ಬೆಂಗಳೂರು; ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 12,228 ಕೋಟಿ ರು. ನಷ್ಟವಾಗಿದ್ದರ ಕುರಿತು ವರದಿ ನೀಡಿದ್ದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೆ ಗೃಹ ಪರಿಚಾರಿಕೆ ಭತ್ಯೆ ಹೆಚ್ಚಿಸುವ ಕಡತವನ್ನು ಆರ್ಥಿಕ ಇಲಾಖೆಯು ಕಳೆದ 60 ದಿನಗಳಿಂದಲೂ ವಿಲೇವಾರಿ ಮಾಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕಳೆದ 2 ವರ್ಷಗಳಿಂದಲೂ ಕಡತಗಳು ವಿಲೇವಾರಿಯಾಗದೇ ಬಾಕಿ ಇದೆ ಎಂಬ ಸಂಗತಿ ಹೊರಬಿದ್ದ ಬೆನ್ನಲ್ಲೇ ಸಂತೋಷ್ ಹೆಗ್ಡೆ ಅವರಿಗೆ ಗೃಹ ಪರಿಚಾರಿಕೆ ಭತ್ಯೆ ಹೆಚ್ಚಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಕಡತಗಳನ್ನು ಆರ್ಥಿಕ ಇಲಾಖೆಯು ವಿಲೇವಾರಿ ಮಾಡದೆಯೇ ತನ್ನ ಬಳಿ ಇರಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ಕಡತಗಳ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅವರಿಗೆ ಗೃಹ ಪರಿಚಾರಿಕೆ ಭತ್ಯೆ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಜಾಗೃತ ವಿಭಾಗವು (DPAR/89/SLU/2021-DPAR_VIGL-DPAR) ಕಡತವನ್ನು 2021ರ ನವೆಂಬರ್ 18ರಂದು ಆರ್ಥಿಕ ಇಲಾಖೆಗೆ ಕಳಿಸಿತ್ತು. ಆದರೆ ಆರ್ಥಿಕ ಇಲಾಖೆಯು ಕಳೆದ 60 ದಿನಗಳಿಂದಲೂ ತನ್ನ ಬಳಿಯೇ ಕಡತವನ್ನು ಇರಿಸಿಕೊಂಡಿದೆಯೆ ವಿನಃ ಆಡಳಿತ ಇಲಾಖೆಗೆ ಹಿಂದಿರುಗಿಸಿಲ್ಲ. ಈ ಕುರಿತು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್’ ಗೆ ಖಚಿತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಮಾನದಂಡಗಳ ರೀತಿಯಲ್ಲಿಯೇ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರಿಗೂ ಗೃಹ ಪರಿಚಾರಕ ಭತ್ಯೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಗೃಹ ಪರಿಚಾರಿಕೆ ಭತ್ಯೆಯನ್ನು ಮಾಸಿಕ 25,000 ರು. ಗಳಿಂದ 70,000 ರು.ಗಳಿಗೆ ಮಾನದಂಡಗಳ ಪ್ರಕಾರ ಪರಿಷ್ಕರಿಸಿ ಕಡತವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದೆ. ಆರ್ಥಿಕ ಇಲಾಖೆಗೆ ಕಡತ ಸಲ್ಲಿಕೆಯಾಗಿ 60 ದಿನಗಳಾದರೂ ಕಡತವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಜಾಗೃತ ವಿಭಾಗ)ಗೆ ಹಿಂದಿರುಗಿಸಿಲ್ಲ ಎಂದು ತಿಳಿದು ಬಂದಿದೆ.
ಅದೇ ರೀತಿ ಬಿಬಿಎಂಪಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕಾರ್ಯನಿರ್ವಹಿಸುತ್ತಿರುವ ನೌಕರರುಗಳು ಸೇವೆಯಲ್ಲಿದ್ದಾಗ ಮರಣ/ನಿವೃತ್ತಿ ಹೊಂದಿರುವ ನೌಕರರಿಗೆ ಪರಿಹಾರ ಧನ ನೀಡುವ ಕುರಿತಾದ ಕಡತವು (FD/435/EXP9/2021/EXP9-FINANCE DEPT SEC) (UDD/97/BBL/2021-BBMP2-URBAN DEVELOPMENT DEPARTMENT) 2021ರ ಆಗಸ್ಟ್ 6ರಂದೇ ಆರ್ಥಿಕ ಇಲಾಖೆಯು ಸ್ವೀಕರಿಸಿದೆ. ಆದರೆ 136 ದಿನಗಳಿಂದಲೂ ಕಡತವು ಆರ್ಥಿಕ ಇಲಾಖೆಯಲ್ಲಿಯೇ ಕೊಳೆಯುತ್ತಿದೆ. ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದ ಅಧೀನ ಕಾರ್ಯದರ್ಶಿ (ತಾಂತ್ರಿಕ) ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯನ್ನು ಪೂರಕ ಹುದ್ದೆಗಳೊಂದಿಗೆ ಖಾಯಂಗೊಳಿಸುವ ಬಗೆಗಿನ ಕಡತವು ಆರ್ಥಿಕ ಇಲಾಖೆಯಲ್ಲಿ 139 ದಿನಗಳಿಂದಲೂ ಇದ್ದಲ್ಲೇ ಇರುವುದು ತಿಳಿದು ಬಂದಿದೆ.
ಇನ್ನು ಕೋವಿಡ್ 19ರ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಸಿಬ್ಬಂದಿಯವರಿಗೆ 2ನೇ ಬಾರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಸಂಬಂಧದ ಕಡತವು (TD/25/TCS/2021-SEC 1-TRANS, FD/215/EX11/2021-EXP 11/FINANCE DEPT SEC) ಕಳೆದ 180 ದಿನಗಳಿಂದಲೂ ಆರ್ಥಿಕ ಇಲಾಖೆಯಲ್ಲಿಯೇ ತೆವಳುತ್ತಿದೆ. ಕರ್ನಾಟಕ ರಾಜ್ಯ ಮಾನವಹಕ್ಕುಗಳ ಆಯೋಗಕ್ಕೆ ವೈದ್ಯಕೀಯ ಕ್ಷೇತ್ರದ ಪರಿಣಿತರ ಸೇವೆಯನ್ನು ಪಡೆಯಲು ಮಂಜೂರಾತಿ ಕೋರಿ ಕಾನೂನು ಇಲಾಖೆಯು (LAW-HRC/42/2020-HR-LAW SEC) ಕಡತವನ್ನು 145 ದಿನಗಳಿಂದಲೂ ಆರ್ಥಿಕ ಇಲಾಖೆಯು ತನ್ನ ಬಳಿಯೇ ಇರಿಸಿಕೊಂಡಿದೆ.
ಯುಜಿಸಿ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ತುಮಕೂರು ವಿಶ್ವವಿದ್ಯಾಲಯದ ಬೋಧಕ ಹಾಗೂ ತತ್ಸಮಾನ ವೃಂದದ ಸಿಬ್ಬಂದಿಗೆ ಗಳಿಕೆ ರಜೆ ನಗದೀಕರಣ ಮಾಡುವ ಕುರಿತಾದ ಕಡತವು (FD/147/EXP8/2019-EXP8-FINANCE DEPT SEC) 110 ದಿನಗಳಾದರೂ ವಿಲೇವಾರಿಯಾಗಿಲ್ಲ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ) ಸರ್ಕಾರದ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಅವರು 2021ರ ಡಿಸೆಂಬರ್ 17ರಂದು ಮತ್ತೊಂದು ಸುತ್ತೋಲೆ ಹೊರಡಿಸಿದ್ದಾರೆ. ‘ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕಳೆದ 2 ವರ್ಷಗಳಿಂದಲೂ ಕಡತಗಳು ವಿಲೇವಾರಿಗೆ ಬಾಕಿ ಇದೆ. ಇದನ್ನು ಮುಖ್ಯಮಂತ್ರಿಯವರು ಗಮನಿಸಿದ್ದಾರೆ,’ ಎಂಬ ಸಂಗತಿಯು ಮುನೀಶ್ ಮೌದ್ಗಿಲ್ ಅವರು ಇತ್ತೀಚೆಗಷ್ಟೇ ಸುತ್ತೋಲೆಯನ್ನು ಹೊರಡಿಸಿದ್ದರು. ಕಡತ ವಿಲೇವಾರಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅಧಿಕಾರಿಗಳಿಗೆ ಗಡುವು ನೀಡಿದ್ದನ್ನು ಸ್ಮರಿಸಬಹುದು.