ಗೋಕರ್ಣ ಮಹಾಬಲೇಶ್ವರ ದೇವಾಲಯ ವ್ಯಾಜ್ಯ: ಕಾನೂನು ಸಮರದ ಸಮಗ್ರ ನೋಟ

ಬೆಂಗಳೂರು: ಕರ್ನಾಟಕದ ಜನತೆಯ ಶ್ರದ್ಧಾ ಕೇಂದ್ರ ಎಂದೇ ಬಿಂಬಿತವಾಗಿರುವ ಗೋಕರ್ಣದ ಮಹಾಬಲೇಶ್ವರ ದೇವಾಲಯ ಸಮಸ್ತ ಭಾರತೀಯರ ಮತ್ತು ಅನಿವಾಸಿ ಭಾರತೀಯರ ನಂಬುಗೆಯ ಪುಣ್ಯಸ್ಥಳವಾಗಿದೆ. ಅತ್ಯಂತ ಪ್ರಾಚೀನ ಶಿವಕ್ಷೇತ್ರಗಳಲ್ಲಿ ಒಂದಾಗಿರುವ ಈ ದೇವಾಲಯದ ಆಡಳಿತ ವ್ಯವಹಾರ ನಿರ್ವಹಣೆಯಲ್ಲಿ ಹೊಸನಗರದ ರಾಮಚಂದ್ರಾಪುರ ಮಠ ಮೂಗು ತೂರಿಸಿ, ಇದು ಪರಾಂಪರಾಗತವಾಗಿ ತಮ್ಮ ಸುಪರ್ದಿಯಲ್ಲೇ ಇರಬೇಕು ಎಂದು ಬಯಸಿ ಆ ದಿಸೆಯಲ್ಲಿ ಸರ್ಕಾರದ ಆಣತಿಯ ಮೇರೆಗೆ ಇದನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದು ಸ್ಥಳೀಯ ಉಪಾಧಿವಂತರ ಹಾಗೂ ದೇಗುಲದ ಯಾವತ್ತೂ ಭಕ್ತರ ನಡುವಿನ ಕಾನೂನು ಜಿದ್ದಾಜಿದ್ದಿಗೆ ಸಾಕ್ಷಿಯಾಗಿ ಪರಿಣಮಿಸಿತು.

ಇತ್ತೀಚೆಗಷ್ಟೇ ಈ ಕುರಿತ ವಿಶೇಷ ಮೇಲ್ಮನವಿಯಲ್ಲಿ (ಎಸ್ ಎಲ್ ಪಿ) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಐತಿಹಾಸಿಕ ತೀರ್ಪು ನೀಡಿದ್ದು, ದೇಗುಲದ ಆಡಳಿತ ರಾಮಚಂದ್ರಾಪುರ ಮಠದ ಪಾರುಪತ್ಯದಲ್ಲಿ ನಡೆಯತಕ್ಕದ್ದಲ್ಲ ಮತ್ತು ಇದಕ್ಕೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಏಳು ಜನರ ಮೇಲ್ವಿಚಾರಣಾ ಸಮಿತಿ ಇರತಕ್ಕದ್ದು ಎಂದು ಹೇಳಿದೆ. ಈ ನಿಟ್ಟಿನಲ್ಲಿ ತೀರ್ಪಿನ ಅಂಶಗಳನ್ನು ‘ಲೀಗಲ್ ಟೈಮ್ಸ್’ ವಿವರವಾಗಿ ತೆರೆದಿಟ್ಟಿದೆ. ಅದರ ಪೂರ್ಣ ಪಾಠ ಇಲ್ಲಿ ಕೊಡಲಾಗಿದೆ.

ಈ ಲೇಖನದಲ್ಲಿ ಪ್ರಕಟಿಸಿರುವ ಎಲ್ಲ ತೀರ್ಪುಗಳೂ ಅಂತರ್ಜಾಲದಲ್ಲಿ ಲಭ್ಯ ಇವೆ. ದಿನಾಂಕದ ಆಧಾರದ ಮೇಲೆ ಅವುಗಳನ್ನು ಹುಡುಕಿ ಕೊಳ್ಳಬಹುದು. ಆಸಕ್ತರು ಅದನ್ನೇ ಓದಿ ಅರ್ಥೈಸಿಕೊಳ್ಳಬಹುದು. ಕೆನರಾ ಗೆಜೆಟಿಯರ್ ಕೂಡಾ ಅಂತರ್ಜಾಲದಲ್ಲಿದೆ.

ಇತಿಹಾಸ – ಪುರಾಣಗಳ ಮೆಲುಕು

ರಾವಣನಲ್ಲಿ ಇದ್ದದು ವೀರಭಕ್ತಿ. ಶಿವನು ತನಗೆ ಮಾತ್ರವೇ ದೊರಕಬೇಕು ಎನ್ನುವ ಛಲದಿಂದ ಆತ್ಮಲಿಂಗವನ್ನು ತಂದ ರಾವಣ ತನ್ನ ಸ್ಥಾನಕ್ಕೆ ತಲುಪಿಸಲು ವಿಫಲವಾದ ಸಂಕೇತ ಸ್ಥಾನವೇ ಗೋಕರ್ಣ.

ಅನೇಕ ರಾಜರು, ಋಷಿಗಳು, ಮುನಿಗಳು ತಪಸ್ಸನ್ನಾಚರಿಸಿ ಸಿದ್ಧಿ ಪಡೆದ ಪವಿತ್ರ ಕ್ಷೇತ್ರ ಎಂದು ನಂಬಿದ ಜನರ ಶ್ರದ್ಧಾ ಕ್ಷೇತ್ರ. ರಾಮಾಯಣ, ಮಹಾಭಾರತಗಳಲ್ಲಿ, ಅನೇಕ ಪುರಾಣಗಳಲ್ಲಿ ಗೋಕರ್ಣದ ಉಲ್ಲೇಖವಿದೆ. ಸ್ಕಂದ ಪುರಾಣದಲ್ಲಿ ದೀರ್ಘವಾದ ಕ್ಷೇತ್ರ ಮಹಾತ್ಮೆ ದಾಖಲಿಸಲ್ಪಟ್ಟಿದೆ.

ದಾಖಲೆಗಳಲ್ಲೇನಿದೆ?

ಎಪಿಗ್ರಾಫಿಕಾ ಇಂಡಿಕಾ 9ನೇ ಸಂಪುಟದಲ್ಲಿ, “ಗೋಕರ್ಣ ಕುಶ ಕುಸುಮ ಕರತಲೋದಕ ಪೂರ್ಣ” ಎಂದು ಉಲ್ಲೇಖಿಸಲಾಗಿದೆ. ಇಂಡಿಯನ್ ಆಂಟಿಕ್ವೆರಿಯ 15ನೇ ಸಂಪುಟದಲ್ಲಿ, “ಗೋಕರ್ಣ ಕುಶಲತಾ ಪೂತ ಹಸ್ತೋದಕೇನ” ಎನ್ನುವ ಉಲ್ಲೇಖ ಸಿಗುತ್ತದೆ. ವಿದ್ಯಾರಣ್ಯರ ಪ್ರಭಾವದಿಂದ ಸ್ಥಾಪಿಸಲ್ಪಟ್ಟ ವಿಜಯನಗರದ ಸಾಮ್ರಾಟರು ಗೋಕರ್ಣ ದೇವಸ್ಥಾನಕ್ಕೆ ಉಂಬಳಿಯನ್ನು ಕೊಟ್ಟ ದಾಖಲೆಗಳಿವೆ. ಸೋಂದಾ ಅರಸರು ಗೋಕರ್ಣಕ್ಕೆ ಸೇವೆ ಸಲ್ಲಿಸಿದ ಇತಿಹಾಸವಿದೆ. ಸ್ವತಃ ಗೋಕರ್ಣ ಮಂಡಲಾಧೀಶರು ಎಂದು ಬಿರುದು ಹಾಕಿಸಿಕೊಂಡವರು ಈ ಅರಸರುಗಳು. ಶಿವಾಜಿ ಮಹಾರಾಜ ಗೋಕರ್ಣಕ್ಕೆ ಬಂದು ಮಹಾಬಲೇಶ್ವರನ ದರ್ಶನ ಪಡೆದ ಉಲ್ಲೇಖವೂ ಇತಿಹಾಸದಲ್ಲಿದೆ.

1883ರಲ್ಲಿ, “ಗ್ಯಾಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿ” ಸಂಪುಟ 15ರ ಒಂದನೇ ಭಾಗದಲ್ಲಿ ಕೆನರಾ ಎಂಬ ಹೊತ್ತಿಗೆಯನ್ನು ಗೌರ‍್ನಮೆಂಟ್ ಸೆಂಟ್ರಲ್ ಪ್ರೆಸ್ಸಿನಲ್ಲಿ ಮುದ್ರಿಸಿತು. ಅದರಲ್ಲಿ ಫ್ರಾನ್ಸಿಸ್ ಬುಕಾನಿನ್ ಎನ್ನುವ ಸಾಹಸಿ ತಾನು 1801ನೇ ಇಸವಿಯಲ್ಲಿ ಗೋಕರ್ಣಕ್ಕೆ ಬಂದಿದ್ದನ್ನು ಸವಿಸ್ತಾರವಾಗಿ ದಾಖಲಿಸಿದ್ದಾನೆ. ಈ ಪ್ರತಿ ಇಂದಿಗೂ ಉಪಲಬ್ಧವಿದ್ದು ಅಂತರ್ಜಾಲದಲ್ಲಿ ಇದನ್ನು ಸುಲಭವಾಗಿ ನೋಡಬಹುದು. ಈ ಪುಸ್ತಕವು ಪ್ರಾಮಾಣಿಕವಾದ ಐತಿಹಾಸಿಕ ದಾಖಲೆಯೆಂದೇ ಎಲ್ಲರ ಮಾನ್ಯತೆ ಪಡೆದಿದೆ.

ಇದರ ಹದಿನಾಲ್ಕನೇ ಅಧ್ಯಾಯದಲ್ಲಿ ಕೆನರಾದಲ್ಲಿ ಬರುವ ಪ್ರಸಿದ್ಧ ಸ್ಥಾನಗಳ ಇತಿಹಾಸಗಳಿವೆ. (288ನೇ ಪುಟದಿಂದ 302ನೇ ಪುಟಗಳವರೆಗೆ) 291ನೇ ಪುಟದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವು ಟ್ರಸ್ಟಿಗಳು ಹಾಗೂ ಒಬ್ಬ ಕಾರಕೂನ ನೋಡಿಕೊಳ್ಳುತ್ತಾನೆ. ಮತ್ತು ಟ್ರಸ್ಟಿಗಳನ್ನು ಹಾಗೂ ಕಾರಕೂನನನ್ನು ಸರ್ಕಾರದ 1863ರ ಆ್ಯಕ್ಟ್ 20 ರ ಅಡಿಯಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟಿದ್ದಾರೆ ಎಂಬುದನ್ನು ದಾಖಲಿಸಲಾಗಿದೆ. ಅಲ್ಲದೇ ಸರ್ಕಾರದ ಬಳಿ ದೇವಸ್ಥಾನದ ಆಯ-ವ್ಯಯಗಳ ವಿವರಗಳಿವೆ ಎಂದಿರುವುದಲ್ಲದೇ ಅಲ್ಲಿಯ ಪೂಜಾ ವಿಧಿ-ವಿಧಾನಗಳನ್ನೂ ಉಲ್ಲೇಖಿಸಲಾಗಿದೆ.

