ಸಹಭಾಗಿ; ಇಸ್ಕಾನ್‌- ಟಚ್‌ಸ್ಟೋನ್‌ ಫೌಂಡೇಷನ್‌ ಕುರಿತ ‘ದಿ ಫೈಲ್‌’ ವರದಿ ವಿಸ್ತರಿಸಿದ ವಿಕ

ಬೆಂಗಳೂರು; ಪೌರ ಕಾರ್ಮಿಕರಿಗೆ ಬಿಸಿಯೂಟ ವಿತರಣೆ ಯೋಜನೆ ಗುತ್ತಿಗೆಯಿಂದ ಹಿಂದೆ ಸರಿದು ಹಿಂಬಾಗಿಲ ಮೂಲಕ ಪ್ರವೇಶಿಸಲು ಇಸ್ಕಾನ್‌-ಅಕ್ಷಯ ನಿಧಿ ಫೌಂಡೇಷನ್‌ ಯತ್ನಿಸುತ್ತಿದೆ ಎಂದು ‘ದಿ ಫೈಲ್‌’ ವರದಿಯನ್ನು ವಿಜಯ ಕರ್ನಾಟಕ ದೈನಿಕವು ವಿಸ್ತರಿಸಿದೆ. ಈ ಮೂಲಕ ಸಹಭಾಗಿತ್ವ ಪತ್ರಿಕೋದ್ಯಮವನ್ನು ಮುಂದುವರೆಸಿದೆ.

ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಇನ್ನಿತರೆ ಗಂಭೀರ ಲೋಪಗಳನ್ನು ಎಸಗಿರುವ ಆರೋಪಕ್ಕೆ ಗುರಿಯಾಗಿರುವ ಇಸ್ಕಾನ್‌-ಅಕ್ಷಯ ನಿಧಿ ಫೌಂಡೇಷನ್‌ ಇದೀಗ ಪೌರ ಕಾರ್ಮಿಕರಿಗೆ ಬಿಸಿಯೂಟ ಯೋಜನೆ ಗುತ್ತಿಗೆಯಿಂದ ಹಿಂದೆ ಸರಿದಿದೆ. ಆದರೆ ತನ್ನದೇ ಮತ್ತೊಂದು ಅಂಗಸಂಸ್ಥೆಯಾಗಿರುವ ಟಚ್‌ ಸ್ಟೋನ್‌ ಫೌಂಡೇಷನ್‌ ಮೂಲಕ ಬಿಸಿಯೂಟ ಯೋಜನೆ ಗುತ್ತಿಗೆ ಹಿಡಿಯಲು ಮುಂದಾಗಿರುವುದನ್ನು ‘ದಿ ಫೈಲ್‌’ 2021ರ ಜುಲೈ 6ರಂದು ದಾಖಲೆ ಸಮೇತ ಹೊರಗೆಡವಿತ್ತು.

ಬಿಸಿಯೂಟ; ಹಿಂದೆ ಸರಿದ ಇಸ್ಕಾನ್‌, ಟಚ್‌ಸ್ಟೋನ್‌ ಫೌಂಡೇಷನ್‌ ಮೂಲಕ ಹಿಂಬಾಗಿಲ ಪ್ರವೇಶ?

ವರದಿ ಪ್ರಕಟವಾದ ಬೆನ್ನಲ್ಲೇ ವಿಜಯ ಕರ್ನಾಟಕ ದೈನಿಕ ಪತ್ರಿಕೆಯೂ 2021ರ ಜುಲೈ 8ರಂದು ‘ಟಚ್‌ ಸ್ಟೋನ್‌’ಗೆ ಕಾರ್ಮಿಕರ ಬಿಸಿಯೂಟ ಗುತ್ತಿಗೆ’ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿದೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ಹೊಂದಿರುವ ಇಂತಹ ವರದಿಗಳನ್ನು ಮುಖ್ಯ ವಾಹಿನಿಯಲ್ಲಿರುವ ಪತ್ರಿಕೆಗಳು ವಿಸ್ತರಿಸುವುದು ಸಹಭಾಗಿತ್ವ ಪತ್ರಿಕೋದ್ಯಮ ಕಲ್ಪನೆಗೆ ಮತ್ತಷ್ಟು ಬಲ ತುಂಬಿದಂತಾಗಿದೆ.

ಈ ಮೊದಲು ಬಿಸಿಯೂಟ ಸರಬರಾಜಿನ ಗುತ್ತಿಗೆಯನ್ನು ಇಂದಿರಾ ಕ್ಯಾಂಟೀನ್‌ ಬದಲಿಗೆ ಅಕ್ಷಯ ನಿಧಿ ಫೌಂಡೇಷನ್‌ಗೆ ನೀಡಲು ಬಿಬಿಎಂಪಿಯು ಆರ್ಥಿಕ ಇಲಾಖೆಯ ಸಹಮತಿ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆ ಸಹಮತಿ ವ್ಯಕ್ತಪಡಿಸುವ ಮುನ್ನವೇ ಅಕ್ಷಯ ನಿಧಿ ಫೌಂಡೇಷನ್‌ನ ಮತ್ತೊಂದು ಅಂಗ ಸಂಸ್ಥೆ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಕಾರ್ಯಾದೇಶ ನೀಡಲು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಇದೇ ಪ್ರಸ್ತಾವನೆಯನ್ನು ಒಪ್ಪಿರುವ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮುಖ್ಯ ಆಯುಕ್ತರು ಟಚ್‌ ಸ್ಟೋನ್‌ ಫೌಂಡೇಷನ್‌ ಪ್ರತಿಷ್ಠಾನದಿಂದ ಬಿಸಿಯೂಟ ಪಡೆದುಕೊಳ್ಳಲು ಮತ್ತು ಕೆಟಿಪಿಪಿ ಕಾಯ್ದೆಯ 4(ಜಿ) ಅಡಿ ವಿನಾಯಿತಿ ಕೋರಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2021ರ ಮೇ 26ರಂದು ಪತ್ರ ಬರೆದಿದ್ದ ಪತ್ರವನ್ನಾಧರಿಸಿ ‘ದಿ ಫೈಲ್‌’ ಈ ವರದಿಯನ್ನು ಪ್ರಕಟಿಸಿತ್ತು.

ಇಂದಿರಾ ಕ್ಯಾಂಟೀನ್‌ ಮೂಲಕ ನೀಡುತ್ತಿದ್ದ ರೈಸ್‌ಬಾತ್‌, ಪಲಾವ್‌ ಇತ್ಯಾದಿಗಳ ಬದಲಿಗೆ ಪ್ರತಿ ದಿನ ಅನ್ನ ಸಾಂಬರ್,‌ ಕರಿ, ಉಪ್ಪಿನಕಾಯಿಯನ್ನು 20 ರು. ದರದಲ್ಲಿಯೇ ವಿತರಿಸಲು ಅಕ್ಷಯ ನಿಧಿ ಫೌಂಡೇಷನ್‌ಗೆ ಬಿಬಿಎಂಪಿ ಷರತ್ತು ವಿಧಿಸಿತ್ತು. ಆದರೀಗ ದರದಲ್ಲಿ 3 ರು. ಹೆಚ್ಚಳ ಮಾಡಿ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಗುತ್ತಿಗೆ ನೀಡಲು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿರುವುದನ್ನು ಸ್ಮರಿಸಬಹುದು.

‘ಅಕ್ಷಯ ನಿಧಿ ಫೌಂಡೇಷನ್‌ನ ಬದಲಾಗಿ ಟಚ್‌ ಸ್ಟೋನ್‌ ಫೌಂಡೇಷನ್‌ ಸಂಸ್ಥೆಯ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶವನ್ನು ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಕಚ್ಛಾ ವಸ್ತುಗಳು, ಅಡುಗೆ ಅನಿಲ ಹಾಗೂ ಇಂಧನ ವೆಚ್ಚವು ಅಧಿಕವಾಗಿರುವ ಕಾರಣ ಸಾರಿಗೆ ವೆಚ್ಚವೂ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿ ಊಟಕ್ಕೆ 20 ರು.ಗಳಿಂದ 22 ರು.ಗಳಿಗೆ ಹೆಚ್ಚಿಸಲು ಕೋರಿರುತ್ತಾರೆ’ ಎಂದು ಬಿಬಿಎಂಪಿಯು ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿರುವುದು ದಾಖಲೆಯಿಂದ ಗೊತ್ತಾಗಿದೆ.

ಪ್ರತಿ ಊಟಕ್ಕೆ 22 ರು.ಗಳಿಗೆ ಹೆಚ್ಚಿಸಲು ಪ್ರಸ್ತಾವನೆ ಕೋರಿದ್ದ ಬಿಬಿಎಂಪಿಯು ‘ಟಚ್‌ ಸ್ಟೋನ್‌ ಫೌಂಡೇಷನ್‌ ಸಂಸ್ಥೆಯವರು ವಾರದ ಎಲ್ಲಾ 7 ದಿನಗಳಲ್ಲಿಯೂ ವೈವಿಧ್ಯಮಯವಾದ ಊಟ ನೀಡಲು ಸಿದ್ಧರಾಗಿರುವುದರಿಂದ ಪ್ರತಿ ಊಟಕ್ಕೆ ರು.22ಕ್ಕಿಂತ ಹೆಚ್ಚಿನ 1 ರು. ಗಳನ್ನು ಅಂದರೆ 23 ರು.ಗಳನ್ನು ಪಾವತಿಸಲು ಕೋರಿರುವುದು,’ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts