ಆಪ್ತಮಿತ್ರ ಟೆಲಿಮೆಡಿಸಿನ್‌ಗೆ 11 ಕೋಟಿ; ಪ್ರತ್ಯೇಕ ಕಂಪನಿಗಳಿಗೆ ನೀಡಿದ ಗುತ್ತಿಗೆ ಹಿಂದಿದೆ ವ್ಯವಹಾರ?

ಬೆಂಗಳೂರು; ಕೋವಿಡ್‌-19 ನಿಯಂತ್ರಣಕ್ಕಾಗಿ ಆಪ್ತಮಿತ್ರ-ಟೆಲಿಮೆಡಿಸಿನ್‌ ಸೇವೆ ಆರಂಭಿಸುವ ಸಂಬಂಧ ಟೆಂಡರ್‌ ಪ್ರಕ್ರಿಯೆ ನಿರ್ವಹಿಸಲು ಕಾಲಾವಕಾಶದ ಕೊರತೆ ಕಾರಣವನ್ನು ಮುಂದಿಟ್ಟಿರುವ ರಾಜ್ಯ ಬಿಜೆಪಿ ಸರ್ಕಾರವು ಕೋವಿಡ್‌-2ನೇ ಅಲೆಯಲ್ಲಿ ಮತ್ತೊಂದು ಅಕ್ರಮಕ್ಕೆ ದಾರಿಮಾಡಿಕೊಟ್ಟಿದೆ.

ಕೆಟಿಪಿಪಿ ಕಾಯ್ದೆಯ 4 (ಎ) ಬಳಸಿಕೊಂಡಿರುವ ಬಿಜೆಪಿ ಸರ್ಕಾರವು ಅಂದಾಜು 11 ಕೋಟಿ ರು. ವೆಚ್ಚದಲ್ಲಿ ಟೆಲಿಮೆಡಿಸಿನ್‌ ಸೇವೆಯನ್ನು ಅನುಷ್ಠಾನ ಮಾಡಲು 2021ರ ಏಪ್ರಿಲ್‌ನಲ್ಲೇ 2 ಪ್ರತ್ಯೇಕ ಆದೇಶ ಹೊರಡಿಸಿದೆ. ಇದು ಆರ್ಥಿಕ ಸಂಕಷ್ಟದ ನಡುವೆಯೂ ಬೊಕ್ಕಸಕ್ಕೆ ಹೊರೆಯನ್ನು ಹೊರಿಸಿದಂತಾಗಿದೆ.

ಮನೆ ಆರೈಕೆಯಲ್ಲಿರುವವರಿಗೆ ಕರೆ ಮಾಡಿ ಮಾರ್ಗದರ್ಶನ ನೀಡಲು 11 ಕೋಟಿ ರೂ. ವೆಚ್ಚದಲ್ಲಿ 6 ತಿಂಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಹೊಸ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಆಪ್ತಮಿತ್ರ ಟೆಲಿ ಮೆಡಿಸಿನ್‌ನ ಹೆಸರಿನಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮವೂ ಮುನ್ನೆಲೆಗೆ ಬಂದಿದೆ.

104 ಸೇವೆ ಬಳಸಿಕೊಳ್ಳಲಿಲ್ಲವೇಕೆ?

104 ಆರೋಗ್ಯ ಸಹಾಯವಾಣಿ ಸೇವೆ ಒದಗಿಸಲು 2020ರ ಅಕ್ಟೊಬರ್‌ನಲ್ಲಿಯೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿರುವ ಬಿಜೆಪಿ ಸರ್ಕಾರವು ಎಲ್‌-1ಗೆ ಅರ್ಹತೆ ಪಡೆದಿದ್ದ ಕಂಪನಿಗೆ ಕಾರ್ಯಾದೇಶ ನೀಡಿ ಆಪ್ತಮಿತ್ತ ಟೆಲಿ ಮೆಡಿಸಿನ್‌ ಸೇವೆ ಒದಗಿಸಲು ಅವಕಾಶವಿತ್ತು. ಆದರೆ ಇದುವರೆಗೂ ಎಲ್‌-1 ಕಂಪನಿಗೆ ಕಾರ್ಯಾದೇಶ ನೀಡದೆ ಪ್ರತ್ಯೇಕವಾಗಿ ಆಪ್ತಮಿತ್ರ ಟೆಲಿಮೆಡಿಸಿನ್‌ ಸೇವೆ ಹೆಸರಿನಲ್ಲಿ 11 ಕೋಟಿ ವೆಚ್ಚ ಮಾಡಲು ಹೊರಟಿದೆ.

ಇನ್ನು, ಆಪ್ತಮಿತ್ರ ಟೆಲಿ ಮೆಡಿಸಿನ್‌ ಸೇವೆ ಒದಗಿಸಲು ಅಲ್ಪಾವಧಿ ಟೆಂಡರ್‌ ಕರೆಯಲು ಎಲ್ಲಾ ರೀತಿಯಲ್ಲಿಯೂ ಅವಕಾಶವಿತ್ತು. 2021ರ ಜನವರಿ ಆರಂಭದಿಂದಲೇ ಕೋವಿಡ್‌-19ರ ಎರಡನೇ ಅಲೆ ಆರಂಭವಾಗಿದ್ದರೂ ಟೆಲಿಮೆಡಿಸಿನ್‌ ಸೇವೆ ಆರಂಭಿಸಲು ಮೊದಲೇ ಸಿದ್ಧತೆ ಕೈಗೊಳ್ಳಬೇಕಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರವು ಟೆಂಡರ್‌ ಕರೆಯದೇ ಕೆಟಿಪಿಪಿ ಕಾಯ್ದೆಯನ್ನು ಮುಂದಿರಿಸಿ ನಿರ್ದಿಷ್ಟ ಕಂಪನಿಗಳಿಗೆ ಇದರ ಹೊಣೆಗಾರಿಕೆ ನೀಡಿರುವುದರ ಹಿಂದೆ ಅವ್ಯವಹಾರದ ವಾಸನೆ ಹರಡಿದೆ.

ಉಚಿತ ಸಾಫ್ಟ್‌ವೇರ್‌-ಕಾಲ್‌ ಸೆಂಟರ್‌ ಏನಾಯಿತು?

ಇನ್ಫೋಸಿಸ್‌ ಮತ್ತು ಟಿಸಿಎಸ್‌ ಫೌಂಡೇಷನ್‌ ಸಂಸ್ಥೆಯು ಅಭಿವೃದ್ಧಿಪಡಿಸಿದ್ದ ಸಾಫ್ಟ್‌ವೇರ್‌ ಮತ್ತು ಕಾಲ್‌ಸೆಂಟರ್‌ ಸೇವೆಯನ್ನು ಕೋವಿಡ್‌ ಮೊದಲ ಅಲೆಯಲ್ಲಿಯೇ ಉಚಿತವಾಗಿ ನೀಡಿತ್ತು. ಇದನ್ನು ಬಳಸಿಕೊಂಡು 104 ಸೇವೆ ಮೂಲಕ ಆಪ್ತಮಿತ್ತ ಟೆಲಿಮೆಡಿಸಿನ್‌ ಸೌಲಭ್ಯ ನೀಡಲು ಮುಂದಾಗದ ಸರ್ಕಾರ ಇದೀಗ 11 ಕೋಟಿ ವೆಚ್ಚದಲ್ಲಿ ಎರಡು ಕಂಪನಿಗಳಿಗೆ ಆದೇಶ ನೀಡಿರುವುದು ಬೊಕ್ಕಸಕ್ಕೆ ಹೊರೆಯಾಗಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹೊರೆಯ ಹಿಂದಿದೆ ಅವ್ಯವಹಾರ?

ರಾಜ್ಯದಲ್ಲಿ ಈಗಾಗಲೇ 104 ಸಹಾಯವಾಣಿ ಸೇವೆ ನೀಡುವ ವ್ಯವಸ್ಥೆ ಇದೆ. 2020ರ ಅಕ್ಟೋಬರ್‌ನಲ್ಲಿಯೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಎಲ್‌-1 ಆಗಿರುವ ಕಂಪನಿಗೆ ಟೆಂಡರ್‌ ಪ್ರಕಾರ ಕಾರ್ಯಾದೇಶವನ್ನು ಇದುವರೆಗೂ ನೀಡಿಲ್ಲ ಎಂದು ತಿಳಿದು ಬಂದಿದೆ.

ಅಲ್ಲದೆ, ಕಂಪನಿಯು 200 ಸಿಬ್ಬಂದಿಯನ್ನಿಟ್ಟುಕೊಂಡು ಕಾಲ್‌ ಸೆಂಟರ್‌ ಮತ್ತು ಟೆಲಿ ಮೆಡಿಸಿನ್‌ ಸೇವೆಯನ್ನೂ ನೀಡುವ ಷರತ್ತನ್ನೂ ವಿಧಿಸಲಾಗಿತ್ತು. ಇನ್ನು, ಕೋವಿಡ್‌ ಮೊದಲ ಅಲೆಯಲ್ಲಿಯೇ ಇನ್ಪೋಸಿಸ್‌ ಮತ್ತು ಟಿಸಿಎಸ್‌ ಫೌಂಡೇಷನ್‌ ಉಚಿತವಾಗಿ ಕಾಲ್‌ ಸೆಂಟರ್‌ ಮತ್ತು ಈ ಸಂಬಂಧ ಸಾಫ್ಟ್‌ವೇರ್‌ ಅಪ್ಲಿಕೇಷನ್‌ನ್ನೂ ನೀಡಿತ್ತು. ಇದನ್ನೆಲ್ಲ ಬಳಸಿಕೊಂಡು 104 ಸೇವೆಯ ಮೂಲಕ ಕೋವಿಡ್‌ 2ನೇ ಅಲೆಯಲ್ಲಿಯೂ ಸಮಾಲೋಚನೆ ನೀಡುವ ಮೂಲಕ ಆರ್ಥಿಕ ಹೊರೆಯನ್ನು ತಪ್ಪಿಸಬಹುದಾಗಿತ್ತು.

ಐಎಎಸ್‌ ಅಧಿಕಾರಿಗಳ ಪಾಲೆಷ್ಟು?

ಗ್ರಾಸ್‌ರೂಟ್ಸ್‌ ಮತ್ತು ರೂರಲ್‌ ಶೋರ್ಸ್‌ಗೆ 4 (ಎ) ಅಡಿಯಲ್ಲಿ ನೀಡಿರುವ ಆದೇಶದ ಹಿಂದೆ ನಗರಾಭಿವೃದ್ಧಿ ಮತ್ತು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳಿಬ್ಬರ ಕೈವಾಡವಿದೆ ಎಂದು ತಿಳಿದು ಬಂದಿದೆ. 2021ರ ಏಪ್ರಿಲ್‌ನಲ್ಲಿಯೇ ನಿರ್ದಿಷ್ಟ ಎರಡು ಕಂಪನಿಗಳಿಗೆ ಎರಡು ಬಾರಿ ಪ್ರತ್ಯೇಕ ಆದೇಶ ಹೊರಡಿಸಿದೆ. ಸಚಿವ ಸಂಪುಟದ ಅನುಮೋದನೆ ಪಡೆಯದ ಇಲಾಖೆಯು ಘಟನೋತ್ತರ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ಈ ಆದೇಶ ಹೊರಡಿಸಿದೆ. ಎರಡೂ ಆದೇಶ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಆಪ್ತಮಿತ್ರ ಕಾರ್ಯಕ್ರಮದಡಿಯಲ್ಲಿ ಕಾಲ್‌ ಫಾರ್‌ ಕೇರ್‌ ಚಟುವಟಿಕೆಯನ್ನು ರೂರಲ್‌ ಶೋರ್ಸ್‌ (ಬಿಬಿಎಂಪಿ ವ್ಯಾಪ್ತಿಗಾಗಿ) ಮತ್ತು ಗ್ರಾಸ್‌ರೂಟ್ಸ್‌ (ರಾಜ್ಯದ ಉಳಿದ ಪ್ರದೇಶಗಳಿಗಾಗಿ) ಸಂಸ್ಥೆಗಳಿಗೆ 2021ರ ಏಪ್ರಿಲ್‌ 9 ಮತ್ತು 12ರಂದು ಪ್ರತ್ಯೇಕವಾಗಿ ಎರಡು ಆದೇಶ ಹೊರಡಿಸಲಾಗಿದೆ. ಏಪ್ರಿಲ್‌ 9ರಂದು ಹೊರಡಿಸಿರುವ ಆದೇಶದಲ್ಲಿ ಪ್ರತಿದಿನ 5,500 ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡಂತೆ 220 ಜನ ಮತ್ತು ಏಪ್ರಿಲ್‌ 12ರಂದು ಹೊರಡಿಸಿರುವ ಆದೇಶದಲ್ಲಿ 440 ಸಿಬ್ಬಂದಿಗಳೊಂದಿಗೆ ನಿರ್ವಹಣೆ ಮಾಡಲು ಆದೇಶಿಸಲಾಗಿದೆ.

ಏಪ್ರಿಲ್‌ 9ರಂದು ಹೊರಡಿಸಿರುವ ಆದೇಶದಲ್ಲಿ ಪ್ರತಿ ತಿಂಗಳು 5.60 ಕೋಟಿ ರು. ನಮೂದಿಸಿದ್ದರೆ ಏಪ್ರಿಲ್‌ 12ರಂದು 5.00 ಕೋಟಿ ರು. ವೆಚ್ಚವೆಂದು ಹೇಳಲಾಗಿದೆ. 220 ಸಿಬ್ಬಂದಿಗಳೊಂದಿಗೆ ನಿರ್ವಹಣೆ ಮಾಡಲು ಮಾಸಿಕ 93,34,400 ರು.ನಂತೆ ಒಟ್ಟು 6 ತಿಂಗಳ ಅವಧಿಗೆ 5.60 ಕೋಟಿ ವೆಚ್ಚದಲ್ಲಿ ಪುನರಾರಂಭಿಸಲಿದೆ.

ಅದೇ ರೀತಿ ಗ್ರಾಸ್‌ ರೂಟ್ಸ್‌ ಸಂಸ್ಥೆಯ ಸಿಬ್ಬಂದಿಗಳಿಗೆ ಮಾಸಿಕ 1,10,000 ರು., (ಜಿಎಸ್‌ಟಿ ಶೇ.18 ಒಳಗೊಂಡಂತೆ) ಇದೇ ಸಂಸ್ಥೆಯ ಫ್ರಂಟ್‌ ಎಂಡ್‌ ಡೆವಲಪರ್‌ಗೆ ಮಾಸಿಕ 1,25,000 ರು., (ಜಿಎಸ್‌ಟಿ ಶೇ.18 ಒಳಗೊಂಡಂತೆ) ಬ್ಯಾಕ್‌ ಎಂಡ್‌ ಡೆವಲಪರ್‌ಗೆ 1,50,000 ರು., ರಾಮಕೃಷ್ಣನ್‌ ಎನ್‌ ಎಂಬುವರಿಗೆ ಮಾಸಿಕ 2,00,000 ರು. , ಲಕ್ಷ್ಮಣ್ ಎಂಬುವರಿಗೆ ಮಾಸಿಕ 75,000 ರು. ಪಾವತಿ ಮಾಡಲು ಒಟ್ಟಾರೆ ಪ್ರತಿ ತಿಂಗಳು ಗರಿಷ್ಠ ಅಂದಾಜು ವೆಚ್ಚ 1,48,45,000 ರು ನಂತೆ 4 ತಿಂಗಳ ಅವಧಿಗೆ 5.00 ಕೋಟಿ ವೆಚ್ಚಕ್ಕೆ ಕೆಟಿಪಿಪಿ ಕಾಯ್ದೆಯ 4 (ಎ) ಇಲಾಖೆ ಹಂತದಲ್ಲೇ ಅನುಮೋದಿಸಿರುವುದು 2021ರ ಏಪ್ರಿಲ್‌ 12ರಂದು ಹೊರಡಿಸಿರುವ ಆದೇಶದಿಂದ ಗೊತ್ತಾಗಿದೆ.

ಕೋವಿಡ್‌ ಮೊದಲ ಅಲೆಯಲ್ಲಿಯೂ ಸರ್ಕಾರವು ಹಲವು ಅಕ್ರಮಗಳನ್ನು ನಡೆಸಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಕೆಯಾಗಿರುವ ಹಲವು ದೂರುಗಳು ವಿಚಾರಣೆ ಹಂತದಲ್ಲಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts