ಆಸ್ತಿ ವಿವರ ಸಲ್ಲಿಸದ 9 ಐಎಎಸ್‌, 19 ಐಪಿಎಸ್‌ ಅಧಿಕಾರಿಗಳ ಪಟ್ಟಿ ಬಹಿರಂಗ

ಬೆಂಗಳೂರು; ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿ ವಿವಾದಕ್ಕೀಡಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ಹಿಂದಿನ ಆಯುಕ್ತರಾದ ಐಎಎಸ್‌ ಅಧಿಕಾರಿ ಶಿಲ್ಪಾನಾಗ್ ಸೇರಿದಂತೆ ಕರ್ನಾಟಕ ಶ್ರೇಣಿಯ ಒಟ್ಟು 9 ಐಎಎಸ್‌ ಅಧಿಕಾರಿಗಳು ಮತ್ತು 19 ಮಂದಿ ಐಪಿಎಸ್‌ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಸ್ಥಿರಾಸ್ತಿ ವಿವರ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ.

ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು ಆಯಾ ವರ್ಷದ ಆಸ್ತಿ ವಿವರವನ್ನು ಮುಂದಿನ ವರ್ಷದ ಜನವರಿ ಅಂತ್ಯದೊಳಗೆ ಸಲ್ಲಿಸಬೇಕಾಗುತ್ತದೆ. ನಿಗದಿತ ಗಡುವು ಮೀರಿ 5 ತಿಂಗಳಾಗುತ್ತಿದ್ದರೂ ಆಸ್ತಿದಾಯಿತ್ವ ಪಟ್ಟಿಯನ್ನು ಸಲ್ಲಿಸದೇ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆಸ್ತಿ ವಿವರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಇಲಾಖೆ ವ್ಯವಸ್ಥೆ ಮಾಡಿದೆ. ಈ ಮಾಡ್ಯೂಲ್ ಮೂಲಕ ಅಧಿಕೃತ ಸ್ಥಿರ ಸ್ವತ್ತುಗಳ ವಿವರಗಳನ್ನು ವಿದ್ಯುನ್ಮಾನವಾಗಿ ಅಥವಾ ಹಾರ್ಡ್ ಪ್ರತಿಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ನೀಡಬಹುದು. ಆದರೂ ಸಹ 9 ಮಂದಿ ಐಎಎಸ್‌ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸದಿರುವುದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.

ಆಸ್ತಿ ವಿವರ ಸಲ್ಲಿಸದ ಐಎಎಸ್‌ ಅಧಿಕಾರಿಗಳ ಪಟ್ಟಿ

ಮೊಹಮ್ಮದ್‌ ಮೊಹ್ಸಿನ್‌ (1996)
ನೀಲಾ ಮಂಜುನಾಥ್‌ (2006)
ಸಲ್ಮಾ ಕೆ ಫಾಹಿಮ್‌ (2006)
ನಗತ್‌ ತಬಸ್ಸುಬ್ ಆಬ್ರೋ (2008)
ಶೆಟ್ಟಣನವರ್‌ ಎಸ್‌ ಬಿ (2008)
ಶಿಲ್ಪಾ ನಾಗ್‌ (2014)
ಅಕ್ಷಯ್‌ ಶ್ರೀಧರ್‌
ಲೋಖಂಡೆ ಸ್ನೇಹಲ್‌ ಸುಧಾಕರ್‌ (2017)
ಆಕಾಶ್‌ ಎಸ್‌

ಆಸ್ತಿ ವಿವರ ಸಲ್ಲಿಸದ ಐಪಿಎಸ್‌ ಅಧಿಕಾರಿಗಳ ಪಟ್ಟಿ

ಉಪೇಂದ್ರ ಎಸ್‌ ಬಗೇಲ್‌ (1988)
ಸಂಜಯ್‌ ಸಹಾಯ್‌ (1989)
ಸಂಜಯ್‌ ವೀರ್‌ ಸಿಂಗ್‌ (1989)
ಎಸ್‌ ಜೆ ಧರ್ಮಾಧಿಕಾರಿ (1990)
ಪ್ರಶಾಂತಕುಮಾರ್‌ ಠಾಕೂರ್‌ (1992)
ಸುರೇಶ್‌ ಕುನ್ನಿ ಮೊಹಮ್ಮದ್‌ (1992)
ತ್ರಿಲೋಕ್‌ಚಂದ್ರ ಕೆ ವಿ (2003)
ರಮೇಶ್‌ ಆರ್‌
ರವಿಕುಮಾರ್‌ ವೈ ಎಸ್‌ (2007)
ರಾಜಾ ಪಿ (2011)
ಕೆ ವಿ ಜಗದೀಶ್‌ (2012)
ಎಂ ಎ ಅರುಣ್‌ ರಂಗರಾಜನ್‌ (2012)
ಮೋಹಿತ್‌ ಗರ್ಗ್ (2013)
ಲೋಕೇಶ್‌ ಭರ್ಮಪ್ಪ ಜಗಲ್ಸರ್‌ (2015)
ರಂಜಿತ್‌ಕುಮಾರ್ ಬಂಡಾರು (2017)
ಅರ್ನೈಕ್‌ ಸೈಕ್‌ (2016)
ಜಗದೀಶ್‌ ಪಿ
ಆಕರ್ಶ್ ಜೈನ್‌ (2020)
ಹರ್ಷ ಪ್ರಿಯಂವದ

ಅಲ್ಲದೇ ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಕೆ ಅಣ್ಣಾಮಲೈ ಅವರ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು ಆಯಾ ವರ್ಷದ ಆಸ್ತಿ ವಿವರವನ್ನು ಮುಂದಿನ ವರ್ಷದ ಜನವರಿ ಅಂತ್ಯದೊಳಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಅವರಿಗೆ ಬಡ್ತಿ ಹಾಗೂ ಹಿರಿಯ ಹುದ್ದೆಗಳಿಗೆ ನೇಮಕವನ್ನು ತಡೆಯುವ ಸಾಧ್ಯತೆ ಇರುತ್ತದೆ. ಆದರೆ ಕರ್ನಾಟಕದಲ್ಲಿ ಹಲವು ವರ್ಷಗಳಿಂದಲೂ ನಿಗದಿತ ಅವಧಿಯಲ್ಲಿ ಆಸ್ತಿ ವಿವರಗಳನ್ನು ಸಲ್ಲಿಸದೇ ಇದ್ದರೂ ಈವರೆವಿಗೂ ಯಾರ ವಿರುದ್ಧವೂ ಕ್ರಮ ಕೈಗೊಂಡ ನಿದರ್ಶನಗಳಿಲ್ಲ.

ಸೇವಾ (ನಡತೆ) ನಿಯಮಗಳು–1968ರ ಪ್ರಕಾರ, ಅಖಿಲ ಭಾರತ ಸೇವೆಯಲ್ಲಿರುವ ಅಧಿಕಾರಿಗಳೆಲ್ಲರೂ ಪ್ರತಿ ವರ್ಷ ಡಿಸೆಂಬರ್‌ 31ರಂದು ತಮ್ಮ ವಾರ್ಷಿಕ ಸ್ಥಿರಾಸ್ತಿಗಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕು. 2020 ಆಸ್ತಿ ವಿವರವನ್ನು 2021 ಜನವರಿ ಅಂತ್ಯದೊಳಗೆ ಸಲ್ಲಿಸಬೇಕು. ಪ್ರತಿ ವರ್ಷ ಜನವರಿ 31 ರೊಳಗೆ ಆಸ್ತಿ ವಿವರ ಸಲ್ಲಿಕೆ ಮಾಡಬೇಕೆಂದಿದ್ದರೂ ಕೆಲವರು ತಡವಾಗಿ ಆಸ್ತಿ ವಿವರ ಸಲ್ಲಿಕೆ ಮಾಡಿರುವುದೂ ಕಂಡು ಬಂದಿದೆ.

ಸರ್ಕಾರಿ ಅಧಿಕಾರಿಗಳ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರವನ್ನು ನಿರುತ್ತೇಜನಗೊಳಿಸಲು ಕಾನೂನಿನಲ್ಲಿ ಹಲವು ನಿಯಮಗಳಿವೆ. ಆದರೆ ಹಿರಿಯ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಆ ನಿಯಮಗಳನ್ನು ಪಾಲಿಸದೆಯೇ ಅಕ್ರಮ ಸಂಪಾದನೆಯನ್ನು ಮುಚ್ಚಿಟ್ಟುಕೊಳ್ಳುವುದು ಬಹಳ ದಿನಗಳಿಂದ ನಡೆಯುತ್ತಿದೆ. ಈ ವರದಿಯಲ್ಲಿ ಪ್ರಸ್ತಾಪವಾಗಿರುವಂತೆ ಬಹುತೇಕ ಐಎಎಸ್‌ ಅಧಿಕಾರಿಗಳು ತಮ್ಮ ಸ್ಥಿರಾಸ್ತಿ ವಿವರಗಳನ್ನು ಘೋಷಣೆ ಮಾಡಿಲ್ಲದಿರುವುದು ಇವರೆಲ್ಲರೂ ಸಂಘಟಿತವಾಗಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎನ್ನುವುದು ಕಾಣಿಸುತ್ತದೆ. ಪಾರದರ್ಶಕವಾಗಿ ನಡೆದುಕೊಳ್ಳಬೇಕಾದ ಅಧಿಕಾರಿಗಳು ಹೀಗೆ ಮಾಡುತ್ತಿರುವುದು ಸಂಪೂರ್ಣವಾಗಿ ಪೂರ್ವ ಯೋಜಿತ ಮತ್ತು ಉದ್ದೇಶಪೂರ್ವಕ.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು

ಕರ್ನಾಟಕ ರಾಷ್ಟ್ರಸಮಿತಿ

 

ಆಸ್ತಿ ವಿವರ ಸಲ್ಲಿಸಲು ಆನ್​ಲೈನ್ ವ್ಯವಸ್ಥೆ ಮಾಡಿದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದಾರೆ. ಸ್ಥಿರಾಸ್ತಿ ವಿವರ ಸಲ್ಲಿಕೆ ಮಾಡುವಲ್ಲಿ ಐಪಿಎಸ್ ಅಧಿಕಾರಿಗಳು ಹೆಚ್ಚಿಗೆ ಹಿಂದೇಟು ಹಾಕುತ್ತಿದರುವುದು ಮುಂದುವರಿದಿದೆ. ಆಸ್ತಿ ವಿವರ ಸಲ್ಲಿಸದ ಅಧಿಕಾರಿಗಳ ಭಡ್ತಿ ಮತ್ತಿತರ ವೃತ್ತಿ ಸಂಬಂಧಿ ಅಂಶಗಳನ್ನು ತಡೆಹಿಡಿಯಲು ಸರ್ಕಾರಕ್ಕೆ ಅವಕಾಶವಿದೆ. ನಿಯಮಗಳ ಪ್ರಕಾರ, ದೇಶದ ಎಲ್ಲ ನಾಗರಿಕ ಸೇವಾ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಸ್ಥಿರಾಸ್ತಿ ಹಾಗೂ ತಮ್ಮ ಭೋಗ್ಯದಲ್ಲಿರುವ ವಸ್ತುಗಳ ವಿವರವನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.

the fil favicon

SUPPORT THE FILE

Latest News

Related Posts