ದಾಸೋಹ ದಿನ; ರಾಜ್ಯಮಟ್ಟದ ದಿನಾಚರಣೆಯಾಗಿ ಘೋಷಿಸುವ ಪ್ರಸ್ತಾವನೆಯೇ ಅಲ್ಲ!

ಬೆಂಗಳೂರು; ತ್ರಿವಿಧ ದಾಸೋಹಿ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾದ ಜನವರಿ 21ರ ದಿನವನ್ನು ‘ಅನ್ನ ದಾಸೋಹ ದಿನ’ ವೆಂದು ಆಚರಿಸಬೇಕು ಎಂದು ವ್ಯಕ್ತಿಗತವಾಗಿ ನೀಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಬಿಜೆಪಿ ಸರ್ಕಾರವು ಅಖಿಲ ಭಾರತ ವೀರಶೈವ ಮಹಾಸಭಾ ನೀಡಿದ್ದ ಮನವಿಯನ್ನು ಪುರಸ್ಕರಿಸಿ ‘ದಾಸೋಹ’ ದಿನವೆಂದು ಆಚರಿಸಲು ಸಮ್ಮತಿ ನೀಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

ವ್ಯಕ್ತಿಗತವಾಗಿ ನೀಡಿದ್ದ ಮನವಿ ಆಧರಿಸಿ ‘ಅನ್ನ ದಾಸೋಹ’ ದಿನವೆಂದು ಆಚರಿಸಲು ಅಧಿಕಾರಿಗಳ ಹಂತದಲ್ಲೇ ಸಹಮತ ಇರಲಿಲ್ಲ. ಅಲ್ಲದೆ ಇದನ್ನು ರಾಜ್ಯಮಟ್ಟದ ದಿನಾಚರಣೆಯನ್ನಾಗಿ ಘೋಷಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುವ ಪ್ರಸ್ತಾವನೆಯೇ ಅಲ್ಲ ಎಂದು ಆರು ತಿಂಗಳ ಹಿಂದೆಯೇ ಪ್ರಸ್ತಾವನೆ ತಿರಸ್ಕೃತಗೊಂಡಿತ್ತು ಎಂಬ ಅಂಶವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ಅಲ್ಲದೆ ಈ ದಿನಾಚರಣೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಮಾರ್ಗಸೂಚಿಗಳು ಇಲ್ಲದಿದ್ದರೂ ಜನವರಿ 21ರಂದು ದಾಸೋಹ ದಿನವೆಂದು ಘೋಷಿಸಿ ಹೊರಡಿಸಿರುವ ಆದೇಶವು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಿರ್ಧಾರವು ರಾಜ್ಯದಲ್ಲೆಡೆ ಇದೇ ರೀತಿ ಜಾತಿ, ಧಾರ್ಮಿಕ ಸಂಘಟನೆಗಳು ಸೇರಿದಂತೆ ಹಲವರು ಮನವಿಗಳನ್ನು ಸಲ್ಲಿಸಲು ಸರ್ಕಾರವೇ ದಾರಿಮಾಡಿಕೊಟ್ಟಂತಾಗಿದೆ.

ದಾಸೋಹ ದಿನವೆಂದು ಘೋಷಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ನಡೆದಿದ್ದ ಚರ್ಚೆಗೆ ಸಂಬಂಧಿಸಿದಂತೆ ಪತ್ರ ವ್ಯವಹಾರಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ದಾಸೋಹ ದಿನವೆಂದು ಘೋಷಿಸುವ ಸಂಬಂಧ 2021ರ ಮಾರ್ಚ್‌ 11ರಂದೇ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಅನುಮೋದಿಸಿದ್ದರು. ಇದಾದ 7 ತಿಂಗಳ ನಂತರ ಅಂದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 30 ದಿನಗಳನ್ನು ಪೂರೈಸಿದ ಬಳಿಕ ದಾಸೋಹ ದಿನವೆಂದು ಘೋಷಿಸಿದ ಸುತ್ತೋಲೆ ಹೊರಬಿದ್ದಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣಾ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುವ ಸಂಬಂಧ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಬಿ ಎಸ್‌ ಸಚ್ಚಿದಾನಂದ ಮೂರ್ತಿ ಮತ್ತು ತಿಪಟೂರಿನ ವಕೀಲ ಹಾಗೂ ಕಲ್ಪತರು ಬ್ರಿಗೇಡ್‌ನ ಕೆ ಎಸ್‌ ಸದಾಶಿವಯ್ಯ, ವೀರಶೈವ ಲಿಂಗಾಯತ ಯುವ ವೇದಿಕೆಯ ಪ್ರಶಾಂತ ಕಲ್ಲೂರ ಅವರು 2021ರ ಜನವರಿ 13, 19 ಮತ್ತು 21ರಂದು ಲಿಖಿತ ಮನವಿ ಸಲ್ಲಿಸಿದ್ದರು. ಈ ಸಂಬಂಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸೂಚಿಸಿದ್ದರು.

ಈ ಕುರಿತು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ರಾಜಕೀಯ ವಿಭಾಗ) ಅಧಿಕಾರಿಗಳ ಹಂತದಲ್ಲಿ ಪತ್ರ ವ್ಯವಹಾರ ನಡೆದಿತ್ತು. ಕೆ ಎಸ್‌ ಸದಾಶಿವಯ್ಯ ಎಂಬುವರು ಸಲ್ಲಿಸಿದ್ದ ಮನವಿ ಆಧರಿಸಿ ಪತ್ರ ವ್ಯವಹಾರ ನಡೆಸಿದ್ದ ಅಧಿಕಾರಿಗಳು ದಿನಾಚರಣೆ ಘೋಷಿಸುವ ಸಂಬಂಧ ವೈಯಕ್ತಿಕ ಮನವಿಗಳನ್ನು ಪುರಸ್ಕರಿಸಲು ಸಹಮತ ವ್ಯಕ್ತಪಡಿಸಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ರಾಜ್ಯಮಟ್ಟದ ದಿನಾಚರಣೆಯಾಗಿ ಘೋಷಿಸುವ ಪ್ರಸ್ತಾವನೆಯಲ್ಲ

‘ಈ ಕೋರಿಕೆಯು ವ್ಯಕ್ತಿಗತವಾಗಿ ನೀಡಿರುವ ಮನವಿಯಾಗಿದ್ದು ಒಂದೊಮ್ಮೆ ಇಂತಹ ಮನವಿಗಳನ್ನು ಪುರಸ್ಕರಿಸಿದ್ದಲ್ಲಿ ಇದೇ ರೀತಿ ಹಲವಾರು ಮನವಿಗಳು ರಾಜ್ಯದೆಲ್ಲೆಡೆಯಿಂದ ಸ್ವೀಕೃತವಾಗಬಹುದಾಗಿದೆ. ಪ್ರಸ್ತುತ ನಿಯಮಗಳಲ್ಲಿ ಈ ತರಹದ ಮನವಿಗಳನ್ನು ಪರಿಗಣಿಸಲು ಅವಕಾಶಗಳನ್ನು ಕಲ್ಪಿಸಿರುವುದಿಲ್ಲವಾದ್ದರಿಂದ ಅಲ್ಲದೆ ಇದು ರಾಜ್ಯ ಮಟ್ಟದ ದಿನಾಚರಣೆಯನ್ನಾಗಿ ಘೋಷಿಸುವ ಕುರಿತಂತೆ ತೀರ್ಮಾನ ಕೈಗೊಳ್ಳುವ ಪ್ರಸ್ತಾವನೆಯಾಗಿಲ್ಲವಾದ್ದರಿಂದ ಕಾರ್ಯದರ್ಶಿಗಳು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು,’ ಎಂದು 2021ರ ಫೆ.26ರಂದು ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ಒದಗಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಹಾಗೆಯೇ ಕೇಂದ್ರ ಸರ್ಕಾರದ ಸೂಚನೆಗಳನ್ವಯ ಹಲವಾರು ದಿನಾಚರಣೆಗಳನ್ನು ರಾಜ್ಯದಲ್ಲಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ರಾಜ್ಯ ಸರ್ಕಾರದ ವತಿಯಿಂದ ಯಾವುದೇ ದಿನಾಚರಣೆಗಳನ್ನು ಇದುವರೆಗೂ ಆಚರಿಸಲಾಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದರು.

ಶಿವಕುಮಾರ ಸ್ವಾಮೀಜಿಗಳ ನಿಷ್ಕಲ್ಮಶ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ನೀಡಿತ್ತು. 100ನೇ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ಭಾರತ ಸರ್ಕಾರವು ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಶ್ರೀಗಳು ಲಿಂಗೈಕ್ಯರಾಗಿ ಜನವರಿ 21ಕ್ಕೆ 2 ವರ್ಷಗಳನ್ನು ಪೂರೈಸಲಿದ್ದು ಶ್ರೀಗಳು ಲಿಂಗೈಕ್ಯರಾದ ದಿನವನ್ನು ‘ದಾಸೋಹ ದಿನ’ವನ್ನಾಗಿ ಘೋಷಿಸಿ ಆಧೇಶ ಹೊರಡಿಸುವುದರ ಮೂಲಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳನ್ನು ಸ್ಮರಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಬಿ ಎಸ್‌ ಸಚ್ಚಿದಾನಂದ ಮೂರ್ತಿ ಅವರು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು.

ಅದೇ ರೀತಿ ‘ತ್ರಿವಿಧ ದಾಸೋಹಿ ಶಿವಕುಮಾರ ಮಹಾಸ್ವಾಮಿಗಳು ಶ್ರೀ ಮಠಕ್ಕೆ ಬರುವ ಭಕ್ತರೆಲ್ಲರಿಗೂ ದಾಸೋಹ ನೀಡುತ್ತಿದ್ದ ಕಾರಣಕ್ಕೆ ವಿಶ್ವದಾದ್ಯಂತ ಮನೆಮಾತಾಗಿದ್ದರು. ಇದೇ ಕಾರಣಕ್ಕೆ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆಯಾದ ಜನವರಿ 21ನ್ನು ಅನ್ನ ದಾಸೋಹ ದಿನವನ್ನಾಗಿ ಘೋಷಿಸಬೇಕು,’ ಎಂದು ತಿಪಟೂರಿನ ಕೆ ಎಸ್‌ ಸದಾಶಿವಯ್ಯ ಎಂಬುವರು ಸರ್ಕಾರವನ್ನು ಕೋರಿದ್ದರು.

 

1960ರ ದಶಕದಲ್ಲಿ ಭಾರತ ದೇಶ ಆಹಾರದ ಕೊರತೆಯನ್ನು ಎದುರಿಸುತ್ತಿರುವಾಗ ಶ್ರೀಗಳು ಸ್ವತಃ ತಾವೇ ಜೋಳಿಗೆ ಹಿಡಿದು ಜನರಿಂದ ದಾನ ಪಡೆದು ಹಸಿವು ನೀಗಿಸಿದರು. ಶ್ರೀಗಳ ಪರಂಪರೆಯಂತೆ ಇಂದಿಗೂ ಸಾವಿರಾರು ಬಡ ಮಕ್ಕಳಿಗೆ ಹಾಗೂ ಭಕ್ತರಿಗೆ ನಿತ್ಯ ದಾಸೋಹ ಮಾಡಲಾಗುತ್ತಿದೆ. ಶ್ರೀಗಳು ಒಂಬತ್ತು ದಶಕಗಳಿಗೂ ಮೀರಿ ನಿತ್ಯ ದಾಸೋಹಗೈದು ನಾಡಿನ ಇತರ ಎಲ್ಲರಿಗೂ ಮಾದರಿಯಾಗಿ ದಾಸೋಹ ಶ್ರೇಷ್ಠರಾಗಿದ್ದರು.

ಶ್ರೀಗಳು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲಿಂಗೈಕ್ಯರಾಗಿದ್ದು, ಇವರು ನಿತ್ಯಪೂಜ್ಯರು ಹಾಗೂ ಕಾಲಕಾಲಕ್ಕೂ ಅನುಸರಣೀಯರಾಗಿದ್ದು, ಇವರ ಅಭೂತಪೂರ್ವ ಸೇವೆಯನ್ನು ಸ್ಮರಿಸುವ ಸಲುವಾಗಿ ಶ್ರೀಗಳು ಲಿಂಗೈಕ್ಯರಾದ ಜನವರಿ 21 ಅನ್ನು ಸರ್ಕಾರದ ವತಿಯಿಂದ ದಾಸೋಹ ದಿನ ಎಂದು ಆಚರಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts