ಲಸಿಕೆ;ಕರ್ನಾಟಕಕ್ಕೆ 75 ಲಕ್ಷ, ಗುಜರಾತ್‌ ಸೇರಿ 4 ರಾಜ್ಯಕ್ಕೆ ತಲಾ1ಕೋಟಿ

ಬೆಂಗಳೂರು; ಲಸಿಕೆಗಳ ಹಂಚಿಕೆ ಬಗ್ಗೆ ಹಲವು ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಏಪ್ರಿಲ್‌ 14ರವರೆಗೆ ದೇಶದ ರಾಜ್ಯಗಳಿಗೆ ಕೊವಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆ ಹಂಚಿಕೆ ಮಾಡಿರುವ ಅಂಕಿ ಅಂಶಗಳು ಬಹಿರಂಗಗೊಂಡಿವೆ.

ಆರ್‌ಟಿಐ ಮೂಲಕ ಬಹಿರಂಗಗೊಂಡಿರುವ ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಲಸಿಕೆ ಹಂಚಿಕೆಗೆ ಯಾವುದೇ ಮಾನದಂಡಗಳು ಅನುಸರಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೇಂದ್ರದಲ್ಲಿ ಡಿ ವಿ ಸದಾನಂದಗೌಡ ಮತ್ತು ಪ್ರಹ್ಲಾದ್‌ ಜೋಷಿ  ಸಚಿವರಾಗಿದ್ದರೂ ಕರ್ನಾಟಕಕ್ಕೆ ನಿರೀಕ್ಷೆಯಂತೆ ಲಸಿಕೆ ಬಿಡುಗಡೆಯಾಗಿಲ್ಲ. ಇದು ಅವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ವಿವಿಧ ರಾಜ್ಯಗಳಿಗೆ ಕೋವಿಡ್‌-19 ಲಸಿಕೆ ಹಂಚಿಕೆ ಬಗ್ಗೆ ಮಹಾರಾಷ್ಟ್ರ ಸರ್ಕಾರವು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಲಸಿಕೆಯನ್ನು ಸರಿಯಾಗಿ ಪೂರೈಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ಪೂರೈಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರವು ಆರೋಪಿಸಿದ್ದರ ಬೆನ್ನಲ್ಲೇ ದೇಶದಾದ್ಯಂತ ಲಸಿಕೆ ಹಂಚಿಕೆ ಮಾಡಿರುವ ದತ್ತಾಂಶಗಳು ಮುನ್ನೆಲೆಗೆ ಬಂದಿವೆ.

ಗುಜರಾತ್‌ಗೆ ಕೋವಿಶೀಲ್ಡ್‌ ಮತ್ತು ಕೋವಾಕ್ಸಿನ್‌ ಸೇರಿ ಒಟ್ಟು 1,10,19,330 (ಕೋವಿಶೀಲ್ಡ್‌ 97,43,830 ಮತ್ತು ಕೊವಾಕ್ಸಿನ್‌ 12,75,500), ಮಹಾರಾಷ್ಟ್ರಕ್ಕೆ ಒಟ್ಟು 1,29,62,470, (ಕೋವಿಶೀಲ್ಡ್‌ 1,13,19,250 ಮತ್ತು ಕೊವಾಕ್ಸಿನ್‌ 16,43,220), ರಾಜಸ್ಥಾನಕ್ಕೆ ಒಟ್ಟು 1,11,62,360 (ಕೋವಿಶೀಲ್ಡ್‌ 1,05,77,540 ಮತ್ತು ಕೋವಾಕ್ಸಿನ್‌ 5,84,820) ಮತ್ತು ಉತ್ತರ ಪ್ರದೇಶಕ್ಕೆ 1,17,96,780 (ಕೋವಿಶೀಲ್ಡ್‌ 1,04,43,580 ಮತ್ತು ಕೋವಾಕ್ಸಿನ್‌ 13,53,200) ಲಸಿಕೆಗಳನ್ನು ಸರಬರಾಜು ಮಾಡಿರುವುದು ಲಭ್ಯವಿರುವ ದತ್ತಾಂಶಗಳಿಂದ ತಿಳಿದು ಬಂದಿದೆ.

ಮಹಾರಾಷ್ಟ್ರ ಹೊರತುಪಡಿಸಿದರೆ ಗುಜರಾತ್‌, ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತ ಇದೆ. ಬಿಜೆಪಿ ಆಡಳಿತ ಇರುವ ಕರ್ನಾಟಕಕ್ಕೆ 2021ರ ಏಪ್ರಿಲ್ 14ರವರೆಗೆ ಒಟ್ಟು 75,57,900 (ಕೋವಿಶೀಲ್ಡ್‌ 66,41,620 ಮತ್ತು ಕೋವಾಕ್ಸಿನ್‌ 9,16,280) ಲಸಿಕೆ ಪೂರೈಕೆ ಆಗಿದೆ. ಏಪ್ರಿಲ್‌ 14ರ ಅಂತ್ಯಕ್ಕೆ ಕರ್ನಾಟಕದಲ್ಲಿ ಒಟ್ಟು ಕ್ರೋಢೀಕೃತ ಮೊದಲ ಡೋಸ್‌ 573673, 357651 ಎರಡನೇ ಡೋಸ್‌ ನೀಡಲಾಗಿತ್ತು.

ಅದೇ ರೀತಿ ಆಂಧ್ರಪ್ರದೇಶಕ್ಕೆ 46,30,920, ಬಿಹಾರಕ್ಕೆ 60,40,970, ದೆಹಲಿಗೆ 30,70,710, ಕೇರಳಕ್ಕೆ 58,02,790, ಮಧ್ಯಪ್ರದೇಶಕ್ಕೆ 78,42,940, ಒಡಿಶಾಕ್ಕೆ 50,65,140 ತಮಿಳುನಾಡಿಗೆ 54,28,950, ಪಶ್ಚಿಮಬಂಗಾಳಕ್ಕೆ 92,83,340 ಲಸಿಕೆಗಳನ್ನು ಪೂರೈಕೆ ಮಾಡಿರುವುದು ಗೊತ್ತಾಗಿದೆ.

ಜನಸಂಖ್ಯೆ ಪ್ರಮಾಣಕ್ಕನುಗುಣವಾಗಿ ಆಯಾ ರಾಜ್ಯಗಳಿಗೆ ಸಮಾನವಾಗಿ ಹಂಚಿಕೆ ಮಾಡಿರುವುದು ಕಂಡು ಬಂದಿಲ್ಲ. ಅದೇ ರೀತಿ ವೈದ್ಯಕೀಯ ಮತ್ತು ವೈಜ್ಞಾನಿಕ ಮಾಹಿತಿ ಆಧರಿಸಿ ಭವಿಷ್ಯದಲ್ಲಿ ಸೋಂಕು ಮತ್ತು ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ವಿವೇಚನಾ ಶಕ್ತಿಬಳಸಿ ಯಾವ ರಾಜ್ಯಗಳಿಗೆ ಅತಿ ಹೆಚ್ಚು ಅಗತ್ಯವಿದೆಯೋ ಆಯಾ ರಾಜ್ಯಗಳಿಗೆ ಆದ್ಯತೆ ಮೇರೆಗೂ ಹಂಚಿಕೆಯಾಗಿಲ್ಲ. ಒಂದು ರೀತಿ ಮನಸೋ ಇಚ್ಛೆ ಅಥವಾ ತಮಗೆ ಇಷ್ಟಬಂದ ಹಾಗೆ ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ.

ಒಂದು ವಾದದ ಪ್ರಕಾರ ಗುಜರಾತ್‌ನ ಜನಸಂಖ್ಯೆಯ ನಾಲ್ಕಷ್ಟಿರುವ ಉತ್ತರ ಪ್ರದೇಶಕ್ಕೆ ಹೆಚ್ಚು ಲಸಿಕೆ ಹಂಚಿಕೆಯಾಗಬೇಕಿತ್ತು. ಹಾಗೆಯೇ ಹಿಂದಿನ ಸೋಂಕಿನ ಪ್ರಮಾಣ ಆಧರಿಸಿ ಹೇಳುವುದಾದರೆ ದೆಹಲಿ, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆ ಮಾಡಬೇಕಿತ್ತು.

ಅದೇ ರೀತಿ ದೇಶದ ಜನಸಂಖ್ಯೆಯಲ್ಲಿ ಸುಮಾರು ಶೇ 5ರಷ್ಟು ಜನಸಂಖ್ಯೆ ಹೊಂದಿರುವ ಕರ್ನಾಟಕಕ್ಕೆ ಹೋಲಿಸಿದರೆ ಗುಜರಾತ್‌ ಮತ್ತು ರಾಜಸ್ಥಾನ ಕಡಿಮೆ ಜನಸಂಖ್ಯೆ ಇದ್ದರೂ ಹೆಚ್ಚು ಲಸಿಕೆ ಹಂಚಿಕೆ ಮಾಡಿರುವುದು ಕಂಡು ಬಂದಿದೆ. ಮಹಾರಾಷ್ಟ್ರ,ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ದೆಹಲಿ ನಗರ ಪ್ರದೇಶಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳೇ ಹೆಚ್ಚಿರುವ ಗುಜರಾತ್‌ ಮತ್ತು ರಾಜಸ್ಥಾನದಂತಹ ರಾಜ್ಯಗಳಿಗೆ ತಲಾ ಒಂದು ಕೋಟಿ ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ.

ಸೋಂಕು ತಗುಲುತ್ತಿರುವ ಅಂಕಿ ಸಂಖ್ಯೆಗಳನ್ನು ಲೆಕ್ಕಚಾರ ಮಾಡಿದರೆ ಗುಜರಾತ್‌ನಲ್ಲಿ ಕರ್ನಾಟಕಕ್ಕಿಂತಲೂ ಕಡಿಮೆ ಪ್ರಕರಣಗಳಿವೆ. ಆದರೆ ಅಲ್ಲಿ ಸಾವಿನ ಸಂಖ್ಯೆ ಇಲ್ಲಿಗಿಂತ ಹೆಚ್ಚಿದೆ. ಹೀಗಾಗಿ ಲಸಿಕೆ ಹಂಚಿಕೆಗೆ ಯಾವುದೇ ಮಾನದಂಡವೂ ಇಲ್ಲ ಎಂಬುದು ಮೇಲ್ನೋಟಕ್ಕೆ ಹೇಳಬಹುದು.

ಕೊರೊನಾ ಲಸಿಕೆ ಹಂಚಿಕೆಗೆ ಮಾನದಂಡವೇನು?

ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲು ಅನುಮೋದನೆ ನೀಡಿದ ನಂತರ ಇದೀಗ ಲಸಿಕೆ ಹಂಚಿಕೆಗೆ ಮಾನದಂಡವನ್ನು ನಿಗದಿಪಡಿಸಲು ಮುಂದಾಗಿದೆ. ರಾಜ್ಯಗಳು ಮೊದಲ ಏಳು ದಿನಗಳಲ್ಲಿ ಕೊರೊನಾವೈರಸ್ ಲಸಿಕೆಯ ವಿತರಣೆ ರೀತಿ ಮತ್ತು ಬಳಕೆ ಪ್ರಮಾಣದ ಆಧಾರ ಹಾಗೂ ಮಾನದಂಡದ ಮೇಲೆ ಯಾವ ರಾಜ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ಹಂಚಿಕೆ ಮಾಡಬೇಕು ಎಂಬುದನ್ನು ನಿಗದಿಗೊಳಿಸಲಾಗುತ್ತದೆ.

ರಾಜ್ಯದಲ್ಲಿನ ಸೋಂಕಿತ ಪ್ರಕರಣಗಳು ಲಸಿಕೆ ಹಂಚಿಕೆಯ ಎರಡನೇ ಮಾನದಂಡವಾಗಿದೆ. ಮೂರನೇಯದಾಗಿ ರಾಜ್ಯದಲ್ಲಿ ಈ ಮೊದಲು ನೀಡಿರುವ ಲಸಿಕೆಯಲ್ಲಿ ಎಷ್ಟು ಪ್ರಮಾಣದ ಲಸಿಕೆಯನ್ನು ವ್ಯರ್ಥ ಮಾಡಲಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವ್ಯರ್ಥವಾಗಿ ಹಾಳು ಮಾಡಿದಷ್ಟು ಲಸಿಕೆ ಪ್ರಮಾಣವನ್ನು ಆಯಾ ರಾಜ್ಯಗಳು ಕಳೆದುಕೊಳ್ಳಲಿವೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ದೇಶದಲ್ಲಿ ಈವರೆಗೆ 13,23,30,644 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 92,41,384 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 59,03,368 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,17,27,708 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 60,73,622 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 4,55,10,426 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 18,91,160 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 4,85,01,906 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 64,97,155 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts