ಪರಿಶಿಷ್ಟರ ಅನುದಾನ ದುರ್ಬಳಕೆ ಆರೋಪ; ಚಿಣಿ ನಿವೃತ್ತಿ ನಂತರ ವಿಚಾರಣೆಗೆ ಮುಂದಾದ ಇಲಾಖೆ

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಅನುಕೂಲವಾಗದ ಮತ್ತು ಅವರ ಅಭಿವೃದ್ಧಿಗೆ ಪೂರಕವಾಗದ ಹಾಗೂ ಫಲಾನುಭವಿಗಳೇ ಇಲ್ಲದ ಕಾಮಗಾರಿಗಳನ್ನು ನಿರ್ವಹಿಸಿ 850 ಕೋಟಿಗೂ ಅಧಿಕ ಮೊತ್ತವನ್ನು ಮಾರ್ಗಪಲ್ಲಟಗೊಳಿಸಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಕೃಷ್ಣಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್‌ ಚಿಣಿ ಅವರು ಹುದ್ದೆಯಲ್ಲಿರುವವರೆಗೂ ವಿಚಾರಣೆ ನಡೆಸಲು ಮುಂದಾಗದ ಜಲ ಸಂಪನ್ಮೂಲ ಇಲಾಖೆಯು ಚಿಣಿ ನಿವೃತ್ತರಾದ ಬಳಿಕ ವಿಚಾರಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಪ್ರಭಾಕರ್‌ ಚಿಣಿ ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಸಮಾಜ ಕಲ್ಯಾಣ ಇಲಾಖೆಯು ಕಳೆದ ಆಗಸ್ಟ್‌ನಲ್ಲೇ ನಿರ್ದೇಶನ ನೀಡಿತ್ತು. ಆದರೆ ಜಲ ಸಂಪನ್ಮೂಲ ಇಲಾಖೆಯು ನಿರ್ದೇಶನ ಪಾಲಿಸುವಲ್ಲಿ ವಿಳಂಬ ಧೋರಣೆ ಪ್ರದರ್ಶಿಸಿತ್ತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಉಪ ಯೋಜನೆ ಅನುದಾನ ಮಾರ್ಗಪಲ್ಲಟಗೊಳಿಸಿದ್ದರ ಬಗ್ಗೆ ಕೊಪ್ಪಳ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಭವಾನಿಮಠ ಅವರು ದೂರು ನೀಡಿದ್ದರು. ಇದನ್ನಾಧರಿಸಿ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮಖ್ಯ ಕಾರ್ಯದರ್ಶಿ ಡಾ ಎನ್‌ ನಾಗಾಂಬಿಕೆ ದೇವಿ ಅವರು ಜಲ ಸಂಪನ್ಮೂಲ ಇಲಾಖೆಗೆ 2021ರ ಆಗಸ್ಟ್‌ 6ರಂದು ಪತ್ರ ಬರೆದಿದ್ದರು.

ಈ ಪತ್ರದ ಅನುಸಾರ ವಿಚಾರಣೆ ಕೈಗೆತ್ತಿಕೊಳ್ಳಬೇಕಿದ್ದ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರು ವಿಚಾರಣೆ ನಡೆಸುವ ಸಂಬಂಧ 2 ತಿಂಗಳ ನಂತರ ಕೆಬಿಜೆಎನ್‌ಎಲ್‌ನ ಆರ್ಥಿಕ ಮತ್ತು ಮುಖ್ಯ ಹಣಕಾಸು ಅಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಎರಡೂ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಎಸ್‌ಸಿ ಮತ್ತು ಎಸ್‌ ಟಿ ಸಮುದಾಯಗಳಿಗೆ ಮನೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸಂಬಂಧಪಟ್ಟ ಅನುದಾನವನ್ನು ಖರ್ಚು ಮಾಡದೇ ಆ ಅನುದಾನವನ್ನು ಬೇರೆ ಕಾಮಗಾರಿಗಳ ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಈ ಮೂಲಕ ಎಸ್‌ ಸಿ ಎಸ್‌ ಟಿ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅಪರಾಧವೆಸಗಿರುವ ನಿಗಮದ ನಿರ್ದೇಶಕ ಪ್ರಭಾಕರ ಚಿಣಿ ಮತ್ತು ಬಿ ಎನ್‌ ಬಿರಾದಾರ್‌ ಮತ್ತು ನಿಗಮದ ಪ್ರಧಾನ ವ್ಯವಸ್ಥಾಪಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ದೂರಿನ ಕುರಿತು ವಿಚಾರಣೆ ನಡೆಸಿ ಕ್ರಮ ಕೈಗೊಂಡ ವರದಿ ನೀಡಬೇಕು ಎಂದು ನಾಗಾಂಬಿಕೆ ದೇವಿ ಅವರು 2021ರ ಆಗಸ್ಟ್‌ 6ರಂದು ರಾಕೇಶ್‌ಸಿಂಗ್‌ ಅವರಿಗೆ ಪತ್ರ ಬರೆದಿದ್ದರು.

ಆದರೆ ಈ ಪತ್ರ ಆಧರಿಸಿ ಕ್ರಮ ಕೈಗೊಳ್ಳಬೇಕಿದ್ದ ಜಲಸಂಪನ್ಮೂಲ ಇಲಾಖೆಯು ಪ್ರಭಾಕರ್‌ ಚಿಣಿ ಅವರು ನಿವೃತ್ತಿಯಾದ ನಂತರ ವಿವರಗಳನ್ನು ಕೋರಿ ನಿಗಮಕ್ಕೆ ಪತ್ರ ಬರೆದಿರುವುದು ತಿಳಿದು ಬಂದಿದೆ.

‘2017-18, 2018-19, 2019-20 ಮತ್ತು 2020-21ನೇ ಸಾಲಿನ ಆಯವ್ಯಯಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಹಂಚಿಕೆಯಾದ ಅನುದಾನ, ಆಯಾಯ ವರ್ಷಗಳಲ್ಲಿನ ಪ್ರಾರಂಭಿಕ ಶಿಲ್ಕು ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ 2013ರ ಸೆಕ್ಷನ್‌ 7(ಎ) , 7(ಬಿ) ಮತ್ತು 7(ಡಿ) ಅಡಿಯಲ್ಲಿ ಆಗಿರುವ ವೆಚ್ಚದ ವಿವರಗಳನ್ನು ಒದಗಿಸಬೇಕು,’ ಎಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ ಕುಲಕರ್ಣಿ ಅವರು 2021ರ ನವೆಂಬರ್‌ 20ರಂದು ಪತ್ರದಲ್ಲಿ ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.

850 ಕೋಟಿ ದುರ್ಬಳಕೆ

2017-18ನೇ ಸಾಲಿನಿಂದ ಕೃಷ್ಣ ಭಾಗ್ಯ ಜಲನಿಗಮದಲ್ಲಿ ಭೂ ಸ್ವಾಧೀನ ಮತ್ತು ಪುನರ್‌ವಸತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಲು ಪ್ರತ್ಯೇಕ ಲೆಕ್ಕಶೀರ್ಷಿಕೆಯಡಿ ಎಸ್‌ಸಿಸಪಿ ಟಿಎಸ್‌ಪಿ ಯೋಜನೆ ಒಳಗೊಂಡಂತೆ ಅನುದಾನ ಕಲ್ಪಿಸಲಾಗಿದೆ. ಆದರೆ ಇದುವರೆಗೂ ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ಮನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅನುದಾನವನ್ನು ಖರ್ಚು ಮಾಡಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಬಿಡುಗಡೆ ಮಾಡಲಾದ ಅನುದಾನ 631.59 ಕೋಟಿ ಪೈಕಿ 214.16 ಕೋಟಿ ರು. 7(ಡಿ) ಅಡಿ ವೆಚ್ಚ ಮಾಡಲಾಗಿದೆ. ಇದಲ್ಲದೆ 91 ಕೋಟಿ ರು.,ನಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ ಕಾಮಗಾರಿಗಳಿಗೆ ಅನಮೋದನೆ ನೀಡಲಾಗಿದೆ. ಒಟ್ಟು 305.10 ಕೋಟಿ ಅನುದಾನ ಉಪಯೋಗಿಸಲಾಗಿದೆ. ಆದರೆ ಕಳೆದ 2 ವರ್ಷಗಳಿಂದ ಮನೆಗಳ ನಿರ್ಮಾಣದ ಕುರಿತು ಫಲಾನುಭವಿಗಳ ಪಟ್ಟಿಯನ್ನು ಸಂಬಂಧದಪಟ್ಟ ವಿಭಾಗದಿಂದ ಮತ್ತು ಸಕ್ಷಮ ಪ್ರಾಧಿಕಾರದಿಂದ ಅಂತಿಮಗೊಳಿಸದೇ ಇರುವುದರಿಂದ ಈ ಮನೆಗಳ ನಿರ್ಮಾಣಕ್ಕಾಗಿ ಇನ್ನೂ ಸಹ ಟೆಂಡರ್‌ ಕರೆದಿಲ್ಲ ಹೀಗಾಗಿ ಅನುದಾನ ಖರ್ಚು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭವಾನಿಮಠ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಈ ಪ್ರಕರಣದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಎಲ್ಲಾ ನಿಯಮಾವಳಿಗಳನ್ನು ಮತ್ತು ಕಾನೂನುಗಳನ್ನು ಅತ್ಯಂತ ಚಾಣಾಕ್ಷತನದಿಂದ ಉಲ್ಲಂಘಿಸಲಾಗಿದೆ. 401.77ಕೋಟಿ ಮತ್ತು 384.86 ಕೋಟಿ ರು.ಗಳ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಯಾವುದೇ ಅನುಕೂಲವಾಗದ ಅವರ ಅಭಿವೃದ್ಧಿಗೆ ಪೂರಕವಾಗದ ಮತ್ತು ಫಲಾನುಭವಿಗಳೇ ಇಲ್ಲದ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂಬ ದೂರನ್ನೂ ನೀಡಿದ್ದಾರೆ.

ಅರುಣ್‌ ಡಿ ಉಪ್ಪಾರ್‌ ಒಡೆತನದ ಎಡಿಯು ಇನ್ಫ್ರಾ ಕಂಪನಿಗೆ ನಿಯಮಬಾಹಿರ ಮತ್ತು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ 1,141 ಕೋಟಿ ರು. ಪಾವತಿಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಭವಾನಿಮಠ ಅವರು ಆರೋಪಿಸಿದ್ದನ್ನು ಸ್ಮರಿಸಬಹುದು.

ಗುತ್ತಿಗೆದಾರರೊಬ್ಬರು ನಿರ್ವಹಿಸಿದ ಎಸ್‌ಸಿಪಿ ಮತ್ತು ಟಿ ಎಸ್‌ ಪಿ ಕಾಮಗಾರಿಯ ಬಿಲ್‌ಗೆ ಸಂಬಂಧಪಟ್ಟಂತೆ ಅನುದಾನ ಬಿಡುಗಡೆ ಮಾಡಲು ವ್ಯವಸ್ಥಾಪಕ ನಿರ್ದೇಶಕರಿಗೆ ಮೊಬೈಲ್‌ ಮೂಲಕ ವಿನಂತಿ ಮಾಡಿದ್ದೆ. ಆಗ ವ್ಯವಸ್ಥಾಪಕ ನಿರ್ದೇಶಕರು ನನ್ನನ್ನು ಉದ್ದೇಶಿಸಿ ಬಿಲ್‌ ಪಾವತಿಸಲು ಬಿಲ್‌ ಮೊತ್ತಕ್ಕೆ ಶೇ.4 ರಷ್ಟು ಲಂಚವನ್ನು ಗುತ್ತಿಗೆದಾರರಿಗೆ ನೀಡಲು ತಿಳಿಸಲು ಹೇಳಿದರು,’ ಎಂದು ಮುಕುಂದರಾವ್‌ ಭವಾನಿಮಠ ಅವರು ನೀಡಿರುವ ದೂರಿನಲ್ಲಿ ವಿವರಿಸಿದ್ದರು. ಈ ದೂರು ಖುದ್ದು ಮುಖ್ಯಮಂತ್ರಿ ಗಮನದಲ್ಲಿದ್ದರೂ ಕ್ರಮ ವಹಿಸಿಲ್ಲ.

ಅಲ್ಲದೆ ‘ ಇದಕ್ಕೆ ಪ್ರತ್ಯುತ್ತರವಾಗಿ ನಾನು ಎಸ್‌ಸಿಪಿ ಟಿಎಸ್‌ಪಿ ಕಾಮಗಾರಿ ಆಗಿರುವುದರಿಂದ ಲಂಚ ತೆಗೆದುಕೊಳ್ಳಬಾರದು ಎಂದು ತಿಳಿಸಿದೆ. ಆಗ ಅವರು ಸಲುಗೆಯಿಂದ ನನ್ನನ್ನುಉದ್ದೇಶಿಸಿ ನಾನು ಈ ಹಣವನ್ನು ಸಂಗ್ರಹಿಸಿ ಮುಖ್ಯಮಂತ್ರಿ ಕಚೇರಿಗೆ ಮುಟ್ಟಿಸಬೇಕು ಎಂದ ಹೇಳಿ ಕಡೆಗೆ ಶೇ. 2ರಷ್ಟಾದರೂ ಕೊಡಲಿಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿ,’ ಎಂದು ಪ್ರಭಾಕರ್ ಚಿಣಿ ಅವರು ಹೇಳಿದ್ದರು ಎಂದು ಭವಾನಿಮಠ ಅವರು ಲಿಖಿತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೂ ಈ ದೂರನ್ನಾಧರಿಸಿ ಇದುವರೆಗೂ ಯಾವುದೇ ಕ್ರಮ ವಹಿಸದಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts