ಬೆಂಗಳೂರು; ಕೋವಿಡ್ ದೃಢಪಟ್ಟ ಪ್ರಕರಣಗಳು ಮತ್ತು ತೀವ್ರನಿಗಾ ಘಟಕ ಅವಲಂಬಿತ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಮ್ಲಜನಕ ಬೇಡಿಕೆಯೂ ಹೆಚ್ಚುತ್ತಿದೆ. ಇದನ್ನು ಸರಿದೂಗಿಸಲು ಮೂರಂಶಗಳ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳುತ್ತಿದ್ದಾರಾದರೂ ಆಮ್ಲಜನಕದ ಬೇಡಿಕೆ ಪ್ರಮಾಣ ಹೆಚ್ಚುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಆಮ್ಲಜನಕ ಪ್ರಮಾಣವನ್ನು 965 ಮೆಟ್ರಿಕ್ ಟನ್‌ನಿಂದ 1,015 ಮೆ.ಟನ್‌ಗೇರಿಸಿದೆ. ಈ ಪೈಕಿ ರಾಜ್ಯದಲ್ಲಿ 765 ಮೆ.ಟನ್ ದೊರೆಯುತ್ತಿದೆ. 60 ಟನ್ ಪಿಎಸ್‌ಎ ಘಟಕಗಳಿಂದ ದೊರೆಯುತ್ತಿದ್ದರೆ ಒಡಿಶಾದಿಂದ 160 ಟನ್, ವಿಶಾಖಪಟ್ಟಣದಿಂದ 30 ಟನ್ ದೊರೆಯುತ್ತಿದೆ.
ಹಾಗೆಯೇ ಬಹ್ರೇನ್‌ನಿಂದ 40 ಟನ್, ಕುವೈತ್‌ನಿಂದ 100 ಟನ್ ಆಮ್ಲಜನಕ ಬಂದಿದೆಯಾದರೂ ಸದ್ಯ ಉದ್ಭವಿಸಿರುವ ಆಮ್ಲಜನಕ ಕೊರತೆ ಶೇಕಡ ಅರ್ಧದಷ್ಟೂ ನೀಗಿಲ್ಲ. ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ ರಾಜ್ಯಕ್ಕೆ 240 ಮೆಟ್ರಿಕ್ ಟನ್ ಬಂದಿದೆ. ಉತ್ತರಪ್ರದೇಶಕ್ಕೆ ಹೋಲಿಸಿದರೆ ಇದು ಕಡಿಮೆ.
ಈ ನಡುವೆ ರಾಜ್ಯದಲ್ಲಿ ಆಮ್ಲಜನಕ ಉತ್ಪಾದಕ ಕಂಪನಿಗಳು ಏಪ್ರಿಲ್ 28ರಿಂದ ಮೇ 12ರವರೆಗೆ ಒಟ್ಟು 10,821 ಮೆಟ್ರಿಕ್ ಟನ್‌ನಷ್ಟು ರಾಜ್ಯಕ್ಕೆ ಸರಬರಾಜು ಮಾಡಿದೆ. ಈ ಪೈಕಿ ಜಿಂದಾಲ್ ಸ್ಟೀಲ್ಸ್‌ನಿಂದ 1,473 ಮೆ.ಟನ್ ಪೂರೈಕೆಯಾಗಿದೆ. 2021ರ ಏಪ್ರಿಲ್ 27ರಿಂದ 30 ರವರೆಗೆ ರಾಜ್ಯಕ್ಕೆ ಜಿಂದಾಲ್ ಸ್ಟೀಲ್ ಕಂಪನಿಯೊಂದೇ 290.93 ಟನ್ ಅಮ್ಲಜನಕ ಸರಬರಾಜು ಮಾಡಿದೆ.
ಈ ಸಮೂಹದ 4 ಕಂಪನಿಗಳು ಪ್ರತಿನಿತ್ಯ ಸರಾಸರಿ 1,000 ಟನ್ ಆಮ್ಲಜನಕವನ್ನು ಉತ್ಪಾದಿಸುತ್ತಿದೆ. ಇದರ ಪ್ರಕಾರ 4 ದಿನದಲ್ಲಿ 4,000 ಟನ್ ಆಮ್ಲಜನಕವನ್ನು ಉತ್ಪಾದಿಸಿದ್ದರೂ ಒಟ್ಟು ಉತ್ಪಾದನೆಯಲ್ಲಿ ರಾಜ್ಯಕ್ಕೆ ಅರ್ಧದಷ್ಟು ಮಾತ್ರ ಸರಬರಾಜು ಮಾಡಿತ್ತು.
4 ಘಟಕಗಳಿಂದ 1,000 ಟನ್ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಜಿಂದಾಲ್ ಸಮೂಹದ ಕಂಪನಿಗಳು 4 ದಿನದಲ್ಲಿ ಒಟ್ಟು 4,000 ಟನ್ ಆಮ್ಲಜನಕವನ್ನು ಪೂರೈಕೆ ಮಾಡಬಹುದಿತ್ತು. ಏಪ್ರಿಲ್ 27ರಂದು 569.71 ಟನ್ ಸರಬರಾಜು ಮಾಡಿದೆ. ಅದೇ ರೀತಿ ಏಪ್ರಿಲ್ 28ರಂದು 520.9, ಏಪ್ರಿಲ್ 29ರಂದು 531.72 ಟನ್, ಏಪ್ರಿಲ್ 30ರಂದು 450.82 ಟನ್ ಸೇರಿದಂತೆ ಒಟ್ಟು 4 ದಿನದಲ್ಲಿ 2,073.15 ಟನ್ ಸರಬರಾಜು ಮಾಡಿತ್ತು.
ಔಷಧ ನಿಯಂತ್ರಕರ ಕಚೇರಿ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 69 ಮೆಡಿಕಲ್ ಆಕ್ಸಿಜನ್ ತಯಾರಿಸುವ ಘಟಕಗಳಿವೆ. ಆದರೆ ರಾಜ್ಯಕ್ಕೆ ಈ ಪೈಕಿ 7 ಘಟಕಗಳು ಮಾತ್ರ ಆಕ್ಸಿಜನ್ ಸರಬರಾಜು ಮಾಡಿವೆ. 62 ಕಂಪನಿಗಳಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವು ಯಾವ ರಾಜ್ಯಕ್ಕೆ ಸರಬರಾಜು ಅಗುತ್ತಿದೆ ಎಂಬ ಬಗ್ಗೆ ಔಷಧ ನಿಯಂತ್ರಕರ ಕಚೇರಿ ಮೂಲಗಳು ಮಾಹಿತಿ ಒದಗಿಸಲು ನಿರಾಕರಿಸಿದವು.