ಸಂಸ್ಕೃತ ವಿವಿಯಲ್ಲಿ ಅವ್ಯವಹಾರ; ಸ್ವಜಾತಿ, ಒಳಪಂಗಡಕ್ಕೆ ಮನ್ನಣೆ, ಕನ್ನಡ ಸಂಸ್ಕೃತಿಗೆ ನಿಂದನೆ

ಬೆಂಗಳೂರು; ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸ್ವಜಾತಿ, ಒಳಪಂಗಡ, ಭಾಷೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪರೀಕ್ಷಾ ಅವ್ಯವಹಾರದಲ್ಲಿ ನಿರತರಾಗಿದ್ದಾರೆ! ಆಂತರಿಕ ಅಂಕ ನೀಡಿಕೆಯಲ್ಲಿಯೂ ಪ್ರಾಧ್ಯಾಪಕರು ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಮತ್ತು ಮಲೆಯಾಳಿ ಭಾಷೆಗೆ ಒತ್ತು ನೀಡಿ ಕನ್ನಡ ಸಂಸ್ಕೃತಿಯನ್ನು ನಿಂದಿಸುತ್ತಿದ್ದಾರೆ ಎಂಬ ಗುರುತರವಾದ ಆರೋಪವೂ ಇದೀಗ ಕೇಳಿ ಬಂದಿದೆ.

ಬೆಂಗಳೂರಿನ ಅನಂತ್‌ ಐತಾಳ್‌ ಎಂಬುವರು ಈ ಕುರಿತು ಲಿಖಿತ ದೂರನ್ನು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳುವ ಸಂಬಂಧ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಿಗೆ 2021ರ ಅಕ್ಟೋಬರ್‌ 1ರಂದು ಪತ್ರ ಬರೆದಿದ್ದಾರೆ. ದೂರಿನ ಪತ್ರ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಶ್ವವಿದ್ಯಾಲಯದದಲ್ಲಿ ಹಲವು ಪ್ರಾಧ್ಯಾಪಕರು ಕಳೆದ ಹಲವು ವರ್ಷಗಳಿಂದಲೂ ತಮಗೆ ಬೇಕಾದ ಹಾಗೆ ಮನಸೋ ಇಚ್ಛೆಯಿಂದ ವರ್ತಿಸುತ್ತಿದ್ದರೂ ಉನ್ನತ ಶಿಕ್ಷಣ ಇಲಾಖೆ ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

‘ವ್ಯಾಕರಣ ವಿಭಾಗದ ಮುಖ್ಯಸ್ಥೆ ಶಿವಾನಿ ಅವರು ಎರಡನೇ ಷಣ್ಮಾಸಿಕದಲ್ಲಿ ಬೋಧನೆ ಸಂದರ್ಭದಲ್ಲಿ ಮಲೆಯಾಳಿ ಸಂಸ್ಕೃತಿಯನ್ನು ಹೊಗಳಿ ಕನ್ನಡ ಸಂಸ್ಕೃತಿಯನ್ನು ನಿಂದಿಸಿದ್ದಾರೆ. ಈ ಬಗ್ಗೆ ಕುಲಪತಿಗಳನ್ನು ಗಮನ ಸೆಳೆದಿದ್ದೇನೆ,’ ಎಂದು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ದೂರಿನಲ್ಲಿ ವಿವರಿಸಿದ್ದಾರೆ.

ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪಾಠ ಪ್ರವಚನಗಳು ನಿಗದಿತ ಸಮಯಕ್ಕೆ ಸರಿಯಾಗಿ ನಡೆಯುವುದಿಲ್ಲ. ಅವ್ಯವಸ್ಥೆಯಿಂದ ಕೂಡಿವೆ. ವ್ಯಾಕರಣದ ಕುರಿತು ಪ್ರಾಧ್ಯಾಪಕರಿಗೆ ಸರಿಯಾದ ತಿಳಿವಳಿಕೆ ಇಲ್ಲ. ತೋರಿಕೆಗೆ ಮಾತ್ರ ಅಲ್ಪಾವಧಿಯಲ್ಲಿಯೇ ವಿಷಯವನ್ನು ಅಪೂರ್ಣವಾಗಿ ಪೂರ್ಣಗೊಳಿಸುತ್ತಿದ್ದಾರೆ. ಹಲವು ಬಾರಿ ಕುಲಪತಿ, ಕುಲಸಚಿವರು ಮತ್ತು ವಿಭಾಗದ ಮುಖ್ಯಸ್ಥರಿಗೆ ಅನಂತ್‌ ಐತಾಳ್‌ ಅವರು ಗಮನಕ್ಕೆ ತಂದಿರುವುದು ದೂರಿನಿಂದ ತಿಳಿದು ಬಂದಿದೆ.

ಪರೀಕ್ಷಾ ಅವ್ಯವಹಾರ

ಪ್ರಥಮ ವರ್ಷದ ಷಣ್ಮಾಸಿಕ ಪರೀಕ್ಷೆ ಫಲಿತಾಂಶ ನೀಡಿಕೆಯಲ್ಲಿ ಅವ್ವವಹಾರ ನಡೆದಿದೆ ಎಂದು ದೂರಿರುವ ಅನಂತ್‌ ಐತಾಳ್‌ ಅವರು ಸ್ವ ಜಾತಿ, ಒಳಪಂಗಡ, ತಮ್ಮ ಭಾಷೆ ಆಧಾರದ ಮೇಲೆ ಅಂಕಗಳನ್ನು ನೀಡುತ್ತಿದ್ದಾರೆ. ವಿಷಯದ ಬಗ್ಗೆ ತಿಳಿವಳಿಕೆ ಇಲ್ಲದಿರುವವರಿಗೂ ಪ್ರತಿಶತ 70ರಿಂದ 80 ಅಂಕಗಳನ್ನು ನೀಡುತ್ತಿದ್ದಾರೆ ಎಂದು ಅರೋಪಿಸಿದ್ದಾರೆ.

ಕಾರೇಕಾ ವೃತ್ತಿ ಪತ್ರಿಕೆಯ ಆಂತರಿಕ ಅಂಕಗಳನ್ನು ನೀಡುವಾಗ 25 ಅಂಕಗಳಲ್ಲಿ 23 ರಷ್ಟು ಆಂತರಿಕ ಅಂಕಗಳನ್ನು ಪಡೆದಿದ್ದರೂ ಪರೀಕ್ಷೆ ಫಲಿತಾಂಶದಲ್ಲಿ 20 ಅಂಕಗಳನ್ನು ನೀಡಿ ಎಲ್ಲರಿಗಿಂತಲೂ ಕಡಿಮೆ ಅಂಕ ನಮೂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಲೋಪವನ್ನು ಸರಿಪಡಿಸಬೇಕು ಎಂದು ನೀಡಿದ್ದ ಮನವಿ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನಂತ್‌ ಐತಾಳ್‌ ಅವರು ದೂರಿನಲ್ಲಿ ವಿವರಿಸಿದ್ದಾರೆ. ಈ ದೂರನ್ನಾಧರಿಸಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್‌ನಾಯಕ್‌ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts