ಕೋವಿಡ್‌ ಲಸಿಕೆ; ಕೇಂದ್ರದ ನೀತಿಯಿಂದಾಗಿ ಬೊಕ್ಕಸಕ್ಕೆ 55.78 ಕೋಟಿ ಆರ್ಥಿಕ ಹೊರೆ?

ಬೆಂಗಳೂರು; ಕೋವಿಡ್‌ ಲಸಿಕೆಗಳ ಖರೀದಿ ಸಂಬಂಧ ಕೇಂದ್ರ ಸರ್ಕಾರವು ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಈವರೆವಿಗೆ ಅಂದಾಜು 55.78 ಕೋಟಿ ರು. ಹೊರೆಬಿದ್ದಿದೆ.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಿಂದಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ ಮತ್ತಿತರ ಕಾರಣಗಳಿಂದ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿಂದೆ ಬಿದ್ದಿದೆ. ಅಲ್ಲದೆ ಆದಾಯ ಕೊರತೆಯಿಂದಾಗಿ ಬಳಲುತ್ತಿರುವ ಹೊತ್ತಿನಲ್ಲಿಯೇ ಕೇಂದ್ರದ ನೀತಿಯಿಂದಾಗಿಯೇ ರಾಜ್ಯ ಸರ್ಕಾರದ ಮೇಲೆ 55.78 ಕೋಟಿ ಆರ್ಥಿಕ ಹೊರೆ ಬಿದ್ದಂತಾಗಿದೆ.

ಒಂದೊಮ್ಮೆ ಲಸಿಕೆಗಳನ್ನು ಕೇಂದ್ರ ಸರ್ಕಾರವೇ 150 ರು. ದರದಲ್ಲಿಯೇ ಖರೀದಿಸಿ ರಾಜ್ಯಗಳಿಗೆ ಹಂಚಿಕೆ ಮಾಡಿದ್ದರೆ ರಾಜ್ಯ ಸರ್ಕಾರದ ಮೇಲೆ 55.78 ಕೋಟಿ ಹೊರೆ ಬೀಳುತ್ತಿರಲಿಲ್ಲ. ಜೂನ್‌ 2ರವರೆಗೆ ರಾಜ್ಯ ಸರ್ಕಾರವು ಕಂಪನಿಗಳಿಂದ ನೇರವಾಗಿ 30.71 ಲಕ್ಷ ಡೋಸ್‌ಗಳನ್ನು ಖರೀದಿಗೆ ಆದೇಶ ನೀಡಿದೆ. 150 ರು. ದರದಲ್ಲಿ ಕೇಂದ್ರ ಸರ್ಕಾರವೇ 30.71 ಲಕ್ಷ ಡೋಸ್‌ಗಳನ್ನು ಖರೀದಿಸಿದಿದ್ದರೆ ಕೇವಲ 46.06 ಕೋಟಿ ರು. ಮಾತ್ರ ಖರ್ಚಾಗುತ್ತಿತ್ತು.

ಆದರೆ ಕೇಂದ್ರದ ಲಸಿಕೆ ಖರೀದಿ ನೀತಿಯಿಂದಾಗಿ ರಾಜ್ಯ ಸರ್ಕಾರವು ಕೋವಿಶೀಲ್ಡ್‌ಗೆ 300 ರು. ಮತ್ತು ಕೊವಾಕ್ಸಿನ್‌ಗೆ 400 ರು. ದರದಲ್ಲಿ ಖರೀದಿಸಿರುವುದರಿಂದ ರಾಜ್ಯ ಸರ್ಕಾರವೊಂದರ ಮೇಲೆ ಈವರೆಗೆ 55.78 ಕೋಟಿ ರು. ಹೊರೆ ಬಿದ್ದಿರುವುದು ನಿಚ್ಚಳವಾಗಿ ಕಂಡು ಬಂದಿದೆ.

ರಾಜ್ಯಕ್ಕೆ 2021ರ ಜೂನ್‌ 2ರವರೆಗೆ ರಾಜ್ಯ ಸರ್ಕಾರವು ಖರೀದಿಸಿರುವ ಒಟ್ಟು 30.71 ಲಕ್ಷ ಡೋಸ್‌ (ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌) ಗಳಿಗೆ 101.84 ಕೋಟಿ ರು. ವೆಚ್ಚವಾಗಲಿದೆ. ಈ ಪೈಕಿ 87 ಕೋಟಿ ರು.ಗಳನ್ನು ಸಿರಮ್‌ ಇನ್ಸಿಟಿಟ್ಯೂಟ್‌ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗೆ ಈಗಾಗಲೇ ಪಾವತಿ ಮಾಡಿದೆ.

2021ರ ಏಪ್ರಿಲ್‌ 30ರಿಂದ ಜೂನ್‌ 2ವರೆಗೆ 25,85,130 ಡೋಸ್‌ ಖರೀದಿ ಆದೇಶ ನೀಡಿತ್ತು. ಈಗಾಗಲೇ ರಾಜ್ಯ ಸರ್ಕಾರವು ಇದಕ್ಕಾಗಿ 81,43,15,950 ರು.ಗಳನ್ನು ವೆಚ್ಚ ಮಾಡಲಿದೆ. ಕೋವಿಶೀಲ್ಡ್‌ ತಯಾರಿಕೆ ಕಂಪನಿಗೆ ಈವರೆವಿಗೆ ಒಟ್ಟು 67,15,01,880 ರು.ಗಳನ್ನು ಪಾವತಿಸಿದೆ. 25 ಲಕ್ಷ ಡೋಸ್‌ಗಳ ಪೈಕಿ ಜೂನ್‌ 2ರವರೆಗೆ ರಾಜ್ಯಕ್ಕೆ ಬಂದಿರುವುದು 13,54,050 ಡೋಸ್‌ ಮಾತ್ರ.

2021ರ ಏಪ್ರಿಲ್‌ 30ರಂದು 3,00,000 ಡೋಸ್‌, ಮೇ 3ಕ್ಕೆ 7,04,050, ಮೇ 6ಕ್ಕೆ 3,50,000, ಮೇ 29ಕ್ಕೆ 8,13,270, ಜೂನ್‌ 2ಕ್ಕೆ 4,17,810 ಡೋಸ್‌ಗೆ ಖರೀದಿ ಆದೇಶ ನೀಡಿತ್ತು. ಏಪ್ರಿಲ್‌ 30ಕ್ಕೆ 3,00,000 ಡೋಸ್‌, ಮೇ 9ರಂದು 3,50,000, ಮೇ 11ರಂದು 1 ಲಕ್ಷ, 18ರಂದು 2 ಲಕ್ಷ, 21ರಂದು 2 ಲಕ್ಷ, 22ರಂದು 2.40 ಲಕ್ಷ ಡೋಸ್‌ ಸ್ವೀಕರಿಸಿತ್ತು.

ಅದೇ ರೀತಿ 2021ರ ಮೇ 3ರಿಂದ 25ರವರೆಗೆ ಒಟ್ಟು 4,86,040 ಡೋಸ್‌ಗಳಿಗೆ ಖರೀದಿ ಆದೇಶ ನೀಡಲಾಗಿತ್ತು. ಇದರ ಒಟ್ಟು ವೆಚ್ಚ 20,41,36,800 ರು.ಗಳಾಗಿವೆ. ಈ ಪೈಕಿ ಈಗಾಗಲೇ ಕೊವಾಕ್ಸಿನ್‌ ತಯಾರಿಕೆ ಕಂಪನಿಗೆ 20,02,48,480 ರು.ಗಳನ್ನು ಪಾವತಿಸಿದೆ. 4.86 ಲಕ್ಷ ಡೋಸ್‌ಗಳ ಪೈಕಿ ರಾಜ್ಯ ಸರ್ಕಾರವು ಕೇವಲ 1,94,170 ಡೋಸ್‌ಗಳನ್ನಷ್ಟೇ ಸ್ವೀಕರಿಸಿದೆ.

 

ಮೇ 3ರಂದು 2,44,170, 25ರಂದು 2,41,870 ಡೋಸ್‌ಗಳಿಗೆ ಖರೀದಿ ಆದೇಶ ನೀಡಿತ್ತು. ಮೇ 11ರಂದು 14,41,170 ಡೋಸ್‌ ಮತ್ತು ಮೇ 27ರಂದು 50,000 ಡೋಸ್‌ ಸೇರಿ ಒಟ್ಟು 1,94,170 ಡೋಸ್‌ಗಳನ್ನಷ್ಟೇ ಸ್ವೀಕರಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಅಲ್ಲದೆ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್‌ಗಳನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ಉಚಿತವಾಗಿ ನೀಡದ ಕಾರಣ ರಾಜ್ಯ ಸರ್ಕಾರವೇ ಇದರ ಹೊರೆ ಹೊತ್ತುಕೊಂಡಿದೆ. ರಾಜ್ಯ ಸರ್ಕಾರವು 18-44 ವರ್ಷ ವಯೋಮಾನದವರಿಗೆ ಲಸಿಕೆ ನೀಡಲು ಖರೀದಿಸಿದ್ದ 8.94 ಲಕ್ಷ ಡೋಸ್‌ಗಳನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡಿತ್ತು. ಕೇಂದ್ರದ ಪಾಲನ್ನೂ ರಾಜ್ಯ ಸರ್ಕಾರವು ಭರಿಸಿರುವ ಕಾರಣ ಅಂದಾಜು 28 ಕೋಟಿ ರು. ಹೊರೆಯನ್ನೂ ಹೊರಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.

ಕೇಂದ್ರದ ಲಸಿಕೆ ಖರೀದಿ ನೀತಿಯಿಂದ ಈಗಾಗಲೇ ಹೊತ್ತುಕೊಂಡಿರುವ 55.78 ಕೋಟಿ ಮತ್ತು ಕೇಂದ್ರದ ಪಾಲನ್ನೂ ಭರಿಸಿದ ಕಾರಣ ಹೆಚ್ಚುವರಿಯಾಗಿ ಮಾಡಿರುವ ವೆಚ್ಚ 28 ಕೋಟಿ ಸೇರಿದಂತೆ ಒಟ್ಟಾರೆಯಾಗಿ 83.78 ಕೋಟಿ ರು. ಹೊರೆ ಹೊತ್ತುಕೊಳ್ಳಬೇಕಿದೆ.

8.94 ಲಕ್ಷ ಲಸಿಕೆಗಳನ್ನು ರಾಜ್ಯ ಸರ್ಕಾರವು ಬಳಸಲು ಮುಂದಾಗಿತ್ತು. ಆದರೆ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವು 2ನೇ ಡೋಸ್‌ನ್ನು ಸರಬರಾಜು ಮಾಡಿರಲಿಲ್ಲ. ಹೀಗಾಗಿ 8.94 ಲಕ್ಷ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ಗೆ ಬಳಸಿಕೊಂಡಿತ್ತು. ಇದನ್ನು ರಾಜ್ಯ ಸರ್ಕಾರವು ಮುಚ್ಚಿಟ್ಟಿದ್ದನ್ನು ಸ್ಮರಿಸಬಹುದು.

ಲಸಿಕೆ ಕೊರತೆಗೆ ಕಾರಣ ಬಹಿರಂಗ; ಕೇಂದ್ರದ ಪಾಲು ಭರಿಸಿ 28 ಕೋಟಿ ಹೊರೆ?

ಭಾರತದ ಅತ್ಯಂತ ಸಾಮಾಜಿಕ, ಆರ್ಥಿಕ ಹಿಂದುಳಿದ ರಾಜ್ಯಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಕೋವಿಡ್‌-19 ಲಸಿಕೆಗಳನ್ನು ಸಂಗ್ರಹಿಸಲು ತಮ್ಮ ಆರೋಗ್ಯ ಬಜೆಟ್‌ನ ಶೇ. 30ರಷ್ಟು ಖರ್ಚು ಮಾಡಬೇಕಾಗುವ ಸ್ಥಿತಿಯೂ ಇದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರ ಪ್ರಕಾರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ರಾಜ್ಯಗಳು ಸಿರಮ್‌ ಇನ್ಸಿಟಿಟ್ಯೂಟ್‌ ಆಫ್‌ ಇಂಡಿಯಾದ ಕೋವಿಶೀಲ್ಡ್ ಖರೀದಿಸಬೇಕಾದರೆ ಶೇ. 23ರಷ್ಟು, ಕೊವಾಕ್ಸಿನ್‌ ಖರೀದಿಸಬೇಕಾದರೆ ಶೇ. 30ರಷ್ಟು ಖರ್ಚು ಮಾಡಬೇಕು.

ಶಾಸಕಾಂಗ ಸಂಶೋಧನಾ ಸಂಕ್ಷಿಪ್ತ ವರದಿ ಪ್ರಕಾರ ಹಿಂದುಳಿದ ರಾಜ್ಯಗಳು ತಮ್ಮ ಪರಿಷ್ಕೃತ ಬಜೆಟ್‌ನ ಅಂದಾಜುಗಳಲ್ಲಿ ಈಗಾಗಲೇ ಆದಾಯದ ಕೊರತೆ ವರದಿ ಮಾಡಿರುವುದರಿಂದ ಕೇಂದ್ರ ನಿಗದಿಪಡಿಸಿರುವ ದರದಲ್ಲಿ ಲಸಿಕೆ ಖರೀದಿ ಮಾಡುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts