ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರದ ಜಾಹೀರಾತಿಗೆ 1.02 ಕೋಟಿ ವೆಚ್ಚ

ಬೆಂಗಳೂರು; ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನ ಕುರಿತು ಆಡಳಿತ ಮತ್ತು ಪ್ರತಿಪಕ್ಷದ ನಡುವೆ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ ಈ ನೀತಿಗೆ ಚಾಲನೆ ಕುರಿತು ದಿನಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿಗೆ 1.02 ಕೋಟಿ ರು ಗಳನ್ನು ಬಿಜೆಪಿ ಸರ್ಕಾರವು ವೆಚ್ಚ ಮಾಡಿದೆ.

ರಾಜ್ಯದಲ್ಲಿ ನೂತನವಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಚಾಲನೆ ಕುರಿತು 2021ರ ಆಗಸ್ಟ್‌ 24ರಂದು ರಾಜ್ಯ ಮಟ್ಟದ ದಿನಪತ್ರಿಕೆಗಳಿಗೆ ಏಜೆನ್ಸಿಗಳ ಮೂಲಕ ಜಾಹೀರಾತು ಬಿಡುಗಡೆ ಮಾಡಿತ್ತು. ಇದರ ಒಟ್ಟು ವೆಚ್ಚ 1,02,53, 565 ರು. ಎಂಬುದು ವಾರ್ತಾ ಇಲಾಖೆಯು ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

ಎಂಸಿ ಅಂಡ್‌ ಎ ಮೂಲಕ ವಿಜಯಕರ್ನಾಟಕ, ಟೈಮ್ಸ್‌ ಆಫ್‌ ಇಂಡಿಯಾ, ಹಿಂದೂಸ್ತಾನ್‌ ಟೈಮ್ಸ್‌, ವಾರ್ತಾಭಾರತಿ ದಿನಪತ್ರಿಕೆಗಳಿಗೆ ಒಟ್ಟು 40, 21, 863 ರು.ಗಳನ್ನು ಪಾವತಿಸಲಾಗಿದೆ. ಅದೇ ರೀತಿ ಸ್ವ್ಯಾನ್‌ ಮೂಲಕ ದಿ ಹಿಂದೂ, ಡೆಕ್ಕನ್‌ ಹೆರಾಲ್ಡ್‌, ಸಂಜೆವಾಣಿ ದಿನಪತ್ರಿಕೆಗಳಿಗೆ 12,76,577 ರು., ಅಡ್ವಿಟ್‌ ಏಜೆನ್ಸಿ ಮೂಲಕ ವಿಜಯವಾಣಿ, ರಾಜಸ್ಥಾನ ಪತ್ರಿಕೆಗೆ 10,38,693 ರು., ಕವಿತಾ ಏಜೆನ್ಸಿ ಮೂಲಕ ಉದಯವಾಣಿ, ಹಿಂದೂಸ್ತಾನ್‌, ದೆಹಲಿ ವಾರ್ತೆಗೆ 9,39,811 ರು., ಝೇಂಕಾರ್‌ ಮೂಲಕ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ 8,98,583 ರು., ಜಗದಾಳೆ ಮೂಲಕ ಪ್ರಜಾವಾಣಿ, ಅಮರ್‌ ಉಜಾಲಗೆ 8,92,149 ರು. ಮೊತ್ತದ ಜಾಹೀರಾತು ಬಿಡುಗಡೆಯಾಗಿದೆ.

ಹಾಗೆಯೇ ಹೊಸದಿಗಂತ ಮತ್ತು ವಿಶ್ವವಾಣಿಗೆ ಆಕಾರ್‌ ಏಜೆನ್ಸಿ ಮೂಲಕ 7,12,152 ರು., ಇಂಡಿಯನ್‌ ಎಕ್ಸ್‌ಪ್ರೆಸ್‌, ದಕ್ಷಿಣ್‌ ಭಾರತ್‌, ಈ ಸಂಜೆ ಗೆ ಎಲ್‌ ಸಿ ಏಜೆನ್ಸಿ ಮೂಲಕ 4,73,737 ರು., ಶ್ರೇಷ್ಠ ಏಜೆನ್ಸಿ ಮೂಲಕ ದೈನಿಕ್‌ ಜಾಗರಣ್‌ಗೆ 5,13,889 ರು. ಮೊತ್ತದ ಜಾಹೀರಾತು ನೀಡಲಾಗಿದೆ.

ಆದರೆ ವಿಧಾನಪರಿಷತ್‌ ಸದಸ್ಯ ಹರೀಶ್‌ಕುಮಾರ್‌ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2021ರ ಆಗಸ್ಟ್‌ 24ರಂದು ನೀಡಿದ್ದ ಜಾಹೀರಾತಿಗೆ 98, 39, 252 ರು. ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ. 4, 14, 313 ರು. ವ್ಯತ್ಯಾಸ ಕಂಡು ಬಂದಿದೆ.

ಇನ್ನು ಜನಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಶೇಷ ಪುರವಣಿ ತಂದಿದ್ದ ವಾರ್ತಾಭಾರತಿ ದಿನಪತ್ರಿಕೆಗೆ 2,19, 870 ರು. ಮೊತ್ತದ ಜಾಹೀರಾತು ವೆಚ್ಚ ಭರಿಸಿರುವುದು ತಿಳಿದು ಬಂದಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಅನುಷ್ಠಾನಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿತ್ತು. ಯಾವುದೇ ಚರ್ಚೆ ನಡೆಸದೆ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ನಿಲುವು, ದೇಶದ ಒಕ್ಕೂಟ ತತ್ವಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

ಈ ಆದೇಶದಲ್ಲಿ ಹಲವಾರು ಅಪಾಯಕಾರಿಯಾದ ಅಂಶಗಳಿವೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಬಡವರ, ಮಧ್ಯಮ ವರ್ಗದವರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಡಲಾಗಿದೆ ಎಂದು ಅವರು ಟೀಕಿಸಿದ್ದರು.

ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ನಡೆದಿದ್ದ ಚರ್ಚೆಯು ತಾರರಕ್ಕೇರಿತ್ತು. ಸರ್ಕಾರ ತರುತ್ತಿರುವ ಎನ್‌ಇಪಿ ನಾಗ್ಪುರ ಶಿಕ್ಷಣ ನೀತಿ, ಇದು ಆರ್ ಎಸ್ ಎಸ್ ಅಜೆಂಡಾ ಇಟ್ಟುಕೊಂಡು ತರಲಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.

ಆಗ ಡಿ ಕೆ ಶಿವಕುಮಾರ್ ಇದು ನ್ಯಾಷನಲ್ ಎಜುಕೇಶನ್ ಪಾಲಿಸಿ ಅಲ್ಲ. ಅದು ನಾಗಪುರ ಎಜುಕೇಶನ್ ಪಾಲಿಸಿ ಎಂದಿದ್ದರು. ಈ ವೆಳೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಕ್ಕೆ ತಿರುಗೇಟು ನೀಡಲು ಯತ್ನಿಸಿದ್ದರು. ರಾಷ್ಟ್ರ ನಿರ್ಮಾಣ ಮಾಡುವಂತಹ, ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಶಿಕ್ಷಣ ವಿಧಾನದಲ್ಲಿ ಈ ಬದಲಾವಣೆಯನ್ನು ತಂದಿದೆ, ನಾವು ಹೆದರುವುದಿಲ್ಲ. ಅದನ್ನು ಜಾರಿ ಮಾಡಿಯೇ ಸಿದ್ದ ಎಂದ ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts