ಸ್ಥಳಾಂತರವಾಗದ ಸಕ್ಕರೆ ನಿರ್ದೇಶನಾಲಯ; ಕಾಗದದ ಮೇಲಷ್ಟೇ ಉಳಿದ ಆದೇಶ

ಬೆಂಗಳೂರು; ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಅ.1ರಿಂದ ಜಾರಿಗೆ ಬರುವಂತೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸಿ ಸರ್ಕಾರ ಆದೇಶ ಹೊರಡಿಸಿ ತಿಂಗಳಾದರೂ ಸ್ಥಳಾಂತರ ಸಂಬಂಧ ಪ್ರಾಥಮಿಕ ಪ್ರಕ್ರಿಯೆಯೂ ನಡೆದಿಲ್ಲ!

ಉತ್ತರ ಕರ್ನಾಟಕ ಭಾಗದವರೇ ರಾಜ್ಯದ ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರ್ಣಗೊಳಿಸಿದ್ದರೂ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯವನ್ನು ಸ್ಥಳಾಂತರಿಸುವ ಸಂಬಂಧ ಪ್ರಾಥಮಿಕ ಪ್ರಕ್ರಿಯೆಯೂ ನಡೆಯದಿರುವುದು ಆದೇಶವು ಕೇವಲ ಕಾಗದದ ಮೇಲಷ್ಟೇ ಉಳಿದಂತಾಗಿದೆ. ಅ.3ರಿಂದಲೇ ಕಚೇರಿ ಕಾರ್ಯಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆಯೂ ಹುಸಿಯಾಗಿದೆ.

ಮುಂಬರುವ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿಯೇ ಚಳಿಗಾಲದ ಅಧಿವೇಶನ ನಡೆಸಬೇಕು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ಸರ್ಕಾರಕ್ಕೆ ಪತ್ರ ಬರೆದಿರುವ ನಡುವೆಯೇ ತಿಂಗಳಾದರೂ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಕಚೇರಿ ಬೆಳಗಾವಿಗೆ ಸ್ಥಳಾಂತರವಾಗದಿರುವುದು ಬೆಳಗಾವಿ ಭಾಗದ ಕಬ್ಬು ಬೆಳೆಗಾರರ ಆಕ್ರೋಶವನ್ನು ಹೆಚ್ಚಿಸಲಿದೆ.

ಈ ನಿರ್ದೇಶನಾಲಯವನ್ನು ಬೆಳಗಾವಿಗೆ ಸ್ಥಳಾಂತರಿಸುವ ಸಂಬಂಧ 2021ರ ಸೆಪ್ಟಂಬರ್‌ 30ರಂದು ಆದೇಶ ಹೊರಡಿಸಲಾಗಿತ್ತು. ಆದೇಶ ಹೊರಡಿಸಿ ತಿಂಗಳಾದರೂ ಸ್ಥಳಾಂತರ ಸಂಬಂಧ ಪ್ರಾಥಮಿಕ ಪ್ರಕ್ರಿಯೆಗಳೂ ನಡೆದಿಲ್ಲ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.

‘ಕಚೇರಿಯನ್ನು ಸ್ಥಳಾಂತರಿಸುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಪ್ರಾಧಿಕಾರದೊಂದಿಗೆ ಕಬ್ಬು ಅಭಿವೃದ್ಧಿ ಆಯುಕ್ತರು ಚರ್ಚಿಸಬೇಕು. ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸುವವರೆಗೆ ಬೆಳಗಾವಿ ನಗರದಲ್ಲಿರುವ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಅ.1ರಿಂದ ತಾತ್ಕಾಲಿಕವಾಗಿ ಕಚೇರಿ ಆರಂಭಿಸಬೇಕು’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧೀನ ಕಾರ್ಯದರ್ಶಿ (ಸಕ್ಕರೆ) ಆರ್. ಮಂಜುಳಾ ಅವರು ಆದೇಶದಲ್ಲಿ ಹೊರಡಿಸಿದ್ದರು.

ಅಲ್ಲದೆ ‘ಬೆಂಗಳೂರಿನಲ್ಲಿರುವ ಕಚೇರಿಯ ಸಂಪೂರ್ಣ ದಾಖಲೆಗಳು ಹಾಗೂ ಪೀಠೋಪಕರಣಗಳನ್ನು ಬೆಳಗಾವಿಗೆ ಸುರಕ್ಷಿತವಾಗಿ ಸ್ಥಳಾಂತರಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಂ‍ಪನ್ಮೂಲದಲ್ಲಿ ಭರಿಸಬೇಕು’ ಎಂದು ಆದೇಶಿಸಿದ್ದರು.

ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯನ್ನು ತೀವ್ರಗೊಳಿಸುವುದು ಮತ್ತು ಆ ಭಾಗದ ಸಾರ್ವಜನಿಕರಿಗೆ ರಾಜ್ಯದ ಆಡಳಿತವನ್ನು ಹತ್ತಿರವಾಗಿಸಲು ರಾಜ್ಯ ಸರ್ಕಾರದ ಹಲವು ಇಲಾಖೆ, ನಿಗಮ, ಮಂಡಳಿಗಳನ್ನು ಉತ್ತರ ಕರ್ನಾಟಕದ ವಿವಿಧ ಸ್ಥಳಗಳಿಗೆ ವರ್ಗಾಯಿಸಲು ರಾಜ್ಯ ಸರ್ಕಾರವು 2019ರ ಜನವರಿ 10ರಂದೇ ಅಧಿಸೂಚನೆ ಹೊರಡಿಸಿತ್ತು.

ಆದರೆ ಕಬ್ಬು ಅಭಿವೃದ್ಧಿ ಸಕ್ಕರೆ ನಿರ್ದೇಶನಾಲಯವನ್ನೂ ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸಲು ನಿರ್ದೇಶನಾಲಯದ ಆಯುಕ್ತರು ಸಮ್ಮತಿ ವ್ಯಕ್ತಪಡಿಸಿರಲಿಲ್ಲ. ಬದಲಿಗೆ ಕಚೇರಿಯನ್ನು ಬೆಂಗಳೂರಿನಲ್ಲಿಯೇ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದರು. ಅಲ್ಲದೆ ಅಧಿಸೂಚನೆಯಲ್ಲಿ ಹೆಸರಿಸಿದ್ದ ಇಲಾಖೆ, ನಿಗಮ, ಮಂಡಳಿಗಳ ಕಚೇರಿಗಳು 2021ರ ಸೆಪ್ಟಂಬರ್ 30ರವರೆಗೂ ಸ್ಥಳಾಂತರಗೊಂಡಿರಲಿಲ್ಲ.

ಕಬ್ಬು ನಿಯಂತ್ರಣ ಮಂಡಳಿಯ ತೀರ್ಮಾನದಂತೆ ಕಬ್ಬು ಅಭಿವೃದ್ದಿ, ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಲ್ಲಿಯೇ ಉಳಿಸಿಕೊಂಡು ಬೆಳಗಾವಿಯಲ್ಲಿ ಒಂದು ಪ್ರಾಂತೀಯ ಕಚೇರಿ ತೆರೆಯಲು ಸರ್ಕಾರವು ಪರಿಶೀಲನೆ ನಡೆಸಿತ್ತು. ಇದೇ ಮಾಹಿತಿಯನ್ನೂ ಹೈಕೋರ್ಟ್‌ಗೂ ತಿಳಿಸಿತ್ತು.

ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದಾಗಿ ಕಬ್ಬು ಅಭಿವೃದ್ದಿ ಸಕ್ಕರೆ ನಿರ್ದೇಶನಾಲಯವನ್ನು 2020ರ ಫೆ.17ರಂದು ಬೆಳಗಾವಿಗೆ ಸ್ಥಳಾಂತರಿಸಿ ತಾತ್ಕಾಲಿಕವಾಗಿ ಬೆಳಗಾವಿಯಲ್ಲಿರುವ ಎಸ್‌ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಕಚೇರಿ ಸ್ಥಾಪಿಸಲು ಸರ್ಕಾರ ಮುಂದಾಗಿತ್ತು. 2020-21ನೇ ಸಾಲಿನ ಆಯವ್ಯಯ ಅಧಿವೇಶನ ಮುಗಿದ ಬಳಿಕ 2020ರ ಏಪ್ರಿಲ್‌ 1ರಿಂದ ಪೂರ್ಣ ಪ್ರಮಾಣದಲ್ಲಿ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಲಾಗುವುದೆಂದು ಸರ್ಕಾರ ಹೇಳಿತ್ತು.

ಆದರೆ 2020ರ ಮಾರ್ಚ್‌ 24ರಿಂದ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಈ ಕಚೇರಿ ಸ್ಥಳಾಂತರವಾಗಿರಲಿಲ್ಲ. ಈ ಎಲ್ಲಾ ವಿಳಂಬಗಳಿಂದಾಗಿ ರೋಸಿ ಹೋಗಿದ್ದ ಉತ್ತರ ಕರ್ನಾಟಕದ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದರು. ಹೀಗಾಗಿ ಅನಿವಾರ್ಯವಾಗಿ ಸರ್ಕಾರವು ಈ ನಿರ್ದೇಶನಾಲಯವನ್ನು ಬೆಳಗಾವಿಗೆ ಸ್ಥಳಾಂತರಿಸಲು ಸೆ.30ರಂದು ಆದೇಶ ಹೊರಡಿಸಿತ್ತು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಪೈಕಿ ಶೇ.80ರಷ್ಟು ಕಾರ್ಖಾನೆಗಳು ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

SUPPORT THE FILE

Latest News

Related Posts