ಕೇಂದ್ರ ಖರೀದಿ ದರದಲ್ಲಿಯೇ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ವಿತರಣೆ;150 ರು.ಸೇವಾದರ ಶಿಫಾರಸ್ಸೇಕೆ?

ಬೆಂಗಳೂರು; ಬೆಂಗಳೂರು; ಒಕ್ಕೂಟ ಸರ್ಕಾರವೇ ನೇರವಾಗಿ ಕೋವಿಡ್‌ ಲಸಿಕೆ ಖರೀದಿಸಬೇಕು. ಮತ್ತು ಸರ್ಕಾರವು ಖರೀದಿಸುವ ಬೆಲೆಯಲ್ಲಿಯೇ ಖಾಸಗಿ ಆಸ್ಪತ್ರೆಗಳಿಗೂ ವಿತರಿಸಬೇಕು ಮತ್ತು ಕನಿಷ್ಠ 150 ರು. ಸೇವಾ ದರವನ್ನು ನಾಗರಿಕರಿಂದ ಪಡೆಯಲು ಅನುವು ಮಾಡಿಕೊಡಬೇಕೆಂದು ಉನ್ನತ ಮಟ್ಟದ ತಜ್ಞರ ಸಮಿತಿ ಅಧ್ಯಕ್ಷ ಮತ್ತು ನಾರಾಯಣ ಹೃದಯಾಲಯದ ಮುಖ್ಯಸ್ಥರೂ ಆಗಿರುವ ಡಾ ದೇವಿಶೆಟ್ಟಿ ಅವರು ರಾಜ್ಯ ಸರ್ಕಾರಕ್ಕೆ ಮಾಡಿರುವ ಶಿಫಾರಸ್ಸು ಚರ್ಚೆಗೆ ಗ್ರಾಸವಾಗಿದೆ.

ಕೋವಿಡ್‌ 3ನೇ ಅಲೆಯನ್ನು ಎದುರಿಸಲು ನಡೆಸಬೇಕಾದ ಸಿದ್ಧತೆಗಳ ಕುರಿತು ಸರ್ಕಾರ ರಚಿಸಿರುವ ಉನ್ನತ ಮಟ್ಟದ ತಜ್ಞರ ಸಮಿತಿ ಅಧ್ಯಕ್ಷ ಡಾ ದೇವಿಶೆಟ್ಟಿ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಲಸಿಕೆ ಖರೀದಿ, ವಿತರಣೆ ಮತ್ತು ದಾಸ್ತಾನಿನ ಕುರಿತು ಮಾಡಿರುವ ಶಿಫಾರಸ್ಸುಗಳ ಪೈಕಿ ಇದು ಕೂಡ ಒಂದಾಗಿದೆ.

ಲಸಿಕೆ ವಿತರಣೆಯಲ್ಲಿ ರಾಜ್ಯಗಳಿಗೆ ಆಗುತ್ತಿದ್ದ ತಾರತಮ್ಯ ಕುರಿತು ಸುಪ್ರೀಂಕೋರ್ಟ್ ಒಕ್ಕೂಟ ಸರ್ಕಾರಕ್ಕೆ ಚಾಟಿ ಬೀಸಿದ ಎರಡು ವಾರಗಳ ನಂತರ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ ಒಂದೇ ತಿಂಗಳ ಅಂತರದಲ್ಲಿ ಕರ್ನಾಟಕ ರಾಜ್ಯದ ಕೋವಿಡ್ ಕಾರ್ಯಪಡೆ ಮುಖ್ಯಸ್ಥರು ಕೇಂದ್ರವು ಖರೀದಿಸಿದ ದರದಲ್ಲಿಯೇ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕು ಎಂದು ಮಾಡಿರುವ ಶಿಫಾರಸ್ಸು ಮುನ್ನೆಲೆಗೆ ಬಂದಿದೆ.

‘ಲಸಿಕೆಗಳ ಲಭ್ಯತೆ/ದಾಸ್ತಾನನ್ನು ತ್ವರಿತಗತಿಯಲ್ಲಿ ಹೆಚ್ಚು ಮಾಡಲು ಕೇಂದ್ರ ಸರ್ಕಾರವು ಭಾರತೀಯ ಮತ್ತು ವಿದೇಶಿ ಕಂಪನಿಗಳಿಂದ ಲಸಿಕೆಗಳನ್ನು ಕೊಳ್ಳಬೇಕು ಮತ್ತು ಕೇಂದ್ರ ಸರ್ಕಾರವು ಖರೀದಿಸಿರುವ ದರದಲ್ಲಿಯೇ ಖಾಸಗಿ ಆಸ್ಪತ್ರೆಗಳಿಗೆ ವಿತರಣೆ ಮಾಡಬೇಕು’ ಎಂದು ಶಿಫಾರಸ್ಸು ಮಾಡಿದ್ದಾರೆ.

ಉಚಿತ ಲಸಿಕೆ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳು ಪಾಲ್ಗೊಳ್ಳಲು ಸರ್ಕಾರದ ವತಿಯಿಂದ 150 ರು. ದರದಂತೆಯೇ ಸೇವಾಶುಲ್ಕ ನೀಡಿದರೆ ಲಸಿಕೆ ನೀಡಲು ಆ ಮೂಲಕ ಸರ್ಕಾರದ ಉಚಿತ ಲಸಿಕೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಖಾಸಗಿ ಆಸ್ಪತ್ರೆಗಳು ಸಮ್ಮತಿಸುತ್ತವೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.

ತಡೆಮದ್ದು ವಿತರಣೆಯಲ್ಲಿನ ತಾರತಮ್ಯ ಕುರಿತು ಸುಪ್ರೀಂಕೋರ್ಟ್ ಒಕ್ಕೂಟ ಸರ್ಕಾರಕ್ಕೆ ತಾಕೀತು ಮಾಡಿದ ಎರಡು ವಾರಗಳ ನಂತರ ಮೋದಿಯವರು ಎಲ್ಲರಿಗೂ ಉಚಿತವಾಗಿ ತಡೆಮದ್ದು ನೀಡಲಾಗುತ್ತದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.

ಕರ್ನಾಟಕ ರಾಜ್ಯದ ಕೋವಿಡ್ ಕಾರ್ಯಪಡೆ ಮುಖ್ಯಸ್ಥರು ತಡೆಮದ್ದು ವಿತರಣೆಯನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಿ. ಅಲ್ಲದೇ ಒಕ್ಕೂಟ ಸರ್ಕಾರವೇ ನೇರವಾಗಿ ತಡೆಮದ್ದು ಖರೀದಿಸಿ ಸರ್ಕಾರವು ಕೊಂಡ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ನೀಡಿ, ಕನಿಷ್ಠ ₹150 ಸೇವಾ ದರವನ್ನು ನಾಗರಿಕರಿಂದ ಪಡೆಯಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸುವುದು ಮೋದಿಯವರು ಜನತೆಯ ಮುಂದೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ಹೇಳಿ ಅಬ್ಬರದ ಜಾಹೀರಾತುಗಳನ್ನು ನೀಡಿದ್ದು ಹುಸಿ ಎಂಬುದನ್ನು ಸಾಬೀತು ಪಡಿಸುತ್ತದೆ. ಅಲ್ಲದೆ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ವೇಳೆ ಎಲ್ಲರಿಗೂ ಉಚಿತವಾಗಿ ಬೇಗನೆ ತಡೆಮದ್ದು ಸಿಗಬೇಕು ಎಂದು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿದೆ. ಸಮಗ್ರ ರಾಷ್ಟ್ರೀಯ ತಡೆಮದ್ದು ನೀತಿ ಇರದ ಕಾರಣ ಗೊಂದಲ ಮುಂದುವರಿದಿದೆ. ಖಾಸಗಿ ಆಸ್ಪತ್ರೆಗಳ ಹಣದಾಸೆ ಜಗಜ್ಜಾಹೀರಾಗಿದೆ.

ಕೆಬಿಕೆ ಸ್ವಾಮಿ, ವಕೀಲರು

ಲಸಿಕೆ ಅಭಿಯಾನದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳ ಮುಂದೆ ಭಾರೀ ಜನಸಂದಣಿ ಸೇರುವುದನ್ನು ಮತ್ತು ಆ ಮೂಲಕ ಕೋವಿಡ್‌ ಹರಡುವುದನ್ನು ತಡೆಗಟ್ಟಲು ಈ ಲಸಿಕೆ ಅಭಿಯಾನದಲ್ಲಿ ಖಾಸಗಿ ವಲಯವನ್ನೂ ಒಳಗೊಳ್ಳಲು ಪರಿಗಣಿಸಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ.

ರಾಜ್ಯ ಮಟ್ಟದಲ್ಲಿ ಲಸಿಕೆ ನೀತಿ ರೂಪಿಸಬೇಕು. ಯಾವುದೇ ಕಾರಣಕ್ಕೂ ಯಾವ ಆಸ್ಪತ್ರೆಯೂ ಇನ್ನೂ ಬಳಸಲಾಗದೇ ಇರುವ ಲಸಿಕೆಗಳನ್ನು 10 ದಿನಗಳಿಗಿಂತಲೂ ಹೆಚ್ಚು ದಿನ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೂ ಅಂತಹ ಲಸಿಕೆಗಳನ್ನು ಸರ್ಕಾರಿ ಅಥವಾ ಸರ್ಕಾರೇತರ ವೈದ್ಯಕೀಯ ಸಂಸ್ಥೆಗಳಿಗೆ ಹಂಚಿಕೆ ಮಾಡುವ ನೀತಿಯನ್ನು ರೂಪಿಸಬೇಕು ಎಂದು ಶಿಫಾರಸ್ಸು ಮಾಡಿರುವುದು ವರದಿಯಿಂದ ಗೊತ್ತಾಗಿದೆ.

ಉಚಿತ ಲಸಿಕೆ ಅಭಿಯಾನ ಎನ್ನವುದೇ ಸದ್ಯದ ಪರಿಸ್ಥಿತಿಯಲ್ಲಿ ಹಾಸ್ಯಾಸ್ಪದವಾಗಿದೆ. ಏಕೆಂದರೆ 18 ವರ್ಷ ಮೇಲ್ಪಟ್ಟವರಿಗೆ ರಾಜ್ಯದ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಹಣಕ್ಕೆ ಲಸಿಕೆ ಲಭ್ಯವಿದೆ. ಆದರೆ ಉಚಿತವಾಗಿ ನೀಡಲು ಲಸಿಕೆಗಳು ಮಾತ್ರ ಲಭ್ಯವಿಲ್ಲ. ಸರ್ಕಾರ ಏನು ಮಾಡುತ್ತಿದೆ ಎಂದರೆ ಹಣವುಳ್ಳವರು ಅಥವಾ ತುರ್ತು ಇರುವವರು ಹಣ ಕೊಟ್ಟು ಬೇಗ ಲಸಿಕೆ ಹಾಕಿಸಿಕೊಂಡು ಬಿಡಲಿ, ಆಗ ನಮಗೆ ಉಚಿತವಾಗಿ ಲಸಿಕೆ ನೀಡಬಹುದಾದವರ ಸಂಖ್ಯೆ ಕಡಿಮೆಯಾದಂತಾಗುತ್ತದೆ. ನಮಗೆ ಹಣವೂ ಉಳಿಯುತ್ತದೆ ಎಂದು ಸರ್ಕಾರ ಭಾವಿಸಿದೆ. ಈ ಮೂಲಕ ಏನಾಗುತ್ತಿದೆ ಎಂದರೆ ಲಸಿಕೆ ಅಭಿಯಾನ ಮತ್ತಷ್ಟು ದೀರ್ಘವಾಗುತ್ತದೆ. ಮತ್ತು ಅವರು ಈ ಅವಧಿಯಲ್ಲಿ ಸೋಂಕು ಪೀಡಿತರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರಿಂದ ಏನು ಸಾಧಿಸಿದಂತಾಯಿತು?

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ

ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟುವ ಕುರಿತಂತೆ ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಸಮಿತಿ ತನ್ನ ವರದಿಯನ್ನು ನೀಡಿದ್ದು, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಖರೀದಿಯ ಬೆಲೆಗೆ ಲಸಿಕೆ ಕೊಡಬೇಕೆಂಬ ಶಿಫಾರಸು ಕೂಡ ಇದೆ. ಖಾಸಗಿ ಆಸ್ಪತ್ರೆಗಳು ಈಗ ಮಾರುಕಟ್ಟೆ ಬೆಲೆಗೆ ಖರೀದಿಸಿ, ಸೇವಾಶುಲ್ಕ ವಿಧಿಸಿ ಲಸಿಕೆ ನೀಡುತ್ತಿವೆ. ಒಕ್ಕೂಟ ಸರ್ಕಾರ ತಾನು ಖರೀದಿಸುವ ಬೆಲೆ (150 ರುಪಾಯಿ)ಗೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿರುವುದು ಆಶ್ಚರ್ಯಕರ. ಬಹುಶಃ ಖಾಸಗಿ ಆಸ್ಪತ್ರೆಯ ಒಡೆಯರೇ ತಜ್ಞರ ಸಮಿತಿ ಅಧ್ಯಕ್ಷರಾಗಿರುವುದು ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ.

ಲಸಿಕೆ ಎಲ್ಲ ಕಡೆ ಸಿಗಬೇಕು, ಇದಕ್ಕಾಗಿ ಖಾಸಗಿ ಆಸ್ಪತ್ರೆಗಳೂ ಕೈಜೋಡಿಸಲು ಸಿದ್ಧವಿದ್ದರೆ, ಅಲ್ಲೂ ಸಹ ಉಚಿತವಾಗಿಯೇ ಸಿಗಬೇಕು‌. ಒಕ್ಕೂಟ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೂ ಉಚಿತವಾಗಿಯೇ ಲಸಿಕೆ ಕೊಡಲಿ, ಖಾಸಗಿ ಆಸ್ಪತ್ರೆಗಳು ಯಾವ ಸೇವಾಶುಲ್ಕವನ್ನೂ‌ ವಿಧಿಸಿದೆಯೇ ಉಚಿತವಾಗಿಯೇ ಲಸಿಕೆ ನೀಡಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಬಹುದಿತ್ತು. ಈಗ ನೂರೈವತ್ತು ರುಪಾಯಿಗೇ ಖಾಸಗಿಯವರಿಗೂ ಕೊಡಿ ಎಂದರೆ ಸರ್ಕಾರದ ಉಚಿತ ವ್ಯಾಕ್ಸಿನ್ ಅಭಿಯಾನದಿಂದಾಗಿ ಖಾಸಗಿ ಆಸ್ಪತ್ರೆಗಳು ಈಗಾಗಲೇ ಕೊಂಡಿಟ್ಟುಕೊಂಡಿರುವ ದಾಸ್ತಾನು ಖರ್ಚಾಗದೇ ಇರುವ ಆತಂಕ ಇರುವಹಾಗೆ ಕಾಣುತ್ತದೆ.

 

ದಿನೇಶ್‌ಕುಮಾರ್‌ ಎಸ್‌ ಸಿ, ಕರವೇ ಸಾಮಾಜಿಕ ಜಾಲತಾಣ

ಒಟ್ಟು ಉತ್ಪಾದನೆಯಾಗಿರುವ ಲಸಿಕೆಗಳ ಪೈಕಿ ಶೇ.50ರಷ್ಟು ಪ್ರಮಾಣದಲ್ಲಿ ಬೆಂಗಳೂರು ನಗರ ಸೇರಿದಂತೆ ದೇಶದ ಮಹಾನಗರಗಳಲ್ಲಿರುವ ಕಾರ್ಪೋರೇಟ್‌ ಆಸ್ಪತ್ರೆಗಳು ಖರೀದಿಸಿದ್ದವು. ಡಾ ದೇವಿಶೆಟ್ಟಿ ಅವರು ನಡೆಸುವ ನಾರಾಯಣ ಹೃದಯಾಲಯವು 2.02 ಲಕ್ಷ ಡೋಸ್‌ಗಳನ್ನು ಮೇ ತಿಂಗಳಲ್ಲಿ ಖರೀದಿಸಿತ್ತು. ಶಿವಮೊಗ್ಗ ನಗರದಲ್ಲಿನ ಖಾಸಗಿ ಆಸ್ಪತ್ರೆಯೊಂದು 6,000 ಕೋವಿಶೀಲ್ಡ್‌ ಡೋಸ್‌ಗಳನ್ನು ಖರೀದಿಸಿ ದಾಸ್ತಾನು ಮಾಡಿದ್ದನ್ನು ಸ್ಮರಿಸಬಹುದು.

ಕೋವಿಡ್ ಕಾಲಘಟ್ಟದಲ್ಲಿ ಇಡೀ ದೇಶದ ಜನರು ದುಡಿಮೆ ಇಲ್ಲದೆ ಕುಳಿತಿದ್ದಾಗ ಅತಿಹೆಚ್ಚು ದುಡಿದಿರುವುದು ಖಾಸಗಿ ಆಸ್ಪತ್ರೆಗಳು. ಹೀಗಾಗಿ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ಕೊಟ್ಟರೆ ಅವರು ಕಳೆದುಕೊಳ್ಳುವುದೇನೂ ಇಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳೂ ಉಚಿತ ಲಸಿಕಾ ಕೇಂದ್ರಗಳನ್ನು ತೆರೆದು, ತಮ್ಮ ಜನಪರ ಕಾಳಜಿ ತೋರಬೇಕು. ಡಾ.ದೇವಿಶೆಟ್ಟಿಯಂಥವರು ಖಾಸಗಿ ಆಸ್ಪತ್ರೆಗಳ ಮನವೊಲಿಸಿ ಈ ಮಾನವೀಯ ಕಾರ್ಯಕ್ಕೆ ಅಣಿಗೊಳಿಸಬೇಕು‌ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ದಿನೇಶ್‌ಕುಮಾರ್.

SUPPORT THE FILE

Latest News

Related Posts