ಬೆಂಗಳೂರು; ಸಾವಿರಾರು ಕೋಟಿ ರುಪಾಯಿ ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಕಣ್ವ ಸೌಹಾರ್ದ ಕೋ ಆಪರೇಟೀವ್ ಸೊಸೈಟಿಯ ಮತ್ತೊಂದು ಸಹ ಕಂಪನಿಗಳ ಖಾತೆಯಲ್ಲಿ ವ್ಯಾಪಾರ ವಹಿವಾಟು ನಡೆಸದಿದ್ದರೂ ಕೋಟ್ಯಂತರ ಸಾಲ ನೀಡಿರುವ ಪ್ರಕರಣವನ್ನು ಲೆಕ್ಕ ಪರಿಶೋಧಕರು ಬಯಲಿಗೆಳೆದಿದ್ದಾರೆ.
ಸಾಲಗಾರ ಕಂಪನಿಯಾಗಿರುವ ಕಣ್ವ ಗಾರ್ಮೆಂಟ್ಸ್ ಪ್ರೈವೈಟ್ ಲಿಮಿಟೆಡ್‌ನ ಆರ್‌ಒಸಿಯಿಂದ ಶೋಧನಾ ವರದಿಗಳಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧಕರು ಬಹಿರಂಗಪಡಿಸಿದ್ದಾರೆ. 2018-19ನೇ ಸಾಲಿಗೆ ಸಂಬಂಧಿಸಿದಂತೆ ನಡೆದಿರುವ ಲೆಕ್ಕ ಪರಿಶೋಧನೆಯು ಕಣ್ವ ಗಾರ್ಮೆಂಟ್ಸ್ ಪ್ರೈ ಲಿಮಿಟೆಡ್, ಕಣ್ವ ಸ್ಟಾರ್ ಹೋಟೆಲ್ ಪ್ರೈ ಲಿಮಿಟೆಡ್‌ಗೆ ವಹಿವಾಟುಗಳ ಮೇಲೂ ಬೆಳಕು ಚೆಲ್ಲಿದೆ. ಲೆಕ್ಕ ಪರಿಶೋಧನೆ ವರದಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕಣ್ವ ಗಾರ್ಮೆಂಟ್ಸ್ ಪ್ರೈವೈಟ್ ಲಿಮಿಟೆಡ್ ಕಂಪನಿಯು 10.00 ಕೋಟಿ ರು.ಮೊತ್ತರದ ದುಡಿಯುವ ಬಂಡವಾಳಕ್ಕಾಗಿ 2018ರ ಮೇ 28ರಂದು ಅಪೆಕ್ಸ್ ಬ್ಯಾಂಕ್‌ಗೆ ಪ್ರಸ್ತಾವನೆ ಸಲ್ಲಿಸಿತ್ತು. ನಂಜುಂಡಯ್ಯ ಮತ್ತು ಮತ್ತು ದೇವೇಂದ್ರ ನಂಜುಂಡಯ್ಯ ಎಂಬುವರು ಕಂಪನಿಯ ನಿರ್ದೇಶಕರು ಎಂದು ಪ್ರಸ್ತಾವನೆಯಲ್ಲಿ ಕಂಪನಿ ಹೇಳಿತ್ತಾದರೂ ಕಂಪನಿ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ದೇವೇಂದ್ರ ನಂಜುಂಡಯ್ಯ ಅವರು ಕಂಪನಿಯ ನಿರ್ದೇಶಕರಾಗಿರುವುದಿಲ್ಲ ಎಂಬ ಮಾಹಿತಿ ಇತ್ತು. ಅವರ ಬದಲಾಗಿ ವಿಜಯಕುಮಾರ್ ಎಂಬುವರು ಕಂಪನಿಯ ನಿರ್ದೇಶಕರು ಎಂದು ಹೇಳಲಾಗಿತ್ತು. ಕಂಪನಿಯ ನಿರ್ದೇಶಕತ್ವ ಬದಲಾಗಿರುವ ಬಗ್ಗೆ ಬ್ಯಾಂಕ್‌ಗೆ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ದಾಖಲೆಗಳ ಪ್ರಕಾರ ಕಣ್ವ ಫ್ಯಾಷನ್ಸ್ ಕಂಪನಿಗೆ ಸಂಬಂಧದಪಟ್ಟ ಸಾಮಾನ್ಯ ಪಾಲುದಾರರಷ್ಟೇ. ಖಾತೆಯಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳು ಕಂಡು ಬಂದಿಲ್ಲ. 5.60 ಕೋಟಿ ಸಾಲದಲ್ಲಿ ಕಣ್ವ ಫ್ಯಾಷನ್ಸ್‌ಗೆ 4.97ಕೋಟಿ (ಶೇ.89) ಪಾವತಿಯಾಗಿದ್ದರೆ ಉಳಿದ 0.63 ಕೋಟಿ ಕಣ್ವ ಸ್ಟಾರ್ ಮತ್ತು ಹೋಟೆಲ್ ಪ್ರೈ ಲಿಮಿಟೆಡ್‌ಗೆ ಪಾವತಿಯಾಗಿದೆ. ಅಲ್ಲದೆ 2018ರ ಜೂನ್ 27ರಂದು 20.00 ಲಕ್ಷ ರು.ಗಳು ನಗದು ರೂಪದಲ್ಲಿ ಡ್ರಾ ಆಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
ಮಂಜೂರು ಮಾಡಿದ ಸಾಲವನ್ನು ಮೂಲ ಉದ್ದೇಶಕ್ಕೆ ಬಳಸಬೇಕು. ಆದರೆ ಕಣ್ವ ಗಾರ್ಮೆಂಟ್ಸ್ ಪ್ರೈ ಲಿಮಿಟೆಡ್ ಪ್ರಕರಣವನ್ನು ಪರಿಶೀಲಿಸಿದಾಗ ಹೆಚ್ಚಿನ ಮೊತ್ತವನ್ನು ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮಂಜೂರಾತಿ ಉದ್ದೇಶವನ್ನು ಸಾಲಗಾರರದಿಂದ ಬ್ಯಾಂಕ್ ದೃಢಪಡಿಸಿಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಲ್ಲದೆ ‘ಮಂಜೂರಾತಿನಿಯಮ ನಂ 11ರ ಪ್ರಕಾರ ಸಾಲಗಾರ ಕಂಪನಿಯು ಪ್ರ|ಧಾನ ಕಚೇರಿ ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದು ಅದರ ಮೂಲಕ ವ್ಯವಹರಿಸಬೇಕು. ಆಧರೆ ಇದನ್ನು ಪರಿಶೀಲಿಸಿದಾಗ ಕಂಪನಿಯು ಚಾಲ್ತಿ ಖಾತೆಯನ್ನು ತೆರೆದಿದ್ದರೂ ಯಾವುದೇ ವ್ಯವಹಾರವನ್ನು ಇದರ ಮೂಲಕ ಮಾಡಿಲ್ಲ,’ ಎಂದು ಲೆಕ್ಕ ಪರಿಶೋಧನೆಯಲ್ಲಿ ಅಭಿಪ್ರಾಯಪಟ್ಟಿರುವುದು ತಿಳಿದು ಬಂದಿದೆ.
ಬೃಹತ್ ಮತ್ತು ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್ ಲಿಮಿಟೆಡ್, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಿಂದ ಪಡೆದಿದ್ದನ್ನು ಸ್ಮರಿಸಬಹುದು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ದೇಶಕರಾಗಿರುವ ಹರ್ಷ ಷುಗರ್ಸ್ ಲಿಮಿಟೆಡ್ ಅಪೆಕ್ಸ್ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.
ಅಪೆಕ್ಸ್ ಬ್ಯಾಂಕ್ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್ ಬ್ಯಾಂಕ್ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.
ಮಾಜಿ ಶಾಸಕ ಪ್ರಕಾಶ್ ಖಂಡ್ರೆ ನಿರ್ದೇಶಕರಾಗಿರುವ ಬಾಲ್ಕೇಶ್ವರ ಷುಗರ್ಸ್ ಲಿಮಿಟೆಡ್‌ಗೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರ ಬರುವ ಮೊದಲೇ ಅಪೆಕ್ಸ್ ಬ್ಯಾಂಕ್ 60.00 ಕೋಟಿ ರು. ಸಾಲ ಮಂಜೂರು ಮಾಡಿತ್ತು.
ಬಾಲ್ಕೇಶ್ವರ ಷುಗರ್ಸ್ ಲಿಮಿಟೆಡ್‌ಗೆ ಅಪೆಕ್ಸ್ ಬ್ಯಾಂಕ್, ಪಿಎನ್‌ಬಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪ್ ಬ್ಯಾಂಕ್, ಐಒಬಿ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳು ನೀಡಿದ್ದ ಒಟ್ಟು ಸಾಲದ ಪೈಕಿ 1,51,07,62,364.00 ರಷ್ಟು ಹೊರಬಾಕಿ ಇದ್ದರೂ ಆ ಎಲ್ಲಾ ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡುವ ಮುನ್ನವೇ ಅಪೆಕ್ಸ್ ಬ್ಯಾಂಕ್ 60.00 ಕೋಟಿ ರು. ಸಾಲ ಮಂಜೂರು ಮಾಡಿದ್ದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.