ಆ್ಯಕ್ಟ್ 20, 1863ರ ಬೆಂಗಾಲ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜಾರಿಗೆ ಬಂತು. ಇದಕ್ಕೂ ಮೊದಲು 1842ರಲ್ಲಿಯೇ ಮಹಾಬಲೇಶ್ವರ ದೇವಸ್ಥಾನವು 11ಜನ ಟ್ರಸ್ಟಿಗಳನ್ನು ಹೊಂದಿತ್ತು ಎಂಬುದನ್ನು ಕರ್ನಾಟಕ ಹೈಕೋರ್ಟ್ 27.7.1984ರಲ್ಲಿ ಅಂಗೀಕರಿಸಿದೆ. ಇದಕ್ಕಾಗಿ ಹಲವು ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿತ್ತು. 1950 ರಲ್ಲಿ ಬಾಂಬೆ ಪಬ್ಲಿಕ್ ಟ್ರಸ್ಟ್ ಆ್ಯಕ್ಟ್ (ಬಿಪಿಟಿ ಕಾಯ್ದೆ) ಜಾರಿಗೆ ಬಂದ ನಂತರ ಗೋಕರ್ಣವು ಮುಂಬೈ ಕರ್ನಾಟಕದಲ್ಲಿ ಸೇರ್ಪಡೆಯಾದ ಕಾರಣ 1951ರಲ್ಲಿ ಪುನಃ ಈ ಕಾನೂನಿನ ಅಡಿಯಲ್ಲಿ ಈ ದೇವಸ್ಥಾನವು ಸಾರ್ವಜನಿಕ ದೇವಸ್ಥಾನವೆಂದು ಹಿಂದಿನ ಮುಖ್ಯ ನ್ಯಾಯಮೂರ್ತಿಗಳಿಂದ ದಾಖಲಿಸಲ್ಪಟ್ಟಿತು.

ಇದನ್ನು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ತಮ್ಮ 4.9.1996ರ ತೀರ್ಪಿನಲ್ಲೂ ದೃಢಪಡಿಸಿದ್ದಾರೆ. ಬಿಪಿಟಿ ಆ್ಯಕ್ಟ್‌ನ ಅಡಿಯಲ್ಲಿ ಯಾವುದೇ ದೇವಸ್ಥಾನವನ್ನು ಸಾರ್ವಜನಿಕ ರೀತಿಯನ್ನು ಹೇಳುವ ಮೊದಲು ಕಲಂ 18ರ ಅಡಿಯಲ್ಲಿ ಅರ್ಜಿ ದಾಖಲಿಸಿದ ನಂತರ ಕಲಂ 19ರ ಅಡಿಯಲ್ಲಿ ಚಾರಿಟಿ ಕಮಿಟಿಯ ವತಿಯಿಂದ ಇದು ಸಾರ್ವಜನಿಕ ದೇವಸ್ಥಾನ ಹೌದೋ ಅಲ್ಲವೋ ಎಂಬ ಬಗ್ಗೆ ಸುದೀರ್ಘವಾದ ತನಿಖೆಯ ನಂತರ ಅದನ್ನು ನೋಂದಣಿ ಮಾಡಿಸಿಕೊಳ್ಳುವ ನಿಯಮವಿದೆ.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನವು ಬಿಪಿಟಿಯ ಅಡಿಯಲ್ಲಿ ಸಾರ್ವಜನಿಕ ದೇವಸ್ಥಾನ ಎಂಬ ಬಗ್ಗೆ 2008ರ ವರೆಗೆ ಯಾವುದೇ ವಿವಾದವಿರಲಿಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇನ್ನೊಂದು ಮಹತ್ವಪೂರ್ಣ ಸಂಗತಿ ಎಂದರೆ 2008ರ ವರೆಗೆ ಈ ಮಹಾಬಲೇಶ್ವರ ಟ್ರಸ್ಟಿನ ಹೆಸರಿನಲ್ಲಿ ಅನೇಕ ಕಾನೂನು ಹೋರಾಟಗಳು, ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆಯವರ ನಡುವೆ ನಡೆದ ದಾಖಲೆಗಳಲ್ಲೂ ಶ್ರೀ ರಾಮಚಂದ್ರಾಪುರ ಮಠದ ಹೆಸರು ಎಲ್ಲೂ ಕಂಡುಬಂದಿಲ್ಲ.

ಇದು ಸಾಲದೆಂಬಂತೆ ಶ್ರೀ ರಾಮಚಂದ್ರಾಪುರ ಮಠವು 2005ನೇ ಇಸವಿಯಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ ಒಂದು ರಿಟ್ ಅರ್ಜಿಯನ್ನು ದಾಖಲು ಮಾಡಿತ್ತು. ಅದರಲ್ಲಿ ಶ್ರೀ ರಾಮಚಂದ್ರಾಪುರ ಮಠಕ್ಕೆ ಸೇರಿದ್ದು ಎನ್ನಲಾದ 10 ದೇವಸ್ಥಾನಗಳ ಹೆಸರನ್ನು ನಮೂದಿಸಿ ಈ ಎಲ್ಲಾ ದೇವಸ್ಥಾನಗಳನ್ನು ಡಿನೋಟಿಫೈ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಈ ಅರ್ಜಿಯಲ್ಲಿ, ದೇಶದಲ್ಲೇ ಅತಿ ಪ್ರಮುಖವಾದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಉಲ್ಲೇಖವೇ ಇಲ್ಲದಿರುವುದು ಗಮನಾರ್ಹ.

18.11.1958ರ ಒಂದು ತೀರ್ಪಿನಲ್ಲಿ ಗಣೇಶ ಗಂಗಾಧರ ಶಾಸ್ತ್ರಿ ಎಂಬುವರ ವಿರುದ್ಧ ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿ ಶ್ರೀ ರಾಮಚಂದ್ರಾಪುರ ಮಠ ಇವರುಗಳು ಮಾಡಿದ ದಾವೆಯು ನಿರ್ಧಾರಿತವಾಗಿದೆ. ಗಣೇಶ ಗಂಗಾಧರ ಶಾಸ್ತ್ರಿ ಮಠದ ಏಜೆಂಟ್ ಎಂದು ಮೊದಲು ನಿಯುಕ್ತರಾಗಿದ್ದು, ನಂತರದಲ್ಲಿ 1949 ರಿಂದ 1952ರ ಅವಧಿಯಲ್ಲಿ ಅಂದಿನ ಕಲೆಕ್ಟರ್ ಬಳಿಯಿಂದ ಗ್ರ್ಯಾಂಟ್ ಪಡೆದ ₹ 491.03 (ನಾಲ್ಕು ನೂರಾ ತೊಂಬತ್ತೊಂದು ಮೂರಾಣೆ) ಮಠಕ್ಕೆ ಕೊಟ್ಟಿಲ್ಲ ಎಂಬುದೇ ಈ ವಿವಾದ.

ಇಷ್ಟು ಅಲ್ಪ ಮೊತ್ತಕ್ಕೇ ಕೋರ್ಟು ಕಚೇರಿ ಹತ್ತಿದ್ದ ಮಠವು ಗೋಕರ್ಣ ದೇವಸ್ಥಾನವೇ ಅದರ ಸುಪರ್ದಿಯಲ್ಲಿ ಇದ್ದಿದ್ದರೆ ಅದನ್ನು ಮರಳಿ ಪಡೆಯಲು ಕಾನೂನು ಹೋರಾಟವನ್ನು ಅಂದೇ ನಡೆಸಬಹುದಿತ್ತು. ಆದರೆ, ಮಾಡಿಲ್ಲ ಎಂಬುದಕ್ಕೆ ಅರ್ಥವೇನು?

ಇಂದಿನ ಪೀಠಾಧಿಪತಿ ಮಾತ್ರವೇ ಈ ಕಾನೂನಿನ ಸಮರಕ್ಕೆ 2008ರ ನಂತರ ಇಳಿದಿರುವುದನ್ನು ಎಲ್ಲರೂ ಮುಖ್ಯವಾಗಿ ಗಮನಿಸಬೇಕಿದೆ.

ಕಾನೂನು ಗೊಂದಲ

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರ ಪೀಠವು 1997ರ ಡಿಸೆಂಬರ್‌ 3 ರಲ್ಲಿನ ಒಂದು ಪ್ರಮುಖ ತೀರ್ಮಾನದಲ್ಲಿ, “ಬಿಪಿಟಿ ಆ್ಯಕ್ಟ್ ಕರ್ನಾಟಕದ ಮಟ್ಟಿಗೆ ಸಂವಿಧಾನ ಬಾಹಿರ” ಎಂಬ ನಿರ್ಣಯಕ್ಕೆ ಬಂತು. ಕರ್ನಾಟಕ ಏಕೀಕರಣವಾದಾಗ ಮೈಸೂರು ಸಂಸ್ಥಾನ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಪ್ರೆಸಿಡೆನ್ಸಿ, ಮುಂಬೈ ಕರ್ನಾಟಕ, ಕೊಡಗು ಈ ಕ್ಷೇತ್ರಗಳೆಲ್ಲಾ ಕರ್ನಾಟಕದಲ್ಲಿ ಸೇರ್ಪಡೆಯಾದರೂ ಆಯಾ ಪ್ರದೇಶಗಳಲ್ಲಿನ ಕಾನೂನುಗಳು ಹಾಗೇ ಉಳಿದುಕೊಂಡಿದ್ದವು. (ಸ್ಟೇಟ್ಸ್ ಆರ್ಗನೈಸೇಷನ್ ಆ್ಯಕ್ಟ್ ಅಡಿಯಲ್ಲಿ) ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಆದರೆ, ಕರ್ನಾಟಕ ಘನ ಸರ್ಕಾರವು ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳ ಸಲುವಾಗಿ ಏಕರೂಪ ಕಾನೂನನ್ನು ಜಾರಿಗೆ ತರುವಲ್ಲಿ ವಿಳಂಬ ಮಾಡಿತ್ತು. ಹಾಗಾಗಿ ಗೋಕರ್ಣ ದೇವಸ್ಥಾನವು ಬಿಪಿಟಿ ಆಕ್ಟ್ ಅಡಿಯಲ್ಲಿಯೇ ರೂಪುಗೊಂಡಿತ್ತು.

ತಾತ್ಕಾಲಿಕವಾಗಿ ಇರುವ ಈ ವ್ಯವಸ್ಥೆಯಡಿಯಲ್ಲಿ ಕರ್ನಾಟಕದ ಒಂದೇ ಪ್ರದೇಶದಲ್ಲಿಯೂ ಬೇರೆ ಬೇರೆ ತರಹದ ವ್ಯವಹಾರ ಇರುವುದು “ಡಿಸ್ಕ್ರಿಮಿನೇಟರಿ” ಎನ್ನುವ ಕಾರಣದಿಂದಾಗಿ ಹೈಕೋರ್ಟ್ ಈ ಕಾನೂನುಗಳನ್ನು ಕರ್ನಾಟಕದ ಮಟ್ಟಿಗೆ ಸಂವಿಧಾನ ಬಾಹಿರ ಎಂದು ಘೋಷಿಸಿತು.

ಈ ತೀರ್ಪಿನ ನಂತರ ಈ ವಿಷಯದಲ್ಲಿ ಯಾರೂ ಸುಪ್ರೀಂ ಕೋರ್ಟ್ ಮೊರೆ ಹೋಗಲಿಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮಾದಾಯ ದತ್ತಿಗಳ ಕಾಯ್ದೆ-1997ಕ್ಕೆ 25.10. 2001ರಲ್ಲಿ ರಾಷ್ಟ್ರಪತಿಗಳ ಅನುಮತಿ ಪಡೆಯಲಾಯಿತು. ಅಂತೆಯೇ, ಈ ಕಾನೂನನ್ನು ಜಾರಿಗೊಳಿಸುವ ದಿಸೆಯಲ್ಲಿ, 1.5.2003ರಲ್ಲಿ ಅಧಿನಿಯಮ ಹೊರಡಿಸಲಾಯಿತು.

ಗೋಕರ್ಣದ ದೇವಸ್ಥಾನವು ಸಾರ್ವಜನಿಕ ದೇವಾಲಯ ಎಂದು 30.4.2003 ರಂದು ಘೋಷಿಸಲಾಯಿತು. ಈ ಆದೇಶವನ್ನು ವಿ. ಡಿ. ದೀಕ್ಷಿತರು ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಶ್ನಿಸಿದರು. ಅವರ ಮರಣದ ನಂತರ ದೇವಸ್ಥಾನದ ಒಬ್ಬನೇ ಟ್ರಸ್ಟಿಯಾಗಿ ಉಳಿದಿದ್ದ ವಿ.ಡಿ ದೀಕ್ಷಿತರ ಮಗ ಬಾಲಚಂದ್ರ ದೀಕ್ಷಿತರು ಉತ್ತರಾಧಿಕಾರಿಯಾಗಿ ಅದನ್ನು ಮುಂದುವರೆಸಿಕೊಂಡು ಹೋದರು.

1997ರಿಂದ 1.5.2003ರವರೆಗೆ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಅತಂತ್ರ ಸ್ಥಿತಿಯಲ್ಲಿದ್ದವು. ಈ ಕಾನೂನಿನಡಿಯಲ್ಲಿ ವಂಶಪಾರಂಪರ್ಯದ ಟ್ರಸ್ಟಿ ಶಿಪ್ Hereditary trusteeship ಗಳನ್ನು ಯಾರು ನಿಯುಕ್ತಿಗೊಳಿಸಬೇಕು ಎಂಬ ವಿಷಯದಲ್ಲಿ ಗೊಂದಲವಿದ್ದು ಅದು ಇತ್ಯರ್ಥವಾದದ್ದು ಸುಭಾಷ್ ಚಂದ್ರ ನಾಯ್ಕ ಅವರ 2011ರ ಕೇಸಿನಲ್ಲಿ.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಒಬ್ಬನೇ ಟ್ರಸ್ಟಿಯಾಗಿ ಉಳಿದಿದ್ದ ಶ್ರೀ ವಿಘ್ನೇಶ್ವರ ದೀಕ್ಷಿತರು ತಂದೆಯ ಉತ್ತರಾಧಿಕಾರಿಯಾಗಿ ಕಾನೂನಿನ ಸಂಘರ್ಷ ಎದುರಿಸುತ್ತಿದ್ದರೂ ಹೊಸ ಕಾನೂನಿನಲ್ಲಿ ಅವರನ್ನು ಟ್ರಸ್ಟಿಗೆ ಉತ್ತರಾಧಿಕಾರಿಯಾಗಿ ನಿಯಮಿಸುವ ವಿಧಿ ವಿಧಾನಗಳು ಇಲ್ಲದಿರುವ ಕಾರಣ ಅವರ ನೇಮಕಾತಿ ಆಗಲೇ ಇಲ್ಲ. ಈ ಮಧ್ಯದಲ್ಲಿ, ಕರ್ನಾಟಕ ಹೈಕೋರ್ಟ್ 8.9.2006 ರಂದು ಶ್ರೀ ಸಹಸ್ರ ಲಿಂಗೇಶ್ವರ ಕೇಸಿನಲ್ಲಿ ಇಡೀ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮಾದಾಯ ದತ್ತಿ ಕಾನೂನನ್ನೇ ಸಂವಿಧಾನ ಬಾಹಿರ ಎಂದು ಘೋಷಿಸಿತು. ಇಂದಿಗೂ ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ.

ಈ ರೀತಿಯ ಕಾನೂನು ಸಂಘರ್ಷ ಮತ್ತು ಗೊಂದಲಗಳ ಮಧ್ಯದಲ್ಲಿ ಕರ್ನಾಟಕ ಸರ್ಕಾರವು 17.11.2006ರಂದು ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಒಬ್ಬ  ಆಡಳಿತಾಧಿಕಾರಿಯನ್ನು ನೇಮಿಸಿತು. ಇದನ್ನು ಪ್ರಶ್ನಿಸಿ ಬಾಲಚಂದ್ರ ದೀಕ್ಷಿತರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

ಈ ಅರ್ಜಿ ವಿಚಾರಣೆಗೆ ಬರುವ ಮೊದಲೇ ಆಡಳಿತಾಧಿಕಾರಿಯು, ದೇವಸ್ಥಾನದ ಹುಂಡಿಗೆ ಬೀಗ ಜಡಿದಿದ್ದರು. ಕರ್ನಾಟಕ ಹೈಕೋರ್ಟ್, 12.12.2006 ರಂದು
ಯಥಾಸ್ಥಿತಿ ಆದೇಶ ಜಾರಿಗೊಳಿಸಿತು. ಪರಿಣಾಮ ಬೀಗಮುದ್ರೆಯಲ್ಲಿದ್ದ ಹುಂಡಿಗಳು ಹಾಗೆಯೇ ಮುಂದುವರಿಯುವಂತಾಯಿತು.

ದೇವಸ್ಥಾನಕ್ಕೆ ಭಕ್ತಾದಿಗಳು ಕೊಟ್ಟ ಕಾಣಿಕೆಗಳು ಬೀಗಮುದ್ರೆಯ ಹುಂಡಿಯಲ್ಲಿಯೇ ಕೊಳೆಯುತ್ತಾ ಕುಳಿತರೆ, ಬಾಲಚಂದ್ರ ದೀಕ್ಷಿತರಿಗೆ, ಏನೂ ಉತ್ಪನ್ನವಿಲ್ಲದ ದೇವಸ್ಥಾನದ ಆಡಳಿತ ವ್ಯವಹಾರ ನೋಡಿಕೊಳ್ಳುವ ಜವಾಬ್ದಾರಿ ಬಿದ್ದಿತು.

ದೇವಸ್ಥಾನಕ್ಕೆ 17. 11. 2006ರಲ್ಲಿ ಆಡಳಿತಾಧಿಕಾರಿ ನೇಮಿಸಿದಾಗಲೂ ಶ್ರೀ ರಾಮಚಂದ್ರಾಪುರ ಮಠ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಕಾನೂನು ಹೋರಾಟವನ್ನು ಮಾಡುತ್ತಾ ಬಂದವರು ಬಾಲಚಂದ್ರ ದೀಕ್ಷಿತರೇ. ಈ ಆದೇಶವನ್ನು ರಿಟ್ ಅರ್ಜಿಯಲ್ಲಿ ದೀಕ್ಷಿತರೇ ಪ್ರಶ್ನಿಸಿದರು.

ಈ ಗೊಂದಲಗಳ ಸದವಕಾಶವನ್ನು ಕಳೆದುಕೊಳ್ಳದ ಜನರು, ಈ ಗೋಕರ್ಣ ದೇವಸ್ಥಾನವನ್ನು ಸಾರ್ವಜನಿಕ ದೇವಸ್ಥಾನದ ಪಟ್ಟಿಯಿಂದ ಕೈಬಿಟ್ಟು ಅದನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡಬೇಕೆಂಬ ಮನವಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದರು. ಅದರಂತೆ 12.8.2008ರಂದು ಕರ್ನಾಟಕ ಸರ್ಕಾರವು ಮಹಾಬಲೇಶ್ವರ ದೇವಸ್ಥಾನವನ್ನು ಶ್ರೀ ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿಕೊಟ್ಟಿತು. ಈ ಹಸ್ತಾಂತರವನ್ನು ಪ್ರಶ್ನಿಸಿ ಅನೇಕರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

10.8.2018ರಂದು, ಅಂದರೆ ಸುದೀರ್ಘ ಹತ್ತು ವರ್ಷಗಳ ನಂತರ, ಹೈಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿ, ಈ ಹಸ್ತಾಂತರವು ಕಾನೂನುಬಾಹಿರವೆಂದು ಹೇಳಿತು.

ಸಂಕ್ಷೇಪವಾಗಿ ಈ ನಿರ್ಣಯಕ್ಕೆ ಕಾರಣಗಳನ್ನು ಹೈಕೋರ್ಟ್ ತನ್ನ ತೀರ್ಪಿನ ಕೊನೆಯಲ್ಲಿ ಈ ರೀತಿ ನಮೂದಿಸಿದೆ :-

1. ಗೋಕರ್ಣ ದೇವಸ್ಥಾನದ ಹಸ್ತಾಂತರ ಸಾರ್ವಜನಿಕ ಹಿತಾಸಕ್ತಿಯ ದಾವೆಯ ವಿಷಯವಾಗಿದೆ.

2. ಸಾರ್ವಜನಿಕ ಹಿತಾಸಕ್ತಿಯ ವಿಷಯವಲ್ಲದ ಬೇರೆ ದಾವೆಗಳನ್ನು ಏಕಕಾಲದಲ್ಲಿ ನಿರ್ಧರಿಸಲಾಗಿದೆ.

3. ಕರ್ನಾಟಕ ಸರ್ಕಾರಕ್ಕೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು Notified institution ಅಧಿಸೂಚಿತ ಸಂಸ್ಥೆಗಳ ಪಟ್ಟಯಿಂದ ಕೈಬಿಡುವ ಯಾವ ಅಧಿಕಾರವೂ ಇಲ್ಲ.

4. ಮಹಾಬಲೇಶ್ವರ ದೇವಸ್ಥಾನವು ರಾಮಚಂದ್ರಾಪುರ ಮಠಕ್ಕೆ ಸೇರಿದೆ ಎಂದು ಕೊಟ್ಟ ಪುರಾವೆಗಳು ನಿರ್ಣಾಯಕವಲ್ಲ. ಈ ವಿಷಯ ಸಿವಿಲ್ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಮೂಲಕ ಸಿಂಧುವಾಗಬೇಕೇ ವಿನಃ ಈ ರಿಟ್ ಅರ್ಜಿಯಲ್ಲಲ್ಲ. ಆದ್ದರಿಂದ, ಅದನ್ನು ನಿರ್ಣಯಿಸುವ ಹಕ್ಕು ರಾಜ್ಯ ಸರ್ಕಾರಕ್ಕೂ ಇಲ್ಲ.

5. ಯಾವ ವಿಧಿ ವಿಧಾನಗಳೂ ಇಲ್ಲದೇ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ನೀಡಿರುವುದು ಕರ್ನಾಟಕ ಸರ್ಕಾರವು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿದಂತೆ. ಇದು ಕಾನೂನು ನಿಯಮಗಳನ್ನು ಉಲ್ಲಂಘಿಸಿದ ಕ್ರಮವಾದ್ದರಿಂದ ಸಂವಿಧಾನ ವಿರೋಧಿ ನಡವಳಿಕೆಯಾಗಿದೆ. ದುರುದ್ದೇಶಪೂರ್ವಕವಾಗಿ ರಾಮಚಂದ್ರಾಪುರ ಮಠಕ್ಕೆ ಲಾಭ ಗಳಿಸಿಕೊಡಲು ಮಾಡಿದ ಕಾರ್ಯ ಇದಾಗಿದೆ. ಈ ಕಾರಣಗಳಿಂದಾಗಿ, ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಹಸ್ತಾಂತರವನ್ನು ರದ್ದುಗೊಳಿಸಿ ಆಡಳಿತದ ಮೇಲ್ವಿಚಾರಣೆಗೆ ದೇಖರೇಖಿ ಸಮಿತಿಯೊಂದನ್ನು ರಚನೆ ಮಾಡಿತು.

ಈ ಆದೇಶವನ್ನು ಪ್ರಶ್ನಿಸಿ ಮಠದವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಈ ವಿಶೇಷ ಮೇಲ್ಮನವಿಯ (ಎಸ್ ಎಲ್ ಪಿ) ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್. ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು 19.4.2021ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ ತಿಳಿಸಿದ್ದೇನೆಂದರೆ;

# 30.04. 2003 / 01. 05.2003ರ ಆದೇಶವನ್ನು ರಾಮಚಂದ್ರಾಪುರ ಮಠವು ಐದು ವರ್ಷಗಳವರೆಗೆ ಪ್ರಶ್ನಿಸಲಿಲ್ಲ, ಅದನ್ನು ಒಪ್ಪಿಕೊಂಡಿತ್ತು.

# ಮಹಾಬಲೇಶ್ವರ ದೇವಸ್ಥಾನವನ್ನು ಮಠಕ್ಕೆ ವಹಿಸಿಕೊಡುವ ಪೂರ್ವದಲ್ಲಿ ಈ ದೇವಸ್ಥಾನವು ಮಠಕ್ಕೆ ಸೇರಿದ್ದೇ ಎಂಬ ವಿಷಯದಲ್ಲಿ ಕಾನೂನಿನಡಿಯಲ್ಲಿ ಯಾವುದೇ ರೀತಿಯ ವಿಚಾರಣೆಯೂ ನಡೆದಿಲ್ಲ. ಅಂಥ ವಿಚಾರಣೆ ನಡೆದಿದ್ದೇ ಆದಲ್ಲಿ ಸಾಕ್ಷ್ಯಾಧಾರಗಳನ್ನು ಒದಗಿಸುವ ಅವಕಾಶ ವಿಚಾರಣೆಯ ವೇಳೆಯಲ್ಲಿ ಇರಬೇಕಿತ್ತು.

# ಮಹಾಬಲೇಶ್ವರ ದೇವಸ್ಥಾನ ಮಠಕ್ಕೆ ಸೇರಿದ ದೇವಸ್ಥಾನ ಎಂಬುದು ನಿರ್ಣಯವಾಗಬೇಕಾದದ್ದು ಸಿವಿಲ್ ದಾವೆಯಲ್ಲಿ‌.

4. ಸುಪ್ರೀಂ ಕೋರ್ಟ್ ಮುಂದೆ ಮಹಾಬಲೇಶ್ವರ ದೇವಸ್ಥಾನವು ಮಠಕ್ಕೇ ಸೇರಿದ್ದು ಎಂಬ ಯಾವ ಸಾಕ್ಷ್ಯಾಧಾರವನ್ನೂ ಒದಗಿಸಲಿಲ್ಲ. ಹಾಗೂ ಯಾವುದೇ ತಹಶೀಲ್ದಾರ ರೀತಿಯಲ್ಲೇ ಆಯುಕ್ತರಿಗೂ ಅಂಥ ಸಾಕ್ಷ್ಯಾಧಾರಗಳನ್ನು ತೋರಿಸಿದ ದಾಖಲೆಯೇ ಇಲ್ಲ. 2012ರಲ್ಲಿ ಮಾಡಿದ ಕಾನೂನು ತಿದ್ದುಪಡಿಯಂತೆ, ಈ ರೀತಿಯ ಪ್ರಶ್ನೆಗಳನ್ನು ರಾಜ್ಯ ಧಾರ್ಮಿಕ ಪರಿಷತ್ತು ತೀರ್ಮಾನಿಸಬೇಕು.

# ಮೇಲ್ನೋಟಕ್ಕೆ ಕಾಣುವಂತೆ, 20.2.2008 ರಂದು ತಹಶೀಲ್ದಾರ್ ಯಾವುದೇ ಸಾಕ್ಷ್ಯಾಧಾರಗಳೂ, ಕಾಗದ ಕಡತ, ವಸ್ತು ವಿಶೇಷಗಳೂ ಇಲ್ಲದೇ ಕೇವಲ ಗ್ರಾಮ ಪಂಚಾಯಿತಿ ಅನುಮೋದನೆ ಇದೆ ಹಾಗೂ ದೇವಸ್ಥಾನದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ, ಮಹಾಬಲೇಶ್ವರ ದೇವಸ್ಥಾನವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ನೀಡಬೇಕೆಂದು ನಿರ್ಣಯಿಸಿರುತ್ತಾರೆಯೇ ಹೊರತು, ಈ ದೇವಸ್ಥಾನ ಮಠಕ್ಕೆ ಸಂಬಂಧಿಸಿದ್ದು ಎಂದಲ್ಲ.

# ಈ ನಿರ್ಣಯವು ಕರ್ನಾಟಕದ ಹಿಂದೂ ಧಾರ್ಮಿಕ ಕಾನೂನಿನ ರೀತ್ಯಾ ಸರಿಯಲ್ಲ.

# ತಹಶೀಲ್ದಾರರ ಈ ವರದಿಯನ್ನು ಅವಲಂಬಿಸಿ ಉಳಿದೆಲ್ಲ ಆಡಳಿತಾಧಿಕಾರಿಗಳು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಹಸ್ತಾಂತರದ ನಿರ್ಧಾರಕ್ಕೆ ಬಂದಿರುವುದು, ಒಮ್ಮುಖದ ಹಾಗೂ ಬೇರೆ ಅಭಿಪ್ರಾಯಗಳನ್ನೂ ಸಾಕ್ಷ್ಯಾಧಾರಗಳನ್ನೂ ಗಮನಿಸದೇ, ಈ ದೇವಸ್ಥಾನಕ್ಕೆ ಸಂಬಂಧಿಸಿದ ಇತರರನ್ನು ಪರಿಗಣಿಸದೇ ಮಾಡಿದ ನಿರ್ಧಾರವಾಗಿದೆ.

# ಕಾನೂನಿನ ರೀತ್ಯಾ, ಯಾರ‍್ಯಾರಿಗೆ ಈ ದೇವಸ್ಥಾನದಲ್ಲಿಯ ಆಗು-ಹೋಗುಗಳ ಸಂಬಂಧವಿದೆಯೋ ಅವರೆಲ್ಲರ ಸಾಕ್ಷ್ಯಾಧಾರಗಳನ್ನು ಪಡೆದೇ ನಿರ್ಧರಿಸತಕ್ಕದ್ದು.

# ಈ ಎಲ್ಲ ವಿಷಯಗಳನ್ನೂ ಕೂಲಂಕಷವಾಗಿ ಪರಿಶೀಲನೆ ಮಾಡಲು ಸಮಯಾವಕಾಶಬೇಕು.
ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣಾಧೀನವಾದ, ಕರ್ನಾಟಕ ಹಿಂದೂ ಕಾನೂನಿನ ಸಾಂವಿಧಾನಿಕ ಸಿಂಧುತ್ವವೂ ಈ ವಿಷಯಕ್ಕೆ ನೇರವಾಗಿ ಸಂಬಂಧಿಸಿದೆ.

# ಆದ್ದರಿಂದ, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ದೇಖರೇಖಿ ಸಮಿತಿಯನ್ನು ರಚಿಸುವ ಹಾಗೂ ಎರಡು ಸಮ್ಮನಿತ ಸದಸ್ಯರನ್ನು ಸರ್ಕಾರ ನೇಮಕ ಮಾಡುವಂತೆ, ಹಾಗೂ 2 ಉಪಾಧಿವಂತರನ್ನೂ ಈ ಸಮಿತಿಗೆ ಜಿಲ್ಲಾಧಿಕಾರಿಯ ಪ್ರಸ್ತಾಪನೆಯ ಮೇರೆಗೆ ನೇಮಿಸುವಂತೆ ಸೂಚಿಸಿದೆ.

# ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ ಈ ಸಮಿತಿಯ ಸದಸ್ಯರಾಗಿದ್ದು, ಈ ಆದೇಶ ಬಂದ 15 ದಿನದೊಳಗೆ ಸಮಿತಿ ರಚಿಸುವಂತೆ, ಹಾಗೂ ಸಮಿತಿ ರಚಿಸಿದ ತತ್‌ಕ್ಷಣದಲ್ಲಿ ದೇವಸ್ಥಾನದ ಆಡಳಿತವನ್ನು ಸಮಿತಿಯೇ ನೋಡಿಕೊಳ್ಳುವಂತೆ ಮಧ್ಯಂತರ ಆದೇಶ ಹೊರಡಿಸಿದೆ.

# ಕುಮಟಾದ ಸಹಾಯಕ ಆಯುಕ್ತರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದು ರಾಮಚಂದ್ರಾಪುರ ಮಠವು ಸಹಾಯಕ ಆಯುಕ್ತರಿಗೆ ದೇವಸ್ಥಾನದ ಆಡಳಿತವನ್ನು ವಹಿಸಿಕೊಡುವಂತೆ ನಿರ್ದೇಶಿಸಿದೆ.

ಈ ಒಕ್ಕಣೆಯಂತೆ, ಸಮಿತಿ ರಚಿಸುವ ಮೊದಲೇ ಕುಮಟಾದ ಸಹಾಯಕ ಆಯುಕ್ತರ ಕೈಯಲ್ಲಿ ದೇವಸ್ಥಾನದ ಆಡಳಿತ ಇರಬೇಕು ಎಂಬ ಅರ್ಥ ಬರುವುದರಿಂದ, ಶ್ರೀ ರಾಮಚಂದ್ರಾಪುಠ ಮಠವು ದೇವಾಲಯದ ಆಡಳಿತವನ್ನು ತತ್‌ಕ್ಷಣವೇ ಹಸ್ತಾಂತರಿಸಬೇಕು ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts