ಬೆಂಗಳೂರು; ನವ ನಗರೋತ್ಥಾನ ಯೋಜನೆಯಡಿಯಲ್ಲಿ ಕಳೆದ 3 ವರ್ಷದ ಹಿಂದೆಯೇ ಅನುಮೋದನೆಯಾಗಿರುವ 8,015 ಕೋಟಿ ಮೊತ್ತದ ಬೃಹತ್ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರಿಗೆ ಸರ್ಕಾರವು ಅನುದಾನ ಬಿಡುಗಡೆ ಮಾಡುತ್ತಿದ್ದರೂ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಬಿಲ್‌ಗಳನ್ನು ಸಕಾರಣಗಳಿಲ್ಲದೆಯೇ ತಡೆಹಿಡಿಯುತ್ತಿದೆ. ಅಲ್ಲದೆ ಬೆಂಗಳೂರು ನಗರ ಜಿಲ್ಲೆಯ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿಯೂ ತಾರತಮ್ಯ ಎಸಗುತ್ತಿರುವುದು ಇದೀಗ ಬಹಿರಂಗವಾಗಿದೆ.
ಬೆಂಗಳೂರು ನಗರ ಶಾಸಕರಲ್ಲಿಯೇ ಒಡಕು ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಬಿಬಿಎಂಪಿಯ ಕೆಲ ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದಿರುವ ನಗರ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 2021ರ ಮೇ 24ರಂದು ಬರೆದಿರುವ ದೂರಿನ ಪತ್ರ ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಪತ್ರವನ್ನಾಧರಿಸಿ ಅನುದಾನ ಬಿಡುಗಡೆಯಲ್ಲಿ ತಾರತಮ್ಯವಾದಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರಿಗೆ ಸೂಚಿಸಿ ಪತ್ರವನ್ನು ಬರೆದಿದ್ದಾರೆ.
ಅದರಂತೆ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ತಾರತಮ್ಯ ಎಸಗಿರುವ ಆರೋಪಕ್ಕೆ ಗುರಿಯಾಗಿರುವ ಬಿಬಿಎಂಪಿಯನ್ನು ರಾಕೇಶ್‌ಸಿಂಗ್ ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ನವನಗರೋತ್ಥಾನ ಯೋಜನೆಯಡಿಯಲ್ಲಿ ಮುಖ್ಯ ರಸ್ತೆ ಅಭಿವೃದ್ಧಿ, ವಾರ್ಡ್ ರಸ್ತೆ ಅಭಿವೃದ್ಧಿ, ಫ್ಲೈ ಓವರ್‌ಗಳಂತಹ ಬೃಹತ್ ಮೂಲಸೌಕರ್ಯ ಕಾಮಗಾರಿಗಳ ಸಂಬಂಧ ಬಿಲ್‌ಗಳನ್ನು ಕಡಿಮೆ ಅವಧಿಯಲ್ಲಿ ಸಲ್ಲಿಸುತ್ತಿರುವುದು ತಿಳಿದು ಬಂದಿದೆ.
‘ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ ತ್ರೈಮಾಸಿಕಕ್ಕೊಮ್ಮೆ ನಿಯಮಿತವಾಗಿ ಅನುದಾನ ಬಿಡುಗಡೆ ಆಗುತ್ತಿದೆ. ಯಾವುದೇ ಕಾಮಗಾರಿಯ ಅನುಷ್ಠಾನದಲ್ಲಿ ಅಡೆತಡೆಯಾಗದಂತೆ ಅನುದಾನವನ್ನು ಬಿಲ್ ಪಾವತಿಗೆ ಬಟವಾಡೆ ಮಾಡುವ ಜವಾಬ್ದಾರಿ ಬಿಬಿಎಂಪಿಗಿದೆ. ಎಲ್ಲ ಕಾಮಗಾರಿಗಳೂ ನವ ನಗರೋತ್ಥಾನ ಯೋಜನೆಯ ಅಡಿಯಲ್ಲಿಯೇ ಅನುಮೋದನೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾಮಗಾರಿಗಳಿಗೂ ಅನುದಾನ ಲಭ್ಯವಿರದೇ ಇರುವುದಕ್ಕೆ ಸಕಾರಣಗಳಲ್ಲ. ಸರ್ಕಾರ ಕೂಡ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅನುದಾನವನ್ನು ಯೋಜನೆಗಳಲ್ಲದೆ ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಅನುಮೋದಿತ ಯೋಜನೆಗಳಿಗೆ ಬಿಲ್ ಪಾವತಿ ಮಾಡದೇ ಇರುವಂತಿಲ್ಲ,’ ಎಂದು ರಾಕೇಶ್‌ಸಿಂಗ್ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿಯಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬೆಂಗಳೂರಿನ ವಿವಿಧ ವಿಧಾನಸಭೆ ಕ್ಷೇತ್ರಗಳಿಗೆ ಈಗಾಗಲೇ ಅನುದಾದ ಬಿಡುಗಡೆಯಾಗಿದೆ. ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಬಿಲ್‌ನ್ನು ಪಾವತಿಸುವಾಗ ಬಿಬಿಎಂಪಿಯು ವಿಳಂಬ ಮಾಡುತ್ತಿದೆಯಲ್ಲದೇ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಶಾಸಕ ಮುನಿರತ್ನ ಅವರು ಅಲವತ್ತುಕೊಂಡಿರುವುದು ಅವರು ಬರೆದಿರುವ ಪತ್ರದಿಂದ ಗೊತ್ತಾಗಿದೆ.
2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿ ಒದಗಿಸಿರುವ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿಯಲ್ಲಿ 8,015 ಕೋಟಿ ರು.ಗಳ ಕ್ರಿಯಾ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದೆ. ಕ್ರಿಯಾಯೋಜನೆಯ ಅನುಬಂಧ 2ರಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ 4,107 ಕೋಟಿ ಮೀಸಲಿರಿಸಿರುವುದು ತಿಳಿದು ಬಂದಿದೆ.
ಸದರಿ ರಸ್ತೆಗಳ ಅಭಿವೃದ್ಧಿ ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗುವ ಕಾಮಗಾರಿಗಳಲ್ಲಿ ಆರ್ಟೀಯರಿಯಲ್, ಸಬ್ ಆರ್ಟೀಯರಿಲ್ ಹಾಗೂ ವಾರ್ಡ್ ಮಟ್ಟದ ರಸ್ತೆಗಳು ಒಳಗೊಂಡಿದೆ. ಹಾಲಿ ಈಗಾಗಲೇ ಮೇಲ್ಕಂಡ ಅನುದಾನದಲ್ಲಿ ಬೆಂಗಳೂರು ನಗರದಾದ್ಯಂತ ಹಲವಾರು ಕಾಮಗಾರಿಗಳು ಪೂರ್ಣಗೊಂಡಿದೆ. ಬಿಲ್ ಪಾವತಿಗಾಗಿ ಸಲ್ಲಿಸಲಾಗಿರುತ್ತದೆ. ಬಿಬಿಎಂಪಿಯಲ್ಲಿ ರಸ್ತೆ, ಮೂಲಭೂತ ಸೌಕರ್ಯ ವಿಭಾಗದಿಂದ ನಿರ್ವಹಿಸಿರುವ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ಕಾಮಗಾರಿಗಳಿಗೆ ಅದ್ಯತೆ ಆಧಾರದ ಮೇರೆಗೆ ಬಿಲ್ ಪಾವತಿ ಸಲ್ಲಿಸಿದ ಕೂಡಲೇ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.