ಇನ್ಫೋಸಿಸ್‌ಗಾಗಿ ಗೋಮಾಳ, ಜಲಕಾಯ ಕಣ್ಮರೆ; ಗೋ ದ್ರೋಹದ ವಿರುದ್ಧ ಮೊಳಗದ ಪಾಂಚಜನ್ಯ!

ಬೆಂಗಳೂರು; ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ದೇಶದ್ರೋಹಿ ಶಕ್ತಿಗಳ ಜತೆ ಇನ್ಫೋಸಿಸ್ ಕೈಜೋಡಿಸಿದೆ ಎಂದು ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ ನಿಯತಕಾಲಿಕೆಯು ಚರ್ಚೆ ಹುಟ್ಟು ಹಾಕಿರುವ ಬೆನ್ನಲ್ಲೇ ಕಾನೂನು ಇಲಾಖೆ ಅಸಮ್ಮತಿ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಎಚ್ಚರಿಕೆ ನಡುವೆಯೂ ರಾಜ್ಯ ಬಿಜೆಪಿ ಸರ್ಕಾರವು ಇನ್ಫೋಸಿಸ್‌ ಕಂಪನಿಗೆ ಸರ್ಜಾಪುರ ಬಳಿ 10 ಎಕರೆ ವಿಸ್ತೀರ್ಣದ ಗೋಮಾಳ, ಸರ್ಕಾರಿ ಕುಂಟೆ, ಖರಾಬು ಜಮೀನುಗಳನ್ನು ಅನುಗ್ರಹಿಸಿದ್ದ ಪ್ರಕರಣವು ಮುನ್ನೆಲೆಗೆ ಬಂದಿದೆ.

ಸರ್ಕಾರಿ ಮತ್ತು ಖರಾಬು, ಗೋಮಾಳ ಜಮೀನುಗಳನ್ನು ಇನ್ಫೋಸಿಸ್‌ ಸಂಸ್ಥೆಯ ಜಮೀನುಗಳಿಗೆ ಪರ್ಯಾಯವಾಗಿ ಅದಲು ಬದಲು ಮಾಡುವ ಪ್ರಸ್ತಾವನೆ ಕಳೆದ 12 ವರ್ಷಗಳಿಂದಲೂ ಸರ್ಕಾರದ ಮಟ್ಟದಲ್ಲಿತ್ತು. ಕರ್ನಾಟಕ ಭೂ ಮಂಜೂರಾತಿ ಅಧಿನಿಯಮಗಳ ಪ್ರಕಾರ ಅದಲು ಬದಲು ಮಾಡಲು ಅವಕಾಶಗಳಿಲ್ಲ. ಈ ಕಾರಣದಿಂದ ಇನ್ಫೋಸಿಸ್‌ ಪ್ರಸ್ತಾವನೆಗೆ ಈ ಹಿಂದಿನ ಸರ್ಕಾರಗಳು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.

ಆದರೂ ಪ್ರಸ್ತಾವನೆಗೆ ಅನುಮೋದನೆ ದೊರಕಿಸಿಕೊಳ್ಳಲು ಇನ್ಫೋಸಿಸ್‌ ಕಂಪನಿ ಸರ್ಕಾರದ ಮಟ್ಟದಲ್ಲಿ ಎಡೆಬಿಡದೆ ಪ್ರಯತ್ನವನ್ನು ಮುಂದುವರೆಸಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗೋಮಾಳವೂ ಸೇರಿದಂತೆ ಸರ್ಕಾರಿ ಕುಂಟೆ, ಹದ್ದಿಗಿಡಿದ ಹಳ್ಳ, ಕೊರಕಲು, ಕಾಲುದಾರಿ, ಪಿಳ್ಳಗಾಲುವೆ ಜಮೀನುಗಳನ್ನು ಇನ್ಫೋಸಿಸ್‌ಗೆ ಅನುಗ್ರಹಿಸಿ ಆದೇಶವನ್ನೂ ಹೊರಡಿಸಿತು. ಇನ್ಫೋಸಿಸ್‌ ಕಂಪನಿಗಾಗಿಯೇ ಸರ್ಕಾರಿ ಗೋಮಾಳ, ಬಿ ಖರಾಬು ಜಮೀನುಗಳ ಮೇಲೆ ಸಾರ್ವಜನಿಕ ಹಕ್ಕುಗಳನ್ನು ಬಿಜೆಪಿ ಸರ್ಕಾರವು ಕೊನೆಗಾಣಿಸಿತ್ತು.

ಗೋವುಗಳು ಮೇಯಲೆಂದೇ ಲಾಗಾಯ್ತಿನಿಂದಲೂ ಕಾಯ್ದಿರಿಸಿದ್ದ ಗೋಮಾಳವನ್ನೂ ಇನ್ಫೋಸಿಸ್‌ಗೆ ಮಂಜೂರು ಮಾಡಿದ್ದರೂ ಆರ್‌ಎಸ್‌ಎಸ್‌ ಪ್ರಮುಖರು ಮತ್ತು ಮುಖವಾಣಿ ಪಾಂಚಜನ್ಯ ನಿಯತಕಾಲಿಕೆಯು ಚಕಾರವೆತ್ತಿಲ್ಲ. ಗೋ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿ ಸಂಘಪರಿವಾರದ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತಂದಿರುವ ಸರ್ಕಾರವೇ ಗೋವುಗಳು ಮೇಯುವ ಜಾಗವನ್ನೇ ಇನ್ಫೋಸಿಸ್‌ಗೆ ಧಾರೆಯೆರೆದು ಕೊಟ್ಟಿರುವುದರ ಕುರಿತು ಪಾಂಚಜನ್ಯವಾಗಲೀ ಸಂಘಪರಿವಾರದ ಪ್ರಮುಖರಾಗಲಿ ತುಟಿ ಬಿಚ್ಚಿಲ್ಲ.

ಸರ್ಕಾರಿ ಕುಂಟೆ, ಹದ್ದಿಗಿಡಿದ ಹಳ್ಳ, ಕೊರಕಲು, ಕಾಲುದಾರಿ, ಪಿಳ್ಳಗಾಲುವೆ ಸೇರಿದಂತೆ ಬಿ ಖರಾಬು ವರ್ಗೀಕರಣದ ಜಮೀನುಗಳು ಹಾಗೂ ಸರ್ಕಾರಿ ಗೋಮಾಳ ಜಮೀನುಗಳು ಮೂಲ ಸ್ಥಿತಿ ಕಳೆದುಕೊಂಡಿದೆ ಎಂಬುದನ್ನು ನೆಪವಾಗಿಸಿಕೊಂಡಿದ್ದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಇನ್ಫೋಸಿಸ್‌ ಸಂಸ್ಥೆಯ ಜಮೀನುಗಳಿಗೆ ಅದಲು-ಬದಲು ಮಾಡಲು ಆದೇಶಿಸಿದ್ದರು. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ಫೋಸಿಸ್‌ನ ಸುಧಾಮೂರ್ತಿಯವರನ್ನು ಸುಧಾಕ್ಕ ಎಂದು ಸಂಬೋಧಿಸಿರುವುದು ಇನ್ಪೋಸಿಸ್‌ನ ಪ್ರಭಾವ ಹೇಗೆ ಬಿಜೆಪಿ ಸರ್ಕಾರದ ಮೇಲಿದೆ ಎಂಬುದನ್ನೂ ಸಂಕೇತಿಸಿದೆ.

ಇನ್ಫೋಸಿಸ್‌ಗೆ ಬಿಜೆಪಿ ಕರುಣಿಸಿದ್ದು 10 ಎಕರೆ

ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿ, ಸರ್ಜಾಪುರ ಬಿಲ್ಲಾಪುರ, ಬೂರುಗುಂಟೆ ಮತ್ತು ತಿಂಡ್ಲು ಗ್ರಾಮಗಳಲ್ಲಿನ ವಿವಿಧ ಸರ್ವೆ ನಂಬರ್‌ಗಳಲ್ಲಿ  ಒಟ್ಟು 380 ಎಕರೆ ಜಮೀನು ಇನ್ಫೋಸಿಸ್‌ ಒಡೆತನದಲ್ಲಿತ್ತು. ಈ ಜಮೀನುಗಳ ಮಧ್ಯದಲ್ಲಿ ಸರ್ಕಾರಿ ಖರಾಬು, ಸರ್ಕಾರಿ ಗೋಮಾಳ, ಸರ್ಕಾರಿ ಕುಂಟೆ, ಹದ್ದಿಗಿಡಿದ ಹಳ್ಳ, ಕೊರಕಲು, ಕಾಲುದಾರಿ, ಪಿಳ್ಳಗಾಲುವೆ ಸೇರಿದಂತೆ ಬಿ ಖರಾಬು ವರ್ಗೀಕರಣದ ಜಮೀನು ಮತ್ತು ಸರ್ಕಾರಿ ಗೋಮಾಳ ಜಮೀನುಗಳಿದ್ದವು.

ಈ ಜಮೀನುಗಳನ್ನು ಸಂಸ್ಥೆಯ ಜಮೀನುಗಳಿಗೆ ಪರ್ಯಾಯವಾಗಿ ಅದಲು-ಬದಲು ಮಾಡಿಕೊಡಬೇಕೆಂದು 12 ವರ್ಷದ ಹಿಂದೆಯೇ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಮೇಲೆ ಕಂದಾಯ ಇಲಾಖೆ, ಭೂ ದಾಖಲೆ, ಭೂ ಮಾಪನ ಇಲಾಖೆ ಸ್ಥಳ ತನಿಖೆ ನಡೆಸಿತ್ತಲ್ಲದೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿ ಆಧರಿಸಿ ಕಂದಾಯ ಇಲಾಖೆ ಕಾನೂನು ಇಲಾಖೆ ಮೊರೆ ಹೋಗಿತ್ತು.

ಕಾನೂನು ಇಲಾಖೆ ಒಪ್ಪಿರಲಿಲ್ಲ

ಕರ್ನಾಟಕ ಭೂ ಮಂಜೂರಾತಿ ಅಧಿನಿಯಮ ಮತ್ತು ಭೂ ಕಂದಾಯ ಕಾಯ್ದೆಯನ್ನು ಕಾನೂನು ಇಲಾಖೆ ಎತ್ತಿ ಹಿಡಿದಿತ್ತಲ್ಲದೆ, ನಿಯಮಗಳ ಪ್ರಕಾರ ಇನ್ಫೋಸಿಸ್‌ ಕಂಪನಿಗೆ ಅದಲು-ಬದಲು ಮಾಡಲು ಒಪ್ಪಿರಲಿಲ್ಲ. ಆದರೂ ಬಿಜೆಪಿ ಸರ್ಕಾರ ಕಾನೂನು ಇಲಾಖೆ ನೀಡಿದ್ದ ಅಭಿಪ್ರಾಯವನ್ನೇ ಬದಿಗೆ ಸರಿಸಿ ಆದೇಶ ಹೊರಡಿಸಿತು.

ಕಂದಾಯ ದಾಖಲೆಗಳಲ್ಲಿ ಬರುವ ಸರ್ಕಾರಿ ಕೆರೆ, ಕಟ್ಟೆ, ಕುಂಟೆ, ಹಳ್ಳಗಳಂತಹ ಜಲಕಾಯ, ಜಲಮೂಲ ಪ್ರದೇಶಗಳಿವೆ. ಇತ್ತೀಚಿನ ದಿನಗಳಲ್ಲಿ ಜಲಕಾಯಗಳಿಗೆ ಸಂಬಂಧಿಸಿದ ಯಾವುದೇ ಜಮೀನುಗಳನ್ನು ಅವುಗಳು ಸ್ವರೂಪಗಳನ್ನು ಕಳೆದುಕೊಂಡಿದೆ ಎಂಬ ಕಾರಣಕ್ಕಾಗಿ ಯಾವುದೇ ಸಾರ್ವಜನಿಕ/ಖಾಸಗಿ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲು ಅವಕಾಶಗಳಿಲ್ಲ ಎಂದು ನ್ಯಾಯಾಲಯಗಳು, ವಿವಿಧ ಪ್ರಾಧಿಕಾರಗಳು ಎಚ್ಚರಿಕೆ ನೀಡಿತ್ತು.

ಇನ್ನು, ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2014ರ ಪ್ರಕರಣ(ಹೆಚ್‌) ಅನ್ವಯ ‘ಸರೋವರ ಎಂದರೆ ಅದರಲ್ಲಿ ನೀರು ಇರಲಿ, ಅಥವಾ ಇಲ್ಲದಿರಲಿ ಕಂದಾಯ ದಾಖಲೆಗಳಲ್ಲಿ ಹೇಳಲಾದ ಸರ್ಕಾರಿ ಕೆರೆ, ಖರಾಬು, ಕೆರೆ,ಕುಂಟೆ, ಕಟ್ಟೆ ಅಥವಾ ಯಾವುದೇ ಇತರೆ ಹೆಸರಿನಿಂದ ಕರೆಯುವ ಒಳನಾಡು ಜಲಮೂಲ ಮತ್ತು ಅದು ಹೊರ ವಲಯ ಜಲಾನಯನ ಪ್ರದೇಶಗಳನ್ನು ರಾಜಕಾಲುವೆ ಮುಖ್ಯ ಒಳಹರಿವು ಒಡ್ಡು, ಅಡ್ಡ ಕಟ್ಟೆಗಳು,  ಕಾಲುವೆಗಳು, ಹೊರಹರಿವುಗಳನ್ನು ಹಾಗೂ ಹೊರಗೆ ಹರಿದು ಹೋಗುವ ಮುಖ್ಯ ಹರಿನೀರು ಕಾಲುವೆಗಳನ್ನು ಒಳಗೊಳ್ಳುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಂತಹ ಪ್ರದೇಶಗಳನ್ನು ಸಂರಕ್ಷಿಸಿ ಯಥಾಸ್ಥಿತಿ ಕಾಪಾಡಲು ತಿಳಿಸಿತ್ತು.

ಇದನ್ನಾಧರಿಸಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ ಇ ವಿ ರಮಣರೆಡ್ಡಿ ಅವರು ‘ಜಲಕಾಯ/ಜಲಮೂಲ ಪ್ರದೇಶಗಳನ್ನು ಒಳಗೊಂಡ ಪ್ರಸ್ತಾವನೆಗಳನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಕಳಿಸಬಾರದು ಎಂದು ಮತ್ತು ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪರಿಷ್ಕೃತ ಸೂಚನೆಗಳನ್ನು ಅನುಸರಿಸಬೇಕು ಎಂದು ಹೊರಡಿಸಿದ್ದ 2018ರ ಜೂನ್‌ 14ರಂದು ಸುತ್ತೋಲೆಯನ್ನೂ ಬಿಜೆಪಿ ಸರ್ಕಾರವು ಕಸದಬುಟ್ಟಿಗೆ ಎಸೆದಿತ್ತು.

ಅಮೆರಿಕ ಮೂಲದ ಗುಡ್‌ ರಿಚ್‌ ಏರೋಸ್ಪೇಸ್‌ ಕಂಪನಿಗೆ ಜಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದ ಒಂದೇ ತಿಂಗಳ ಅಂತರದಲ್ಲಿ ಸರ್ಕಾರಿ ಗೋಮಾಳ, ಬಿ ಖರಾಬು ಜಮೀನುಗಳ ಮೇಲೆ ಸಾರ್ವಜನಿಕ ಹಕ್ಕುಗಳನ್ನು ಬಿಜೆಪಿ ಸರ್ಕಾರವು ಕೊನೆಗಾಣಿಸಿತ್ತು. ಇನ್ಫೋಸಿಸ್‌ ಕಂಪನಿಯ ಜಮೀನುಗಳಿಗೆ ಅದಲು-ಬದಲು ಮಾಡಿ 2019ರ ಸೆ. 25ರಂದು ಹೊರಡಿಸಿದ್ದ ಆದೇಶದ ಕುರಿತು ಚರ್ಚೆಗಳು ನಡೆಯಲಿಲ್ಲ.

ಪ್ರಸ್ತುತ ಮಾರುಕಟ್ಟೆ ದರದ ಎರಡು ಪಟ್ಟು ದರ ವಿಧಿಸಿ ಇನ್ಫೋಸಿಸ್‌ ಬಿಟ್ಟುಕೊಡಲು ಒಪ್ಪಿರುವ 10 ಎಕರೆ 24 ಗುಂಟೆ ಜಮೀನಿನ ದರಕ್ಕೆ ವ್ಯತ್ಯಾಸದ ಮೌಲ್ಯ ಪಾವತಿಸಿಕೊಂಡು ಅದಲು-ಬದಲು ಮಾಡಿದೆ ಎಂದು ಸಮರ್ಥನೆ ನೀಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಮೂಲಕ ಬೆಂಗಳೂರು ನಗರ ಜಿಲ್ಲೆಯ ಮತ್ತೊಂದು ಜಲಮೂಲವನ್ನು ಕಣ್ಮರೆಯಾಗಿಸಿದೆ. ಮತ್ತೊಂದು ಅಂಶವೆಂದರೆ ಸರ್ಕಾರಕ್ಕೆ ಇನ್ಫೋಸಿಸ್‌ ಕೊಡಲಿರುವ ಪರ್ಯಾಯ ಜಮೀನುಗಳು ವ್ಯಾಜ್ಯದಿಂದ ಮುಕ್ತವಾಗಿಲ್ಲದಿದ್ದರೂ ಅದಲು-ಬದಲು ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಎದ್ದಿವೆ.

ಗೋಮಾಳ ಕಾಪಾಡಿಕೊಳ್ಳಲಿದೆಯೇ ಇನ್ಪೋಸಿಸ್‌?

ಅಲ್ಲದೆ, ಸರ್ಕಾರಿ ತೋಪು ವರ್ಗೀಕರಣದ ಬಿ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 68 ರಡಿಯಲ್ಲಿ ಸಾರ್ವಜನಿಕ ಹಕ್ಕನ್ನು ಕೊನೆಗಾಣಿಸಿ ಅವುಗಳ ಮಾಲೀಕತ್ವವನ್ನು ಸರ್ಕಾರ ಉಳಿಸಿಕೊಂಡು ಅವುಗಳು ಇರುವಂತಹ ಸ್ಥಿತಿಯಲ್ಲಿಯೇ ನೈಸರ್ಗಿಕವಾಗಿ ಕಾಪಾಡಿಕೊಂಡು ಹೋಗುವ ಷರತ್ತು ವಿಧಿಸಿದೆ. ಒಟ್ಟಾರೆ ಜಮೀನು ಇನ್ಫೋಸಿಸ್‌ ಕಂಪನಿ ಅಧೀನದಲ್ಲೇ ಇರುವಾಗ ಹದ್ದುಗಿಡಿದ ಹಳ್ಳ, ಸರ್ಕಾರಿ ಕುಂಟೆ, ಕಾಲುದಾರಿ, ಪಿಳ್ಳಗಾಲುವೆ ನೈಸರ್ಗಿಕವಾಗಿ ಅದರ ಮೂಲ ಸ್ಥಿತಿಯಲ್ಲಿ ಉಳಿಸಿಕೊಳ್ಳಲಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಮೇಲ್ನೋಟಕ್ಕೆ ಇನ್ಫೋಸಿಸ್‌ನ ಉದ್ದೇಶಿತ ವಿಶೇಷ ಆರ್ಥಿಕ ವಲಯಕ್ಕೆ ಅನುಕೂಲವಾಗಲಿದೆ ಎಂದೆನಿಸಿದರೂ ಸರ್ಕಾರಿ ಗೋಮಾಳ, ಸರ್ಕಾರಿ ತೋಪು, ಸರ್ಕಾರಿ ಕುಂಟೆ, ಹದ್ದುಗೆ ಹಿಡಿದ ಹಳ್ಳ, ಕೊರಕಲು, ಕಾಲುದಾರಿ, ಪಿಳ್ಳಗಾಲುವೆಯಂತಹ ಖರಾಬು ಜಮೀನುಗಳನ್ನು ಇನ್ಫೋಸಿಸ್‌ಗೆ ಜಮೀನುಗಳಿಗೆ ಪರ್ಯಾಯವಾಗಿ ನೀಡಿರುವುದು ಅಸಮಂಜಸ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇನ್ಫೋಸಿಸ್‌ ಪ್ರಕರಣದಲ್ಲಿಯೂ ಅದು ಹೊಂದಿರುವ ಒಟ್ಟಾರೆ ಜಮೀನಿನಲ್ಲಿ ಸರ್ಕಾರಿ ಕುಂಟೆ, ಹದ್ದಿಗಿಡಿದ ಹಳ್ಳ, ಹದ್ದಿಗಿಡಿದ ಕೊರಕಲು, ಕಾಲುದಾರಿ, ಪಿಳ್ಳಗಾಲುವೆ, ಸರ್ಕಾರಿ ತೋಪುಗಳಿವೆ ಎಂದು ವರದಿಗಳಿದ್ದರೂ  ನ್ಯಾಯಾಲಯ, ಪ್ರಾಧಿಕಾರ, ಅಧಿನಿಯಮಗಳನ್ನು ಸರ್ಕಾರ ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

SUPPORT THE FILE

Latest News

Related Posts