ಬೆಂಗಳೂರು; 18ರಿಂದ 44 ವರ್ಷದ ಒಳಗಿನವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಭರ್ಜರಿ ಪ್ರಚಾರ ಪಡೆದಿದ್ದ ರಾಜ್ಯ ಬಿಜೆಪಿ ಸರ್ಕಾರವು ಇದುವರೆಗೆ ಕೇವಲ 14 ಲಕ್ಷ ಡೋಸ್‌ಗಳನ್ನಷ್ಟೇ ಖರೀದಿಸಿದೆ. ಅದೇ ರೀತಿ 45 ವರ್ಷ ಮೇಲ್ಪಟ್ಟು ವಯೋಮಾನದವರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರವು ಕೇವಲ 20,60,740 ಖರೀದಿಸಿರುವುದು ಇದೀಗ ಬಹಿರಂಗವಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್ ಲಸಿಕೆ ನೀಡುತ್ತಿಲ್ಲ. ಕೊವಾಕ್ಸಿನ್ ಲಸಿಕೆಯೂ ಇಲ್ಲ. ಎರಡನೇ ಡೋಸ್‌ಗೂ ಕಾಯಬೇಕಾದ ಸ್ಥಿತಿ ಇದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ 18-44 ವರ್ಷದವರೆಗೂ ಲಸಿಕೆ ನೀಡಲಾಗುತ್ತಿದೆ. ಇದು ಸಮಾನತೆಯ ಹಕ್ಕು ಉಲ್ಲಂಘನೆಯಾದಂತಿದೆ ಎಂಬ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ 1 ವಾರದಲ್ಲಿ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಬೇಕು ಎಂದು ನಿರ್ದೇಶಿಸಿರುವ ಬೆನ್ನಲ್ಲೇ ಕೇವಲ 14 ಲಕ್ಷ ಲಸಿಕೆಗಳಷ್ಟೇ ರಾಜ್ಯಕ್ಕೆ ಪೂರೈಕೆಯಾಗಿದೆ ಎಂಬ ಅಂಶ ಮುನ್ನೆಲೆಗೆ ಬಂದಿದೆ.
ರಾಜ್ಯದಲ್ಲಿ 18-44 ವಯಸ್ಸಿನ 3.26 ಕೋಟಿ ಜನಸಂಖ್ಯೆ ಇದೆ. ಈ ವಯೋಮಾನದ ಫಲಾನುಭವಿಗಳಿಗೆ 2 ಡೋಸ್ ಲಸಿಕೆ ನೀಡಲು ಒಟ್ಟಾರೆ 6.52 ಕೋಟಿ ಲಸಿಕೆಗಳ ಅವಶ್ಯಕತೆ ಇದೆ. ಈ ಪೈಕಿ ಪುಣೆಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್‌ಗೆ 2 ಕೋಟಿ ಮತ್ತು ಭಾರತ್ ಬಯೋಟೆಕ್‌ಗೆ 1 ಕೋಟಿ ಸೇರಿ ಒಟ್ಟು 3 ಕೋಟಿ ಲಸಿಕೆ ಖರೀದಿ ಆದೇಶ ನೀಡಲಾಗಿತ್ತು. 2021ರ ಏಪ್ರಿಲ್ 30ರಿಂದ ಮೇ 26ರವರೆಗೆ ಸೀರಂ ಇನ್ಸಿಟಿಟ್ಯೂಟ್‌ನಿಂದ 54.16 ಕೋಟಿ ವೆಚ್ಚದಲ್ಲಿ 13,54,050 ಲಸಿಕೆ ಖರೀದಿಸಿದೆ.
ಭಾರತ್ ಬಯೋಟೆಕ್‌ನಿಂದ 7.76 ಕೋಟಿ ವೆಚ್ಚದಲ್ಲಿ 1,94,170 ಲಸಿಕೆಗಳನ್ನಷ್ಟೇ ಖರೀದಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಅದೇ ರೀತಿ 45 ವರ್ಷ ಮೇಲ್ಪಟ್ಟು ವಯೋಮಾನದವರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಗಳನ್ನು ಖರೀದಿಸಿ ರಾಜ್ಯಗಳಿಗೆ ಹಂಚಿಕೆ ಮಾಡುವ ಕೇಂದ್ರ ಸರ್ಕಾರವು ರಾಜ್ಯಕ್ಕೆ ಏಪ್ರಿಲ್ 30ರಿಂದ ಮೇ 26ರವರೆಗೆ ಸೀರಂ ಇನ್ಸಿಟ್ಯೂಟ್‌ನಿಂದ 25,58,05,500 ಕೋಟಿ ವೆಚ್ಚದಲ್ಲಿ 17,05,370, ಭಾರತ್ ಬಯೋಟೆಕ್‌ನಿಂದ 2021ರ ಮೇ 4ರಿಂದ 28ರವರೆಗೆ 5,33,05,500 ಕೋಟಿ ವೆಚ್ಚದಲ್ಲಿ 3,55,370 ಲಸಿಕೆಗಳನ್ನಷ್ಟೇ ಖರೀದಿ ಮಾಡಿರುವುದು ದಾಖಲೆಯಿಂದ ಗೊತ್ತಾಗಿದೆ.
ಸರ್ಕಾರ ಉಚಿತ ತಡೆಮದ್ದು ನೀಡಲು ಸರ್ಕಾರಿ ಸ್ವಾಮ್ಯದ ಭಾರತ್ ಬಯೋಟೆಕ್‌ಗೆ ಸುಮಾರು 1 ಕೋಟಿ ಡೋಸ್‌ಗಳಿಗೆ ಮಾತ್ರ ಆದೇಶ ನೀಡಿದೆ. ಖಾಸಗಿ ಉತ್ಪಾದಕರಿಗೆ 2 ಕೋಟಿ ಆದೇಶ ನೀಡಿದೆ. ಸರ್ಕಾರಿ ಸ್ವಾಮ್ಯದ ಕೋವಾಕ್ಸಿನ್ 2ನೇ ಡೋಸ್ ಲಭಿಸಬೇಕಾದವರಿಗೂ ವಾಯಿದೆ ದಿನ ಮೀರಿ ಹೋದರೂ ಸಹ ತಡೆಮದ್ದುನ್ನು ನೀಡಿಲ್ಲ. ಸಂಪೂರ್ಣವಾಗಿ ತಡೆಮದ್ದು ನೀಡುವ ಕಾರ್ಯಕ್ರಮ ಗೊಂದಲಮಯವಾಗಿದೆ. ಮತ್ತು ಸರ್ಕಾರದ ಅಸ್ಪಷ್ಟ ಕಾರ್ಯಸೂಚಿಯು ಖಾಸಗಿ ಮತ್ತು ಕಾರ್ಪೋರೇಟ್ ಆಸ್ಪತ್ರೆಗಳು ಸಾರ್ವಜನಿಕರ ಕೋಟಿ ಕೋಟಿ ಹಣವನ್ನು ಲೂಟಿ ಹೊಡೆಯಲು ಒಂದು ವ್ಯವಸ್ಥೆಯನ್ನು ಕಲ್ಪಿಸಿದಂತಾಗಿದೆ.
ಕೆಬಿಕೆ ಸ್ವಾಮಿ, ವಕೀಲರು
ಸೀರಮ್ ಇನ್ಸಿಟಿಟ್ಯೂಟ್ ಒಟ್ಟಾರೆಯಾಗಿ 2021ರ ಜನವರಿ 12, 13,19, 20ರವರೆಗೆ 15,52,000, ಫೆಬ್ರುವರಿಯಲ್ಲಿ 9,76,400, ಮಾರ್ಚ್‌ನಲ್ಲಿ 24,07,610, ಏಪ್ರಿಲ್‌ನಲ್ಲಿ 40,18,680 ಸೇರಿದಂತೆ ಒಟ್ಟು 89,54,690 ಲಸಿಕೆಗಳನ್ನು ಪೂರೈಕೆಯಾಗಿದೆ. 2021ರ ಜನವರಿ 12ರಿಂದ ಮೇ 26ರವರೆಗೆ ಒಟ್ಟಾರೆ 1,20,14,110 ಲಸಿಕೆಗಳನ್ನು ಸರಬರಾಜು ಮಾಡಿದೆ.
ಭಾರತ್ ಬಯೋಟೆಕ್ ಕಂಪನಿಯು 2021ರ ಜನವರಿಯಲ್ಲಿ 1,66,240, ಫೆಬ್ರುವರಿಯಲ್ಲಿ 1,90,100, ಮಾರ್ಚ್‌ನಲ್ಲಿ 2,08,960, ಏಪ್ರಿಲ್‌ನಲ್ಲಿ 4,50,980 ಸೇರಿ 10,16,280 ಲಸಿಕೆ ಪೂರೈಕೆಯಾಗಿತ್ತು. ಜನವರಿಯಿಂದ ಮೇ 28ರವರೆಗೆ ಒಟ್ಟಾರೆ 15,65,820 ಲಸಿಕೆಗಳು ರಾಜ್ಯಕ್ಕೆ ಸರಬರಾಜು ಆಗಿರುವುದು ತಿಳಿದು ಬಂದಿದೆ.
45 ವಯೋಮಿತಿ ದಾಟಿದ, ಮೊದಲನೇ ಡೋಸ್ ಪಡೆದಿರುವ ಅರವತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಎರಡನೇ ಡೋಸ್ ಕೊಡುವ ಹೊಣೆಗಾರಿಕೆ ಒಕ್ಕೂಟ ಸರ್ಕಾರದ್ದು. ರಾಜ್ಯ ಸರ್ಕಾರ ಅಗಿದು-ನುಂಗಿ ಮಾತಾಡುವ ಅಗತ್ಯವಿಲ್ಲ. ನಮ್ಮ ಪಾಲು ನಮಗೆ ಕೊಡಿ ಎಂದು ಧೈರ್ಯವಾಗಿ ಗಟ್ಟಿ ಧ್ವನಿಯಲ್ಲಿ ಕೇಳಬೇಕು. ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಿಗೆ ಸುಲಭವಾಗಿ ದಕ್ಕುತ್ತಿರುವ ವ್ಯಾಕ್ಸಿನ್ ನಮಗೇಕೆ ದಕ್ಕುತ್ತಿಲ್ಲ ಎಂಬುದನ್ನು ಹಿಂಜರಿಕೆ ಇಲ್ಲದೆ ಬಹಿರಂಗಗೊಳಿಸಬೇಕು. ರಾಜ್ಯದ ಜನತೆಯ ಪ್ರಾಣ ರಕ್ಷಣೆಗಿಂತ ಮಿಗಿಲಾಗಿದ್ದು ಮತ್ತೇನಿದೆ?
ದಿನೇಶ್‌ಕುಮಾರ್ ಎಸ್ ಸಿ, ಮುಖ್ಯಸ್ಥರು
ಕರವೇ ಸಾಮಾಜಿಕ ಜಾಲತಾಣ
ರಾಜ್ಯದಲ್ಲಿ ಲಸಿಕೆಯ ಬೇಡಿಕೆ ತೀವ್ರವಾಗಿ ಏರಿಕೆಯಾಗಿದ್ದು ಇನ್ನು 2 ಕೋಟಿ ಲಸಿಕಾ ಡೋಸ್‌ಗಳನ್ನು ಮುಕ್ತ ಮಾರುಕಟ್ಟೆಯಿಂದ ಮತ್ತು ಜಾಗತಿಕ ಟೆಂಡರ್ ಮುಖಾಂತರ ಆಹ್ವಾನಿಸಿತ್ತು. 2 ಕೋಟಿ ಡೋಸ್ ಲಸಿಕೆಗಳನ್ನು 50 ಲಕ್ಷ ಸಂಖ್ಯೆಯಲ್ಲಿ 4 ಸಂಸ್ಥೆಗಳಿಂದ ಎಂದು ವಿಭಜಿಸಿ ತಿದ್ದುಪಡಿ ಹೊರಡಿಸಿತ್ತು. ಲಸಿಕೆ ಖರೀದಿಗಾಗಿ ಸುಮಾರು 843.00 ಕೋಟಿ ಅನುದಾನ ಪ್ರಸ್ತಾವನೆಗೆ 2021 ಮೇ 15ರಂದು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾರ್ಯಪಡೆ ಸಮಿತಿ ಸಭೆಯು ಅನುಮೋದಿಸಿತ್ತು.
’18-44 ವಯೋಮಿತಿಯವರಿಗೆ ಲಸಿಕೆ ನೀಡಲು ದಾಸ್ತಾನಿಲ್ಲ ಎಂದು ಹೈಕೋರ್ಟ್ ನಡೆಸುತ್ತಿರುವ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ಹೇಳಿದೆ. ಲಸಿಕೆ ದಾಸ್ತಾನಿಲ್ಲದ ಕಾರಣ ಈ ವಯೋಮಿತಿಯವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದೂ ಹೇಳಿತ್ತು. ಆದರೆ ಇದೇ ಹೊತ್ತಿನಲ್ಲಿ ಖಾಸಗಿ ಆಸ್ಪತ್ರೆಗಳು 18-44 ವಯೋಮಿತಿಯ ನಾಗರಿಕರಿಗೆ ತಡೆಮದ್ದನ್ನು ಒದಗಿಸುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಾಗಬೇಕಿದ್ದ ತಡೆಮದ್ದು ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿದೆ. ಅಂದರೆ ಖಾಸಗಿ ಆಸ್ಪತ್ರೆಗಳು ಮತ್ತು ಕಾರ್ಪೋರೇಟ್ ಆಸ್ಪತ್ರೆಗಳು ಸರ್ಕಾರಕ್ಕಿಂತಲೂ ಮೊದಲೇ ಲಸಿಕೆ ಖರೀದಿಸಿದ್ದವೇ, ಲಸಿಕೆ ಖರೀದಿಗಾಗಿ ರಾಜ್ಯ ಸರ್ಕಾರವು ಉತ್ಪಾದಕ ಕಂಪನಿಗಳಿಗೆ ಎಂದು ಖರೀದಿ ಆದೇಶ ನೀಡಿತು, ಈ ಸಂಬಂಧ ಹಣ ಬಿಡುಗಡೆ ಮಾಡಿತ್ತೆ, ಖರೀದಿ ಪ್ರಕ್ರಿಯೆ ಹೇಗಾಗಿದೆ ಎಂಬ ವಿವರಗಳನ್ನು ಸರ್ಕಾರವು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು,’ ಎನ್ನುತ್ತಾರೆ ವಕೀಲ ಕೆಬಿಕೆ ಸ್ವಾಮಿ
‘ರಾಜ್ಯ ಸರ್ಕಾರ ಯಾವುದನ್ನೂ ಮುಚ್ಚು ಮರೆ ಮಾಡುವ ಅಗತ್ಯವಿಲ್ಲ. ಮೂರು ಕೋಟಿ ವಯಲ್ ವ್ಯಾಕ್ಸಿನ್ ಗಾಗಿ ಸರ್ಕಾರ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ತಯಾರಿಸುವ ಕಂಪೆನಿಗಳಿಗೆ ಆದೇಶ ನೀಡಿದೆ, ಹಣವನ್ನು ಕೂಡ ಸಿದ್ಧವಾಗಿಟ್ಟುಕೊಂಡಿದೆ. ಆದರೆ ಈವರೆಗೆ ದಕ್ಕಿರುವುದು ಹದಿನಾಲ್ಕು ಲಕ್ಷ ಡೋಸ್ ಮಾತ್ರ. ಯಾಕೆ ಹೀಗಾಗುತ್ತಿದೆ? ಖಾಸಗಿ ಆಸ್ಪತ್ರೆಗಳಿಗೆ ಸಿಗುತ್ತಿರುವ ಲಸಿಕೆ ಸರ್ಕಾರಕ್ಕೆ ಯಾಕೆ ಸಿಗುತ್ತಿಲ್ಲ.? ಇದನ್ನು ಸರ್ಕಾರ ಬಹಿರಂಗಗೊಳಿಸಬೇಕು,’ ಎನ್ನುತ್ತಾರೆ ಕರವೇ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದಿನೇಶ್‌ಕುಮಾರ್.