ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭಾರತ ಸರ್ಕಾರವು 2021-22ನೇ ಸಾಲಿನಲ್ಲಿ ಗಳನ್ನು ಬಾಕಿ ಉಳಿಸಿಕೊಂಡಿರುವ ಒಟ್ಟಾರೆ 2,194 ಕೋಟಿ ರು. ಮತ್ತು ಹಿಂದಿನ ವರ್ಷಗಳಲ್ಲಿ ಬಾಕಿ 1,600 ಕೋಟಿ ಸೇರಿದಂತೆ ಒಟ್ಟು 3,794 ಕೋಟಿಗಳ ಬಿಡುಗಡೆಗೆ ಶ್ರಮಿಸಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ಎಕರೆಗೆ ಗರಿಷ್ಠ 10 ಕ್ವಿಂಟಾಲ್ ರಾಗಿ, ಪ್ರತಿ ರೈತನಿಂದ 20 ಕ್ವಿಂಟಾಲ್ ರಾಗಿ ಖರೀದಿಗೆ ಮಿತಿ ನಿಗದಿಗೊಳಿಸಿದೆ. ಅದೇ ರೀತಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿಯೇ 2 ಲಕ್ಷ ಟನ್ ಜೋಳ ಮತ್ತು 5 ಲಕ್ಷ ಟನ್ ಅಕ್ಕಿ ಖರೀದಿಸುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ.
ರಾಗಿ, ಜೋಳ ಮತ್ತು ಅಕ್ಕಿ ಖರೀದಿ ಸಂಬಂಧ ಆಹಾರ ನಾಗರಿಕ ಸರಬರಾಜು ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ರಾಗಿ, ಜೋಳ, ಅಕ್ಕಿ ಖರೀದಿಗೆ ಹೇರಿರುವ ಮಿತಿಯನ್ನು ದಾಟದಂತೆ ಸೂಚನೆ ನೀಡಿದೆ. 2021ರ ಡಿಸೆಂಬರ್ 1ರ ಅಂತ್ಯಕ್ಕೆ ಕೆಎಫ್‌ಸಿಎಸ್‌ಸಿಯಲ್ಲಿ 331.00 ಕೋಟಿ ರು. ಮಾತ್ರ ಲಭ್ಯವಿದೆ. ಈ ಹಣವನ್ನು ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿನ ಕಾರ್ಯಾಚರಣೆಗೆ ಬಳಸಿಕೊಳ್ಳಬೇಕು ಎಂದು ಸೂಚಿಸಿದೆ. ಈ ಸಂಬಂಧ ಸಚಿವ ಉಮೇಶ್ ಕತ್ತಿ ಅವರು ಇದುವರೆಗೂ ಸಭೆ ನಡೆಸಿಲ್ಲ ಎಂದು ಗೊತ್ತಾಗಿದೆ.
ಈ ಸಂಬಂಧ 2021ರ ಡಿಸೆಂಬರ್ 10ರಂದು ಆರ್ಥಿಕ ಇಲಾಖೆಯು ಆಹಾರ ನಾಗರಿಕ ಸರಬರಾಜು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ಟಿಪ್ಪಣಿ ಕಳಿಸಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅನುಮೋದಿಸಿದ್ದಾರೆ. ಟಿಪ್ಪಣಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈಗಾಗಲೇ ಪ್ರತಿ ಪಡಿತರ ಚೀಟಿದಾರನಿಗೆ ತಲಾ 2 ಕೆ ಜಿ ಗೋಧಿ ನೀಡಲಾಗುತ್ತಿದೆಯಾದರೂ ಮುಂದಿನ ಆರ್ಥಿಕ ವರ್ಷದಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲು ಸೂಚಸಿರುವ ಆರ್ಥಿಕ ಇಲಾಖೆಯು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಮುಂದಿನ ಅರ್ಥಿಕ ವರ್ಷದಿಂದ 5 ಕೆ ಜಿ ಅಕ್ಕಿ ಜತೆಗೆ 1 ಕೆ ಜಿ ರಾಗಿ ಅಥವಾ ಜೋಳವನ್ನು ಪ್ರತಿ ತಿಂಗಳು ವಿತರಿಸಬೇಕು ಎಂದು ಹೇಳಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘2021-22ನೇ ಸಾಲಿನ ಅಂತ್ಯಕ್ಕೆ 2,194 ಕೋಟಿ ರು. ಬಾಕಿಯನ್ನು ಭಾರತ ಸರ್ಕಾರವು ಉಳಿಸಿಕೊಂಡಿದೆ. ಹಿಂದಿನ ವರ್ಷಗಳಲ್ಲಿ 1,600 ಕೋಟಿ ರು. ಬಾಕಿ ಇದೆ. ಹೀಗಾಗಿ ಬಾಕಿ ಉಳಿಸಿಕೊಂಡಿರುವ ಅನುದಾನವನ್ನು ಬಿಡುಗಡೆ ಮಾಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಅದೇ ರೀತಿ ಕೆಎಫ್‌ಸಿಎಸ್‌ಸಿಯಲ್ಲಿರುವ ಲಭ್ಯವಿರುವ 331.00 ಕೋಟಿ ರು.ಗಳನ್ನು ಮೊದಲು ಬಳಸಿಕೊಳ್ಳಬೇಕು’ ಎಂದು ಸೂಚಿಸಿದೆ.
ಕೃಷಿ ಮಾರಾಟ ಇಲಾಖೆಯೂ ಸೇರಿದಂತೆ ಸಹಕಾರ ಇಲಾಖೆಯಡಿ ಬರುವ ವಿವಿಧ ಸ್ವ ಸಹಾಯ ಸಂಘಗಳು, ಸಹಕಾರ ಬ್ಯಾಂಕ್‌ಗಳು, ಬೆಂಬಲ ಬೆಲೆ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ 2021ರ ಅಕ್ಟೋಬರ್ 21ರ ಅಂತ್ಯಕ್ಕೆ 2,500 ಕೋಟಿ ರು.ಗಳು ಆವರ್ತ ನಿಧಿಗೆ ಬಾಕಿ ಬರಬೇಕಿತ್ತು. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಅಕ್ಟೋಬರ್ ಅಂತ್ಯಕ್ಕೆ ಆವರ್ತ ನಿಧಿಯಡಿ ಕೇವಲ 189 ಕೋಟಿಯಷ್ಟು ಮಾತ್ರ ಇತ್ತು ಎಂದು ತಿಳಿದು ಬಂದಿದೆ.
2021ರ ಅಕ್ಟೋಬರ್ 21ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಆವರ್ತ ನಿಧಿಗೆ 2,500 ಕೋಟಿ ರು. ಬಾಕಿ ಬರಬೇಕಿದೆ ಎಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರೇ ತಿಳಿಸಿದ್ದರು.
ರೈತರ ಉತ್ಪನ್ನ ಖರೀದಿಗಾಗಿಯೇ ಇಟ್ಟಿದ್ದ ಆವರ್ತ ನಿಧಿ ಎಲ್ಲಿ ಹೋಯಿತು? ಅದನ್ನು ಯಾತಕ್ಕೆ ಬಳಕೆ ಮಾಡಲಾಯಿತು ಎಂದು ಇತ್ತೀಚೆಗಷ್ಟೇ ರೈತ ಸಂಘದ ಮುಖಂಡರು ಪ್ರಶ್ನೆ ಮಾಡಿದ್ದರು. ರೈತರು ಬೆಳೆದಿರುವ ಉತ್ಪನ್ನ ಖರೀದಿ ಮಾಡದಿದ್ದರೆ ಹೇಗೆ? ಈಗಾಗಲೇ ರೈತರು ತಮ್ಮ ಉತ್ಪನ್ನಗಳನ್ನು ಅಗ್ಗದ ದರಕ್ಕೆ ಮಾರಿದ್ದಾರೆ. ಬೆಂಬಲ ಬೆಲೆ ಕೇಂದ್ರ ತೆರೆಯದಿದ್ದರೂ ಪರವಾಗಿಲ್ಲ, ರೈತರ ಖಾತೆಗೆ ನೇರವಾಗಿ ಹಣವನ್ನಾದರೂ ಜಮಾ ಮಾಡಿ ಎಂದು ಒತ್ತಾಯಿಸಿದ್ದರು.
ಸೂರ್ಯಕಾಂತಿ ಹಾಗೂ ಶೇಂಗಾ ಎಣ್ಣೆಕಾಳುಗಳ ಬೆಲೆ ಕುಸಿತಕ್ಕೊಳಾಗಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಬೇಕು ಎಂದು 2021ರ ಸೆಪ್ಟಂಬರ್ 18ರಂದು ಕರ್ನಾಟಕ ಕೃಷಿ ಬೆಲೆ ಆಯೋಗವು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.
ಇನ್ನು, ಕಾಯಕ ಯೋಜನೆಯನ್ನು ಸ್ವಸಹಾಯ ಗುಂಪುಗಳ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ. ಬಡವರ ಬಂಧು ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅಂತ್ಯಗೊಳಿಸಲಾಗಿದೆ. ಹೀಗಾಗಿ ಹಳೇ ಬಿಲ್ಲುಗಳಿಗೆ ಮಾತ್ರ ಅನುದಾನವನ್ನು ಬಡವರ ಬಂಧು ಯೋಜನೆಯಡಿ ಬಿಡುಗಡೆ ಮಾಡುತ್ತಿರುವುದು ನಡವಳಿಯಿಂದ ಗೊತ್ತಾಗಿದೆ.