ಉಪ್ಪಾರ್‌ ಸಹಭಾಗಿತ್ವದ ಎಡಿಯು ಕಂಪನಿಗೆ ನಿಯಮಬಾಹಿರವಾಗಿ 1,141 ಕೋಟಿ ಪಾವತಿ ಆರೋಪ

ಬೆಂಗಳೂರು; ಕೃಷ್ಣ ಜಲಭಾಗ್ಯ ನಿಗಮದ ಹಲವು ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರ ಡಿ ವೈ ಉಪ್ಪಾರ್‌ ಸಹಭಾಗಿತ್ವದ ಮತ್ತು ಕೃಷ್ಣ ಜಲಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್‌ ಚಿಣಿ ಅವರ ಅಳಿಯ ಅರುಣ್‌ ಡಿ ಉಪ್ಪಾರ್‌ ಒಡೆತನದ ಎಡಿಯು ಇನ್ಫ್ರಾ ಕಂಪನಿಗೆ ನಿಯಮಬಾಹಿರವಾಗಿ ಮತ್ತು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ 1,141 ಕೋಟಿ ರು. ಪಾವತಿಸಲಾಗಿದೆ ಎಂಬ ಹೊಸ ಆರೋಪ ಇದೀಗ ಕೇಳಿ ಬಂದಿದೆ.

ಈ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿಮಠ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಮತ್ತು ಶ್ರೀರಾಮುಲು ಸೇರಿದಂತೆ ಹಲವರಿಗೆ ಸಲ್ಲಿಸಿರುವ ದೂರಿನಲ್ಲಿ ಗುರುತರ ಆರೋಪಗಳನ್ನು ಮಾಡಿದ್ದಾರೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಅನುಕೂಲವಾಗದ ಮತ್ತು ಅವರ ಅಭಿವೃದ್ಧಿಗೆ ಪೂರಕವಾಗದ ಹಾಗೂ ಫಲಾನುಭವಿಗಳೇ ಇಲ್ಲದ ಕಾಮಗಾರಿಗಳನ್ನು ನಿರ್ವಹಿಸಿದೆ ಎಂದು ಆರೋಪಿಸಲಾಗಿರುವ ಅರುಣ್‌ ಡಿ ಉಪ್ಪಾರ್‌ ಒಡೆತನದ ಎಡಿಯು ಇನ್ಫ್ರಾ ಕಂಪನಿಗೆ ನಿಯಮಬಾಹಿರ ಮತ್ತು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ 1,141 ಕೋಟಿ ರು.ಗಳನ್ನು ಕೃಷ್ಣ ಭಾಗ್ಯ ಜಲನಿಗಮವು ಪಾವತಿಸಿದೆ. ಲೆಕ್ಕ ಶೀರ್ಷಿಕೆ ಬದಲಾವಣೆ ಮಾಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂಬ ಆರೋಪಕ್ಕೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್‌ ಚಿಣಿ ಅವರು ಗುರಿಯಾಗಿದ್ದಾರೆ.

ಅಕ್ರಮ ಹಣ ವಹಿವಾಟು ಮತ್ತು ತೆರಿಗೆ ವಂಚನೆ ಆರೋಪದ ಮೇಲೆ ಗುತ್ತಿಗೆದಾರ ಡಿ ವೈ ಉಪ್ಪಾರ್‌ ಅವರ ಕಚೇರಿ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ ಕೃಷ್ಣ ಜಲಭಾಗ್ಯ ನಿಗಮದ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರಿಗೆ ನಿಯಮಬಾಹಿರವಾಗಿ ಕೋಟ್ಯಂತರ ರುಪಾಯಿ ಪಾವತಿಸಲಾಗಿದೆ ಎಂದು ಆರೋಪಿಸಿರುವ ಬರೆದಿರುವ ದೂರು ಇದೀಗ ಮುನ್ನೆಲೆಗೆ ಬಂದಿವೆ.

ಕೃಷ್ಣ ಜಲಭಾಗ್ಯ ನಿಗಮದ ಯೋಜನೆ ಕಾಮಗಾರಿಗಳಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರು. ಅನುದಾನವನ್ನು ಆ ಸಮುದಾಯಗಳಿಗೆ ನಿರ್ದಿಷ್ಟವಾಗಿ ಖರ್ಚು ಮಾಡಲು ಮೀಸಲಿಡಲಾಗಿದೆ. ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಸಂಬಂಧಪಡದ ಕಾಮಗಾರಿಗಳಿಗೆ ಕಾನೂನುಬಾಹಿರವಾಗಿ ಅಕ್ರಮವಾಗಿ ಲೆಕ್ಕ ಶೀರ್ಷಿಕೆ ಬದಲಾವಣೆ ಮಾಡಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಅನುದಾನ ಪಾವತಿಸುವ ಮೂಲಕ ಪ್ರಭಾಕರ ಚಿಣಿ ಅವರು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ದೂರಿನ ಪತ್ರದಿಂದ ತಿಳಿದು ಬಂದಿದೆ.

850 ಕೋಟಿ ದುರ್ಬಳಕೆ

2017-18ನೇ ಸಾಲಿನಿಂದ ಕೃಷ್ಣ ಭಾಗ್ಯ ಜಲನಿಗಮದಲ್ಲಿ ಭೂ ಸ್ವಾಧೀನ ಮತ್ತು ಪುನರ್‌ವಸತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಲು ಪ್ರತ್ಯೇಕ ಲೆಕ್ಕಶೀರ್ಷಿಕೆಯಡಿ ಎಸ್‌ಸಿಸಪಿ ಟಿಎಸ್‌ಪಿ ಯೋಜನೆ ಒಳಗೊಂಡಂತೆ ಅನುದಾನ ಕಲ್ಪಿಸಲಾಗಿದೆ. ಆದರೆ ಇದುವರೆಗೂ ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ಮನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅನುದಾನವನ್ನು ಖರ್ಚು ಮಾಡಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಬಿಡುಗಡೆ ಮಾಡಲಾದ ಅನುದಾನ 631.59 ಕೋಟಿ ಪೈಕಿ 214.16 ಕೋಟಿ ರು. 7(ಡಿ) ಅಡಿ ವೆಚ್ಚ ಮಾಡಲಾಗಿದೆ. ಇದಲ್ಲದೆ 91 ಕೋಟಿ ರು.,ನಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ ಕಾಮಗಾರಿಗಳಿಗೆ ಅನಮೋದನೆ ನೀಡಲಾಗಿದೆ. ಒಟ್ಟು 305.10 ಕೋಟಿ ಅನುದಾನ ಉಪಯೋಗಿಸಲಾಗಿದೆ. ಆದರೆ ಕಳೆದ 2 ವರ್ಷಗಳಿಂದ ಮನೆಗಳ ನಿರ್ಮಾಣದ ಕುರಿತು ಫಲಾನುಭವಿಗಳ ಪಟ್ಟಿಯನ್ನು ಸಂಬಂಧದಪಟ್ಟ ವಿಭಾಗದಿಂದ ಮತ್ತು ಸಕ್ಷಮ ಪ್ರಾಧಿಕಾರದಿಂದ ಅಂತಿಮಗೊಳಿಸದೇ ಇರುವುದರಿಂದ ಈ ಮನೆಗಳ ನಿರ್ಮಾಣಕ್ಕಾಗಿ ಇನ್ನೂ ಸಹ ಟೆಂಡರ್‌ ಕರೆದಿಲ್ಲ ಹೀಗಾಗಿ ಅನುದಾನ ಖರ್ಚು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭವಾನಿಮಠ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಆಯೋಗವನ್ನೂ ದಿಕ್ಕುತಪ್ಪಿಸಿದರೇ ಚಿಣಿ?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಿದ್ದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮುಕುಂದರಾವ್‌ ಭವಾನಿಮಠ ಅವರು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗಕ್ಕೂ ದೂರು ನೀಡಿದ್ದರು. ಈ ಸಂಬಂಧ ಪ್ರಭಾಕರ ಚಿಣಿ ಅವರು ಆಯೋಗವನ್ನೂ ದಿಕ್ಕು ತಪ್ಪಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಸರ್ಕಾರದ ನಿರ್ದೇಶನದಂತೆ 2019-20ನೇ ಸಾಲಿನಲ್ಲಿ ಉಳಿತಾಯ ಮೊತ್ತ ಸೇರಿ ಕಾರ್ಯಾದೇಶ ನೀಡದೇ ಇರುವ ಹಾಗೂ ಕಾರ್ಯಾದೇಶ ನೀಡಿದ್ದರೂ ಪ್ರಾರಂಭಿಸದೇ ಇರುವ ಕಾಮಗಾರಿಗಳ ಮೊತ್ತವನ್ನೂ ಸಹ ಶೇ.100ರಷ್ಟನ್ನೂ 7 (ಡಿ) ಅಡಿ ವೆಚ್ಚ ಮಾಡುವಂತೆ ತಿಳಿಸಿರುವುದರಿಂದ ಈ ಮೊತ್ತವನ್ನು ಸರ್ಕಾರದ ಆದೇಶದಂತೆ 7(ಡಿ) ಅಡಿಯಲ್ಲಿ ಡೀಮ್ಡ್‌ ಎಕ್ಸ್‌ಪೆಂಡೀಚರ್‌ ಆಗಿ ಉಪಯೋಗಿಸಿಕೊಳ್ಳಲಾಗಿದೆ.

ಅಲ್ಲದೆ 2020-21ನೇ ಸಾಲಿಗೆ ಒದಗಿಸಿ ಬಿಡುಗಡೆ ಮಾಡಲಾದ ಸಂಪೂರ್ಣ ಅನುದಾನವನ್ನು ಸರ್ಕಾರದ ನಿರ್ದೇಶನದಂತೆ 7(ಡಿ) ಅಡಿ ಡೀಮ್ಡ್‌ ವೆಚ್ಚದಡಿ ಖರ್ಚು ಮಾಡಲಾಗಿದೆ. ಆರ್ಥಿಕ ಇಲಾಖೆ ನಿರ್ದೇಶನದಂತೆ ಎಲ್ಲಾ 4 ನಿಗಮಗಳಲ್ಲಿ ಕ್ರಮ ವಹಿಸಲಾಗಿದೆ. ಈ ಬಗ್ಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಮೇರೆಗೆ ಸರ್ಕಾರದ ವರದಿ ಸಹ ನೀಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಲಿಖಿತ ರೂಪದಲ್ಲಿ ರಾಜ್ಯ ಅನುಸೂಚಿತ ಜಾತಿ ಮತ್ತು ಪಂಗಡಗಳ ಆಯೋಗದ ನೋಟೀಸ್‌ಗೆ ಉತ್ತರವಾಗಿ ನೀಡಿದ್ದಾರೆ ಎಂದು ಭವಾನಿ ಮಠ ಅವರು ಸಲ್ಲಿಸಿರುವ ದೂರಿನಿಂದ ಗೊತ್ತಾಗಿದೆ.

2015-16ರಿಂದ 2021-22ನೇ ಸಾಲಿನವರೆಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಉಜನೆಯ ಉಳಿಕೆ ಮೊತ್ತದಲ್ಲಿ ನಿಗಮದಿಂದ ವಿವಿಧೆಡೆ ಮಂಜೂರಾತಿ ನೀಡಿ ಮತ್ತು ಕಾರ್ಯಾದೇಶ ನೀಡಿ ಆರಂಭಿಸಿರುವ ಕಾಮಗಾರಿಗಳು (ಪೂರ್ಣಗೊಳ್ಳದ ಕಾಮಗಾರಿ) ಮತ್ತು ಮುಂದುವರೆದ ಕಾಮಗಾರಿಗಳಿಗೆ ಪಾವತಿಸಬೇಕಾದ ಮೀಸಲಿಟ್ಟು ಅನುದಾನವನ್ನೂ ಸಹ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗೆ ಸಂಬಂಧಪಡದ ಇತರೆ ಕಾಮಗಾರಿಗಳಿಗೆ ಪಾವತಿಸಿ ಉಳಿತಾಯದ ಮೊತ್ತದಲ್ಲಿ ಯಾವುದೇ ಶಿಲ್ಕು ಇಟ್ಟಿಲ್ಲ. ಎಲ್ಲಾ ಅನುದಾನವನ್ನೂ ಖರ್ಚು ಮಾಡಿ ದುರುಪಯೋಗಪಡಿಸಿಕೊಂಡಿದ್ದಾರೆ. ನಿಗಮದ ಖಾತೆಯಲ್ಲಿ ಎಷ್ಟು ಮೊತ್ತ ಜಮಾ ಇರುವ ಬಗ್ಗೆ ಮಾಹಿತಿ ಪಡೆದರೆ ಸತ್ಯಾಂಶ ಹೊರಬೀಳುತ್ತದೆ.

ಮುಕುಂದರಾವ್‌ ಭವಾನಿ ಮಠ, ಮಾಜಿ ಅಧ್ಯಕ್ಷ ಕೊಪ್ಪಳ ಜಿಲ್ಲಾ ಪಂಚಾಯತ್‌

 

ಇಲ್ಲಿ ಉದ್ದೇಶಪೂರ್ವಕವಾಗಿ ಕಳೆದ 2 ವರ್ಷಗಳಿಂದ ಮನೆಗಳ ನಿರ್ಮಾಣದ ಕುರಿತು ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ವಿಭಾಗದಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅಂತಿಮಗೊಳಿಸಿಲ್ಲ. ಈ ಮನೆಗಳ ನಿರ್ಮಾಣಕ್ಕಾಗಿ ಇನ್ನೂ ಟೆಂಡರ್‌ ಸಹ ಕರೆದಿಲ್ಲ. ಇದರ ಮೂಲ ಉದ್ಧೇಶ ಅನುದಾನವನ್ನು ಖರ್ಚು ಮಾಡದೇ ತಮಗೆ ಬೇಕಾದ ಗುತ್ತಿಗೆದಾರರ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಸಂಬಂಧಪಡದ ಕಾಮಗಾರಿಗಳಿಗೆ ಡೀಮ್ಡ್‌ ವೆಚ್ಚ 7(ಡಿ)ನಿಯಮವನ್ನು ದುರುದ್ದೇಶದಿಂದ ತಮಗೆ ಅನುಕೂಲಕರವಾಗಿ ಉಪಯೋಗಿಸಿಕೊಂಡು ತಮ್ಮ ಹಿಂಬಾಲಕ ಗುತ್ತಿಗೆದಾರರಿಗೆ ಅನುದಾನವನ್ನು ಪಾವತಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗಕ್ಕೆ ಹಾನಿಕರವಾಗಿ ಉಪಯೋಗಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸರ್ಕಾರದ ನಿರ್ದೇಶನದಂತೆ 2020ರ ಏಪ್ರಿಲ್‌ 1ರಲ್ಲಿ 2019-20ರವರೆಗೆ ಬಳಕೆಯಾಗದೇ ಉಳಿದಿದ್ದ 401.77 ಕೋಟಿ ರು. ಹಾಗೂ 2020-21ನೇ ಸಾಲಿನಲ್ಲಿ ಬಿಡುಗಡೆಯಾದ 384.86 ಕೋಟಿ ರುಗಳನ್ನು ಕೃಷ್ಣ ಮೇಲ್ದಂಡೆ ಯೋಜನೆ ಹಂತ-3 ಕೆರೆ ತುಂಬುವ ಕಾಮಗಾರಿಗಳು ಹಾಗೂ ಇತರೆ ಕಾಮಗಾರಿಗಳಿಗೆ 7(ಡಿ) ಅಡಿಯಲ್ಲಿ ಡೀಮ್ಡ್‌ ಎಕ್ಸ್‌ಪೆಂಡೀಚರ್‌ ಆಗಿ ಉಪಯೋಗಿಸಿಕೊಳ್ಳಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಆಯೋಗಕ್ಕೆ ಉತ್ತರ ನೀಡಿ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಎಲ್ಲಾ ನಿಯಮಾವಳಿಗಳನ್ನು ಮತ್ತು ಕಾನೂನುಗಳನ್ನು ಅತ್ಯಂತ ಚಾಣಾಕ್ಷತನದಿಂದ ಉಲ್ಲಂಘಿಸಲಾಗಿದೆ. 401.77ಕೋಟಿ ಮತ್ತು 384.86 ಕೋಟಿ ರು.ಗಳ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಯಾವುದೇ ಅನುಕೂಲವಾಗದ ಅವರ ಅಭಿವೃದ್ಧಿಗೆ ಪೂರಕವಾಗದ ಮತ್ತು ಫಲಾನುಭವಿಗಳೇ ಇಲ್ಲದ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂದು ದೂರಲಾಗಿದೆ.

ಭೂ ಸ್ವಾಧೀನ ಮತ್ತು ಪುನರ್‌ ವಸತಿ ಹಾಗೂ ಪುನರ್‌ ನಿರ್ಮಾಣ ಕೆಲಸಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು 2018ರ ಡಿಸೆಂಬರ್‌ 31ರಂದು ನಿಗಮದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದು ಸುಮಾರು 2 ವರ್ಷ 8 ತಿಂಗಳು ಗತಿಸಿದರೂ ಮತ್ತು ವಿಷಯವು ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸಂಬಂಧಿಸಿದ್ದರೂ ಸಹ ಕ್ರಮ ಕೈಗೊಂಡಿಲ್ಲ.

ಈ ಕುರಿತು ಸರ್ಕಾರದಿಂದ ತುರ್ತು ನಿರ್ದೇಶನಗಳ ಕುರಿತು ನೆನಪೋಲೆ ಪತ್ರಗಳನ್ನು ಬರೆದು ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಪ್ರಯತ್ನಿಸದೆಯೇ ಉದ್ದೇಶಪೂರ್ವಕವಾಗಿ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಪಾವತಿಸಲು ತಂತ್ರಗಾರಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

SUPPORT THE FILE

Latest News

Related Posts