ಬೆಂಗಳೂರು; ಗಣ್ಯಾತಿಗಣ್ಯರಿಗೆ ವಿವಿಧ ಹುದ್ದೆ ಕೊಡಿಸುವ ಆಮಿಷ ಒಡ್ಡಿ ಕೋಟ್ಯಂತರ ರುಪಾಯಿ ಪಡೆದು ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ಯುವರಾಜಸ್ವಾಮಿ ವಿಧಾನಪರಿಷತ್‌ನ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಡಿ ಎಸ್ ವೀರಯ್ಯರಿಂದಲೂ ಚೆಕ್ ಪಡೆದಿದ್ದ ಎಂಬ ಸಂಗತಿ ಗೊತ್ತಾಗಿದೆ.
ಜ್ಯೋತಿಷ್ಯ ಹೇಳುವ ಮೂಲಕ ಪರಿಚಯಿಸಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತಿದ್ದ ಯುವರಾಜಸ್ವಾಮಿ ಅವರಿಂದ ಜಮೀನು ಖರೀದಿ ಮಾಡುವ ಸಂಬಂಧ ಡಿ ಎಸ್ ವೀರಯ್ಯ ಅವರು ತಮ್ಮ ಖಾತೆಯಿಂದ 50 ಲಕ್ಷ ರು. ಮೊತ್ತದ ಚೆಕ್‌ನ್ನು ಯುವರಾಜಸ್ವಾಮಿಗೆ ನೀಡಿದ್ದರು ಎಂಬುದು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್ ವಹಿವಾಟಿನ ದಾಖಲೆಗಳಿಂದ ತಿಳಿದು ಬಂದಿದೆ.
ಡಿ ಎಸ್ ವೀರಯ್ಯ ಅವರು ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 0472101023992ನಿಂದ ಚೆಕ್ ನಂ 879416ನಲ್ಲಿ 50 ಲಕ್ಷ ರು. ನಮೂದಿಸಲಾಗಿತ್ತು. 2019ರ ಮಾರ್ಚ್ 22 ಎಂದು ನಮೂದಿಸಿದ್ದ ಚೆಕ್ ಹಾಳೆಯ ಮೇಲೆ ಸಹಿ ಮಾಡಲಾಗಿತ್ತು.
ಯುವರಾಜಸ್ವಾಮಿಗೆ ನೀಡಿದ್ದ ಚೆಕ್ ಸಂಬಂಧ ಪ್ರತಿಕ್ರಿಯಿಸಿರುವ ಡಿ ಎಸ್ ವೀರಯ್ಯ ಅವರು ‘ಯುವರಾಜಸ್ವಾಮಿ ಪತ್ನಿ ನಮ್ಮೂರಿನವರು. ಜಮೀನು ತೆಗೆದುಕೊಳ್ಳಲು ಮುಂದಾಗಿದ್ದೆ. ಆ ಟೈಮ್‌ನಲ್ಲಿ ಚೆಕ್ ಕೊಟ್ಟಿದ್ದೆ ಅನ್ನಿಸುತ್ತೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯವಹಾರ ಇಲ್ಲ. ಜಮೀನು ಖರೀದಿ ಮಾಡಲಿಲ್ಲ,’ ಎಂದು ಮಾಹಿತಿ ಒದಗಿಸಿದರು.
ಇದಲ್ಲದೆ ಯುವರಾಜ್ ಹೆಸರಿಗೆ ಹಲವರು ಚೆಕ್‌ಗಳನ್ನು ನೀಡಿದ್ದಾರೆ. 2019ರ ಜುಲೈ 10ರಂದು ಯುವರಾಜಸ್ವಾಮಿ ಹೆಸರಿಗೆ ಬರೆದಿರುವ 25 ಲಕ್ಷ ಎಂದು ನಮೂದಿಸಿ (ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 04952180005687- ಚೆಕ್ ನಂ 175465) ಚೆಕ್‌ನಲ್ಲಿ ಸಹಿ ಮಾಡಲಾಗಿದೆ. ಆದರೆ ಯಾರು ಸಹಿ ಮಾಡಿದ್ದಾರೆ ಎಂಬುದನ್ನು ಬ್ಯಾಂಕ್ ದಾಖಲೆಗಳ ವಿವರದಲ್ಲಿ ಪೊಲೀಸರು ಮಾಹಿತಿ ಒದಗಿಸಿಲ್ಲ.
2019ರ ಆಗಸ್ಟ್ 10ರಂದು ಯುವರಾಜಸ್ವಾಮಿ ಹೆಸರಿಗೆ ಕರ್ನಾಟಕ ಬ್ಯಾಂಕ್‌ನ ಖಾತೆ ಸಂಖ್ಯೆ 1242000100053401 ಚೆಕ್ ನಂ 228854ರಲ್ಲಿ 50 ಲಕ್ಷ ಎಂದು ನಮೂದಿಸಿರುವ ಚೆಕ್ ಹಾಳೆಯನ್ನು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಸುರೇಶ್‌ಕುಮಾರ್ ಡಿ ಒ ಹೆಸರಿಗೆ 30 ಲಕ್ಷ ಹಣವನ್ನು ಆರ್‌ಟಿಜಿಎಸ್ ಮಾಡಲು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಸಂಖ್ಯೆ 12201000044169 ನ ಚೆಕ್ ನಂ 000157ನಲ್ಲಿ 10-01-2020 ಎಂದು ನಮೂದಿಸಿರುವ ಚೆಕ್‌ನಲ್ಲಿ ಯುವರಾಜಸ್ವಾಮಿ ಸಹಿ ಇರುವುದು ವಹಿವಾಟಿನ ದಾಖಲೆಯಿಂದ ತಿಳಿದು ಬಂದಿದೆ.
ಜಿ ಕೆ ಕನ್ಸ್‌ಟ್ರಕ್ಷನ್ಸ್‌ರವರು ಯುವರಾಜ್ ಖಾತೆಗೆ ( 914010014923549ಗೆ 2015ರ ಆಗಸ್ಟ್ 8ರಂದು 50 ಲಕ್ಷ ಹಣ ಎಂದು ನಮೂದಿಸಲಾಗಿರುವ ಚೆಕ್ ಹಾಳೆ ಇದೆ. ಹಾಗೆಯೇ ನಾಗೇಂದ್ರ ಎಂ ಅವರು ಆಕ್ಸಿಸ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಯ ಚೆಕ್ ನಂ 140970ರಲ್ಲಿ 10 ಲಕ್ಷ ಎಂದು ನಮೂದಿಸಿ ಸಹಿ ಹಾಕಿರುವ ಚೆಕ್ ಹಾಳೆಯೂ ಇದೆ.
ಸುದೀಂಧ್ರ ರೆಡ್ಡಿ ಎಂಬುವರಿಗೆ ಕೆಎಸ್‌ಆರ್‌ಟಿಸಿ ಛೇರ್‌ಮನ್ ಹುದ್ದೆ ಕೊಡಿಸುವುದಾಗಿ ಆಮಿಷ ಒಡ್ಡಿದ್ದ ಪ್ರಕರಣದಲ್ಲಿ ಯುವರಾಜಸ್ವಾಮಿ ಮನೆಯ ಮಾಸ್ಟರ್ ಬೆಡ್ ರೂಂನ್ನು ಶೋಧಿಸಿದ್ದ ಪೊಲೀಸರು 90 ಕೋಟಿ ರು.ಗೂ ಅಧಿಕ ಮೊತ್ತವನ್ನು ನಮೂದಿಸಿದ್ದ ಹಲವು ಚೆಕ್ ಹಾಳೆಗಳನ್ನು ವಶಪಡಿಸಿಕೊಂಡಿದ್ದನ್ನು ಸ್ಮರಿಸಬಹುದು.
ಬಿ ಶ್ರೀರಾಮುಲು ಅವರ ಖಾತೆಗೆ ಯುವರಾಜಸ್ವಾಮಿ ಖಾತೆಯಿಂದ ಒಟ್ಟು 13 ಲಕ್ಷ ರು. ಸಂದಾಯವಾಗಿದ್ದನ್ನು ಸ್ಮರಿಸಬಹುದು. ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಯಿಂದ (ಖಾತೆ ಸಂಖ್ಯೆ; 5502000100052301) ಬಿ ಶ್ರೀರಾಮುಲು ಖಾತೆಗೆ (ಖಾತೆ ಸಂಖ್ಯೆ; KARBH19210399488) 2019ರ ಜುಲೈ 29ರಂದು 5 ಲಕ್ಷ ಹಾಗೂ 2019ರ ಆಗಸ್ಟ್ 1ರಂದು 13 ಲಕ್ಷ ರು. (ಖಾತೆ ಸಂಖ್ಯೆ ;KARBH19213654613) ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಆಗಿರುವುದು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್‌ನ ವಹಿವಾಟಿನ ದಾಖಲೆಯಿಂದ ತಿಳಿದು ಬಂದಿತ್ತು.
ಅಲ್ಲದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು.ಗಳು ಸಂದಾಯವಾಗಿದ್ದನ್ನು ಸ್ಮರಿಸಬಹುದು.