್ನು ಬದಲಾಯಿಸುವ ಉದ್ದೇಶದ ಹೆಸರಿನಲ್ಲಿ ಮೈತ್ರೇಯಿ ಯೋಜನೆಯನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಪ್ರಸ್ತಾಪಿಸಿತ್ತು.
ಇದಕ್ಕೆ ಆರ್ಥಿಕ ಇಲಾಖೆಯು ತಕರಾರು ಎತ್ತಿದೆ. ”ಬ್ರಾಹ್ಮಣರಲ್ಲಿ ಯಾರು ಪುರೋಹಿತರು, ಯಾರು ಅಡುಗೆಭಟ್ಟರು, ಯಾರು ಅರ್ಚಕರು ಎಂಬ ಬಗ್ಗೆ ಸರ್ಕಾರದಿಂದ ಸರ್ವೆ ಮಾಡಿರುವುದಿಲ್ಲ. ಆದ್ದರಿಂದ ಇಂತಹ ಬ್ರಾಹ್ಮಣರನ್ನು ಗುರುತಿಸುವ ಮಾನದಂಡವೇನು? ತಹಶೀಲ್ದಾರ್‌ರ ಮೂಲಕ ಫಲಾನುಭವಿ ಆಯ್ಕೆ ಮಾಡಲು ಸರ್ಕಾರದ ಹಂತದಲ್ಲಿ ಇಲ್ಲಿಯವರೆಗೂ ಯಾವುದೇ ಪ್ರಕ್ರಿಯೆ ನಡೆದಿರುವುದಿಲ್ಲ. ಹಾಗೆಯೇ ಇಂತಹ ಯೋಜನೆಗಳು ಸರ್ಕಾರದ ಇತರೆ ಇಲಾಖೆಯಲ್ಲಿ, ಮಂಡಳಿ, ನಿಗಮಗಳಲ್ಲಿ ಜಾರಿಯಾದ ಬಗ್ಗೆ ಮಾಹಿತಿ ಇದ್ದಲ್ಲಿ ಅದರೊಂದಿಗೆ ಪರಿಶೀಲಿಸಬಹುದು,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅದೇ ರೀತಿ ಇತರೆ ಸಾಮಾಜಿಕ ಯೋಜನೆಗಳು, ಬ್ರಾಹ್ಮಣ ಸಮುದಾಯದ ಸಂಘ, ಟ್ರಸ್ಟ್‌ಗಳಿಂದ ನಿರ್ಮಿಸುವ ಅಪರಕರ್ಮ ಭವನ, ಸಮುದಾಯ ಭವನ, ಗಾಯತ್ರಿ ಭವನ, ಅನಾಥಾಲಯ, ವೃದ್ಧಾಶ್ರಮ ಇತ್ಯಾದಿಗಳಿಗೆ ಧನ ಸಹಾಯಕ್ಕೆ ಮಂಡಳಿಯು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಸಂಬಂಧ ಆರ್ಥಿಕ ಇಲಾಖೆಯು ‘ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಹೆಸರಿನಲ್ಲಿರದ ಜಾಗದಲ್ಲಿ ಇಂತಹ ಭವನಗಳನ್ನು ನಿರ್ಮಾಣ ಮಾಡಲು ಸಾಧ್ಯವೇ? ಮಂಡಳಿಯ ಅನುದಾನವನ್ನು ನೀಡಿದ್ದಲ್ಲಿ ಮಂಡಳಿಯ ಹೆಸರಿನಲ್ಲಿಯೇ ಆಸ್ತಿ ಸೃಜನೆ ಆಗಬೇಕಿರುತ್ತದೆ. ಇಂತಹ ಖಾಸಗಿ ಸೊಸೈಟಿಗೆ ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡಿದ್ದಲ್ಲಿ ಅಂತಹ ಕಟ್ಟಡಗಳನ್ನು ಮಂಡಳಿಯ ಹೆಸರಿನಲ್ಲಿ ನೋಂದಣಿ ಮಾಡಲು ಅವಕಾಶವಿರುವುದೇ? ಎಂಬ ಪ್ರಶ್ನೆಗಳಿಗೆ/ವಿಷಯಗಳಿಗೆ ಪ್ರಸ್ತಾವನೆಯಲ್ಲಿ ಸ್ಪಷ್ಟನೆಯೇ ಇರುವುದಿಲ್ಲ,’ ಎಂದು ಅಭಿಪ್ರಾಯಿಸಿತ್ತು.
ಬ್ರಾಹ್ಮಣ ಮಂಡಳಿಯು ನೀಡಿದ್ದ ಸ್ಪಷ್ಟೀಕರಣವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಮಂಡ ಳಿಯು ನೀಡಿರುವ ಅಭಿಪ್ರಾಯವು ಸಮಂಜಸವಾಗಿರುವುದು ಕಂಡು ಬರುತ್ತಿಲ್ಲ. ಅಲ್ಲದೆ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ (ಸಂಖ್ಯೆ ಆಇ 139 ವೆಚ್ಚ-7/2021 ದಿನಾಂಕ 26-04-2021) ಅನ್ವಯ ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಬಂಡವಾಳ ವೆಚ್ಚಗಳಿಗೆ ಮಾತ್ರ ಭರಿಸಬೇಕು ಎಂದು ತಿಳಿಸಿತ್ತು,’ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಮಂಡಳಿಯು ಆಸ್ತಿ ಸೃಜನೆ ಮಾಡಲು ಮಂಡಳಿ ಹೆಸರಿನಲ್ಲಿ ಯಾವುದೇ ನಿವೇಶನ, ಕಟ್ಟಡ ಇಲ್ಲದಿರುವುದರಿಂದ ಬಂಡವಾಳ ವೆಚ್ಚಗಳನ್ನು ಮಾಡಲು ಮಂಡಳಿಯಿಂದ ಯಾವುದೇ ಸ್ಪಷ್ಟ ಪ್ರಸ್ತಾವನೆಯು ಇಲ್ಲವಾದ್ದರಿಂದ ಈಗಾಗಲೇ ಆಡಳಿತ ಇಲಾಖೆಯು ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿ ಪ್ರಗತಿಯಲ್ಲಿರುವ ಯೋಜನೆಗಳಿಗೆ ಮಾತ್ರ 2021-22ನೇ ಸಾಲಿಗೆ ಸಹಮತಿ ನೀಡಬಹುದು ಎಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಸಾಂದೀಪನಿ ಶಿಷ್ಯ ವೇತನ ಯೋಜನೆಯಡಿ ಅಧ್ಯಕ್ಷರಿಗೆ ವಿವೇಚನಾ ಕೋಟಾ ನೀಡಿದ್ದಲ್ಲಿ ಪಾರದರ್ಶಕತೆ ಬರಲು ಸಾಧ್ಯವಿರುವುದಿಲ್ಲ ಹಾಗೂ ಶಿಷ್ಯ ವೇತನ ಯೋಜನೆಯನ್ನು ಎಸ್‌ಎಸ್‌ಪಿ ಮೂಲಕ ಜಾರಿಗೊಳಿಸಬೇಕಾಗಿರುತ್ತದೆ ಎಂದೂ ಅಭಿಪ್ರಾಯಿಸಿದೆ.
ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 2018-19, 2019-20 ಮತ್ತು 2020-21ನೇ ಸಾಲಿಗೆ ಬಿಡುಗಡೆಯಾದ ಅನುದಾನದಲ್ಲಿ ಮಂಡಳಿಯ ಬ್ಯಾಂಕ್ ಖಾತೆಯಲ್ಲಿ 2100.00 ಲಕ್ಷ ರು. ಲಭ್ಯವಿದೆ. ಇದಲ್ಲದೆ 2021-22ನೇ ಸಾಲಿಗೆ (ಲೆಕ್ಕ ಶೀರ್ಷಿಕೆ 2250-00-103-9-07-103) ಒಟ್ಟು 300.00 ಲಕ್ಷ ರು ಸೇರಿದಂತೆ ಒಟ್ಟು 2400.00 ಲಕ್ಷ ರು. ಅನುದಾನ ಲಭ್ಯವಿದೆ.
ಈಗಾಗಲೇ ಆಡಳಿತ ಇಲಾಖೆಯು ಅನುಮೋದನೆ ನೀಡಿರುವ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಚಾಣಕ್ಯ ಆಡಳಿತ ತರಬೇತಿ ಯೋಜನೆ, ದೇವತಾರ್ಚನೆ ಶಿಬಿರ, ಸಾಂದೀಪಿನಿ ಶಿಷ್ಯ ವೇತನ ಯೋಜನೆಗೆ 1341.00 ಲಕ್ಷ ರು. ಅವಶ್ಯಕತೆ ಇದೆ. ಅಲ್ಲದೆ ಹೊಸದಾಗಿ 13 ಯೋಜನೆಗಳ ಕ್ರಿಯಾಯೋಜನೆ ಅನುಮೋದನೆಗೆ ಕೋರಿರುವ ಕಾರ್ಯಕ್ರಮಗಳಿಗೆ 713.75 ಲಕ್ಷ ಅನುದಾನ ಅವಶ್ಯಕತೆ ಇದೆ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.