ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿ ಲಕ್ಷ್ಮಿನಾರಾಯಣ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಗರದ ಖ್ಯಾತ ಉದ್ಯಮಿ, ಸಮಾಜ ಸೇವಕ ಹಾಗೂ ನಿರ್ಮಾಣ್ ಶೆಲ್ಟರ್ಸ್ ವಸತಿ ಸಂಸ್ಥೆಯ ಸ್ಥಾಪಕ ವಿ.ಲಕ್ಷ್ಮಿನಾರಾಯಣ ವಿರುದ್ಧ ಜೀವ ಬೆದರಿಕೆಯ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ವಿಶೇಷ ಎಂದರೆ ಆರೋಪಿ ಲಕ್ಷ್ಮಿ ನಾರಾಯಣ ತಮ್ಮ ಧರ್ಮಪತ್ನಿಗೇ ಈ ಜೀವ ಬೆದರಿಕೆ ಒಡ್ಡಿದ್ದು, ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳ ವಿರುದ್ಧ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿದೆ.

ಸ್ಥಿರಾಸ್ತಿ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿ. ಲಕ್ಷ್ಮಿನಾರಾಯಣ ಅವರು, ತಮ್ಮ ಪತ್ನಿ ವಿಜಯಲಕ್ಷ್ಮಿ ಅವರನ್ನು ಕೊಲೆ ಮಾಡಿಸಲು ಸಂಚು ರೂಪಿಸಿದ ಆಪಾದನೆ ಹೊತ್ತಿದ್ದಾರೆ.

ಪ್ರಕರಣದಲ್ಲಿ ಲಕ್ಷ್ಮಿನಾರಾಯಣ ಅವರ ಪುತ್ರಿ ತೇಜಾವಂತಿ, ಸೋಮಯ್ಯ ಹಾಗೂ ಅಶೋಕ ಅವರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಎಲ್ಲ ಆರೋಪಿಗಳೂ ಸದ್ಯ ತಲೆ ಮರೆಸಿಕೊಂಡಿದ್ದಾರೆ.

ಪ್ರಕರಣವೇನು?

ಜೆ.ಪಿ ನಗರ ಮೂರನೇ ಹಂತದಲ್ಲಿ ವಾಸವಾಗಿರುವ ವಿಜಯಲಕ್ಷ್ಮಿ ಅವರಿಗೆ ಈಗ 63 ವರ್ಷ. ವಿಜಯಲಕ್ಷ್ಮಿ ಮತ್ತು ಲಕ್ಷ್ಮಿನಾರಾಯಣ ದಂಪತಿಗೆ ಮೂವರು ಮಕ್ಕಳಿದ್ದಾರೆ.

“ಲಕ್ಷ್ಮಿ ನಾರಾಯಣ ಅವರು ಪರಸ್ತ್ರೀ ಸಂಗದಿಂದ ನನ್ನನ್ನು ತೊರೆಯಲು ಇಚ್ಛಿಸಿದ್ದು ಅದಕ್ಕಾಗಿ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ (ಎಂ.ಸಿ ಸಂಖ್ಯೆ: 640/2016) ಪ್ರಕರಣ ದಾಖಲಿಸಿದ್ದಾರೆ” ಎಂದು ವಿಜಯಲಕ್ಷ್ಮಿ ಅವರು 2021ರ ಏಪ್ರಿಲ್ ನಲ್ಲಿ ಜೆ.ಪಿ.ನಗರ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

“ಪ್ರಸ್ತುತ ನಾನು ವಾಸಿಸುತ್ತಿರುವ ಮನೆಯನ್ನು ನನ್ನ ಗಂಡ ಲಕ್ಷ್ಮಿನಾರಾಯಣ ಅವರು, ನನ್ನ ಮಗಳಾದ ತೇಜಾವಂತಿ ಹೆಸರಿಗೆ ಗಿಫ್ಟ್ ಡೀಡ್ ಮಾಡಿ ಕೊಟ್ಟಿದ್ದರು. ಈಗ ಈ ಮನೆಯಿಂದ ನನ್ನನ್ನು ಹೊರಹಾಕಲು ಇವರೆಲ್ಲಾ ಸಂಚು ರೂಪಿಸಿದ್ದಾರೆ. ಈ ಸಂಬಂಧ ಏಪ್ರಿಲ್ 21ರಂದು ನನ್ನನ್ನು ಮನೆಯಿಂದ ಹೊರಹಾಕುವ ದುರುದ್ದೇಶದಿಂದ ವಿ.ಲಕ್ಷ್ಮಿನಾರಾಯಣ ಮತ್ತು ಅವರ ಅನುಯಾಯಿಗಳು ಮನೆಯನ್ನು ತಮ್ಮ ಸುಪರ್ದಿಗೆ ಪಡೆಯಲು ಬಲವಂತವಾಗಿ ಯತ್ನಿಸಿದ್ದಾರೆ.

ನಾನು ಮನೆಯಲ್ಲಿ ಮಲಗಿದ ಸಮಯದಲ್ಲಿ ನನ್ನ ಮನೆಯ ಬೀಗ ಒಡೆದು ಹಾಕಿ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿರುತ್ತಾರೆ. ನನ್ನನ್ನು ಅವಾಚ್ಯ ಶಬ್ದಗಳಿಂದ ನಿ‌ಂದಿಸಿ ನನಗೆ ಜೀವ ಬೆದರಿಕೆ ಒಡ್ಡಿರುತ್ತಾರೆ” ಎಂದು ವಿಜಯಲಕ್ಷ್ಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

“ಈಗ ನನಗೆ ಪ್ರಾಣ ಭಯ ಇದ್ದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

ಚಾರ್ಜ್ ಶೀಟ್ ಸಲ್ಲಿಕೆ

ಭಾರತೀಯ ದಂಡ ಸಂಹಿತೆ ಕಲಂ 448 (ಅತಿಕ್ರಮ ಪ್ರವೇಶ), 341 (ಅಡ್ಡಿಪಡಿಸುವುದು), 504 (ಬೆದರಿಕೆ) ಮತ್ತು 506ರ (ಜೀವ ಬೆದರಿಕೆ) ಅನುಸಾರ ಎಫ್ ಐ ಆರ್ ದಾಖಲಿಸಿದ್ದ ಜೆ.ಪಿ‌ ನಗರ ಪೊಲೀಸರು ಪ್ರಕರಣದ ತನಿಖೆ ನಡೆಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಆರೋಪಿಗಳ ವಿರುದ್ಧ ಇದೇ 15ರಂದು ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿರುವ ನ್ಯಾಯಾಧೀಶರು, ವಿಚಾರಣೆಯನ್ನು 2021ರ ನವೆಂಬರ್ 26ಕ್ಕೆ ಮುಂದೂಡಿದ್ದಾರೆ

SUPPORT THE FILE

Latest News

Related Posts