ಅತ್ಯಾಚಾರ, ಫೋಕ್ಸೋ; ಕೋವಿಡ್‌ ಅವಧಿಯಲ್ಲಿ 2,698, 3 ವರ್ಷಗಳಲ್ಲಿ 5,641 ಪ್ರಕರಣ ದಾಖಲು

ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 5,641 ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಪ್ರತಿಪಕ್ಷಗಳು ಮಾಡುತ್ತಿದ್ದ ಗುರುತರ ಆರೋಪಗಳನ್ನು ಬಲಪಡಿಸಿದಂತಾಗಿದೆ.

ಅಲ್ಲದೆ ಒಟ್ಟು ಪ್ರಕರಣಗಳ ಪೈಕಿ 2,698 ಪ್ರಕರಣಗಳು ಕೋವಿಡ್‌ ಸಂದರ್ಭದಲ್ಲಿ ದಾಖಲಾಗಿವೆ. ಹಾಗೆಯೇ ಹೆಚ್ಚಾಗಿ ಮಹಿಳೆಯರು ಓಡಾಡುವ ಜನನಿಬಿಢ ಸ್ಥಳ ಮತ್ತು ಶಾಲಾ ಕಾಲೇಜುಗಳ ಬಳಿ ವೀರ ವನಿತೆ, ಚನ್ನಮ್ಮ ಪಡೆ, ಓಬವ್ವ ಪಡೆ, ದುರ್ಗಾ ಪಡೆ, ಚನ್ನಮ್ಮ ಪಡೆ, ಶರಾವತಿ ಓಬವ್ವ ಪಡೆ, ರಾಣಿ ಚನ್ನಮ್ಮ ವಾಹನ ಗಸ್ತು ಹೊಡೆಯುತ್ತಿದ್ದರೂ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.

ಕಳೆದ 3 ವರ್ಷಗಳ (2018-2021 ಆಗಸ್ಟ್‌) ಅವಧಿಯಲ್ಲಿ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದಿರುವಂತಹ ಅತ್ಯಾಚಾರ ಪ್ರಕರಣಗಳ ಕುರಿತು ವಿಧಾನಪರಿಷತ್‌ ಸದಸ್ಯ ಕೆ ಗೋವಿಂದರಾಜ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆ (ಸಂಖ್ಯೆ 1354)ಗೆ 2021ರ ಸೆಪ್ಟಂಬರ್‌ 23ರಂದು ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ 2021ರ ಆಗಸ್ಟ್‌ ಅಂತ್ಯಕ್ಕೆ ಅತ್ಯಾಚಾರ ಮತ್ತು ಪೋಸ್ಕೋ ಸಂಬಂಧ ಒಟ್ಟು 5,641 ಪ್ರಕರಣಗಳು ವರದಿಯಾಗಿವೆ ಎಂದು ಅಂಕಿ ಅಂಶಗಳನ್ನು ಒದಗಿಸಿದ್ದಾರೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ.

2016ರಿಂದ 2021 (ಆಗಸ್ಟ್‌ 31)ರ 5 ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳ ಸಂಬಂಧ ಒಟ್ಟು 446 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರ, ಪೋಸ್ಕೋ ಅಡಿಯಲ್ಲಿ ವರದಿಯಾಗಿರುವ 5,641 ಪ್ರಕರಣಗಳಲ್ಲಿ ಒಟ್ಟು 6,584 ಆರೋಪಿಗಳನ್ನು ಬಂಧಿಸಿರುವುದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಬೆಂಗಳೂರು ನಗರವೊಂದರಲ್ಲೇ ಕಳೆದ 3 ವರ್ಷಗಳಲ್ಲಿ ಒಟ್ಟು 848 ಅತ್ಯಾಚಾರ, ಪೋಸ್ಕೋ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 438 ಪ್ರಕರಣಗಳು ಸೇರಿ ಒಟ್ಟಾರೆ ಬೆಂಗಳೂರು ಜಿಲ್ಲೆಯೊಂದರಲ್ಲೇ ಕಳೆದ 3 ವರ್ಷಗಳಲ್ಲಿ 1,286 ಪ್ರಕರಣ,ಮೈಸೂರು ಜಿಲ್ಲೆಯಲ್ಲಿ 167 ಪ್ರಕರಣಗಳು ದಾಖಲಾಗಿವೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕಳೆದ 3 ವರ್ಷಗಳಲ್ಲಿ ಒಟ್ಟು 317 ಪ್ರಕರಣಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಅಚಾರ್‌ ಅವರ ತವರು ಜಿಲ್ಲೆ ಕೊಪ್ಪಳ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 126 ಪ್ರಕರಣಗಳು ವರದಿಯಾಗಿವೆ.

ಕಲ್ಬುರ್ಗಿ ಜಿಲ್ಲೆಯಲ್ಲಿ 144, ತುಮಕೂರು ಜಿಲ್ಲೆಯಲ್ಲಿ 140, ಉಡುಪಿಯಲ್ಲಿ 150, ಹಾಸನ ಜಿಲ್ಲೆಯಲ್ಲಿ 240, ಹಾವೇರಿಯಲ್ಲಿ 168, ಚಿಕ್ಕಮಗಳೂರು ಜಿಲ್ಲೆಯಲ್ಲಿ 176, ಬಾಗಲಕೋಟೆ ಜಿಲ್ಲೆಯಲ್ಲಿ 92, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 311, ದಾವಣಗೆರೆ ಜಿಲ್ಲೆಯಲ್ಲಿ 173, ಕೊಡಗು ಜಿಲ್ಲೆಯಲ್ಲಿ 163, ಚಾಮರಾಜನಗರ ಜಿಲ್ಲೆಯಲ್ಲಿ 90, ಕೋಲಾರದಲ್ಲಿ 112, ಮಂಡ್ಯದಲ್ಲಿ 169 ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ವರದಿಯಾದ ಅತ್ಯಾಚಾರ, ಪೋಕ್ಸೋ ಪ್ರಕರಣಗಳ ತನಿಖೆಯನ್ನು ಅಪರಾಧ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ 2018ರಲ್ಲಿನ ತಿದ್ದುಪಡಿಯಂತೆ 60 ದಿನಗಳ ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಶ್ರಮಿಸಲಾಗುತ್ತಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಉತ್ತರದಲ್ಲಿ ತಿಳಿಸಿದ್ದಾರೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ 2019-20ನೇ ಸಾಲಿನಲ್ಲಿ 700 ಲಕ್ಷ ರು.ಗಳ ಅನುದಾನವನ್ನು ನಿರ್ಭಯ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಅನುದಾನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ 700 ಪೊಲೀಸ್‌ ಠಾಣೆಗಳಲ್ಲಿ ಹೆಲ್ಪ್‌ ಡೆಸ್ಕ್‌ ಸ್ಥಾಪಿಸಿದೆ.

ಎರಡನೇ ಹಂತದಲ್ಲಿ 2020-21ನೇ ಸಾಲಿಗೆ 100 ಲಕ್ಷ ರು.ಗಳನ್ನು ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ಬೆಂಗಳೂರು ನಗರದ 100 ಪೊಲೀಸ್‌ ಠಾಣೆಗಳಲ್ಲಿ ಹೆಲ್ಪ್‌ ಡೆಸ್ಕ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ ಎಂದು ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ತುಮಕೂರಿನಲ್ಲಿ ದನ ಮೇಯಿಲು ತೆರಳಿದ್ದ ಮಹಿಳೆಯ ಅತ್ಯಾಚಾರ ನಡೆದಿದ್ದ ಪ್ರಕರಣವು ವಿಧಾನಸಭೆ ಅಧಿವೇಶನದಲ್ಲಿ ಬಿರುಸಿನ ಚರ್ಚೆ ನಡೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts