ಮೋದಿ ಹುಟ್ಟುಹಬ್ಬದ ಪ್ರಾಯೋಜಿತ ಪುರವಣಿಯ 44.85 ಲಕ್ಷ ರು .ವೆಚ್ಚ ಮಾಹಿತಿ ಮುಚ್ಚಿಟ್ಟರೇಕೆ?

ಬೆಂಗಳೂರು; ಕಳೆದ 2 ವರ್ಷಗಳಿಂದ (2020-2021) ರಾಜ್ಯ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿನ ವಿವರ ಮತ್ತು ಪತ್ರಿಕೆಗಳಿಗೆ ಪಾವತಿಸಿರುವ ಲಕ್ಷಾಂತರ ರುಪಾಯಿಗಳ ವಿವರವನ್ನು ಒದಗಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಮೋದಿ ಹುಟ್ಟು ಹಬ್ಬದ ಅಂಗವಾಗಿ ಪತ್ರಿಕೆಗಳು ಪ್ರಕಟಿಸಿದ್ದ ಪ್ರಾಯೋಜಿತ ಪುರವಣಿಗಳ ವೆಚ್ಚದ ವಿವರವನ್ನು ಮುಚ್ಚಿಟ್ಟಿದೆ.

ಪತ್ರಿಕೆಗಳಿಗೆ ನೀಡಿರುವ ಜಾಹೀರಾತು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ. 16ರಂದು ನಡೆದ ಅಧಿವೇಶನದಲ್ಲಿ ವಿಧಾನಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌ ಅವರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಮೋದಿ ಹುಟ್ಟು ಹಬ್ಬದ ಅಂಗವಾಗಿ ಪತ್ರಿಕೆಗಳು ಹೊರತಂದಿದ್ದ ವಿಶೇಷ ಪುರವಣಿಗಳ ಕುರಿತು ಮಾಹಿತಿ ನೀಡದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ರಾಜ್ಯಮಟ್ಟದ ದಿನಪತ್ರಿಕೆಗಳು 2020ರ ಸೆ.17ರಂದು ನಾಲ್ಕು ಪುಟಗಳ ವಿಶೇಷ ಪ್ರಾಯೋಜಿತ ಪುರವಣಿಗಳನ್ನು ಪ್ರಕಟಿಸಿದ್ದವು. ಈ ಸಂಬಂಧ ರಾಜ್ಯದ ಬೊಕ್ಕಸದಿಂದ 44.85 ಲಕ್ಷ ರು.ಗಳನ್ನು ಜಾಹೀರಾತು ವೆಚ್ಚವೆಂದು ಪತ್ರಿಕೆಗಳಿಗೆ ಪಾವತಿಸಿತ್ತು.

ಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌ ಅವರು ಕೇಳಿದ್ದ ಪ್ರಶ್ನೆಗೆ 17 ಪುಟಗಳ ಉತ್ತರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒದಗಿಸಿದ್ದಾರೆ. 2020ರ ಏಪ್ರಿಲ್‌ 2ರಿಂದ 2021ರ ಆಗಸ್ಟ್‌ 24ರವರೆಗೆ ವಿವಿಧ ಶೀರ್ಷಿಕೆಗಳಡಿಯಲ್ಲಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತಿನ ವಿವರವನ್ನು ನೀಡಿರುವ ಬಸವರಾಜ ಬೊಮ್ಮಾಯಿ ಅವರು 2020ರ ಸೆಪ್ಟಂಬರ್‌ 17ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕುರಿತು ಪತ್ರಿಕಾ ಜಾಹೀರಾತಿನ ವಿವರ ಒದಗಿಸಿ ಅದೇ ದಿನದಂದು ಅಂದರೆ ಸೆ.17ರಂದು ಪ್ರಧಾನಿ ಮೋದಿ ಹುಟ್ಟು ಹಬ್ಬದ ಅಂಗವಾಗಿ ಪತ್ರಿಕೆಗಳು ಹೊರತಂದಿದ್ದ ಪ್ರಾಯೋಜಿತ ಪುರವಣಿಗಳಿಗೆ ಪಾವತಿಸಿರುವ ಮೊತ್ತದ ವಿವರವನ್ನು ಒದಗಿಸಿಲ್ಲ.

ರಾಜ್ಯಕ್ಕೆ ಜಿಎಸ್‌ಟಿ ಸೇರಿದಂತೆ ವಿವಿಧ ರೀತಿಯ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಒಕ್ಕೂಟ ಸರ್ಕಾರವು ಎಸಗುತ್ತಿರುವ ತಾರತಮ್ಯ ಮತ್ತು ಪ್ರವಾಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ವಾಸ್ತವ ಪರಿಹಾರ ಮೊತ್ತವನ್ನು ಹಂಚಿಕೆ ಮಾಡುವಲ್ಲಿ ಅನ್ಯಾಯ ಎಸಗುತ್ತಿದೆ ಎಂಬ ಬಲವಾದ ಆರೋಪಗಳ ನಡುವೆಯೇ ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ರಾಜ್ಯದ ಬೊಕ್ಕಸದಿಂದ 44.85 ಲಕ್ಷ ರು.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಿತ್ತು.

ಜಾಹೀರಾತು ವೆಚ್ಚದ ವಿವರ (ಪತ್ರಿಕೆವಾರು)

ವಿಜಯವಾಣಿ – 9,86,972 ರು.

ವಿಜಯ ಕರ್ನಾಟಕ – 6,68,239 ರು.

ಪ್ರಜಾವಾಣಿ – 7,42,522 ರು.

ಉದಯವಾಣಿ – 4,84,332 ರು.

ಕನ್ನಡಪ್ರಭ – 3,95,640 ರು.

ಸಂಯುಕ್ತ ಕರ್ನಾಟಕ – 4,16,164 ರು.

ಹೊಸ ದಿಗಂತ – 3,95,640 ರು.

ವಿಶ್ವವಾಣಿ – 3,95,640 ರು.

ಈ ಜಾಹೀರಾತನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನೇರವಾಗಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿಲ್ಲ. ಬದಲಿಗೆ ಸರ್ಕಾರದಿಂದ ಅಂಗೀಕೃತ ಏಜೆನ್ಸಿಗಳ ಮೂಲಕ ಜಾಹೀರಾತನ್ನು ಬಿಡುಗಡೆ ಮಾಡಿದೆ. ಆದರೆ ಪ್ರಾದೇಶಿಕ, ಜಿಲ್ಲಾ ಮತ್ತು ತಾಲೂಕುಮಟ್ಟದ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.

ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ, ಪ್ರಧಾನಿ ಹುಟ್ಟು ಹಬ್ಬಕ್ಕೆ 44.85 ಲಕ್ಷ ರು.ಗಳನ್ನು ಜಾಹೀರಾತಿಗಾಗಿ ಖರ್ಚು ಮಾಡಿದ್ದು  ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು.

SUPPORT THE FILE

Latest News

Related Posts