ಬ್ಯಾಂಕ್‌ ಖಾತೆಗಳ ವಿವರ ಪಡೆಯದೇ ಜಮಖಂಡಿ ಷುಗರ್ಸ್‌ಗೆ 272 ಕೋಟಿ ಸಾಲ ಮಂಜೂರು

ಬೆಂಗಳೂರು; ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ನಿರ್ದೇಶಕರಾಗಿರುವ ಜಮಖಂಡಿ ಷುಗರ್ಸ್‌ ಹೊಂದಿರುವ ಬ್ಯಾಂಕ್‌ ಖಾತೆಗಳ ಸ್ಥಿತಿಗತಿ ವಿವರ ಪಡೆಯದೇ 2018ರ ಮಾರ್ಚ್‌ ಅಂತ್ಯಕ್ಕೆ 272.77 ಕೋಟಿಯಷ್ಟು ದುಡಿಯುವ ಬಂಡವಾಳ ಸಾಲವನ್ನು ಅಪೆಕ್ಸ್‌ ಬ್ಯಾಂಕ್‌ ಮಂಜೂರು ಮಾಡಿದ್ದ ಪ್ರಕರಣವನ್ನು ಶಾಸನಬದ್ಧ ಲೆಕ್ಕಪರಿಶೋಧಕರು ಹೊರಗೆಡವಿದ್ದಾರೆ.

2018-19ನೇ ಸಾಲಿಗೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕ ಪರಿಶೋಧಕರು ನೀಡಿರುವ ಲೆಕ್ಕ ಪರಿಶೋಧನೆ ವರದಿಯು ಜಮಖಂಡಿ ಷುಗರ್ಸ್‌ ಲಿಮಿಟೆಡ್‌ಗೆ ಸಾಲ ಮಂಜೂರು ಮಾಡಿರುವ ಪ್ರಕ್ರಿಯೆಯಲ್ಲಿ ಹಲವು ಲೋಪಗಳನ್ನು ಪತ್ತೆ ಹಚ್ಚಿದ್ದಾರೆ.

‘2018ರ ಮಾರ್ಚ್‌ 31ರ ಅಂತ್ಯಕ್ಕೆ ಲೆಕ್ಕ ಪರಿಶೋಧಕರ ವರದಿ ಪ್ರಕಾರ ದುಡಿಯುವ ಬಂಡವಾಳ ಸಾಲವು 272.72 ಕೋಟಿಯಷ್ಟಿದೆ. ದುಡಿಯುವ ಬಂಡವಾಳ ಸಾಲದ ಮಿತಿಯನ್ನು ಮಂಜೂರು ಮಾಡಬೇಕಾದರೆ ಬ್ಯಾಂಕ್‌ಗಳು ಇಳಿಸಿರುವ ಖಾತೆಗಳ ಸ್ಥಿತಿಗತಿಯನ್ನು ಪಡೆದುಕೊಂಡಿರುವುದಿಲ್ಲ,’ ಎಂದು ಶಾಸನಬದ್ಧ ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿದ್ದಾರೆ.

ಜಮಖಂಡಿ ಷುಗರ್ಸ್‌ ಲಿಮಿಟೆಡ್‌ಗೆ ಎಸ್‌ಬಿಐ, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಂದ ಸಾಲ ಮಂಜೂರಾಗಿದೆ. 2018-19ನೇ ಸಾಲಿನ ದುಡಿಯುವ ಬಂಡವಾಳ ಸಾಲ ಮಂಜೂರು ಮಾಡಬೇಕಾದರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ನಿರಾಕ್ಷೇಪಣ ಪತ್ರ ನೀಡಬೇಕು. ಆದರೆ ಶಾಸನಬದ್ಧ ಲೆಕ್ಕಪರಿಶೋಧಕರಿಗೆ ಎನ್‌ಒಸಿಗಳನ್ನು ಪರಿಶೀಲನೆಗೆ ಹಾಜರಪಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಅದೇ ರೀತಿ ಜಮಖಂಡಿಯಲ್ಲಿನ ಹಿರೇಪಡಸಲಿಗಿಯಲ್ಲಿರುವ 149 ಎಕರೆ ಭೂಮಿ ಮತ್ತು ಇದರ ಋಣಭಾರ ದೃಢೀಕರಣ ಪತ್ರವನ್ನೂ ಪಡೆದಿಲ್ಲ ಎಂಬುದನ್ನೂ ಲೆಕ್ಕ ಪರಿಶೋಧನೆ ವರದಿಯು ಹೊರಗೆಡವಿದೆ.

ಬೃಹತ್‌ ಮತ್ತು ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್‌ ಲಿಮಿಟೆಡ್‌, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದನ್ನು ಸ್ಮರಿಸಬಹುದು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ನಿರ್ದೇಶಕರಾಗಿರುವ ಹರ್ಷ ಷುಗರ್ಸ್‌ ಲಿಮಿಟೆಡ್‌ ಅಪೆಕ್ಸ್‌ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಅಪೆಕ್ಸ್‌ ಬ್ಯಾಂಕ್‌ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್‌ ಬ್ಯಾಂಕ್‌ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.

ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ನಿರ್ದೇಶಕರಾಗಿರುವ ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರ ಬರುವ ಮೊದಲೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿತ್ತು.

ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಅಪೆಕ್ಸ್‌ ಬ್ಯಾಂಕ್‌, ಪಿಎನ್‌ಬಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕಾರ್ಪ್‌ ಬ್ಯಾಂಕ್‌, ಐಒಬಿ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳು ನೀಡಿದ್ದ ಒಟ್ಟು ಸಾಲದ ಪೈಕಿ 1,51,07,62,364.00 ರಷ್ಟು ಹೊರಬಾಕಿ ಇದ್ದರೂ ಆ ಎಲ್ಲಾ ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡುವ ಮುನ್ನವೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿದ್ದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಕಣ್ವ ಫ್ಯಾಷನ್ಸ್‌ ಕಂಪನಿಗೆ ಸಂಬಂಧದಪಟ್ಟ ಖಾತೆಯಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳು ಕಂಡು ಬಂದಿಲ್ಲ. 5.60 ಕೋಟಿ ಸಾಲದಲ್ಲಿ ಕಣ್ವ ಫ್ಯಾಷನ್ಸ್‌ಗೆ 4.97ಕೋಟಿ (ಶೇ.89) ಪಾವತಿಯಾಗಿದ್ದರೆ ಉಳಿದ 0.63 ಕೋಟಿ ಕಣ್ವ ಸ್ಟಾರ್‌ ಮತ್ತು ಹೋಟೆಲ್‌ ಪ್ರೈ ಲಿಮಿಟೆಡ್‌ಗೆ ಪಾವತಿಯಾಗಿತ್ತು. ಅಲ್ಲದೆ 2018ರ ಜೂನ್‌ 27ರಂದು 20.00 ಲಕ್ಷ ರು.ಗಳು ನಗದು ರೂಪದಲ್ಲಿ ಡ್ರಾ ಆಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

ಮಂಜೂರು ಮಾಡಿದ ಸಾಲವನ್ನು ಮೂಲ ಉದ್ದೇಶಕ್ಕೆ ಬಳಸಬೇಕು. ಆದರೆ ಕಣ್ವ ಗಾರ್ಮೆಂಟ್ಸ್‌ ಪ್ರೈ ಲಿಮಿಟೆಡ್‌ ಪ್ರಕರಣವನ್ನು ಪರಿಶೀಲಿಸಿದಾಗ ಹೆಚ್ಚಿನ ಮೊತ್ತವನ್ನು ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮಂಜೂರಾತಿ ಉದ್ದೇಶವನ್ನು ಸಾಲಗಾರರದಿಂದ ಬ್ಯಾಂಕ್‌ ದೃಢಪಡಿಸಿಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ವಿಧಾನಪರಿಷತ್‌ ಸದಸ್ಯ ಕೆ ಪಿ ನಂಜುಂಡಿ ಅವರು ನಿರ್ದೇಶಕರಾಗಿರುವ ಲಕ್ಷ್ಮಿ ಗೋಲ್ಡ್‌ ಖಜಾನ ಪ್ರೈ ಲಿಮಿಟೆಡ್‌ ಕಂಪನಿಯು ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸ್ವತ್ತಿನ ಮೌಲ್ಯಮಾಪನವನ್ನು ಹೆಚ್ಚುವರಿಯಾಗಿ ಮೌಲ್ಯಮಾಪನ ಮಾಡಿಸಿತ್ತು. ಅಲ್ಲದೆ ಆದಾಯ ಇಲಾಖೆಯ ಜಫ್ತಿಗೊಳಪಟ್ಟಿದ್ದ ಸ್ವತ್ತನ್ನು ಸಾಲಕ್ಕೆ ಹೆಚ್ಚುವರಿ ಭದ್ರತೆಯನ್ನಾಗಿರಿಸಿತ್ತು ಎಂಬ ಸಂಗತಿಯನ್ನು ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿತ್ತು.

ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿರುವ ಮಾರ್ಕಂಡೇಯ ಸಹಹಾರಿ ಸಕ್ಕರೆ ಕಾರ್ಖಾನೆಯು ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಹೊರಬಾಕಿ ಇರಿಸಿಕೊಂಡಿದ್ದ 419.05 ಲಕ್ಷ ರು.ಗಳನ್ನು ಬಡ್ಡಿ ರಿಯಾಯಿತಿ ಯೋಜನೆಯಡಿ ಮನ್ನಾ ಮಾಡಿರುವುದನ್ನು ಬ್ಯಾಂಕ್‌ನ ಶಾಸನಬದ್ಧ ಲೆಕ್ಕ ಪರಿಶೋಧಕರು ಹೊರಗೆಡವಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts