ಬೆಂಗಳೂರು; ‘ಕೋವಿಡ್ ಸೋಂಕು ಕಾಣಿಸಿಕೊಂಡು ಹೈರಾಣು ಮಾಡುತ್ತಿದ್ದರೂ ಲಸಿಕೆ ಉತ್ಪಾದನೆಗೆ ಅಗತ್ಯವಾದ ಬಂಡವಾಳವನ್ನು ಹೂಡಿಕೆ ಮಾಡದೆಯೇ ಲಸಿಕೆ ತಯಾರಿಕೆ ಕಂಪನಿಗಳಿಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಅವರು ಈ ನಿಟ್ಟಿನಲ್ಲಿ ಧನಾತ್ಮಕವಾಗಿ ಪ್ರತಿಸ್ಪಂದಿಸುತ್ತಿದೆ ಎಂಬ ಭಾವನೆ ಹುಟ್ಟಿಸಿದರು,’ ಎಂದು ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಪ್ರತಿಪಾದಿಸಿದ್ದಾರೆ.
ಕನ್ನಡ ದೈನಿಕ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬರೆದಿರುವ ‘ಸ್ವಗತ’ ಅಂಕಣದಲ್ಲಿ ಈ ವಿಷಯದ ಕುರಿತು ಚರ್ಚಿಸಿದ್ದಾರೆ. ‘ನಮ್ಮ ದೇಶದ ನೀತಿನಿರೂಪಕರು ಪುಣೆ ಮೂಲದ ಸೆರಂ ಇನ್‍ಸ್ಟಿಟ್ಯೂಟ್ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪೆನಿಗಳನ್ನು ನಮ್ಮ ದೇಶಕ್ಕೆ ಅಗತ್ಯವಾದ ಲಸಿಕೆಯನ್ನು ಪೂರೈಸುವ ಸಂಸ್ಥೆಗಳು ಎಂದು ಆರಂಭದಲ್ಲೇ ಗುರುತಿಸಿದರು. ಆದರೆ ಲಸಿಕೆ ಉತ್ಪಾದನೆಗೆ ಅಗತ್ಯವಾದ ಬಂಡವಾಳವನ್ನು ಈ ಕಂಪೆನಿಗಳಲ್ಲಿ ಹೂಡಲಿಲ್ಲ. ಮೋದಿಯವರು ಸ್ವತಃ ಈ ಕಂಪೆನಿಗಳಿಗೆ ಭೇಟಿ ಕೊಟ್ಟು ಸರಕಾರ ಈ ನಿಟ್ಟಿನಲ್ಲಿ ಧನಾತ್ಮಕವಾಗಿ ಪ್ರತಿಸ್ಪಂದಿಸುತ್ತಿದೆ ಎಂಬ ಭಾವನೆ ಹುಟ್ಟಿಸಿದರು,’ ಎಂಬ ಅಂಶವನ್ನು ಮುನ್ನೆಲೆಗೆ ತಂದಿದ್ದಾರೆ.
ಅಲ್ಲದೆ ಮೋದಿ ಅವರ ಫೋಟೋ ತೆಗೆಸಿಕೊಳ್ಳುವ ಚಾಳಿಯ ಕುರಿತು ಚರ್ಚಿಸಿರುವ ಸುಗತ ಅವರು ಇವುಗಳು ಪ್ರಚಾರ ಪಡೆದುಕೊಳ್ಳುವ ಅವಕಾಶಗಳಷ್ಟೇ ಆಗಿದ್ದವು. ಇಲ್ಲಿಯ ತನಕ ಈ ಸಂಸ್ಥೆಗಳು ಉತ್ಪಾದಿಸಿದ ಲಸಿಕೆಗೆ ವಿದೇಶಿ ಮೂಲದ ಖಾಸಗಿ ದತ್ತಿ ಸಂಸ್ಥೆಗಳಾದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್‌ಗಳ ದೇಣಿಗೆ ಮತ್ತು ಸ್ವಂತದ ಸಂಪನ್ಮೂಲವನ್ನು ಮಾತ್ರ ನೆಚ್ಚಿಕೊಂಡಿದ್ದವು. ಸರ್ಕಾರಕ್ಕೆ ಸಾರ್ವಜನಿಕ ಹಣವನ್ನು ಎಲ್ಲಿ ತುರ್ತಾಗಿ ಹೂಡಿಕೆ ಮಾಡಬೇಕು ಎಂಬ ವಿವೇಕ ಇದ್ದಂತೆ ಕಂಡು ಬರುತ್ತಿಲ್ಲ,’ ಎಂದು ವಿಶ್ಲೇಷಿಸಿದ್ದಾರೆ.
ಲಸಿಕೆ ಉತ್ಪಾದನೆಯ ಕಂಪನಿ, ಸಂಸ್ಥೆಗಳಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಅಮೇರಿಕಾ ಸರ್ಕಾರದೊಂದಿಗೆ ಭಾರತ ಸರ್ಕಾರವನ್ನು ಸುಗತ ಅವರು ತಮ್ಮ ಅಂಕಣದಲ್ಲಿ ತುಲನೆ ಮಾಡಿದ್ದಾರೆ. ಅಮೇರಿಕಾ ಸರಕಾರವು ಇನ್ನೂ ಪರೀಕ್ಷಾ ಹಂತದಲ್ಲಿದ್ದ ಹಲವು ಲಸಿಕೆ ಉತ್ಪಾದನಾ ಸಂಸ್ಥೆಗಳಲ್ಲಿ ಸುಮಾರು ಆರು ಬಿಲಿಯನ್ ಡಾಲರುಗಳನ್ನು, ಅಂದರೆ ಸುಮಾರು 44,724 ಕೋಟಿ ರೂಪಾಯಿಗಳನ್ನು ಕಳೆದ ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಹೂಡಿಕೆ ಮಾಡಿತು.
ಹಾಗೆಯೇ ಬ್ರಿಟಿಷ್ ಸರಕಾರವು ಕಳೆದ ಮೇ ತಿಂಗಳಿನಲ್ಲಿ ಅಸ್ಟ್ರಾಜೆನಿಕಾ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ಮೇಲೆ ಸುಮಾರು 65.5 ಮಿಲಿಯ ಪೌಂಡ್‍ಗಳನ್ನು, ಅಂದರೆ 488 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿತು. ಅಕ್ಟೋಬರ್ ತಿಂಗಳ ಹೊತ್ತಿಗೆ, ಆಸ್ಟ್ರೇಲಿಯಾ, ಬ್ರೆಜಿûಲ್, ಕೆನಡಾ, ಜಪಾನ್ ಮತ್ತು ಯುರೋಪ್ ಒಕ್ಕೂಟ ರಾಷ್ಟ್ರಗಳು ಒಂದು ಅಥವಾ ಹೆಚ್ಚು ಲಸಿಕೆಗಳ ಅಭಿವೃದ್ಧಿಯ ಬಗ್ಗೆ ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು.
ಜಗತ್ತು ತನ್ನ ಪ್ರಜೆಗಳ ಆರೋಗ್ಯ ಕಾಪಾಡುವಲ್ಲಿ ತತ್ಪರವಾಗಿದ್ದಾಗ ಭಾರತ ನಿದ್ರಿಸುತ್ತಿತ್ತು. ಈ ದೇಶಗಳಿಗೆ ಹೋಲಿಸಿದರೆ ಭಾರತದ ಜನಸಂಖ್ಯೆಯ ಮತ್ತು ಅದರಲ್ಲೂ ಬಡಜನರ ಪ್ರಮಾಣ ತುಂಬಾ ಹೆಚ್ಚಿನದು. ಹಾಗಾಗಿ ನಾವು ಹೆಚ್ಚು ತೀವ್ರವಾಗಿ ಈ ದಿಕ್ಕಿನಲ್ಲಿ ಕಾರ್ಯಪೃವೃತ್ತವಾಗಬೇಕಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.
ಹಾಗೆಯೇ ಕೊರೋನಾ ಕುರಿತು ಪ್ರಧಾನಮಂತ್ರಿ ಮೋದಿಯವರು ಮಂಗಳವಾರದಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುವ ಕುರಿತು ಅಂಕಣದಲ್ಲಿ ಚರ್ಚಿಸಲಾಗಿದೆಯಲ್ಲದೆ ಕೊರೋನಾ ಸಾಂಕ್ರಾಮಿಕ ರೋಗ ಕುರಿತಂತೆ ಕಳೆದ ಒಂದು ವರ್ಷದಿಂದ ಸಾಂಸ್ಕೃತಿಕವಾಗಿ ಹೇಗೆ ಸಂವಹಿಸಿದ್ದೇವೆ ಎಂದು ಯೋಚಿಸಬೇಕಾಗಿದೆ ಎಂಬ ಬಹುಮುಖ್ಯವಾದ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಮುಂದಿರಿಸಿದ್ದಾರೆ.
‘ಏಕೆಂದರೆ, ನಾವು ಇಂದು ಎದುರಿಸುತ್ತಿರುವ ಸಂಕಟಕ್ಕೆ ನಮಗೆ ಇದರಲ್ಲಿ ಉತ್ತರ ಸಿಗಬಹುದು. ನಾವು ಈ ಸಾಂಕ್ರಾಮಿಕ ರೋಗವನ್ನು ಹೇಗೆ ಗ್ರಹಿಸುತ್ತೇವೆ ಎಂಬುದು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ಯಾವುದೇ ಒಂದು ವಸ್ತು-ವಿಷಯವನ್ನು ಸ್ಪಷ್ಟವಾಗಿ ಹೆಸರಿಡಿದು ಗುರುತಿಸದ ಹೊರತು, ಅದಕ್ಕೆ ಪ್ರತಿಕ್ರಿಯಿಸುವುದು ಕೂಡ ಗೋಜಲಿನ ಸಂಗತಿಯಾಗುತ್ತದೆ,’ ಎಂದಿದ್ದಾರೆ.
ನಾವು ಸತ್ಯವನ್ನು ಮರೆಮಾಚಿ, ಕಣ್ಣಿಗೆ ಮಣ್ಣೆರಚುವ ಮಾತುಗಳನ್ನು ಆಡುತ್ತಾ ಹೋದರೆ, ಒಂದು ದಿನ ವಸ್ತುಸ್ಥಿತಿ ನಮ್ಮನ್ನು ಅಪ್ಪಳಿಸಿದಾಗ ಅದನ್ನು ಎದುರಿಸುವುದು ಹೇಗೆಂದು ತಿಳಿಯದೆ ಹೋಗುತ್ತೇವೆ. ಕೋವಿಡ್ -19ರ ವಿಚಾರದಲ್ಲಿ ನಮ್ಮ ದೇಶದಲ್ಲಿ ನಡೆದಿರುವುದು ಇದೇನೇ,’ ಎಂದು ಹೇಳಿದ್ದಾರೆ.
ಕೋವಿಡ್ ಹರಡುವಿಕೆ ಶುರುವಾದ ದಿನದಿಂದ ಈವರೆವಿಗೂ ಪ್ರಧಾನಿ ಮೋದಿ ಸೇರಿದಂತೆ ಹಲವರು ಬಣ್ಣಿಸುತ್ತಿರುವ ಪರಿ ಕುರಿತು ಅಂಕಣದಲ್ಲಿ ಚರ್ಚಿಸಿರುವ ಸುಗತ ಅವರು ವಿಜ್ಞಾನ ಮತ್ತು ವೈಚಾರಿಕತೆಗೆ ಜಾಗವಿಲ್ಲದಂತೆ ಮಾಡುವ ಯೋಜನೆಯಾಗಿತ್ತು ಎಂದು ಚರ್ಚೆಯನ್ನು ವಿಸ್ತರಿಸಿದ್ದಾರೆ.
ಕೋವಿಡ್-19ಕ್ಕೆ ಪೌರಾಣಿಕ ಪ್ರತಿಕ್ರಿಯೆಗಳು ಮತ್ತು ಬಳಸದೇ ಹೋದ ವಿಜ್ಞಾನ ಸೂತ್ರಗಳ ಕುರಿತು ಅಂಕಣದಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ‘ಒಂದು ವರ್ಷದ ಹಿಂದೆ ಕೋವಿಡ್ -19 ಹರಡಲು ಶುರುವಾದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ, ಅದನ್ನು ‘ಮಹಾಮಾರಿ’ ಎಂದು ಕರೆದರು. ಸಾಂಸ್ಕೃತಿಕವಾಗಿ ತಮಗೆ ಪರಿಚಿತವಾದ ಪದದ ಆಸರೆ ಸಿಕ್ಕಿದೊಡನೆ ಜನರು ಅದಕ್ಕೆ ರೂಢಿಗತ ಆಚರಣೆಗಳ ಮೂಲಕ ಪ್ರತಿಕ್ರಿಯಿಸತೊಡಗಿದರು. ಇದಕ್ಕೆ ಇಂಬುಕೊಡುವಂತೆ ಚಪ್ಪಾಳೆ ತಟ್ಟಿ ಕೊರೋನಾವನ್ನು ಓಡಿಸುವ ವಿಧಿಯನ್ನು ಕೂಡ ಸೂಚಿಸಲಾಯಿತು. ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾಡಿದ ಎರಡನೆ ಭಾಷಣದಲ್ಲಿ, ದೀಪ ಹಚ್ಚಿ ಕೊರೋನಾ ಓಡಿಸುವ ಮತ್ತೊಂದು ಆಚರರಣೆಯನ್ನು ಸೂಚಿಸಿದರು. ಸುಮಾರು 1.3 ಬಿಲಿಯ ಜನರು ಸಮರೋಪಾದಿಯಲ್ಲಿ ಸದ್ದು ಮಾಡಿ, ದೀಪ ಹಚ್ಚಿದರೆ ಅದರ ಕಂಪನ ಮತ್ತು ಮಹಾಪ್ರಭೆಗೆ ಪಿಡುಗನ್ನು ಓಡಿಸುವ ಶಕ್ತಿ ಇದೆ ಎಂದು ಜನ ಅಂದುಕೊಳ್ಳುವಂತಾಯಿತು. ಇದು ಸಹಜವಾಗಿ ವಿಜ್ಞಾನ ಮತ್ತು ವೈಚಾರಿಕತೆಗೆ ಜಾಗವಿಲ್ಲದಂತೆ ಮಾಡುವ ಯೋಜನೆಯಾಗಿತ್ತು,’ ಎಂದು ವಾದವನ್ನು ಮುಂದಿಟ್ಟಿದ್ದಾರೆ.
ಹಾಗೆಯೇ ಕಳೆದ ವರ್ಷ ತಬ್ಲಿಗಿ ಜಮಾತ್ ಹೆಸರಿನಲ್ಲಿ ದಾಂಧಲೆ ಎಬ್ಬಿಸಲು ನಡೆಸಿದ್ದ ಯತ್ನ ಮತ್ತು ವೈರಾಣುವಿಗೆ ರಾಷ್ಟ್ರೀಯತೆಯ ಲಗಾಮು ಹಾಕುತ್ತಿರುವ ಕುರಿತೂ ಸೂಕ್ಷ್ಮವಾಗಿ ಅಂಕಣದಲ್ಲಿ ಚರ್ಚಿಸಲಾಗಿದೆ. ‘
‘ಬಹುಶಃ ಇದೇ ಪ್ರಕ್ರಿಯೆ, ಕಳೆದ ವರ್ಷದ ಲಾಕ್‍ಡೌನಿನ ಆರಂಭದ ದಿನಗಳಲ್ಲಿ ತಬ್ಲಿಖಿó ಜಮಾತ್‍ನ ಹೆಸರಿನಲ್ಲಿ ಒಂದು ಇಡೀ ಅಲ್ಪಸಂಖ್ಯಾತ ಸಮುದಾಯವನ್ನು ಶತ್ರುಗಳಂತೆ ಬಿಂಬಿಸುವುದನ್ನು ಸುಲಭ ಮಾಡಿತು. ಇದು ‘ಕೊರೋನಾ ಜಿಹಾದ್’ ಎಂಬ ಹೇಯ ವಿಶೇಷಣವನ್ನು ಕೂಡ ಹುಟ್ಟುಹಾಕಿತು. ಬಹುಶಃ ಜನಸಮೂಹಕ್ಕೆ ರಾಷ್ಟ್ರೀಯ ಬೌದ್ಧಿಕ ಜಡತೆಯ ನಡುವೆ, ಹಳೆಯ ‘ಶತ್ರು’ವಿಗೆ ಹೊಸ ಬಟ್ಟೆ ತೊಡಿಸುವ ಕೆಲಸ ಸುಲಭದ್ದೇನೊ. ರೋಗಾಣುಗಳಿಗೆ ರಾಷ್ಟ್ರೀಯ ಗಡಿಗಳ ಹಂಗಿರುವುದಿಲ್ಲ ಎಂದು ವಿಜ್ಞಾನ ಸಾರಿ ಹೇಳುತ್ತಿದ್ದರೂ, ನಾವು ವೈರಾಣುವಿಗೆ ರಾಷ್ಟ್ರೀಯತೆಯ ಲಗಾಮು ಹಾಕಲು ಪ್ರಯತ್ನಿಸುತ್ತಿರುತ್ತೇವೆ,’ ಎಂಬ ಒಳನೋಟವನ್ನು ಬೀರಿದ್ದಾರೆ.
ಧಾರ್ಮಿಕ ನಂಬಿಕೆ ಮತ್ತು ಚುನಾವಣಾ ಗೆಲುವು ವಿನಾಶಕಾರಿ ವೈರಾಣುವಿಗಿಂತ ಮುಖ್ಯವಾದಂತೆ ಕಾಣುತ್ತಿದೆ. ಧಾರ್ಮಿಕ ನಂಬಿಕೆ ಮತ್ತು ವಿಧಿ ವಿಚಾರವಾಗಿ ನಮ್ಮಲ್ಲಿ ಆಳವಾಗಿ ಬೇರುಬಿಟ್ಟಿರುವ ನಂಬಿಕೆ ವಿಜ್ಞಾನಕ್ಕಿಂತಲೂ ಹೆಚ್ಚಾಗಿ ನಮ್ಮ ಕೋವಿಡ್ – 19 ಪ್ರತಿಕ್ರಿಯೆಯನ್ನು ನಿರ್ಧರಿಸುತ್ತಿದೆ ಎಂದಿರುವ ಸುಗತ ಅವರು ಆತ್ಮನಿರ್ಭರತೆ’ಯೇ. ‘ಆತ್ಮ’ ಎಂಬ ಪದಕ್ಕೆ ಕೊಟ್ಟಿರುವ ಒತ್ತು ಕೂಡ ಪರೋಕ್ಷವಾಗಿ ವಿಧಿಯನ್ನು ಉದ್ದೇಶಿದಂತಿದೆ. ಈಗ ನಡೆಯುತ್ತಿರುವುದು ಕೂಡ ಇದೇ. ಸತ್ತವರ ಸಂಖ್ಯೆ ಏರುತ್ತಿದ್ದಂತೆ, ಜನರು ಆಸ್ಪತ್ರೆ, ಹಾಸಿಗೆ, ಆಕ್ಸಿಜನ್ ಎಂದು ಪರದಾಡುತ್ತಿರುವಾಗ, ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದಿದ್ದಾರೆ.