ಬಡ ರೋಗಿಗಳಿಗೆ ಕಳಪೆ ಔಷಧ; ಅಪರಾಧವೆಸಗಿದ ಅಧಿಕಾರಿಗಳ ವಿರುದ್ಧ 4 ವರ್ಷಗಳಾದರೂ ಕ್ರಮವಿಲ್ಲ

ಬೆಂಗಳೂರು; ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗುವ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಔಷಧ ಒದಗಿಸಬೇಕಿದ್ದ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಕಳಪೆ ಔಷಧಗಳನ್ನು ಸರ್ಕಾರಿ ಆಸ್ಪತ್ರೆಗಳ ಮುಖಾಂತರ ವಿತರಿಸಿರುವುದು ಅಕ್ಷ್ಯಮ್ಯ ಅಪರಾಧ ಎಸಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಅಭಿಪ್ರಾಯ ಪಟ್ಟಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಿಎಜಿ ಮಂಡಿಸಿದ್ದ ವರದಿಯಲ್ಲಿನ ಆಕ್ಷೇಪಣೆ ಕಂಡಿಕೆಗಳ ಕುರಿತು ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಈ ಎರಡೂ ಇಲಾಖೆಗಳ ನಿರ್ಲಕ್ಷ್ಯವನ್ನು ತೆರೆದಿಡಲಾಗಿದೆ.

ಸಿಎಜಿ ವರದಿ ಮಂಡಿಸಿದ ನಂತರ ಅಧಿಕಾರಕ್ಕೇರಿದ್ದ ಮೈತ್ರಿ ಸರ್ಕಾರದ ಅವಧಿಯಲ್ಲಿ ಶಿವಾನಂದ ಎಸ್‌ ಪಾಟೀಲ್‌, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ ಶ್ರೀರಾಮುಲು ಸಚಿವರಾಗಿದ್ದಾರೆ. ಸದ್ಯ ಕೆ ಸುಧಾಕರ್‌ ಅವರು ಈ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ ಗುಣಮಟ್ಟವಲ್ಲದ ಔಷಧಗಳನ್ನು ಸರಬರಾಜು ಮಾಡಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ. ಅಲ್ಲದೆ ಇಂತಹ ಸಂಸ್ಥೆಗಳಿಂದ ಪೂರ್ಣ ಮೊತ್ತವನ್ನು ಇಲಾಖೆಯು ಇದುವರೆಗೂ ವಸೂಲು ಮಾಡಿಲ್ಲ. ಇದು ಇವರ ನಿರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

2014-15ರಿಂದ 2016-17ರ ಅವಧಿಯಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಮೂಲಕ ಬಡ ರೋಗಿಗಳಿಗೆ ಕಳಪೆ ಗುಣಮಟ್ಟದ ಔಷಧ ವಿತರಣೆಯಾಗಿತ್ತು. ಈ ಅವಧಿಯಲ್ಲಿ ಯು ಟಿ ಖಾದರ್‌ ಮತ್ತು ರಮೇಶ್‌ಕುಮಾರ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಐಎಎಸ್‌ ಅಧಿಕಾರಿ ಮದನಗೋಪಾಲ್‌, ಶಿವಶೈಲಂ, ಅತುಲ್‌ ಕುಮಾರ್ ತಿವಾರಿ, ಶಾಲಿನಿ ರಜನೀಶ್‌, ಅಜಯ್‌ ಸೇಠ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈ ಪೈಕಿ ಮದನಗೋಪಾಲ್‌ ಮತ್ತು ಶಿವಶೈಲಂ ಸೇವೆಯಿಂದ ನಿವೃತ್ತರಾಗಿದ್ದಾರೆ.

ಅತುಲ್‌ ಕುಮಾರ್‌ ತಿವಾರಿ ಅವರು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಹಾಗೆಯೇ ಅಜಯ್‌ ಸೇಠ್‌ ಅವರು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿನ ಉನ್ನತ ಹುದ್ದೆಯಲ್ಲಿದ್ದಾರೆ. ಶಾಲಿನಿ ರಜನೀಶ್‌ ಯೋಜನಾ ಇಲಾಖೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿದ್ದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ರಮೇಶ್‌ಕುಮಾರ್‌ ಕೂಡ ಸದಸ್ಯರಾಗಿದ್ದರು ಎಂಬುದು ವಿಶೇಷ.

ಕಳಪೆ ಗುಣಮಟ್ಟದ ಔಷಧಗಳನ್ನು ಸಾರ್ವಜನಿಕ ಆಸ್ಪತ್ರೆಗಳ ಮೂಲಕ ಬಡ ರೋಗಿಗಳಿಗೆ ವಿತರಿಸಿ ಗಂಭೀರ ಲೋಪ ದೋಷಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

2014-15ರಿಂದ 2016-17ರ ಅವಧಿಯಲ್ಲಿ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್ಸ್‌ ಸೊಸೈಟಿಯು 6,776 ಔಷಧಗಳ ಬ್ಯಾಚ್‌ಗಳಲ್ಲಿ 1.23 ಕೋಟಿ ಮೌಲ್ಯದ 27 ಬ್ಯಾಚ್‌ಗಳ ಔಷಧಗಳ ಬ್ಯಾಚ್‌ಗಳು ಉತ್ತಮ ಗುಣಮಟ್ಟದಿಂದ ಕೂಡಿರಲಿಲ್ಲ ಎಂದು ಘೋಷಿಸಿತ್ತು. ಅದೇ ಅವಧಿಯಲ್ಲಿ ರಾಜ್ಯ ಔಷಧ ನಿಯಂತ್ರಕರು ಕೂಡ 4.08 ಕೋಟಿ ಮೊತ್ತದ 77 ಬ್ಯಾಚ್‌ಗಳ ಔಷಧಗಳು ಉತ್ತಮ ಗುಣಮಟ್ಟದ್ದಾಗಿರಲಿಲ್ಲ ಎಂದು ಘೋಷಿಸಿದ್ದರು. ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಸೊಸೈಟಿ ಮತ್ತು ಔಷಧ ನಿಯಂತ್ರಕರ ನಡುವೆ ಸಮನ್ವಯ ಕೊರತೆ ಇದ್ದದ್ದೇ ಇದಕ್ಕೆ ಕಾರಣ ಎಂದಿರುವ ಸಮಿತಿಯು ಉತ್ತಮ ಗುಣಮಟ್ಟವಲ್ಲದ ಔಷಧಗಳನ್ನು ಖರೀದಿಸಿದ್ದನ್ನು ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ ಗುಣಮಟ್ಟದ್ದಲ್ಲದ ಔಷಧ ಎಂದು ಘೋಷಿತವಾಗಿದ್ದ ಔ‍ಷಧಗಳನ್ನು ರೋಗಿಗಳಿಗೆ ನೀಡುವುದನ್ನು ತಪ್ಪಿಸಬಹುದಾಗಿತ್ತು. ಹಾಗೆಯೇ ಈ ಸಂಬಂಧದ ಮಾಹಿತಿಯನ್ನು ಎಲ್ಲಾ ಆಸ್ಪತ್ರೆಗಳಿಗೆ ಹಾಗೂ ಔಷಧ ಮಳಿಗೆಗಳಿಗೆ ತಿಳಿಸಬೇಕಿತ್ತು. ಆದರೆ 50 ಪ್ರಕರಣಗಳಲ್ಲಿ ಔಷಧ ಮಳಿಗೆಗಳಿಗೆ ಮತ್ತು ಆಸ್ಪತ್ರೆಗಳಿಗೆ ತಿಳಿಸುವಲ್ಲಿ ಸೊಸೈಟಿಯು 8 ದಿನದಿಂದ 100ಕ್ಕೂ ಹೆಚ್ಚೂ ದಿನಗಳ ವಿಳಂಬ ಮಾಡಿತ್ತು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ವರದಿಯಲ್ಲಿ ವಿವರಿಸಲಾಗಿದೆ.
‘ಉತ್ತಮ ಗುಣಮಟ್ಟದ್ದಲ್ಲದ ಔಷಧಗಳನ್ನು ಸೇವಿಸಿದ ರೋಗಿಗಳ ಮೇಲೆ ದುಷ್ಪರಿಣಾಮವಾಗಿದೆ ಎಂಬ ಯಾವುದೇ ವರದಿಯು ಸ್ವೀಕೃತವಾಗಿಲ್ಲ,’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡಿದ್ದ ಬೇಜವಾಬ್ದಾರಿ ಉತ್ತರ ಮತ್ತು ಮಾಡಿದ್ದ ವಾದವನ್ನು ಸಮಿತಿಯು ತಿರಸ್ಕರಿಸಿರುವುದು ವರದಿಯಿಂದ ತಿಳಿದು ಬಂದಿದೆ.

‘ಸಾರ್ವಜನಿಕರ ಆರೋಗ್ಯ, ಬದುಕು ಮತ್ತು ಜೀವಗಳ ಮೇಲೆ ಅಧಿಕಾರಿಗಳಿಗೆ ಇರುವಂತಹ ದುರಹಂಕಾರಪೂರಿತ ಅಲ್ಷ್ಯ ಮನೋಭಾವ ಸಾಬೀತಾಗಿರುವುದರಿಂದ ಗುಣಮಟ್ಟವಿಲ್ಲದ ಔಷಧಗಳನ್ನು ಆಸ್ಪತ್ರೆಗಳಿಗೆ ಹಂಚಿಕೆ ಮಾಡಿ ಅವುಗಳನ್ನು ಬಡ ರೋಗಿಗಳಿಗೆ ನೀಡಲು ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಇನ್ನು ಗುಣಮಟ್ಟವಲ್ಲದ ಔಷಧಗಳನ್ನು ಸರಬರಾಜು ಮಾಡಿದ್ದ ಸಂಸ್ಥೆಗಳಿಂದ ಪೂರ್ಣ ಮೊತ್ತವನ್ನು ಇಲಾಖೆಯು ಇದುವರೆಗೂ ವಸೂಲು ಮಾಡಿಲ್ಲ. ‘ಸೊಸೈಟಿ ಬಳಿ ಲಭ್ಯವಿದ್ದ ಸರಬರಾಜುದಾರರ ಭದ್ರತಾ ಠೇವಣಿಯನ್ನು ಭಾಗಶಃವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಈ ಕೂಡಲೇ ಸಂಪೂರ್ಣ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಆ ಕುರಿತು ಮಾಹಿತಿಯನ್ನು ಒದಗಿಸಬೇಕು,’ ಎಂದು ಸಮಿತಿಯು ಇಲಾಖೆಗೆ ಸೂಚಿಸಿದೆ.

2014-15ರಿಂದ 2016-17ರ ಅವಧಿಯಲ್ಲಿ 16 ಸರಬರಾಜುದಾರರಿಗೆ ಸಂಬಂಧಿಸಿದಂತೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಔಷಧಗಳನ್ನು ಗುಣಮಟ್ಟದ್ದಲ್ಲದ ಔಷಧ ಎಂದು ಘೋಷಿಸಲಾಗಿದ್ದರೂ ಸಹ ಕೇವಲ 5 ಸಂಸ್ಥೆಗಳನ್ನು ಮಾತ್ರ ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಉಳಿದ ಕಂಪನಿಗಳಿಗೆ ನೋಟೀಸ್‌ ಜಾರಿಗೊಳಿಸಿ ಕೈ ತೊಳೆದುಕೊಂಡಿರುವುದು ವರದಿಯಿಂದ ಗೊತ್ತಾಗಿದೆ. ಬಾಕಿ ಮೊತ್ತವಾದ 2.11 ಕೋಟಿಯಲ್ಲಿ 7 ಏಜೆನ್ಸಿಗಳಿಂದ ಇನ್ನೂ 1.77 ಕೋಟಿ ವಸೂಲು ಮಾಡಬೇಕಿದೆ ಎಂಬುದು ವರದಿಯಿಂದ ಗೊತ್ತಾಗಿದೆ.

‘2016-17ರ ಅವಧಿಯಲ್ಲಿಯೇ ಪ್ರಧಾನ ಮಹಾಲೇಖಪಾಲರು ಆಕ್ಷೇಪಣೆಗಳನ್ನು ಇಲಾಖೆಯ ಗಮನಕ್ಕೆ ತಂದರೂ ಇಲ್ಲಿಯವರೆಗೂ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ವರದಿಯು ಸ್ವೀಕೃತವಾದ ಒಂದು ತಿಂಗಳ ಒಳಗಾಗಿ ಅಗತ್ಯ ಕ್ರಮಕೈಗೊಂಡು ವರದಿ ಸಲ್ಲಿಸಬೇಕು,’ ಎಂದು ಸಮಿತಿ ಸೂಚಿಸಿದೆ.

the fil favicon

SUPPORT THE FILE

Latest News

Related Posts