ಪದ್ಮಾವತಿ ಕೊಲೆ ಪ್ರಕರಣ; ಸಿಬಿಐಗೆ ವಹಿಸುವ ಕುರಿತು ಮಾಹಿತಿ ಕೋರಿ ಡಿಜಿಪಿಗೆ ಪತ್ರ ಬರೆದ ಗೃಹ ಇಲಾಖೆ

ಬೆಂಗಳೂರು; ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್‌ ಅವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಕುರಿತು ಮಾಹಿತಿ ನೀಡಬೇಕು ಎಂದು ಸರ್ಕಾರವು ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.

 

ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟ, ರಾಜ್ಯ ಸರ್ಕಾರಕ್ಕೆ ರಾಜಧನ ನಷ್ಟ ಮತ್ತು ಇತರೆ ತೆರಿಗೆಗಳ ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿರುವ ಬೆನ್ನಲ್ಲೇ ಪದ್ಮಾವತಿ ಯಾದವ್‌ ಕೊಲೆ ಪ್ರಕರಣವನ್ನು  ಸಿಬಿಐ ತನಿಖೆಗೆ ವಹಿಸುವ ಸಂಬಂಧ ಗೃಹ ಇಲಾಖೆಯು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಸಿಬಿಐ ತನಿಖೆಗೆ ವಹಿಸುವ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪೊಲೀಸ್‌ ಮಹಾನಿರ್ದೇಶಕರಿಗೆ ಮಾಹಿತಿ ಕೋರಿ ಪತ್ರ (ಸಂಖ್ಯೆ ಒಇ; 29 ಪಿಸಿಬಿ 2021) ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ ಗೆ ಲಭ್ಯವಾಗಿದೆ.

 

‘ಬಳ್ಳಾರಿ ನಗರಸಭೆ ಸದಸ್ಯರಾಗಿದ್ದ ಜಿ ಪದ್ಮಾವತಿ ಯಾದವ್‌ ಇವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಪತ್ರವನ್ನು (ಪತ್ರ ಸಂಖ್ಯೆ; ಅಪರಾಧ-5/09/ಕಲಬುರಗಿ/2021,ದಿನಾಂಕ 12-07-2021) ಪರಿಶೀಲಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್‌ ಪಿಟಿಷನ್‌ ಸಂಖ್ಯೆ 104087/2018ರಲ್ಲಿ ನಮೂದಿಸಲಾದ ಫಿರ್ಯಾದಿಯ ಮನವಿ ಪತ್ರ, ಇದೇ ರಿಟ್‌ ಅರ್ಜಿಯಲ್ಲಿ ನೀಡಲಾದ ಅಂತಿಮ ಆದೇಶ, ಉಚ್ಚ ನ್ಯಾಯಾಲಯದ ಅಂತಿಮ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರೆ ಅದರ ಮಾಹಿತಿ,’ ನೀಡಬೇಕು ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶಿಸಿದ್ದಾರೆ.

 

ಒಳಾಡಳಿತ ಇಲಾಖೆ ಬರೆದಿರುವ ಪತ್ರ

 

ಪ್ರಕರಣದ ಹಿನ್ನೆಲೆ

 

ಬಳ್ಳಾರಿ ನಗರದ ಎಂಎಂಟಿಸಿ ಕಾಲೊನಿಯಲ್ಲಿ 2010, ಫೆ.4ರಂದು ರಾತ್ರಿ 8.45ರ ಸುಮಾರಿಗೆ ಮಹಾನಗರ ಪಾಲಿಕೆ ಸದಸ್ಯೆ, ಬಿಜೆಪಿ ಮುಖಂಡರಾಗಿದ್ದ ಪದ್ಮಾವತಿ ಯಾದವ್ ಅವರನ್ನು ಅಪರಿಚಿತ ನಾಲ್ವರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆಮಾಡಿ ಪರಾರಿಯಾಗಿದ್ದರು. ಸಾವು ನೋವಿನ ಮಧ್ಯೆ ಒದ್ದಾಡುತ್ತಿದ್ದ ಪದ್ಮಾವತಿ ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಅಸುನೀಗಿದ್ದರು. ಈ ಕುರಿತು ಅವರ ಸೋದರ ಸುಬ್ಬರಾಯುಡು ಅವರು ದೂರು ನೀಡಿದ್ದರು.

 

ಈ ಪ್ರಕರಣವನ್ನು ಸರ್ಕಾರವು 2010, ಫೆ.5ರಂದು ಸಿಐಡಿ ತನಿಖೆಗೆ ಒಪ್ಪಿಸಿತ್ತು. ತನಿಖೆ ನಡೆದು ಐದು ವರ್ಷಗಳಾದರೂ ಸಿಐಡಿಯವರು, ನ್ಯಾಯಾಲಯಕ್ಕೆ ವರದಿ ನೀಡಿರಲಿಲ್ಲ. ಸಿಐಡಿಗೆ ವರದಿ ಸಲ್ಲಿಸಲು ಸೂಚಿಸುವಂತೆ ಪ್ರಕರಣದ ದೂರುದಾರ, ಪದ್ಮಾವತಿ ಅವರ ಸೋದರ ಸುಬ್ಬರಾಯುಡು ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

 

ರಾಜಕೀಯ ಪ್ರಭಾವಗಳಿಂದ ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ತಮ್ಮ ಹೇಳಿಕೆಯನ್ನು ಪಡೆದಿಲ್ಲ. ಪ್ರಕರಣದ ಕುರಿತು ತನಿಖೆ ಪೂರ್ಣಗೊಳಿಸಲ್ಲ” ಎಂದು ದೂರುದಾರ ಸುಬ್ಬರಾಯುಡು ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ತಕ್ಷಣ ತನಿಖಾ ವರದಿ ಸಲ್ಲಿಸಬೇಕು ಎಂದು 2015, ಡಿಸೆಂಬರ್‌ 12ರಂದು ಸಿಐಡಿಗೆ ನ್ಯಾಯಾಲಯ ಸೂಚಿಸಿತ್ತು. ಈ ಸೂಚನೆ ಆಧರಿಸಿ, ಬಳ್ಳಾರಿ ನ್ಯಾಯಾಲಯಕ್ಕೆ ಸಿಐಡಿಯವರು 2016, ಸೆ.21 ರಂದು ಆರೋಪಿಗಳು ಸಿಕ್ಕಿಲ್ಲವೆಂದು ಸಿ ರಿಪೋರ್ಟ್‌ ಸಲ್ಲಿಸಿದ್ದರು.

 

”ಸಿಐಡಿಯವರ ವರದಿ ಸಮಂಜಸವಾಗಿಲ್ಲ. ಸಿಐಡಿ, ಸಿ ರಿಪೋರ್ಟ್‌ ಸಲ್ಲಿಕೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಪ್ರಕರಣದ ಮರು ತನಿಖೆ ನಡೆಸಬೇಕು” ಎಂದು ಸುಬ್ಬರಾಯುಡು ಅವರು, ಬಳ್ಳಾರಿ ಪ್ರಿನ್ಸಿಪಾಲ್‌ ಸಿವಿಲ್‌ ಜಡ್ಜ್‌ ಜೂನಿಯರ್‌ ಡಿವಿಜನ್‌ ನ್ಯಾಯಾಲಯಕ್ಕೆ 2017 ಮೇನಲ್ಲಿ ಅವರು ಅರ್ಜಿ ಸಲ್ಲಿಸಿದ್ದರು.

 

ಅರ್ಜಿಯ ವಿಚಾರಣೆ ಕೈಗೊತ್ತಿಕೊಂಡ ನ್ಯಾಯಾಲಯವು, ಸಿಬಿಐ ತನಿಖೆಗೆ ನೀಡುವ ಅಧಿಕಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿತ್ತು. ಆದರೆ, ಪ್ರಕರಣವನ್ನು ಸಿಐಡಿ ಮರುವಿಚಾರಣೆಗೆ ನ್ಯಾಯಾಧೀಶರು ಆದೇಶಿಸಿದ್ದರು.

 

ಪದ್ಮಾವತಿ ಯಾದವ್ ಕೊಲೆ ಪ್ರಕರಣದಲ್ಲಿ ಜನಾರ್ದನರೆಡ್ಡಿ ಹೆಸರು ತಳಕು ಹಾಕಿಕೊಂಡಿತ್ತು. ಕೊಲೆ ಪ್ರಕರಣದಲ್ಲಿ ರೆಡ್ಡಿ ಕೈವಾಡವಿದೆ. ಸಾಕ್ಷಿ ತಿದ್ದುಪಡಿ ಮಾಡಿರುವ ಅನುಮಾನವಿದೆ. ಅಂದಿನ ಕೆಲ ಪೊಲೀಸ್ ಅಧಿಕಾರಿಗಳು ಕೂಡ ಕೊಲೆ ಪ್ರಕರಣ ಸಿ ರಿಪೋರ್ಟ್ ಹಾಕಲು ಕುಮ್ಮಕ್ಕು ನೀಡಿದ್ದಾರೆ. ಅಂದಿನ ಡಿಜಿ ಶಂಕರ್ ಬಿದರಿ ಮತ್ತು ತಂಡ ಸಿ ರಿಪೋರ್ಟ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂ  ಆರೋಪಗಳು ಕೇಳಿ ಬಂದಿದ್ದವು.

the fil favicon

SUPPORT THE FILE

Latest News

Related Posts