‘ದಿ ಫೈಲ್‌’ ವರದಿ ಪರಿಣಾಮ; ಕಡತ ವಿಲೇವಾರಿ ಮಾಡದ ಮೈಗಳ್ಳರಿಗೆ ಸಿಎಂ ತರಾಟೆ

ಬೆಂಗಳೂರು; ಆರ್ಥಿಕ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವಿಲೇವಾರಿಗೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕಡತಗಳು ಬಾಕಿ ಇರುವ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿದ್ದರ ಬೆನ್ನಲ್ಲೇ ಕಡತ ವಿಲೇವಾರಿಯಲ್ಲಿ ಕಂಡು ಬಂದಿರುವ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಡತ ವಿಲೇವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್‌ನಲ್ಲೇ ಗಡುವು ನೀಡಿ ಎಚ್ಚರಿಕೆ ನೀಡಿದ್ದರೂ ಸೆಪ್ಟಂಬರ್‌ 2ರ ಅಂತ್ಯಕ್ಕೆ 41 ಆಡಳಿತ ಇಲಾಖೆಗಳಲ್ಲಿ 1.69 ಲಕ್ಷ ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಬಸವರಾಜ ಬೊಮ್ಮಾಯಿ ಅವರು ನೂರು ದಿನ ಪೂರ್ಣಗೊಳಿಸಿದ ಹೊತ್ತಿನಲ್ಲೂ ಅಕ್ಟೋಬರ್‌ 27ರ ಅಂತ್ಯಕ್ಕೆ 31,308 ಕಡತಗಳು ಬಾಕಿ ಇದ್ದವು. ಅಲ್ಲದೆ ತಾವೇ ನಿರ್ವಹಿಸುವ ಹಣಕಾಸು ಇಲಾಖೆಯಲ್ಲಿಯೂ 3,308 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿದ್ದವು.

ಈ ಎಲ್ಲದರ ಕುರಿತು ಅಂಕಿ ಅಂಶ ಸಮೇತ ‘ದಿ ಫೈಲ್‌’ ಸರಣಿ ವರದಿ ಪ್ರಕಟಿಸಿತ್ತು. ಕಡತ ವಿಲೇವಾರಿ ಸಂಬಂಧ ಬಸವರಾಜ ಬೊಮ್ಮಾಯಿ ಅವರು ತರಾಟೆಗೆ ತೆಗೆದುಕೊಳ್ಳುವ ಮುನ್ನವೇ ಇಲಾಖಾ ಮುಖ್ಯಸ್ಥರ ಮೈಗಳ್ಳತನವನ್ನು ‘ದಿ ಫೈಲ್‌’ ಸರಣಿ ವರದಿಗಳ ಮೂಲಕ ಬಹಿರಂಗಪಡಿಸಿದ್ದನ್ನು ಸ್ಮರಿಸಬಹುದು.

ಇದೀಗ ಬಸವರಾಜ ಬೊಮ್ಮಾಯಿ ಅವರು ಕಡತಗಳ ವಿಲೇವಾರಿ ಸಂಬಂಧ ಅಧಿಕಾರಿಗಳಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ದಿನವಿಡೀ ಕಡತಗಳನ್ನು ಪರಿಶೀಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಕಡತಗಳನ್ನು ವಿಲೇವಾರಿ ಮಾಡದೆಯೇ ಬಾಕಿ ಉಳಿಸಿಕೊಂಡಿರುವ ಇಲಾಖಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಕಡತ ವಿಲೇವಾರಿಯಲ್ಲಿ ವಿಳಂಬವಾದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲ ಹೊತ್ತಿನಲ್ಲೇ ಚಲ್ತಾ ಹೈ ಎಂಬ ಚಾಳಿಯನ್ನು ಅಧಿಕಾರಿಗಳು ಬಿಟ್ಟುಬಿಡಬೇಕು ಎಂದು ಮೈಗಳ್ಳ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದರು. ಅದೇ ಹೊತ್ತಿನಲ್ಲಿ ಇಲಾಖೆಗಳಲ್ಲಿ 80,076 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿತ್ತು. 2021ರ ಆಗಸ್ಟ್‌ 31ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಯೇ ಸಭೆ ನಡೆದಿತ್ತು. ಕಡತ ವಿಲೇವಾರಿಯಾಗದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಶೇಷವೆಂದರೆ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿಯೇ ಒಳಾಡಳಿತ ಇಲಾಖೆಯಲ್ಲಿ ಜುಲೈ 2021ರಿಂದ ಆಗಸ್ಟ್‌ 23ರವರೆಗೆ ಒಟ್ಟು 10,866 ಕಡತಗಳು ಬಾಕಿ ಇದ್ದವು. ಈ ಕುರಿತು ‘ದಿ ಫೈಲ್‌’ 2021ರ ಸೆಪ್ಟಂಬರ್ 2ರಂದು ವರದಿ ಪ್ರಕಟಿಸಿತ್ತು.

ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

ಹಾಗೆಯೇ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೂರು ದಿನ ಪೂರ್ಣಗೊಳಿಸುವ ಹೊತ್ತಿನಲ್ಲೂ ಅವರೇ ನಿಭಾಯಿಸುವ ಆರ್ಥಿಕ ಇಲಾಖೆಯಲ್ಲಿಯೂ 3,351 ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಈ ಕುರಿತು ‘ದಿ ಫೈಲ್‌’ 2021ರ ಅಕ್ಟೋಬರ್‌ 29ರಂದು ವರದಿ ಪ್ರಕಟಿಸಿತ್ತು.

ಸಿಎಂ ಇಲಾಖೆಯಲ್ಲೇ ವಿಲೇವಾರಿಗೆ 3,351 ಕಡತ ಬಾಕಿ; ನೂರು ದಿನ ಪೂರೈಸಿದ್ದರೂ ಚುರುಕಿಲ್ಲ

ಇನ್ನು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಡತಗಳು ವಿಲೇವಾರಿಯಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ 18 ಇಲಾಖೆಗಳ ಮುಖ್ಯಸ್ಥರ ಹಂತದಲ್ಲೇ 31,308 ಕಡತಗಳು ವಿಲೇವಾರಿಯಾಗಿಲ್ಲ ಎಂಬುದು ಬಹಿರಂಗವಾಗಿತ್ತು.

18 ಇಲಾಖೆಗಳಲ್ಲಿ 16,543 ಭೌತಿಕ ಕಡತ (ಎಫ್‌ಎಂಎಸ್‌)ಮತ್ತು ಇ- ಆಫೀಸ್‌ ವಿಭಾಗದಲ್ಲಿ 14,765 ಕಡತಗಳು ವಿಲೇವಾರಿಗೆ ಬಾಕಿ ಇವೆ.  ಕಡತಗಳ ವಿಲೇವಾರಿಗೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ಅಗ್ರ ಸ್ಥಾನದಲ್ಲಿದೆ. ಈ ಕುರಿತು ‘ದಿ ಫೈಲ್‌’ 2021ರ ನವೆಂಬರ್‌ 3ರಂದು ವರದಿ ಪ್ರಕಟಿಸಿತ್ತು.

ಇಲಾಖೆ ಹಂತದಲ್ಲೇ 31,308 ಕಡತಗಳು ವಿಲೇವಾರಿಗೆ ಬಾಕಿ; ಸಿಎಂ ಸೂಚನೆಗೂ ಕಿಮ್ಮತ್ತಿಲ್ಲ

18 ಇಲಾಖೆಗಳಲ್ಲಿ 16,543 ಭೌತಿಕ ಕಡತ (ಎಫ್‌ಎಂಎಸ್‌)ಮತ್ತು ಇ- ಆಫೀಸ್‌ ವಿಭಾಗದಲ್ಲಿ 14,765 ಕಡತಗಳು ವಿಲೇವಾರಿಗೆ ಬಾಕಿ ಇವೆ.  ಕಡತಗಳ ವಿಲೇವಾರಿಗೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ಅಗ್ರ ಸ್ಥಾನದಲ್ಲಿಯೇ  ಮುಂದುವರೆದಿತ್ತು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಂದೇ ಕಡತ ವಿಲೇವಾರಿಗೆ ಸೂಚಿಸಿದ್ದರಲ್ಲದೆ 15 ದಿನದಲ್ಲಿ ಕಡತಗಳು ವಿಲೇವಾರಿಯಾಗಿರಬೇಕು ಎಂದೂ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು. ಹಣಕಾಸು ಇಲಾಖೆಯಲ್ಲಿಯೇ 3,351 ಕಡತಗಳು ವಿಲೇವಾರಿಯಾಗದಿರುವುದು ಮುಖ್ಯಮಂತ್ರಿ ನೀಡಿದ್ದ ಎಚ್ಚರಿಕೆ ಸಂದೇಶವನ್ನು ಕಸದ ಬುಟ್ಟಿಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

SUPPORT THE FILE

Latest News

Related Posts