ಉಲ್ಲಂಘನೆ; ಹೊರರಾಜ್ಯದಲ್ಲಿ ನೋಂದಾಯಿತ ಸಕ್ಕರೆ ಕಂಪನಿಗೂ 19.50 ಕೋಟಿ ಸಾಲ

ಬೆಂಗಳೂರು; ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ತನ್ನ ಕಾರ್ಯವ್ಯಾಪ್ತಿಯಿಂದ ಹೊರಗಿರುವ ಹೊರ ರಾಜ್ಯದಲ್ಲಿ ನೋಂದಾಯಿತವಾಗಿರುವ ಶಿವಶಕ್ತಿ ಷುಗರ್‌ ಮಿಲ್ಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ ಕಂಪನಿಗೆ 19.50 ಕೋಟಿ ರು. ಸಾಲ ನೀಡಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

ಬ್ಯಾಂಕ್‌ನ ಬೈಲಾ ಪ್ರಕಾರ ಬ್ಯಾಂಕ್‌ನ ಕಾರ್ಯವ್ಯಾಪ್ತಿಯು ಕರ್ನಾಟಕ ವ್ಯಾಪ್ತಿಯೊಳಗಷ್ಟೇ ಇದೆ. ಆದರೆ ಸಾಲಗಾರ ಕಂಪನಿ ಶಿವಶಕ್ತಿ ಷುಗರ್‌ ಮಿಲ್ಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ನೋಂದಾಯಿತ ಕಚೇರಿ ಹೊಂದಿದೆ.

ಆದರೂ ಬ್ಯಾಂಕ್‌ನ ಬೈಲಾವನ್ನು ಉಲ್ಲಂಘಿಸಿ ಹೊರರಾಜ್ಯದಲ್ಲಿ ನೋಂದಾಯಿತವಾಗಿರುವ ಸಕ್ಕರೆ ಕಂಪನಿಗೆ ಸಾಲ ನೀಡಿರುವುದಕ್ಕೆ ಲೆಕ್ಕ ಪರಿಶೋಧಕರು ಅಕ್ಷೇಪ ವ್ಯಕ್ತಪಡಿಸಿದ್ದಾರೆ.  ಅಲ್ಲದೆ ಹೊರರಾಜ್ಯದಲ್ಲಿ ನೋಂದಾಯಿತವಾಗಿರುವ ಸಕ್ಕರೆ ಕಂಪನಿಗೆ ಸಾಲ ಮಂಜೂರು ಮಾಡಿರುವ ಬಗ್ಗೆ ಕಾನೂನು ಸಲಹೆ ಪಡೆದಿರುವ ಬಗ್ಗೆ ಲೆಕ್ಕ ಪರಿಶೋಧಕರಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

 

ಈ ಕಂಪನಿಯು ಸಾಲಕ್ಕಾಗಿ 2018ರ ಡಿಸೆಂಬರ್‌ 28ರಂದು ಅರ್ಜಿ ಸಲ್ಲಿಸಿತ್ತು. ಆಡಳಿತ ಮಂಡಳಿಯ ನಡವಳಿ ಪ್ರಕಾರ ತಮಿಳುನಾಡು ಮರ್ಕಂಟೈನ್‌ ಬ್ಯಾಂಕ್‌, ಹೈದರಾಬಾದ್‌ ಬ್ಯಾಂಕ್‌ನಲ್ಲಿರುವ ಸಾಲದ ಮೊತ್ತ 275 ಲಕ್ಷ ರು.ಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಇದಕ್ಕಾಗಿ ದುಡಿಯುವ ಬಂಡವಾಳ 19.50 ಕೋಟಿ ರು. ಮಂಜೂರು ಮಾಡುವುದು ಎಂದು ದಾಖಲಿಸಲಾಗಿದೆ. ಆದರೆ ಈ ಬಗ್ಗೆ ತಮಿಳುನಾಡಿನ ಮರ್ಕಂಟೈನ್‌ ಬ್ಯಾಂಕ್‌ನ ಸಲಹೆ ಪಡೆದಿಲ್ಲ ಎಂಬ ಸಂಗತಿ ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.

ಅದೇ ರೀತಿ ಕಬ್ಬು ಅಭಿವೃದ್ದಿ ಮ್ತು ಸಕ್ಕರೆ ನಿರ್ದೇಶಕರು 2018ರ ಜನವರಿ 29ರಂದು ನೀಡಿರುವ ಪರವಾನಿಗೆ ಪ್ರಕಾರ ಕಬ್ಬು ಅರೆಯುವ ಸಾಮರ್ಥ್ಯವು 300 ಟಿಸಿಡಿ ಪರಿಮಿತಿಯು 2018ರ ಏಪ್ರಿಲ್‌ 11ರವರೆಗೆ ಮಾತ್ರ ಇದೆ. ಇದು ನವೀಕರಣಗೊಂಡಿದೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ದಾಖಲೆಗಳು ಪರಿಶೀಲನೆಗೆ ಒಳಪಡಿಸಿಲ್ಲ. ಕಬ್ಬು ಅರೆಯುವ ಸಾಮರ್ಥ್ಯವು ದುಡಿಯುವ ಬಂಡವಾಳ 19.50 ಕೋಟಿ ಸಾಲಕ್ಕೆ ಸಾಕಷ್ಟಿದೆ ಎಂಬುದನ್ನು ಬ್ಯಾಂಕ್‌ ಮೌಲ್ಯಮಾಪನ ಮಾಡಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ದಾಖಲಿಸಿದ್ದಾರೆ.

ಅಷ್ಟೇ ಅಲ್ಲ, ಮಂಜೂರಾತಿ ಮೊತ್ತದ ಮೇಲೆ 23.01 ಲಕ್ಷ ರು.ಗಳ ಪ್ರೊಸೆಸಿಂಗ್‌ ಶುಲ್ಕ ಪಡೆದಿದೆಯಾದರೂ ಆ ನಂತರ ಬ್ಯಾಂಕ್‌ 19.29 ಲಕ್ಷ ರು.ಗಳ ಪ್ರೊಸೆಸಿಂಗ್‌ ಶುಲ್ಕವನ್ನು ಸಾಲಗಾರ ಕಂಪನಿಗೆ ವಾಪಸ್‌ ನೀಡಿದೆ. ಅಂದರೆ ಬಿಡುಗಡೆ ಮೊತ್ತದ ಮೇಲೆ ಮಾತ್ರ ಪ್ರೊಸೆಸಿಂಗ್‌ ಶುಲ್ಕವನ್ನು ಬ್ಯಾಂಕ್‌ ಪಡೆದಿದೆ. ಇದು ಬ್ಯಾಂಕ್‌ ನಿಯಮಕ್ಕೆ ವಿರುದ್ಧವಾಗಿದೆ ಎಂದು ಲೆಕ್ಕ ಪರಿಶೋಧಕರು ವಿವರಿಸಿದ್ದಾರೆ.

ಕಂಪನಿಯು ಪಡೆದಿರುವ ದುಡಿಯುವ ಬಂಡವಾಳ ಸಾಲಕ್ಕೆ ಭದ್ರತೆಯಾಗಿ ಒದಗಿಸಿರುವ 4.2 ಎಕರೆ ಸ್ಥಿರಾಸ್ತಿಯ ಮೇಲೆ ಕುಟುಂಬದ ವ್ಯಾಜ್ಯವಿದೆ. (ಸ್ಥಿರಾಸ್ತಿ- ಸರ್ವೆ ನಂ 97, ಬಾಂಗೂರು ಗ್ರಾಮ, ಬೀದರ್‌ ಜಿಲ್ಲೆ) ಇದರ ಬಗ್ಗೆಯೂ ಬ್ಯಾಂಕ್‌ನ ಕಾನೂನು ಸಲಹೆಗಾರರು ಸಲಹೆ ನೀಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ವಿವರಗಳನ್ನು ಒದಗಿಸಿಲ್ಲ ಎಂಬ ಸಂಗತಿ ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

ಬೃಹತ್‌ ಮತ್ತು ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್‌ ಲಿಮಿಟೆಡ್‌, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದನ್ನು ಸ್ಮರಿಸಬಹುದು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ನಿರ್ದೇಶಕರಾಗಿರುವ ಹರ್ಷ ಷುಗರ್ಸ್‌ ಲಿಮಿಟೆಡ್‌ ಅಪೆಕ್ಸ್‌ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಅಪೆಕ್ಸ್‌ ಬ್ಯಾಂಕ್‌ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್‌ ಬ್ಯಾಂಕ್‌ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.

ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ನಿರ್ದೇಶಕರಾಗಿರುವ ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರ ಬರುವ ಮೊದಲೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿತ್ತು.

ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಅಪೆಕ್ಸ್‌ ಬ್ಯಾಂಕ್‌, ಪಿಎನ್‌ಬಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕಾರ್ಪ್‌ ಬ್ಯಾಂಕ್‌, ಐಒಬಿ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳು ನೀಡಿದ್ದ ಒಟ್ಟು ಸಾಲದ ಪೈಕಿ 1,51,07,62,364.00 ರಷ್ಟು ಹೊರಬಾಕಿ ಇದ್ದರೂ ಆ ಎಲ್ಲಾ ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡುವ ಮುನ್ನವೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿದ್ದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಕಣ್ವ ಫ್ಯಾಷನ್ಸ್‌ ಕಂಪನಿಗೆ ಸಂಬಂಧದಪಟ್ಟ ಖಾತೆಯಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳು ಕಂಡು ಬಂದಿಲ್ಲ. 5.60 ಕೋಟಿ ಸಾಲದಲ್ಲಿ ಕಣ್ವ ಫ್ಯಾಷನ್ಸ್‌ಗೆ 4.97ಕೋಟಿ (ಶೇ.89) ಪಾವತಿಯಾಗಿದ್ದರೆ ಉಳಿದ 0.63 ಕೋಟಿ ಕಣ್ವ ಸ್ಟಾರ್‌ ಮತ್ತು ಹೋಟೆಲ್‌ ಪ್ರೈ ಲಿಮಿಟೆಡ್‌ಗೆ ಪಾವತಿಯಾಗಿತ್ತು. ಅಲ್ಲದೆ 2018ರ ಜೂನ್‌ 27ರಂದು 20.00 ಲಕ್ಷ ರು.ಗಳು ನಗದು ರೂಪದಲ್ಲಿ ಡ್ರಾ ಆಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

ಮಂಜೂರು ಮಾಡಿದ ಸಾಲವನ್ನು ಮೂಲ ಉದ್ದೇಶಕ್ಕೆ ಬಳಸಬೇಕು. ಆದರೆ ಕಣ್ವ ಗಾರ್ಮೆಂಟ್ಸ್‌ ಪ್ರೈ ಲಿಮಿಟೆಡ್‌ ಪ್ರಕರಣವನ್ನು ಪರಿಶೀಲಿಸಿದಾಗ ಹೆಚ್ಚಿನ ಮೊತ್ತವನ್ನು ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮಂಜೂರಾತಿ ಉದ್ದೇಶವನ್ನು ಸಾಲಗಾರರದಿಂದ ಬ್ಯಾಂಕ್‌ ದೃಢಪಡಿಸಿಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ವಿಧಾನಪರಿಷತ್‌ ಸದಸ್ಯ ಕೆ ಪಿ ನಂಜುಂಡಿ ಅವರು ನಿರ್ದೇಶಕರಾಗಿರುವ ಲಕ್ಷ್ಮಿ ಗೋಲ್ಡ್‌ ಖಜಾನ ಪ್ರೈ ಲಿಮಿಟೆಡ್‌ ಕಂಪನಿಯು ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸ್ವತ್ತಿನ ಮೌಲ್ಯಮಾಪನವನ್ನು ಹೆಚ್ಚುವರಿಯಾಗಿ ಮೌಲ್ಯಮಾಪನ ಮಾಡಿಸಿತ್ತು. ಅಲ್ಲದೆ ಆದಾಯ ಇಲಾಖೆಯ ಜಫ್ತಿಗೊಳಪಟ್ಟಿದ್ದ ಸ್ವತ್ತನ್ನು ಸಾಲಕ್ಕೆ ಹೆಚ್ಚುವರಿ ಭದ್ರತೆಯನ್ನಾಗಿರಿಸಿತ್ತು ಎಂಬ ಸಂಗತಿಯನ್ನು ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿತ್ತು.

ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿರುವ ಮಾರ್ಕಂಡೇಯ ಸಹಹಾರಿ ಸಕ್ಕರೆ ಕಾರ್ಖಾನೆಯು ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಹೊರಬಾಕಿ ಇರಿಸಿಕೊಂಡಿದ್ದ 419.05 ಲಕ್ಷ ರು.ಗಳನ್ನು ಬಡ್ಡಿ ರಿಯಾಯಿತಿ ಯೋಜನೆಯಡಿ ಮನ್ನಾ ಮಾಡಿರುವುದನ್ನು ಬ್ಯಾಂಕ್‌ನ ಶಾಸನಬದ್ಧ ಲೆಕ್ಕ ಪರಿಶೋಧಕರು ಹೊರಗೆಡವಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts