ಹಣ ವಸೂಲಿಗೆ ಸಚಿವ ಗೋಪಾಲಯ್ಯ ನಿವಾಸದಲ್ಲಿ ನಡೆದಿತ್ತೇ ಸಭೆ?; ಆಡಿಯೋ ಬಹಿರಂಗ

ಬೆಂಗಳೂರು; ಕೋವಿಡ್‌ ಸಂಕಷ್ಟದ ಕಾಲದಲ್ಲೂ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ಅಬಕಾರಿ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿಗಿಳಿದಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದಾರೆ.

ಜಿಲ್ಲೆಗಳಲ್ಲಿರುವ ಮದ್ಯದ ಅಂಗಡಿಗಳಿಂದ ಹಣ ವಸೂಲಿ ಮಾಡಲು ಸಚಿವರು ನಿರ್ದೇಶಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆಯಲ್ಲದೆ ಈಗಾಗಲೇ ರಾಜ್ಯದ ಚಾಮರಾಜನಗರ, ದಾವಣಗೆರೆ ಜಿಲ್ಲೆಯಿಂದಲೂ ಅಲ್ಲಿನ ಅಬಕಾರಿ ಅಧಿಕಾರಿಗಳು ಮದ್ಯದ ಅಂಗಡಿಗಳಿಂದ ಹಣ ವಸೂಲಿ ಮಾಡಿ ಸಚಿವರಿಗೆ ತಲುಪಿಸಿದ್ದಾರೆ ಎಂದು ಅಧಿಕಾರಿಗಳಿಬ್ಬರು ಸಂಭಾಷಣೆ ನಡೆಸಿರುವ ಎನ್ನಲಾಗಿರುವ ಆಡಿಯೋ ತುಣಕೊಂದು ಇದೀಗ ಬಹಿರಂಗವಾಗಿದೆ. 10 ನಿಮಿಷದ ಆಡಿಯೋ ತುಣುಕು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕಳೆದ ವರ್ಷ ಅಬಕಾರಿ ಸಚಿವರಾಗಿದ್ದ ಎಚ್‌ ನಾಗೇಶ್‌ ಅವರು ಜಂಟಿ ಆಯುಕ್ತರ ವರ್ಗಾವಣೆಗೆ 1 ಕೋಟಿ ಲಂಚ ಕೇಳಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು. ಆ ನಂತರ ಇವರು ರಾಜೀನಾಮೆ ನೀಡಿದ್ದರು. ಈ ಪ್ರಕರಣ ಇನ್ನೂ ಹಸಿಹಸಿಯಾಗಿರುವಾಗಲೇ ಕೆ ಗೋಪಾಲಯ್ಯ ಅವರು ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವುದು ಮುನ್ನೆಲೆಗೆ ಬಂದಿದೆ.

ಅಬಕಾರಿ ಸಚಿವರಿಗೆ 5ಲಕ್ಷ ರುಪಾಯಿ ಮಾಮೂಲಿ ಕೊಡಬೇಕು ಎನ್ನುವ ಅಬಕಾರಿ ಅಧಿಕಾರಿಗಳಿಬ್ಬರ ನಡುವೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯ ಆಡಿಯೋ ಸಂಚಲನ ಮೂಡಿಸಿದ್ದರೂ ಸಚಿವ ಕೆ ಗೋಪಾಲಯ್ಯ ಅವರು ಈವರೆವಿಗೂ ತುಟಿ ಬಿಚ್ಚಿಲ್ಲ. ಪ್ರಕರಣ ಸಂಬಂಧ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಕೈ ತೊಳೆದುಕೊಳ್ಳಲಾಗಿದೆ. ಪ್ರಕರಣ ಕುರಿತು ತನಿಖೆ ನಡೆಸದೆಯೇ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು  ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದೆ ಎನ್ನಲಾಗಿರುವ 10 ನಿಮಿಷದ ಸಂಭಾಷಣೆಯ ತುಣುಕಿನಲ್ಲಿ ಕೊಪ್ಪಳ ಜಿಲ್ಲೆಯಿಂದ 5 ಲಕ್ಷ ಸಂಗ್ರಹಿಸಿ ಕೊಡಲು ಸೂಚಿಸಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ. ಅಲ್ಲದೆ ಮಂಜುನಾಥ್‌, ನಾಗರಾಜಪ್ಪ, ರಮೇಶ್‌, ಶಿವಪ್ರಸಾದ್‌ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆಯಲ್ಲದೆ ಕೊಪ್ಪಳ ಜಿಲ್ಲೆಯ ಇಕ್ಬಾಲ್‌ ಅನ್ಸಾರಿ ಎಂಬುವರ ಹೆಸರು ಪ್ರಸ್ತಾಪವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಚಿವರ ಮನೆಯಲ್ಲೇ ನಡೆದಿತ್ತು ಸಭೆ?

ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರ ಮನೆಯಲ್ಲಿ ಅಬಕಾರಿ ಜಿಲ್ಲಾ ಅಧಿಕಾರಿಗಳು, ಜಂಟಿ ಆಯುಕ್ತರುಗಳ ಸಭೆ ನಡೆದಿತ್ತು ಎಂಬುದು ಮಹಿಳಾ ಅಧಿಕಾರಿಯೊಬ್ಬರ ಆಡಿಯೋ ತುಣುಕಿನಿಂದ ಗೊತ್ತಾಗಿದೆ. ಸಚಿವರ ಮನೆಯಲ್ಲಿ ಸಭೆ ನಡೆಯುವ ಮುನ್ನ ವಿಕಾಸಸೌಧದಲ್ಲಿ ಅಬಕಾರಿ ಇಲಾಖೆಯ ಜಂಟಿ ಆಯುಕ್ತರು, ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಸಚಿವ ಗೋಪಾಲಯ್ಯ ಅವರು ಕೆಲ ಜಿಲ್ಲೆಗಳ ಅಬಕಾರಿ ನಿರೀಕ್ಷಕರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಿಸಿದ್ದರು. ಅದೇ ದಿನ ಸಂಜೆ ಸಚಿವರ ಮನೆಯಲ್ಲಿ ಆಯ್ದ ಜಂಟಿ ಆಯುಕ್ತರು ಮತ್ತು ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಂಜುನಾಥ್‌, ಕುಮಾರ್‌, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂಬುದು ಆಡಿಯೋ ತುಣುಕಿನಿಂದ ತಿಳಿದು ಬಂದಿದೆ.

‘ರಮೇಶ್‌ ಬಗ್ಗೆ ಸಾಹೇಬ್ರು ಬಹಳ ಹುಷಾರಾಗಿದಾರೆ. ಕೆಟ್ಟದಾಗಿದಾರೆ. ನಾನು ಓಪನ್‌ ಆಗಿ ಹೇಳ್ದೆ. ಕೊಡೋಕೆ ರೆಡಿ ಇದ್ರು. ಒಪ್ಪಿದ್ರು. ಬೇರೆಯವರು ಹೆಂಗೆ ಮಾಡ್ತಾರೆ ಹಂಗೆ ಮಾಡೋಣ ಅಂದ್ರು. ಡಿಸಿ ಮೂರು ಜನ್ರ ಮೇಲೆ ಸಿಟ್ಟಾಗಿದಾರೆ. ರಮೇಶ್‌ ಮೇಲಂತೂ ಸಖತ್‌ ಸಿಟ್ಟಾಗಿದಾರೆ. ದಾವಣಗೆರೆ ಡಿಸಿ ಶಿವಪ್ರಸಾದ್‌ ಇದ್ರು. ಸುಮತಿ ರೆಡಿ ಇದ್ರು. ರಮೇಶ್‌ ದಾರಿ ತಪ್ಪಿಸುತ್ತಿದ್ದಾರೆ,’ ಎಂದು ಸಂಭಾಷಿಸಿರುವುದು ಆಡಿಯೋ ತುಣುಕಿನಿಂದ ಗೊತ್ತಾಗಿದೆ.

‘ಗ್ರೀನ್‌ ಸಿಗ್ನಲ್‌ ಕೊಟ್ರೆ ತಂದ್‌ ಕೊಡ್ತೀನಿ’ ‘ನಾನೇನು ಮಾಡ್ಲಿ. ಗಂಗಾವತಿ ಇನ್‌ಫಂಕ್ಷನ್‌ ಆಗಿದೆ. ವರದಿ ಕೊಡಿ. ಅಮೌಂಟ್‌ ಕಲೆಕ್ಟ್‌ ಆಗಿದೆಯೇ’ ಎಂದು ಮಹಿಳಾ ಅಧಿಕಾರಿಯ ಪ್ರಶ್ನೆಗೆ ಮತ್ತೊಬ್ಬ ಅಧಿಕಾರಿಯು ‘ ನಾಳೆನೇ ತಂದ್‌ ಕೊಡ್ತೀನಿ. ಗ್ರೀನ್‌ ಸಿಗ್ನಲ್‌ ಕೊಟ್ಟರೆ,’ ಎಂದು ಉತ್ತರಿಸಿದ್ದಾರೆ. ಹಾಗೆಯೇ ‘ ಇಕ್ಬಾಲ್‌ ಅನ್ಸಾರಿ ಅವರು ಒಂದ್‌ ರೂಪಾಯಿನೂ ಕೊಟ್ಟಿಲ್ಲ ಅವ್ರು.,’ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ. ಆನಂತರ ‘ಮೇಡಂ ತಾವು ಗ್ರೀನ್‌ ಸಿಗ್ನಲ್‌ ಕೊಟ್ಟರೆ ಕಲೆಕ್ಟ್‌ ಮಾಡ್ತೀನಿ,’ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.

ಮಿನಿಸ್ಟರ್‌ದು ಏನ್‌ ಮಾಡಿದ್ರಿ?

ಕೊಪ್ಪಳ ಜಿಲ್ಲೆಯ ಪ್ರತಿ ತಾಲೂಕಿನಲ್ಲಿರುವ ಮದ್ಯದ ಅಂಗಡಿಗಳಿಂದ ಹಣ ಸಂಗ್ರಹ ಮಾಡಿಕೊಡಬೇಕು ಎಂಬ ವಿಚಾರವೂ ಆಡಿಯೋ ತುಣುಕಿನಲ್ಲಿ ಪ್ರಸ್ತಾಪವಾಗಿದೆ. ‘ಮಿನಿಸ್ಟರ್‌ದು ಏನ್‌ ಮಾಡಿದ್ರಿ… ನೀವು ಶಾಪ್‌ಗಳಿಂದ ಆ ಮೇಲೆ ಕಲೆಕ್ಷನ್‌ ಮಾಡ್ರಿ. ನೀವು ಕೈಯಿಂದ ಕೊಟ್ಟು ಶಾಪ್‌ನೋರ ಹತ್ರ ಆ ಮೇಲೆ ಕೇಳ್ರಿ. ಬೆಳಗಾಂ, ಗುಲ್ಬರ್ಗಾದವರು ಬಂದಿದ್ರು. ಅವರನ್ನು ಕೇಳಿ. ನೀವು ಅವರು ಟಾರ್ಗೇಟ್‌ ಆಗ್ತೀರಿ. ನಾನೇನು ಕೊಟ್ಟು ಕೈ ತೊಳ್ಕೋತ್ತೀನಿ, ಆ ಮೇಲೆ ನಿಮ್‌ ಸ್ಟೋರಿಗಳು ಹೊರಗ್‌ ಬರ್ತಾವೆ. ನಾನೇನು ಮಾಡಕ್ಕಾಗಲ್ಲ,’ಎಂದು ಮಹಿಳಾ ಅಧಿಕಾರಿ ಮಾತನಾಡಿರುವುದು ಆಡಿಯೋ ತುಣುಕಿನಿಂದ ಗೊತ್ತಾಗಿದೆ.

ಕೊಪ್ಪಳದಿಂದ 5 ಲಕ್ಷ ಕೇಳಿದರೇ?

ಕೊಪ್ಪಳ ಜಿಲ್ಲೆಯ ಅಧಿಕಾರಿಗಳಿಂದ 5 ಲಕ್ಷ ವಸೂಲು ಮಾಡಲು ಸೂಚಿಸಲಾಗಿದೆ ಎಂಬ ಮಾತುಗಳು ಆಡಿಯೋದಲ್ಲಿವೆ. ‘ಜೆಸಿ ಫೋನ್‌ ಮಾಡಿದ್ರು. ವಾಯ್ಸ್‌ ಕಾಲ್‌ನಲ್ಲಿ. ಕೊಪ್ಪಳದಿಂದ 5 ಲಕ್ಷ ಕೇಳಿದ್ರಲ್ಲ. ಇನ್ಸ್‌ಪೆಕ್ಟರ್‌ಗಳಿಂದ ಕಲೆಕ್ಟ್‌ ಮಾಡ್ಲಿಕ್ಕೆ ಹೇಳಿದ್ರು. 2.5 ಲಕ್ಷ ತಲುಪಿಸ್ಬೇಕು ಅಂತ ಹೇಳಿದ್ರು. ಯಾವ್‌ ತರಹ 2.5 ಲಕ್ಷ ಕೊಡ್ಬೇಕು ಅಂತ ಜೆಸಿಗೆ ಕಾಲ್‌ ಮಾಡಿ ಕನ್ಫರ್ಮ್‌ ಮಾಡ್ಕೊಳ್ಳಿ. ಚಾಮರಾಜನಗರ ಡಿಸಿ ಕೊಟ್ಟಿದಾರೆ. ಬಳ್ಳಾರಿ, ಶಿವಪ್ರಸಾದ್‌ ಹೆಂಗ್‌ ಕೊಟ್ಟಿದಾರೆ ನೋಡಿ,’ ಎಂದು ಸಂಭಾಷಿಸಿರುವುದು ಆಡಿಯೋ ತುಣುಕಿನಿಂದ ತಿಳಿದು ಬಂದಿದೆ.

ಇದು ಅಶ್ಚರ್ಯಕಾರಿ ಸುದ್ದಿ ಅಲ್ಲವೇ ಅಲ್ಲ. ಅಬಕಾರಿ ಇಲಾಖೆ ರಾಜ್ಯದ ಅತಿ ಭ್ರಷ್ಟ ಮತ್ತು ಅಕ್ರಮ ಚಟುವಟಿಕೆಗಳ ಇಲಾಖೆಗಳಲ್ಲಿ ಒಂದು. ಇದೇ ಇಲಾಖೆಯ ಹಿಂದಿನ ಸಚಿವರು ಅಧಿಕಾರಿಗಳ ವರ್ಗಾವಣೆಗೆ ಲಂಚ ಕೇಳಿದ್ದ ಪ್ರಕರಣ ಇನ್ನೂ ಹಸಿಹಸಿಯಾಗಿರುವಾಗಲೇ ಹಾಲಿ ಸಚಿವರು ಅಥವಾ ಅವರ ಏಜೆಂಟ್‌ಗಳು ಲಂಚ ಕೇಳುತ್ತಿದ್ದಾರೆ ಎನ್ನುವುದು ಇವರು ಈ ಹಿಂದಿನ ಯಾವುದೇ ತಪ್ಪುಗಳಿಂದ ಪಾಠ ಕಲಿಯುವುದಿಲ್ಲ ಎನ್ನುವುದು ಸಾಬೀತಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಈ ಕೂಡಲೇ ಭ್ರಷ್ಟಾಚಾರ ನಿಗ್ರಹ ದಳವು ಕೂಡಲೇ ತನಿಖೆ ನಡೆಸಬೇಕು ಮತ್ತು ಮುಖ್ಯಮಂತ್ರಿಗಳು ಸಹ ಸದರಿ ಸಚಿವರಿಂದ ವಿವರಣೆ ಪಡೆದು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕೂಡಲೇ ಕ್ರಮ ಜರುಗಿಸಬೇಕು. ಆರೋಪ ಸಾಬೀತಾದಲ್ಲಿ ಸಚಿವರನ್ನು ಸಂಪುಟದಿಂದ ಆ ಕೂಡಲೇ ವಜಾಗೊಳಿಸಬೇಕು.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು ಕರ್ನಾಟಕ ರಾಷ್ಟ್ರಸಮಿತಿ

ಒಂದು ವೇಳೆ ಮಾಮೂಲಿ ಮುಟ್ಟಿಸದಿದ್ದರೆ ಕ್ರಮಕ್ಕೆ ಮುಂದಾಗಲಾಗುವುದು ಎನ್ನುವ ಮಾತುಗಳು ನಾನಾ ಜಿಲ್ಲೆಯ ಅಧಿಕಾರಿಗಳ ಹೆಸರು ಹಾಗೂ ಅಬಕಾರಿ ಇಲಾಖೆಯ ಮೇಲಾಧಿಕಾರಿಗಳ ಹೆಸರು ಆಡಿಯೋದಲ್ಲಿ ಪ್ರಸ್ತಾಪವಾಗಿದೆ. ಹಣ ನೀಡುವ ಬಗ್ಗೆ ಪದೇ ಪದೇ ಚರ್ಚೆಯಾಗಿದೆ. ಮಹಿಳಾ ಅಧಿಕಾರಿಯೊಬ್ಬರು ತಮಗೆ ಮೇಲಾಧಿಕಾರಿಗಳಿಂದ ಹಣ ನೀಡಲು ಒತ್ತಡ ಇದೆ. ತಾಲೂಕುವಾರು ಅಧಿಕಾರಿಗಳು ಅರ್ಥ ಮಾಡಿಕೊಂಡು ಅಲ್ಲಿಗೆ ತಲುಪಿಸಲು ಹಣದ ವ್ಯವಸ್ಥೆ ಮಾಡಿಕೊಡಬೇಕೆನ್ನುವ ಮಾತುಗಳು ಆಡಿಯೋದಲ್ಲಿವೆ.

SUPPORT THE FILE

Latest News

Related Posts