ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲೂ ಲಂಚ; ಕೈಗಾರಿಕೋದ್ಯಮಿಗಳಿಂದ ಕೋಟ್ಯಂತರ ವಸೂಲಿ

ಬೆಂಗಳೂರು; ಜಲಸಂಪನ್ಮೂಲ, ಲೋಕೋಪಯೋಗಿ, ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧ ಪ್ರಾಧಿಕಾರಗಳಿಂದ ಸಿವಿಲ್‌ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಪಡೆಯಲು ಗುತ್ತಿಗೆ ಮೊತ್ತದ ಶೇ.40ರಷ್ಟು ಹಣವನ್ನು ಕಮಿಷನ್‌ ರೂಪದಲ್ಲಿ ಬೇಡಿಕೆ ಇರಿಸಲಾಗುತ್ತಿದೆ ಎಂಬ ಗುತ್ತಿಗೆದಾರರ ಆರೋಪವು ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕೈಗಾರಿಕೆಗಳ ಪರವಾನಿಗೆಗೆ ಲಂಚಕ್ಕೆ ಬೇಡಿಕೆ ಇರಿಸಿ ಸಾವಿರಾರು ಕೈಗಾರಿಕೆಗಳಿಂದ ಕೋಟ್ಯಂತರ ರುಪಾಯಿ ವಸೂಲು ಮಾಡುತ್ತಿದ್ದಾರೆ ಎಂದು ಕೈಗಾರಿಕೋದ್ಯಮಿಗಳು ಗುರುತರ ಆರೋಪವನ್ನು ಮಾಡಿದ್ದಾರೆ.

ಎಲ್ಲಾ ಗುತ್ತಿಗೆದಾರರಿಂದ ಕಮಿಷನ್‌ಗೆ ಬದಲಾಗಿ ‘ಲಂಪ್ಸ್‌ಮ್‌’ ಪಡೆಯಲು ಖುದ್ದು ಮುಖ್ಯಮಂತ್ರಿಯೇ ಸೂಚಿಸಿದ್ದಾರೆ ಎಂದು ಕೇಳಿ ಬಂದಿದ್ದ ಆರೋಪದ ನಡುವೆಯೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿರುದ್ಧ ಕೈಗಾರಿಕೋದ್ಯಮಿಗಳು ಇದೀಗ ಪರಿಸರ, ಜೀವಿಶಾಸ್ತ್ರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರಿಗೆ 2021ರ ನವೆಂಬರ್‌ 4ರಂದು ಪತ್ರ ಬರೆದಿದ್ದಾರೆ. ಈ ಪತ್ರವನ್ನು ಇಲಾಖೆಯು 2021ರ ನವೆಂಬರ್‌ 19ರಂದು ಸ್ವೀಕರಿಸಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೈಗಾರಿಕೆಗಳಿಗೆ ಪರವಾನಿಗೆ ನೀಡುವುದು ಮತ್ತು ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕೈಗಾರಿಕೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಲಂಚಕ್ಕಾಗಿ ಬೇಡಿಕೆ ಇರಿಸುತ್ತಿರುವುದು ಕೈಗಾರಿಕೋದ್ಯಮಿಗಳು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

ಪರವಾನಿಗೆ ಶುಲ್ಕವೆಂದು ಮಂಡಳಿಗೆ 60,000 ರು.ಗಳನ್ನು ಭರಿಸಲಾಗುತ್ತಿತ್ತು. ಆದರೆ ಲಂಚದ ಹಣವನ್ನು ಇದೀಗ 2 ಲಕ್ಷದಿಂದ 3 ಲಕ್ಷಕ್ಕೆ ಏರಿಸಲಾಗಿದೆ. ಇಷ್ಟು ಹಣವನ್ನು ಮಂಡಳಿಯ ಎಲ್ಲಾ ಅಧಿಕಾರಿಳಿಗೆ ಕೊಡಬೇಕು. ಇಲ್ಲದಿದ್ದರೆ ಕೈಗಾರಿಕೆಗಳಿಗೆ ಭೇಟಿ ಕೊಟ್ಟು ಬೆಸ್ಕಾಂ ಮೂಲಕ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುತ್ತಾರೆ ಎಂದೂ ಬೆದರಿಸಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆಯಲ್ಲದೆ ಕೈಗಾರಿಕೆಗಳಿಂದ ಕೋಟಿ ಕೋಟಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದೂ ಕೈಗಾರಿಕೋದ್ಯಮಿಗಳು ದೂರಿದ್ದಾರೆ.

ಮಂಡಳಿಯಲ್ಲಿರುವ ಗುರುಮೂರ್ತಿ ಮತ್ತು ರಾಜಣ್ಣ ಎಂಬುವರ ಹೆಸರನ್ನು ಈ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಇವರು ನೆಲಮಂಗಲ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೈಗಾರಿಕೆಗಳಿಗೆ ಪರವಾನಿಗೆ ನೀಡುವುದು ಮತ್ತು ವರದಿ ಮಾಡುವುದು ಇವರ ದೈನಂದಿನ ಕೆಲಸ. ಆದರೆ ಇವರು ಕೈಗಾರಿಕೆ ಮಾಲೀಕರಿಂದಲೇ ಕೋಟಿ ಕೋಟಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಇವರ ವಿರುದ್ಧ ಆರೋಪಿಸಿರುವುದು ಪತ್ರದಿಂದ ಗೊತ್ತಾಗಿದೆ.

‘ನೆಲಮಂಗಲ ಕಚೇರಿ ಅಧಿಕಾರಿಗಳಾದ ಗುರುಮೂರ್ತಿ ಮತ್ತು ರಾಜಣ್ಣ ಅವರು ಕೈಗಾರಿಕೆಗಳಿಗೆ ಇಲ್ಲಸಲ್ಲದ ತೊಮದರೆ ನೀಡುತ್ತಿದ್ದಾರೆ. ತಪಾಸಣೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಪರವಾನಿಗೆ ಮತ್ತು ವರದಿ ನೀಡುವುದು, ಪರವಾನಿಗೆ ನವೀಕರಣದ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ. ಇವರಿಗಲ್ಲದೆ ಪ್ರಾದೇಶಿಕ ಕಚೇರಿಗಳಿಗೂ ಹಣ ನೀಡಬೇಕು. ಮಂಡಳಿಗೆ ನಿಗದಿತ ಶುಲ್ಕ 60,000 ರು. ಪಾವತಿಸಿಯೂ 6 ಲಕ್ಷ ರು. ನೀಡಬೇಕು. ಕೆಲವು ಕೈಗಾರಿಕೆಗಳಿಂದ ಕೋಟಿ ಕೋಟಿ ಹಣ ವಸೂಲು ಮಾಡುತ್ತಿದ್ದಾರೆ,’ ಎಂದು ದೂರಿನಲ್ಲಿ ಕೈಗಾರಿಕೋದ್ಯಮಿಗಳು ಆರೋಪಿಸಿದ್ದಾರೆ.

ಕೈಗಾರಿಕೆಗಳಿಗೆ ನೀರಿನ ಮಾದರಿ ಪರೀಕ್ಷೆ ನಡೆಸುವುದರಲ್ಲಿಯೂ ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂದು ದೂರಲಾಗಿದೆಯಲ್ಲದೆ ಹಣ ನೀಡದಿದ್ದರೆ ಇಟಿಪಿ, ಎಸ್‌ಟಿಪಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವರದಿ ಮಾಡುತ್ತಾರೆ. ಇಟಿಪಿ ಮತ್ತು ಎಸ್‌ಟಿಪಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಲಂಚ ನೀಡಲಿಲ್ಲವೆಂಬ ಕಾರಣಕ್ಕೆ ತಪ್ಪು ವರದಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಕೈಗಾರಿಕೆಯ ನೀರಿನ ಸ್ಯಾಂಪಲ್‌ಗೆ 30,000 ರು.ಗಳಿಗೆ ಬೇಡಿಕೆ ಇರಿಸುತ್ತಿದ್ದಾರೆ. ಹಣ ನೀಡಿದರೆ ನೀರಿನ ಸ್ಯಾಂಪಲ್‌ ಫಲಿತಾಂಶ ನೀಡುತ್ತಾರೆ. ಈ ಬಗ್ಗೆ ಇಲಾಖೆಯ ಭೀಮ್‌ಸಿಂಗ್‌ ಗೌಗಿ ಮತ್ತುಇತರೆ ಅಧಿಕಾರಿಗಳ ಗಮನಕ್ಕೆ ತಂದರೂ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ,’ ಎಂದು ಸಚಿವ ಆನಂದ್‌ಸಿಂಗ್‌ ಅವರಿಗೆ ಬರೆದಿರುವ ಪತ್ರದಲ್ಲಿ ದೂರಲಾಗಿದೆ.

ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಗುತ್ತಿಗೆದಾರರ ಆರೋಪದ ಕುರಿತು ತನಿಖೆ ನಡೆಸಲು ಸೂಚಿತವಾಗಿರುವ ಹಿರಿಯ ಐಎಎಸ್‌ ಅಧಿಕಾರಿ ರಾಕೇಶ್‌ಸಿಂಗ್‌ ಅವರಿಗೆ ಇಂತಹದ್ದೊಂದು ಸಂದೇಶವನ್ನು ಮುಖ್ಯಮಂತ್ರಿಯಿಂದಲೇ ತಲುಪಿಸಲಾಗಿದೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಕರ್ನಾಟಕ ರಾಷ್ಟ್ರಸಮಿತಿಯು ರಾಜ್ಯಪಾಲರಿಗೆ ದೂರು ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts