ಈಜುಕೊಳ ವಿವಾದ; ರೋಹಿಣಿ ನೈತಿಕವಾಗಿ ಪತನ ಹೊಂದಿದ್ದಾರೆ ಎಂದ ಐಪಿಎಸ್‌ ರೂಪ ಮೌದ್ಗಿಲ್‌

ಬೆಂಗಳೂರು: ವಿವಾದಿತ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರಿ ವಸತಿಗೃಹದಲ್ಲಿ ಈಜುಕೊಳ ನಿರ್ಮಿಸಿದ್ದ ಪ್ರಕರಣದ ವಿವಾದವು ಇನ್ನೂ ತಣ್ಣಗಾಗಿಲ್ಲ. ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ರೋಹಿಣಿ ಸಿಂಧೂರಿ ಅವರ ಲೋಪವನ್ನು ಎತ್ತಿ ತೋರಿಸಿರುವ ಬೆನ್ನಲ್ಲೇ ಮತ್ತೊಬ್ಬ ಐಪಿಎಸ್‌ ಅಧಿಕಾರಿ ರೂಪ ಡಿ ಮೌದ್ಗಿಲ್‌ ಅವರು ಇಡೀ ಪ್ರಕರಣಕ್ಕೆ ನೈತಿಕತೆಯ ಕನ್ನಡಿ ಹಿಡಿದಿದ್ದಾರೆ.

ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯನ್ನೇ ಪಡೆಯದೇ ಜಲಸನ್ನಿಧಿಯಲ್ಲಿ ಈಜುಕೊಳ ನಿರ್ಮಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಸಲ್ಲಿಸಿರುವ ತನಿಖಾ ವರದಿಯು ಬಹಿರಂಗಗೊಳ್ಳುತ್ತಿದ್ದಂತೆ ಅಧಿಕಾರಿಶಾಹಿಯೊಳಗಿನಿದಲೇ ಸಿಂಧೂರಿ ಅವರ ನಡೆ ಟೀಕೆಗೆ ಗುರಿಯಾಗಿದೆ. ಐಪಿಎಸ್‌ ಅಧಿಕಾರಿ ಡಿ ರೂಪ ಮೌದ್ಗಿಲ್‌ ಅವರು ಸಿಂಧೂರಿ ಅವರ ನಡೆಯನ್ನು ಟೀಕಿಸಿ ಮಾಡಿರುವ ಟೀಕೆಯು ಅಧಿಕಾರಿಶಾಹಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವನ್ನು ಬಂಗಲೆಯಲ್ಲಿ ಸ್ವಿಮ್ಮಿಂಗ್‌ ಫೂಲ್‌ ಕಟ್ಟಲು ಮುಂದಾಗಿದ್ದು ಮೊಟ್ಟಮೊದಲನೆಯದಾಗಿ ರೋಹಿಣಿ ಐಎಎಸ್‌ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಿಗೆ ತೆಗೆದುಕೊಂಡಿಲ್ಲ ಎನ್ನುವುದು ನಂತರ ವಿಚಾರ. ಕಟ್ಟುವುದು ಮುಂದೂಡಲೂಬಹುದಿತ್ತು,’ ಎಂದು ರೂಪ ಮೌದ್ಗಿಲ್‌ ಅವರು ಮಾಡಿರುವ ಟ್ವೀಟ್‌ ಐಎಎಸ್‌ ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರಿ ವಸತಿಗೃಹದಲ್ಲಿ ಈಜುಕೊಳ ನಿರ್ಮಿಸಿಕೊಂಡಿದ್ದ ಪ್ರಕರಣವು ಅಧಿಕಾರಿಗಳ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಸಂಸದ ಪ್ರತಾಪ್‌ಸಿಂಹ, ಜೆಡಿಎಸ್‌ ಶಾಸಕ ಸಾ ರಾ ಮಹೇಶ್‌ ಸೇರಿದಂತೆ ಹಲವರು ಟೀಕಿಸಿದ್ದರು. ಈ ಪ್ರಕರಣವು ವಿವಾದಕ್ಕೀಡಾಗುತ್ತಿದ್ದಂತೆ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು. ಪ್ರಾದೇಶಿಕ ಆಯುಕ್ತ ಜಿ ಸಿ ಪ್ರಕಾಶ್‌ ಅವರು ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ತನಿಖಾ ವರದಿಯಲ್ಲೇನಿದೆ?

ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯಲ್ಲಿ ಈಜುಕೊಳ ನಿರ್ಮಾಣ ಮಾಡಲು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯನ್ನೇ ಪಡೆದಿಲ್ಲ ಎಂಬುದನ್ನು ಪ್ರಾದೇಶಿಕ ಆಯುಕ್ತರ ತನಿಖಾ ವರದಿಯು ಹೊರಗೆಡವಿದೆ.

ಈಜುಕೊಳ ನಿರ್ಮಾಣಕ್ಕೆ 32 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಕ್ಕೆ ತಾಂತ್ರಿಕ ವರ್ಗದಿಂದ ,ಲೋಕೋಪಯೋಗಿ ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಆಡಳಿತಾತ್ಮಕ ಮಂಜೂರಾತಿಯನ್ನು ಪಡೆದಿಲ್ಲ ಎಂದು ವರದಿ ನೀಡಿದೆ.

ನಗರಾಭಿವೃದ್ಧಿ ಇಲಾಖೆಯು 2020ರ ಏ. 21ರಂದು ಹೊರಡಿಸಿದ ಅಧಿಸೂಚನೆಯಂತೆ ಪಾರಂಪರಿಕ ಕಟ್ಟಡ ಗಳ ಸಂರಕ್ಷಣೆ, ನವೀಕರಣ ಕೆಲಸ ಮಾಡಬೇಕಾದರೆ ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆಯಬೇಕಿತ್ತು. ಆದರೆ, ಈಜುಕೊಳ ನಿರ್ಮಾಣಕ್ಕೆ ಅನುಮೋದನೆ ಪಡೆದಿಲ್ಲ ಎಂದಿದೆ. ಮನೆಯಲ್ಲಿ ಈಜುಕೊಳ ನಿರ್ಮಿಸಿಕೊಂಡಿರುವುದರಿಂದ ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿರುವುದಿಲ್ಲ. ಈಜುಕೊಳ ನಿರ್ಮಾಣ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

‘ಈಜುಕೊಳ ನಿರ್ಮಾಣವೇ ಅಕ್ರಮ, ಕಾನೂನಿಗೆ ವಿರುದ್ದವಾಗಿ ನಿರ್ಮಿಸಲಾಗಿದೆ. ರೋಹಿಣಿ ಸಿಂಧೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿರ್ಮಿಸಲಾಗಿದೆ,’ ಎಂದು ಪ್ರಾದೇಶಿಕ ಆಯುಕ್ತರು ವರದಿಯಲ್ಲಿ ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts