ಉನ್ನತ ಶಿಕ್ಷಣ ದಾಖಲಾತಿ; ಕರ್ನಾಟಕದ ಪ.ಜಾತಿ ಶೇ. 23, ಪ.ಪಂಗಡಕ್ಕೆ ಶೇ.20.9ರಷ್ಟು ಪ್ರಾತಿನಿಧ್ಯ

ಬೆಂಗಳೂರು; ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಒಟ್ಟು ವಿದ್ಯಾರ್ಥಿಗಳ ಪೈಕಿ ಕರ್ನಾಟಕದಲ್ಲಿರುವ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಪ್ರಮಾಣವು (18-23) ವಯೋಮಾನದಡಿಯಲ್ಲಿ ಶೇ. 23.2ರಷ್ಟಿದ್ದರೆ ಪರಿಶಿಷ್ಟ ಪಂಗಡ ವರ್ಗದಲ್ಲಿ ಶೇ.20.9ರಷ್ಟು ಪ್ರಾತಿನಿಧ್ಯವಿರುವುದು ಕಂಡು ಬಂದಿದೆ.

ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ತೊಡಗಿಕೊಳ್ಳುವಿಕೆ ಹೆಚ್ಚಾಗಿದೆ ಎಂದು ಅಖಿಲ ಭಾರತ ಸಮೀಕ್ಷಾ ವರದಿ (ಎಐಎಸ್ಹೆಚ್‌ಇ) – 2019-20ನ್ನು ಕೇಂದ್ರ ಶಿಕ್ಷಣ ಸಚಿವರು ವರದಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ.23ರಷ್ಟಿರುವುದು ಗೊತ್ತಾಗಿದೆ.

2013-14ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಎಸ್‌ಸಿಪಿ ಮತ್ತು ಎಸ್‌ಟಿಪಿ ಯೋಜನೆಯಡಿಯಲ್ಲಿ 75,000 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿತ್ತು. 2020-21ನೇ ಸಾಲಿನಲ್ಲಿ 25,916 ಕೋಟಿ ರು. ರು. ಹಂಚಿಕೆಯಾಗಿದ್ದರೆ 2021-22ನೇ ಸಾಲಿನಲ್ಲಿ 26,005 ಕೋಟಿ ರು ಅನುದಾನ ಒದಗಿಸಲಾಗಿತ್ತು. ಈ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಆದರೂ ಉನ್ನತ ಶಿಕ್ಷಣದಲ್ಲಿ 18-23 ವಯೋಮಾನದ ವಿಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಶೇ.23 ಮತ್ತು ಶೇ.20.9ರಷ್ಟಿದೆ.

ರಾಜ್ಯದಲ್ಲಿ 18-23 ವಯೋಮಾನದವರ ವಿಭಾಗದಲ್ಲಿ ಪರಿಶಿಷ್ಟ ಜಾತಿಯ 6,37,737 ಗಂಡು ಮಕ್ಕಳು ಮತ್ತು 6,18,884 ಹೆಣ್ಣು ಮಕ್ಕಳು ಸೇರಿದಂತೆ 12,51,622, ಪರಿಶಿಷ್ಟ ಪಂಗಡದಲ್ಲಿ 2,57,361 ಗಂಡು ಮಕ್ಕಳು ಮತ್ತು 2,47,657 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 5,05,018 ಜನಸಂಖ್ಯೆ ಇರುವುದು ವರದಿಯಿಂದ ಗೊತ್ತಾಗಿದೆ. ಈ ಪೈಕಿ ಪರಿಶಿಷ್ಟ ಜಾತಿಯ (1,47,206 ಗಂಡು-1,42,956 ಹೆಣ್ಣು) ಒಟ್ಟು 2,90,162 ಮಕ್ಕಳು, ಪರಿಶಿಷ್ಟ ಪಂಗಡದ (53,814 ಗಂಡು -51,947 ಹೆಣ್ಣು ) ಒಟ್ಟು 1,05,761 ಮಕ್ಕಳು ದಾಖಲಾಗಿದ್ದಾರೆ.

ಅದೇ ರೀತಿ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧಕ ವರ್ಗದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 8,391 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 4,168 ಸೇರಿದಂತೆ ಒಟ್ಟಾರೆ 12,559 ಮಂದಿ ಇರುವುದು ತಿಳಿದು ಬಂದಿದೆ. ಈ ವರದಿ ಆಧರಿಸಿ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಮತ್ತು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಯಾವುದೇ ಪ್ರತಿಕ್ರಿಯೆಯನ್ನೂ ನೀಡದಿರುವುದು ಅಚ್ಚರಿ ಮೂಡಿಸಿದೆ.

2015-16ರಿಂದ 2019-20ರವರೆಗಿನ ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.11.4ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿಯಲ್ಲಿ ಶೇ. 18.2ರಷ್ಟು ಏರಿಕೆಯಾಗಿದೆ. ಉನ್ನತ ಶಿಕ್ಷಣದಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ತೊಡಗಿಕೊಳ್ಳುವಿಕೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿಯು 2018-19ರಲ್ಲಿದ್ದ 3.74 ಕೋಟಿಗೆ ಹೋಲಿಸಿದರೆ 2019-20ರಲ್ಲಿ 3.85 ಕೋಟಿಗೆ ಏರಿಕೆಯಾಗಿದ್ದು, 11.36 ಲಕ್ಷ (3.04%) ಬೆಳವಣಿಗೆ ದಾಖಲಾಗಿದೆ. 2014-15ರಲ್ಲಿ ಒಟ್ಟು ದಾಖಲಾತಿ 3.42 ಕೋಟಿ ಇತ್ತು. ಉನ್ನತ ಶಿಕ್ಷಣಕ್ಕೆ ದಾಖಲಾದ ಅರ್ಹ ವಯೋಮಾನದ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸುವ ಒಟ್ಟು ದಾಖಲಾತಿ ಅನುಪಾತವು(ಜಿಇಆರ್‌) 2019-20ರಲ್ಲಿ ಶೇ. 27.1ರಷ್ಟಿದೆ. ಈ ಪ್ರಮಾಣವು 2018-19ರಲ್ಲಿ 26.3% ಮತ್ತು 2014-2015ರಲ್ಲಿ 24.3% ರಷ್ಟಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

ಉನ್ನತ ಶಿಕ್ಷಣದಲ್ಲಿ ಲಿಂಗ ಸಮಾನತೆ ಸೂಚ್ಯಂಕವು (ಜಿಪಿಐ) 2018-19ರಲ್ಲಿದ್ದ 1.00ಕ್ಕೆ ಹೋಲಿಸಿದರೆ, 2019-20ರಲ್ಲಿ 1.01ರಷ್ಟಿದೆ. ಈ ಹೆಚ್ಚಳವು ಅರ್ಹ ವಯಸ್ಸಿನ ಮಹಿಳೆಯರಿಗೆ ಉನ್ನತ ಶಿಕ್ಷಣ ಪ್ರವೇಶದಲ್ಲಿ ಸಾಪೇಕ್ಷ ಸುಧಾರಣೆಯನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

2019-20ರಲ್ಲಿ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತ 26 ರಷ್ಟಿದ್ದರೆ, 2019-20ರಲ್ಲಿ 1,043(2%), ವಿಶ್ವವಿದ್ಯಾಲಯಗಳು, 42,343(77%) ಕಾಲೇಜುಗಳು, ಮತ್ತು 11,779(21%).ಸ್ವಾಯತ್ತ ಸಂಸ್ಥೆಗಳಿವೆ.

ಪದವಿ ಪೂರ್ವ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ 3.38 ಕೋಟಿ ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ. ಈ ಪೈಕಿ, ಸುಮಾರು 85% (2.85 ಕೋಟಿ) ವಿದ್ಯಾರ್ಥಿಗಳು ಮಾನವಿಕ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಮತ್ತು ಐಟಿ ಹಾಗೂ ಐಟಿ ಕಂಪ್ಯೂಟರ್ ನಂತಹ ಆರು ಪ್ರಮುಖ ವಿಭಾಗಗಳಿಗೆ ದಾಖಲಾಗಿದ್ದಾರೆ. 2014-15ರಲ್ಲಿ 1.17 ಲಕ್ಷ ಇದ್ದ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 2019-20ರಲ್ಲಿ 2.03 ಲಕ್ಷಕ್ಕೆ ಏರಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts