ಅಂತಿಮವಾಗದ ದರಪಟ್ಟಿ; ಕಚ್ಛಾ ಸಾಮಾಗ್ರಿ ದರ ಹೆಚ್ಚಳದ ಹೊರೆ, ಔಷಧಗಳ ತೀವ್ರ ಕೊರತೆ?

ಬೆಂಗಳೂರು; ಪ್ಯಾರಾಸಿಟಮಲ್‌ ಸೇರಿದಂತೆ ಇನ್ನಿತರೆ ಔಷಧಗಳ ಖರೀದಿ ಸಂಬಂಧ ಆಹ್ವಾನಿಸಿದ್ದ ದರಪಟ್ಟಿಯನ್ನು ಅಂತಿಮಗೊಳಿಸದ ಸರ್ಕಾರ, ಪದೇ ಪದೇ ರದ್ದುಗೊಳಿಸಿ ಖರೀದಿ ಪ್ರಕ್ರಿಯೆಯನ್ನು ಮುಂದೂಡುತ್ತಿದೆ. ಹೆಚ್ಚುವರಿ ಹೊರೆಯನ್ನು ಮೈಮೇಲೆ ಎಳೆದುಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸಲಾರಂಭಿಸಿವೆ. ಅಲ್ಲದೇ ಪ್ಯಾರಾಸಿಟಮಲ್‌ ಸೇರಿದಂತೆ ಹಲವು ಜೀವರಕ್ಷಕ ಔಷಧಗಳು ಸಕಾಲದಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದೊರೆಯದೇ ತೀವ್ರ ಕೊರತೆಯೂ ಸೃಷ್ಟಿಯಾಗಲಿದೆ.!

ಪ್ಯಾರಾಸಿಟಮಲ್‌ ಮಾತ್ರೆ, ಸಿರಪ್‌, ಸಲ್‌ಬುಟಮೊಲ್‌ ಸಲ್ಫೈಟ್‌, ಕೆಮ್ಮಿನ ಔಷಧ, ಗ್ಲೋವ್ಸ್‌, ಸ್ಯಾನಿಟೈಸರ್‌ ಸೇರಿದಂತೆ ಹಲವು ಔಷಧಗಳ ಖರೀದಿ ಸಂಬಂಧ ಕರ್ನಾಟಕ ವೈದ್ಯಕೀ ಸರಬರಾಜು ನಿಗಮವು 2021ರ ಜನವರಿ 13ರಂದು ಕಂಪನಿಗಳು ಮತ್ತು ಸರಬರಾಜುದಾರರಿಂದ ದರಪಟ್ಟಿಯನ್ನು ಆಹ್ವಾನಿಸಿತ್ತು. ಆದರೆ ಯಾವ ದರಪಟ್ಟಿಗಳನ್ನೂ ಅಂತಿಮಗೊಳಿಸದೆಯೇ ಪದೇ ಪದೇ ರದ್ದುಗೊಳಿಸಿರುವುದು ತಿಳಿದು ಬಂದಿದೆ. ಅಧಿಕಾರಿಗಳ ಹಂತದಲ್ಲಾಗುತ್ತಿರುವ ವಿಳಂಬವು ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಅವರ ಗಮನದಲ್ಲಿದ್ದರೂ ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗೊತ್ತಾಗಿದೆ.

ದರಪಟ್ಟಿಯಲ್ಲಿ ಭಾಗವಹಿಸಿದ್ದ ಕಂಪನಿಗಳು ಅಂದಿನ ಕಚ್ಛಾ ಸಾಮಗ್ರಿಗಳ ದರವನ್ನು ನಮೂದಿಸಿದ್ದವು. ಆದರೆ ನಿಗದಿತ ಕಾಲಾವಧಿಯೊಳಗೆ ಅಂತಿಮಗೊಳಿಸದೆಯೇ ರದ್ದುಗೊಳಿಸಿದ್ದ ಸರ್ಕಾರ, ಹೊಸದಾಗಿ ದರಪಟ್ಟಿ ಆಹ್ವಾನಿಸುತ್ತಲೇ ಬಂದಿದೆ. ಈ ಮಧ್ಯೆ ಕಚ್ಚಾಸಾಮಗ್ರಿಗಳ ದರದಲ್ಲೂ ಹೆಚ್ಚಳವಾಗಿದೆ. ಹೀಗಾಗಿ ಔಷಧಗಳ ದರದಲ್ಲೂ ಕಂಪನಿಗಳು ಸಹಜವಾಗಿಯೇ ಹೆಚ್ಚಿಸಿವೆ. ನಿಗದಿತ ಕಾಲಾವಧಿಯಲ್ಲಿ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಅಧಿಕಾರಿಗಳ ಈ ನಡೆಯು ಔಷಧ ಕಂಪನಿಗಳಿಗೆ ಲಾಭ ಮಾಡಿಕೊಡಲಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕಚ್ಛಾ ಸಾಮಗ್ರಿ ದರ ಹೆಚ್ಚಳ ವಿವರ

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಜನವರಿ 13ರಂದು ಒಟ್ಟು 5 ಔಷಧಗಳ ಖರೀದಿಗೆ ದರ ಪಟ್ಟಿ ಆಹ್ವಾನಿಸಿತ್ತು. ಪ್ಯಾರಾಸಿಟಮಲ್‌ನ ಕಚ್ಚಾಸಾಮಗ್ರಿ ಅಂದಿನ ದರ 575 ದರವಿತ್ತು. ದರ ಪಟ್ಟಿಯನ್ನು ಅಂತಿಮಗೊಳಿಸದೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸದ ಕಾರಣ ಮೇ 10ರ ಹೊತ್ತಿಗೆ ಕಚ್ಛಾ ಸಾಮಗ್ರಿ ದರ 875 ರು.ಗೇರಿತ್ತು. ಇದೊಂದೇ ಔಷಧ ದರವು ಶೇ.157ರಷ್ಟು ಹೆಚ್ಚುವರಿಯಾಗಿತ್ತು.

ಅದೇ ರೀತಿ ಮೆರೋಪಿನಾಮ್‌ ದರ ಜನವರಿಯಲ್ಲಿ 90,000 ರು. ದರವಿದ್ದರೆ ಮೇ 10ರ ಹೊತ್ತಿಗೆ ಈ ದರವು 2,10,000 (ಶೇ.233) ರು.ಗೇರಿತ್ತು. ಹಾಗೆಯೇ ಮೆತಿಲ್‌ಪ್ರಿಡಿನಾಸ್ಲಿನ್‌ ಸೋಡಿಯಮ್‌ ಸಕ್ಸೇನೇಟ್‌ 95,000 ರು.ನಿಂದ 2,25,000 (ಶೇ.236), ಪೈಪರಾಸಿಲಿನ್‌ ಟ್ಯಾಜೋಬ್ಯಾಕ್ಟಮ್‌ 6,500 ರು. ನಿಂದ 13,000 (ಶೇ.200) ರು., ಸರ್ಟಿಫಿಟ್ರಿಕ್ಸೊನ್‌ 6,500 ರು.ನಿಂದ 8,500 (ಶೇ.130) ರು., ಡಾಕ್ಸಿಸೈಕ್ಲಿನ್‌ನ ಕಚ್ಛಾ ಸಾಮಗ್ರಿ ದರವು 6,500 ರು.ನಿಂದ 18,000 (ಶೇ.276)ರು.ಗೇರಿದೆ.

ಕರ್ನಾಟಕ ಆಂಟಿಬಯಾಟಿಕ್‌ ಮತ್ತು ಫಾರ್ಮಾಸ್ಯುಟಿಕಲ್ಸ್‌ ಕಂಪನಿಯಿಂದ 2020ರಲ್ಲಿ ಕೆಡಿಎಲ್‌ಡಬ್ಲ್ಯೂಎಸ್‌ ಪ್ಯಾರಾಸಿಟಮಲ್‌ 500 ಎಂಜಿಗೆ 41.00 ರು. ದರದಲ್ಲಿ ಖರೀದಿಸಿತ್ತು. ಇದೇ ಔಷಧದ ದರ 2021ರ ಮೇ ತಿಂಗಳಲ್ಲಿ ಇದರ ದರ 69.17 ರು. ಇದೆ. ಹೈವರ್‌ಮೆಕ್ಟಿನ್‌ ಮೇ 5,2021ರಲ್ಲಿ 1.24 ರು. ಇದೆ. ದರಪಟ್ಟಿಯಲ್ಲಿ 1.43 ಪೈಸೆ (20 ಪೈಸೆ ಹೆಚ್ಚಳ) ಇದೆ. ಲೋಯರ್‌ ಮಾಲುಕ್ಯುಲರ್‌ ಹೆಪಾರೆಂಟ್‌ 2020ರಲ್ಲಿ ಒಂದು ವಯಲ್ಸ್ ಗೆ 126 ರು. ದರ ನಿಗದಿಪಡಿಸಿತ್ತು. 2021ರಲ್ಲಿ ಆಹ್ವಾನಿಸಿರುವ ದರಪಟ್ಟಿಯಲ್ಲಿ 283.36 ರು.ನಮೂದಾಗಿದೆ. ಇದೇ ಕಡಿಮೆ ದರ ಎಂದು ಹೇಳಲಾಗಿದೆ. ದರ ಸಂಧಾನ ನಡೆಸುವುದು ಮತ್ತು ದರಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ಅಧಿಕಾರಿಗಳ ವಿಳಂಬವು ಈ ದರವೂ ಹೆಚ್ಚಳಕ್ಕೆ ದಾರಿಮಾಡಿಕೊಡಲಿದೆ. ಅಂತಿಮವಾಗಿ ಇದು ಸರ್ಕಾರದ ಬೊಕ್ಕಸದ ಮೇಲೂ ಹೊರೆಯಾಗಲಿದೆ ಎಂದು ಗೊತ್ತಾಗಿದೆ.

ದರಪಟ್ಟಿ ಆಹ್ವಾನದ ಪ್ರಕ್ರಿಯೆ ಚಾಲನೆ ದೊರೆತ ನಂತರ ಬಿಡ್‌ದಾರರಿಗೆ ದಾಖಲಾತಿಗಳನ್ನು ಒಂದೆರಡು ದಿನದಲ್ಲಿ ಕ್ರೋಢಿಕರಿಸಲು ಕಾಲಾವಕಾಶವೂ ಸೇರಿದಂತೆ ವಾರದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದಾದ ನಂತರ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ತಾಂತ್ರಿಕ ಸಮಿತಿಯು ಎಲ್ಲಾ ಬಿಡ್‌ಗಳನ್ನು ಪರಿಶೀಲಿಸಿ ದರ ಸಂಧಾನದ ಬಳಿಕ ಕಡಿಮೆ ದರವನ್ನು ಒಪ್ಪಿಕೊಳ್ಳುವ ಕಂಪನಿಗಳನ್ನು ಆಯ್ಕೆ ಮಾಡಿ ಔಷಧಗಳನ್ನು ಸರಬರಾಜು ಮಾಡಲು ನಿಗದಿತ ಕಾಲಾವಕಾಶವನ್ನೂ ನೀಡುತ್ತದೆ.

ಇದಾದ ನಂತರ ಕಂಪನಿಗಳು ಔಷಧಗಳನ್ನು ಸರಬರಾಜು ಮಾಡಲು ಕನಿಷ್ಠ 15 ದಿನಗಳು ಬೇಕಾಗುವುದು. ಈ ಪ್ರಕ್ರಿಯೆ ಗೊತ್ತಿದ್ದರೂ ನಿಗಮದ ಅಧಿಕಾರಿಗಳು ದರಪಟ್ಟಿಯನ್ನು ಅಂತಿಮಗೊಳಿಸದೆಯೇ ಪದೇ ಪದೇ ರದ್ದುಗೊಳಿಸಿ ಕಡೇಗಳಿಗೆಯಲ್ಲಿ ದರಪಟ್ಟಿ ಆಹ್ವಾನಿಸಿ ಅತ್ಯಲ್ಪ ಅವಧಿಯೊಳಗೆ ಔಷಧ ಸರಬರಾಜು ಮಾಡಲು ಸೂಚಿಸುತ್ತಿದೆ ಎಂದು ಗೊತ್ತಾಗಿದೆ.

ಕಚ್ಛಾ ಸಾಮಗ್ರಿ ದರವನ್ನಾಧರಿಸಿ ಔಷಧಗಳ ದರ ನಮೂದಿಸುವ ಕಂಪನಿಗಳು, ದಿನ ಕಳೆದಂತೆಲ್ಲಾ ದರದಲ್ಲಿಯೂ ಹೆಚ್ಚಳ ಮಾಡುತ್ತಿರುತ್ತವೆ. ಆದರೆ ಮೇ 15 ಕಳೆದರೂ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದ ಕಾರಣ ಮಾರುಕಟ್ಟೆಯಲ್ಲಿ ಕಚ್ಛಾ ಸಾಮಗ್ರಿಗಳ ದರದಲ್ಲಿನ ಹೆಚ್ಚಳವನ್ನೂ ಸರ್ಕಾರವು ಅನಗತ್ಯವಾಗಿ ಭರಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗಿದೆ.

ಔಷಧಗಳು ತಯಾರಾದ ನಂತರ ಬಳಸುವ ಮುನ್ನ ಪ್ರಯೋಗಾಲಯದಲ್ಲಿ ಸ್ಟೆರಿಲೈಸ್‌ ಸೇರಿದಂತೆ ಇನ್ನಿತರೆ ಪರೀಕ್ಷೆಗಳಂತಹ ಹಲವು ಪ್ರಕ್ರಿಯೆಗಳು ನಡೆಯುತ್ತವೆ. ಒಮ್ಮೆ ಪ್ರಯೋಗಾಲಯದಿಂದ ಅನುಮತಿ ದೊರೆತ ನಂತರ ಪ್ಯಾಕಿಂಗ್‌, ಲೇಬಲಿಂಗ್‌, ಸಾಗಾಣಿಕೆಗೆ ಹಲವು ದಿನಗಳ ಕಾಲಾವಕಾಶ ಬೇಕಿರುತ್ತೆ. ಕೋವಿಡ್‌ನ ಇಂದಿನ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಶೇ.25ಕ್ಕಿಂತಲೂ ಕಡಿಮೆ ಮಾನವ ಸಂಪನ್ಮೂಲ ಬಳಸಬೇಕಿರುವ ಕಾರಣ ಔಷಧ ಕಂಪನಿಗಳು ನಿಗದಿತ ಬೇಡಿಕೆಯನ್ನು ಏಕಕಾಲದಲ್ಲಿ ಪೂರ್ಣಗೊಳಿಸುವುದು ಅಸಾಧ್ಯ ಎನ್ನುತ್ತಾರೆ ನಿಗಮದ ಅಧಿಕಾರಿಯೊಬ್ಬರು.

SUPPORT THE FILE

Latest News

Related Posts