ಬೆಂಗಳೂರು; ಬ್ಲಾಕ್ ಫಂಗಸ್ ಸೋಂಕಿಗೆ ಒಳಗಾಗುವ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಈ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್-ಬಿ ಫಂಗಸ್ ನಿಗ್ರಹ ಔಷಧಕ್ಕೂ ತೀವ್ರ ಕೊರತೆ ಉಂಟಾಗಲಿದೆ! ರಾಜ್ಯ ಬಿಜೆಪಿ ಸರ್ಕಾರವು ಇದೀಗ ಬೇಡಿಕೆ ಪಟ್ಟಿಯನ್ನು ಸಿದ್ಧಪಡಿಸುತ್ತಿದೆಯಾದರೂ ಬೇಡಿಕೆಗೆ ತಕ್ಕಂತೆ ವಯಲ್‌ಗಳು ಪೂರೈಕೆಯಾಗುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಹಾಗೆಯೇ ಈ ಸೋಂಕಿನಿಂದ ಬಳಲುತ್ತಿರುವವರಿಗೆ ಚಿಕಿತ್ಸೆಯನ್ನು ಯಾವ ಆಸ್ಪತ್ರೆಗಳೂ ನಿರಾಕರಿಸುವಂತಿಲ್ಲ ಎಂದೂ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಸೂಚಿಸಿರುವ ಬೆನ್ನಲ್ಲೇ ಆಂಫೋಟೆರಿಸಿನ್ ಬಿ ಕೊರತೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ರಾಜ್ಯದಲ್ಲಿ ಸದ್ಯ 400 ಮಂದಿ ಸೋಂಕಿತರಿದ್ದಾರೆ ಎಂದು ಹೇಳಲಾಗಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ 8,000ಕ್ಕೆ ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ. ಆದರೂ ರಾಜ್ಯ ಸರ್ಕಾರವು ನೇರವಾಗಿ ಉತ್ಪಾದನಾ ಕಂಪನಿಗಳಿಂದಲೇ ಚುಚ್ಚುಮದ್ದನ್ನು ಖರೀದಿಸಲು ಮುಂದಾಗಿಲ್ಲ. ಖರೀದಿ ಪ್ರಕ್ರಿಯೆ ಆರಂಭಿಸುವ ಸಂಬಂಧ ಆರೋಗ್ಯ ಇಲಾಖೆಯು ಆರ್ಥಿಕ ಇಲಾಖೆಯ ಜತೆ ಇನ್ನೂ ಪತ್ರವ್ಯವಹಾರದಲ್ಲಿಯೇ ಮುಳುಗಿದೆ.
ಏರಿಕೆಯಾಗಲಿರುವ ಸೋಂಕಿತರ ಸಂಖ್ಯೆಗೆ ತಕ್ಕಂತೆ ಅಂದಾಜು 2.52 ಲಕ್ಷ ವಯಲ್‌ಗಳು ರಾಜ್ಯಕ್ಕೆ ತುರ್ತಾಗಿ ಬೇಕಾಗಲಿದೆ. ಆದರೆ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ದೇಶದೊಳಗೆ ಔಷಧ ಉತ್ಪಾದನೆಗೆ ಐದು ಹೆಚ್ಚುವರಿ ಉತ್ಪಾದಕರಿಗೆ ಪರವಾನಿಗೆ ಮಂಜೂರು ಮಾಡಿ ಹಾಲಿ ಇರುವ ಐದು ಉತ್ಪಾದಕರಿಂದ ಉತ್ಪಾದನೆ ಪ್ರಮಾಣ ಹೆಚ್ಚಳ ಮಾಡಿದರೂ ರಾಜ್ಯಕ್ಕೆ ಈ ಪ್ರಮಾಣದಲ್ಲಿ ವಯಲ್‌ಗಳು ದೊರೆಯುವುದು ಕಷ್ಟಸಾಧ್ಯ ಎನ್ನಲಾಗಿದೆ.
ದೇಶೀಯ ಮಟ್ಟದಲ್ಲಿಯೇ ಈ ಚುಚ್ಚುಮದ್ದು ತೀವ್ರ ಕೊರತೆಯಿದೆ. ಹೀಗಾಗಿ ರಾಜ್ಯ ಸರ್ಕಾರವು ನೇರವಾಗಿ ಕಂಪನಿಗಳನ್ನೇ ಆಶ್ರಯಿಸಬೇಕಿದೆ. ಸನ್ ಫಾರ್ಮಾ, ಮೈಲಾನ್ ಮತ್ತು ಭಾರತ್ ಸಿರಮ್ಸ್ ಕಂಪನಿಗಳಿಗೆ ತಲಾ 83,000 ವಯಲ್‌ಗಳಂತೆ ಪೂರೈಕೆ ಮಾಡಲು ಬೇಡಿಕೆ ಪಟ್ಟಿ ಸಲ್ಲಿಸಲು ಚಿಂತಿಸುತ್ತಿದೆ ಎಂದು ತಿಳಿದು ಬಂದಿದೆ.
150 ಕೋಟಿ ವೆಚ್ಚ?
ಇನ್ನು ಈ ಮೂರೂ ಕಂಪನಿಗಳ ದರವೂ ಒಂದೇ ತೆರನಾಗಿಲ್ಲ. ಲಭ್ಯವಿರುವ ಮಾಹಿತಿಯಂತೆ ಮೈಲಾನ್ ಕಂಪನಿಯು ಒಂದು ವಯಲ್‌ಗೆ ಜಿಎಸ್‌ಟಿ ಹೊರತುಪಡಿಸಿ 5,950 ರು., ಭಾರತ್ ಸಿರಮ್ಸ್ 5,071 ರು., ಸನ್ ಫಾರ್ಮಾ 3,240 ರು. ಇದೆ. ಜಿಎಸ್‌ಟಿ ಮತ್ತು ಸಾಗಾಣಿಕೆ ವೆಚ್ಚ ಸೇರಿದಂತೆ ಸರಾಸರಿ ಒಂದು ವಯಲ್‌ಗೆ 6,000 ರು. ಎಂದಿಟ್ಟುಕೊಂಡರೂ 2.52 ಲಕ್ಷ ವಯಲ್‌ಗೆ ಅಂದಾಜು 150 ಕೋಟಿ ರು. ವೆಚ್ಚವಾಗಬಹುದು ಎಂದು ಅಂದಾಜಿಸಬಹುದು.
ಮೇ 2021ರಲ್ಲಿ ದೇಶದಲ್ಲಿ ಒಟ್ಟಾರೆ 1,63,752 ವಯಲ್ಸ್ ಆಂಫೊಟೆರಿಸಿನ್-ಬಿ ಉತ್ಪಾದಿಸಿವೆ. ಈ ಪ್ರಮಾಣ ಜೂನ್ ತಿಂಗಳಲ್ಲಿ ಹೆಚ್ಚಳ ಮಾಡಿದರೂ 2,55,114 ವಯಲ್ಸ್ ಅಷ್ಟೇ ಉತ್ಪಾದನೆ ಮಾಡಲು ಸಾಧ್ಯ. ಆಮದು ಮೂಲಕ ಫಂಗಲ್ ನಿಗ್ರಹ ಔಷಧ ದೇಶೀಯ ಲಭ್ಯತೆಯನ್ನು ಹೆಚ್ಚಿಸಲೂ ಕ್ರಮ ಕ್ರಮಗಳನ್ನು ಕೈಗೊಂಡಿದ್ದರೂ ಮೇ 2021ರಲ್ಲಿ 3,63,000 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧವನ್ನು ಆಮದು ಮಾಡಿಕೊಳ್ಳಲಾಗಿದೆಯಷ್ಟೇ.
ಒಟ್ಟಾರೆ ದೇಶದಲ್ಲಿ ಲಭ್ಯತೆ (ದೇಶೀಯ ಉತ್ಪಾದನೆ ಸೇರಿ) ಪ್ರಮಾಣ 5,26,752ಕ್ಕೆ ಏರಿಕೆಯಾಗಿದೆ. ಜೂನ್ 2021ರಿಂದ 3,15,000 ವಯಲ್ಸ್ ಅನ್ನು ಆಮದು ಮಾಡಿಕೊಳ್ಳಲಾಗುವುದು. ಹಾಗಾಗಿ ದೇಶೀಯ ಪೂರೈಕೆಯಿಂದಾಗಿ ದೇಶಾದ್ಯಂತ ಜೂನ್ 2021ರಲ್ಲಿ ಆಂಫೊಟೆರಿಸಿನ್-ಬಿ ಲಭ್ಯತೆ ಪ್ರಮಾಣ 5, 70,114 ವಯಲ್ಸ್ ಗೆ ಹೆಚ್ಚಾಗಲಿದೆ ಎಂದು ಗೊತ್ತಾಗಿದೆ.
ಭಾರತ್ ಸೀರಮ್ಸ್ ಅಂಡ್ ವ್ಯಾಕ್ಸಿನ್ ಲಿಮಿಟೆಡ್, ಬಿಡಿಆರ್ ಫಾರ್ಮಸುಟಿಕಲ್ಸ್ ಲಿಮಿಟೆಡ್, ಸನ್ ಫಾರ್ಮಾ ಲಿಮಿಟೆಡ್, ಸಿಪ್ಲಾ ಲಿಮಿಟೆಡ್, ಲೈಫ್ ಕೇರ್ ಇನ್ನೋವೇಷನ್ಸ್, ಮೈ ಲ್ಯಾಬ್ಸ್ (ಆಮದುದಾರರು) ಅಲ್ಲದೆ, ನ್ಯಾಟ್ಕೋ ಫಾರ್ಮಸುಟಿಕಲ್ಸ್ (ಹೈದರಾಬಾದ್) ಅಲೆಂಬಿಕ್ ಫಾರ್ಮಸುಟಿಕಲ್ಸ್ ( ವಡೋದರ) ಗುಫಿಕ್ ಬೈಯೋ ಸೈನ್ಸ್ ಲಿಮಿಟೆಡ್ ( ಗುಜರಾತ್) ಎಮ್ ಕ್ಯೂರ್ ಫಾರ್ಮಸುಟಿಕಲ್ಸ್ ( ಪುಣೆ), ಲೈಕಾ ( ಗುಜರಾತ್) ಕಂಪನಿಗಳಿಗೆ ಈಗಾಗಲೇ ಪರವಾನಿಗೆ ನೀಡಲಾಗಿದೆ. ಒಟ್ಟಾರೆ ಈ ಕಂಪನಿಗಳು ಜುಲೈ 2021ರಿಂದ ಪ್ರತಿ ತಿಂಗಳು 1,11,000 ವೈಯಲ್ಸ್ ಆಂಫೊಟೆರಿಸಿನ್-ಬಿ ಉತ್ಪಾದನೆ ಆರಂಭಿಸಲಿವೆ ಎಂದು ಹೇಳಲಾಗಿದೆ.